ಮಂಗಳೂರು: ಮಹಿಳಾ ‘ಶಕ್ತಿ’ ಯೋಜನೆ: ಮೊದಲ ದಿನ 5454 ಮಹಿಳೆಯರ ಪ್ರಯಾಣ!

By Kannadaprabha News  |  First Published Jun 13, 2023, 12:52 AM IST

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪ್ರಥಮ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾದ ಮೊದಲ ದಿನವಾದ ಭಾನುವಾರ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ ಒಟ್ಟು 5454 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.


ಮಂಗಳೂರು (ಜೂ.13) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪ್ರಥಮ ಗ್ಯಾರಂಟಿಯಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾದ ಮೊದಲ ದಿನವಾದ ಭಾನುವಾರ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಲ್ಲಿ ಒಟ್ಟು 5454 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಈ ಎಲ್ಲ ಮಹಿಳೆಯರ ಒಟ್ಟು ಪ್ರಯಾಣ ವೆಚ್ಚ 1,90,155 ರು. ಆಗಿದ್ದು, ಇಷ್ಟೂಮೊತ್ತದ ಉಚಿತ ಪ್ರಯಾಣದ ಅವಕಾಶ ಮೊದಲ ದಿನವೇ ಮಹಿಳೆಯರಿಗೆ ದೊರೆತಿದೆ. ಮಹಿಳೆಯರ ಉಚಿತ ಪ್ರಯಾಣದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.

Latest Videos

undefined

Shakti scheme: ಮೊದಲ ದಿನ 5.7 ಲಕ್ಷ ಸ್ತ್ರೀಯರಿಂದ ಉಚಿತ ಪ್ರಯಾಣ!

ಪ್ರಯಾಣ ವಿವರ: ಮಂಗಳೂರು-1 ಘಟಕದಲ್ಲಿ ಒಟ್ಟು 53 ರೂಟ್‌ಗಳ ಬಸ್ಸುಗಳಲ್ಲಿ 825 ಮಹಿಳಾ ಪ್ರಯಾಣಿಕರು 40,444 ರು. ವೆಚ್ಚದ ಪ್ರಯಾಣ ಮಾಡಿದ್ದಾರೆ. ಮಂಗಳೂರು-3 ಘಟಕದಲ್ಲಿನ 117 ರೂಟ್‌ಗಳಲ್ಲಿ 2607 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇವರ ಪ್ರಯಾಣ ವೆಚ್ಚ 68,647 ರು. ಆಗಿದೆ. ಅದೇ ರೀತಿ, ಕುಂದಾಪುರ ಘಟಕದಲ್ಲಿ 68 ರೂಟ್‌ಗಳಲ್ಲಿ 1082 ಮಹಿಳೆಯರು ಸಂಚರಿಸಿದ್ದು, ಅವರ ಪ್ರಯಾಣದ ಒಟ್ಟು ವೆಚ್ಚ 37,836 ಆಗಿದೆ. ಉಡುಪಿ ಘಟಕದ 65 ರೂಟ್‌ಗಳಲ್ಲಿ 940 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಅವರ ಪ್ರಯಾಣ ವೆಚ್ಚ 43,228 ರು. ಆಗಿದೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿತಿಳಿಸಿದ್ದಾರೆ.

‘ಶಕ್ತಿ’ ಯೋಜನೆ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಿದ್ದು, ಅಲ್ಲಿಂದ ರಾತ್ರಿವರೆಗಿನ ವಿವರಗಳು ಇದಾಗಿವೆ. ಸೋಮವಾರ ದಿನಪೂರ್ತಿ ಮಹಿಳೆಯರು ಉಚಿತವಾಗಿ ಸಂಚರಿಸಿದ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

ಸರ್ಕಾರಿ ಬಸ್ಸುಗಳು ರಶ್‌, ಖಾಸಗಿ ಖಾಲಿ..!

ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಬಿಸಿ ದ.ಕ.ದ ಖಾಸಗಿ ಬಸ್ಸುಗಳಿಗೆ ತಟ್ಟಿದೆ. ಸೋಮವಾರ ಮಂಗಳೂರಿನ ಬಸ್‌ ನಿಲ್ದಾಣದಲ್ಲಿ ಸರ್ಕಾರಿ ಬಸ್ಸುಗಳು ‘ಹೌಸ್‌ ಫುಲ್‌’ ಆಗಿದ್ದರೆ, ಖಾಸಗಿ ಬಸ್ಸುಗಳು ಮಹಿಳಾ ಪ್ರಯಾಣಿಕರ ತೀವ್ರ ಕೊರತೆ ಎದುರಿಸಿವೆ.

ಉಚಿತ ಯೋಜನೆ ಬೆನ್ನಲ್ಲೇ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಭಾರಿ ಕುಸಿತ ಕಂಡಿದೆ. ಬಸ್ಸು ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಸುಗಳನ್ನೇರಿ ಸಾಗುತ್ತಿದ್ದರೆ, ಖಾಸಗಿ ಬಸ್ಸುಗಳಲ್ಲಿ ಬೆರಳೆಣಿಕೆಯ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಿದ್ದುದು ಕಂಡುಬಂತು. ಕೆಲವು ರೂಟ್‌ಗಳಲ್ಲಿ ಸರ್ಕಾರಿ ಬಸ್ಸುಗಳು ಇಲ್ಲದ ಕಡೆಗಳಲ್ಲಿ ಮಾತ್ರ ಖಾಸಗಿ ಬಸ್ಸುಗಳು ರಶ್‌ ಆಗಿದ್ದವು.

ಮಂಗಳೂರಿನಿಂದ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಭಾಗಕ್ಕೆ ಸಾಕಷ್ಟುಸರ್ಕಾರಿ ಬಸ್ಸುಗಳು ಇರುವುದರಿಂದ ಈ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳು ನಷ್ಟಕ್ಕೆ ಒಳಗಾಗಿವೆ. ಬೆಳಿಗ್ಗಿನಿಂದ ನಮ್ಮ ಬಸ್‌ಗಳಿಗೆ ಪ್ರಯಾಣಿಕರೇ ಬರ್ತಾ ಇಲ್ಲ. ಭಾನುವಾರವರೆಗೂ ನಮ್ಮ ಕಲೆಕ್ಷನ್‌ ಲಾಭದಲ್ಲಿತ್ತು. ಇವತ್ತು ಪ್ರತಿ ಟ್ರಿಪ್‌ ನಲ್ಲಿ ಸಾವಿರ ರು. ನಷ್ಟವಾಗುತ್ತಿದೆ. ಪೀಕ್‌ ಸಮಯದಲ್ಲೂ ಬಸ್ಸು ರಶ್‌ ಆಗುತ್ತಿಲ್ಲ ಎಂದು ಬಸ್ಸು ಸಿಬ್ಬಂದಿ ಅಳಲು ತೋಡಿಕೊಂಡರು.

ಉಡುಪಿ: ‘ಶಕ್ತಿ’ ಯೋಜನೆಗೆ ಉತ್ತಮ ಪ್ರತಿಕ್ರಿಯೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ 2ನೇ ದಿನ ಸೋಮವಾರ ಉಡುಪಿಯಲ್ಲಿ ಮಹಿಳೆಯರಿಂದ ಅತ್ಯುತ್ತಮ ಸ್ಪಂದನೆ ದೊರಕಿದೆ.

ಯೋಜನೆ ಆರಂಭವಾದ ಮೊದಲ ದಿನ ಭಾನುವಾರ ರಜಾದಿನವಾದರೂ ಉಡುಪಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಕಾರ್ಯಾಚರಿಸುವ 65 ಬಸ್‌ಗಳಲ್ಲಿ 940 ಮಂದಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದರು.

ಕುಂದಾಪುರ ಡಿಪೋದಿಂದ ಕಾರ್ಯಾಚರಿಸುವ 68 ಬಸ್‌ಗಳಲ್ಲಿ 1082 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಸೋಮವಾರ ಈ ಸಂಖ್ಯೆ ಸುಮಾರು ದುಪ್ಪಟ್ಟಾಗಿದೆ ಎಂದು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಉಡುಪಿಯಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ಮುಂತಾದ ಧಾರ್ಮಿಕ ಸ್ಥಳಗಳಿಗೆ ಹೋಗುವ ಬಸ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಜೊತೆಗೆ ಉಡುಪಿಯಿಂದ ಮಂಗಳೂರು, ಶಿವಮೊಗ್ಗ, ಕೊಪ್ಪ ಕಡೆಗೆ ಹೋಗುವ, ಉಡುಪಿ ಮೂಲಕ ಹಾದು ಹೋಗುವ ಬೇರೆ ಜಿಲ್ಲೆಗಳಿಂದ ಬಂದ ಸರ್ಕಾರಿ ಬಸ್ಸುಗಳಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ಶಕ್ತಿ ಯೋಜನೆ ಆರಂಭವಾದ ಪರಿಣಾಮ, ಎಂದಿಗಿಂತ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿರುವ ಮಹಿಳೆಯ ಸಂಖ್ಯೆಯಲ್ಲಿ ಸೋಮಾವಾರ ಹೆಚ್ಚಳವಾಗಿದೆ ಎಂದು ಬಸ್ಸು ಸಿಬ್ಬಂದಿ ತಿಳಿಸಿದ್ದಾರೆ.

ಅನೂಕೂಲ-ಸಂಶಯ:

ಉಚಿತ ಪ್ರಯಾಣ ಯೋಜನೆ ಜಾರಿಗೆ ತಂದಿರುವುದು ಬಹಳ ಅನುಕೂಲವಾಗಿದೆ ಎಂದು ಮಣಿಪಾಲ ಆಸ್ಪತ್ರೆಗೆ ಬಂದ ಕೊಪ್ಪದ ಮಹಿಳೆಯೊಬ್ಬರು ಹೇಳಿದರೆ, ಇದು ಎಷ್ಟುದಿನ ನಡೆಯುತ್ತದೆ, ಸರ್ಕಾರದಿಂದ ಈ ಯೋಜನೆ ಕೊನೆವರೆಗೂ ನಡೆಸಲು ಸಾಧ್ಯವೇ ಎಂದು ಯುವತಿಯೊಬ್ಬರು ಉಡುಪಿ ಬಸ್‌ ನಿಲ್ದಾಣದಲ್ಲಿ ಸಂಶಯ ವ್ಯಕ್ತಪಡಿಸಿದರು.

ಗುರುತು ಚೀಟಿಗೆ ವಾದ:

ಮಹಿಳೆಯರು ಯಾವುದಾದರೊಂದು ಗುರುತಿನ ಚೀಟಿ ತೋರಿಸಬೇಕು ಎನ್ನುವ ನಿಯಮ ತಿಳಿಯದೇ ಬಂದಿದ್ದ ಮಹಿಳೆಯರಿಗೆ ಬಸ್ಸು ಸಿಬ್ಬಂದಿ ಉಚಿತ ಪ್ರಯಾಣಕ್ಕೆ ನಿರಾಕರಿಸಿದ, ಒಂದಷ್ಟುಚರ್ಚೆ ನಡೆದ, ನಂತರ ಟಿಕೇಟಿನ ದರ ವಸೂಲಿ ಮಾಡಿದ ಘಟನೆ ಕೂಡ ಉಡುಪಿ ನಿಲ್ದಾಣದಲ್ಲಿ ನಡೆಯಿತು.

10 ರು. ಉಚಿತ ಚೀಟಿ:

ಪ್ರತಿದಿನ ಸರ್ಕಾರಿ ಬಸ್ಸಿನಲ್ಲಿ ಸಂಚರಿಸುವ ಕಚೇರಿಗಳಲ್ಲಿ ಕಸ ಗುಡಿಸುವ ಮಹಿಳೆಯೊಬ್ಬರು ಎಂದಿನಂತೆ ನೀಡಿದ 10 ರು.ಗಳನ್ನು ಸ್ವೀಕರಿಸಿದ ಬಸ್ಸು ಸಿಬ್ಬಂದಿ, ಆಕೆಗೆ ಉಚಿತ ಪ್ರಯಾಣದ ಟಿಕೇಟು ನೀಡಿ, ಯಾಮಾರಿಸಿದ್ದು ಆಕೆ ಬಸ್ಸಿನಿಂದ ಇಳಿದ ಮೇಲೆ ಗೊತ್ತಾಯಿತು.

ಉತ್ತರ ಕನ್ನಡ: ಗಡಿಭಾಗದ ಮಹಿಳೆಯರಿಗಿಲ್ಲ ಶಕ್ತಿಯೋಜನೆಯ ಸೌಲಭ್ಯ!

ಪುರುಷರ ಸಹಾಯ:

ಕೈಯಲ್ಲಿ ಹಣ ಇಲ್ಲದೇ ತೀರಾ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರು ಸರ್ಕಾರಿ ಬಸ್ಸು ಹತ್ತಿ ತನ್ನ ಬಳಿ ಹಣ ಇಲ್ಲ ಎಂದರೂ ಸಿಬ್ಬಂದಿ ಗುರುತು ಚೀಟಿ ಇಲ್ಲದೆ ಆಕೆಯ ಉಚಿತ ಪ್ರಯಾಣಕ್ಕೆ ನಿರಾಕರಿಸಿದರು. ಕೊನೆಗೆ ಪುರುಷ ಪ್ರಯಾಣಿಕರೊಬ್ಬರು ಆಕೆಗೆ 50 ರು. ನೀಡಿ ಪ್ರಯಾಣಕ್ಕೆ ಸಹಾಯ ಮಾಡಿದ ಘಟನೆ ಕೂಡ ನಡೆಯಿತು

click me!