
ಭಾರತದ ಅತ್ಯಂತ ಯಶಸ್ವಿ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ. ಇತ್ತೀಚೆಗೆ ಅವರು ದಿ ಮಾಸೂಮ್ ಮಿನಾವಾಲಾ ಶೋನಲ್ಲಿ ಭಾಗವಹಿಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಇದರಲ್ಲಿ ತಮ್ಮ ತಾಯ್ತನ, ಕ್ರೀಡಾ ಬದುಕು, ವೈಯಕ್ತಿಕ ಜೀವನ ಇವೆಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಇದೇ ವೇಳೆ ಅವರು ತಮ್ಮ ಪುತ್ರ ಇಜಾನ್ ಮಿರ್ಜಾ ಮಲೀಕ್‌ಗೆ ಎದೆಹಾಲು ಉಣಿಸುವ ಸಮಯದಲ್ಲಿ ಎದುರಾದ ಸವಾಲುಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದು, ಮಹಿಳೆಯರಿಗೆ ಗರ್ಭ ಧರಿಸುವುದಕ್ಕಿಂತ ಎದೆಹಾಲು ಉಣಿಸುವುದೇ ಭಾವನಾತ್ಮಕವಾಗಿ ಸವಾಲಿನದ್ದಾಗಿದೆ ಎಂದಿದ್ದಾರೆ.
ತಾವು ಸುಮಾರು ಮೂರು ತಿಂಗಳ ಕಾಲ ಮಗನಿಗೆ ಎದೆಹಾಲು ಕುಡಿಸಿದ್ದಾಗಿ ಸಾನಿಯಾ ತಿಳಿಸಿದ್ದಾರೆ. ಮಗುವಿಗೆ ಪೋಷಣೆ ನೀಡುವ ಏಕೈಕ ವ್ಯಕ್ತಿ ಎಂಬ ಒತ್ತಡದಿಂದಾಗಿ ಆ ಅನುಭವ ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಬಳಲಿಕೆಯಾಗಿತ್ತು. ಅತಿಯಾದ ನಿದ್ರೆಯ ಕೊರತೆ ಎದುರಾಗಿತ್ತು. ನಿರಂತರ ಎದೆಹಾಲಿನ ವೇಳಾಪಟ್ಟಿಯು ನನ್ನ ಆಯಾಸವನ್ನು ಇನ್ನಷ್ಟು ಹೆಚ್ಚಿಸಿತ್ತು ಎಂದು ಸಾನಿಯಾ ಹೇಳಿದ್ದಾರೆ.
"ನಾನು 2.5-3 ತಿಂಗಳು ಹಾಲುಣಿಸಿದೆ. ನನಗೆ, ಅದು ಗರ್ಭಧಾರಣೆಯ ಅತ್ಯಂತ ಕಠಿಣ ಭಾಗವಾಗಿತ್ತು. ಆಗ ನನಗೆ ಅನಿಸಿದ್ದು ಏನೆಂದರೆ, ಬಹುಶಃ ಇನ್ನೂ ಮೂರು ಬಾರಿ ಬೇಕಾದರೆ ನಾನು ಪ್ರೆಗ್ನೆಂಟ್ ಆಗ್ತೀನಿ. ಆದರೆ, ಎದೆಹಾಲು ಉಣಿಸುವುದು ಮಾತ್ರ ನನ್ನಿಂದ ಸಾಧ್ಯವಿಲ್ಲ. ಇದನ್ನು ಮತ್ತೊಮ್ಮೆ ಮಾಡುತ್ತೇನೆ ಎಂದೂ ನನಗೆ ಅನಿಸುತ್ತಿಲ್ಲ. ನನಗೆ ಇದು ಕೇವಲ ದೈಹಿಕ ಭಾಗವಾಗಿರಲಿಲ್ಲ. ನಾನು ಭಾವನಾತ್ಮಕ ಹಾಗೂ ಮಾನಸಿಕವಾಗಿಯೂ ಬಹಳ ಬಳಲಿಕೆಯ ವಿಚಾರ ಇದು. ಕೆಲಸ ಮಾಡುವ ಮಹಿಳೆಯಾಗಿ, ಅದು ನಿಜವಾಗಿಯೂ ನಿಮ್ಮನ್ನು ಕಟ್ಟಿಹಾಕುತ್ತದೆ ಏಕೆಂದರೆ ಮಗು ಎದೆಹಾಲಿನ ಮೇಲೆ ತುಂಬಾ ಅವಲಂಬಿತರಾಗಿದ್ದಾರೆಂದು ನೀವು ಭಾವಿಸುತ್ತೀರಿ. ಎದೆಹಾಲು ಕೊಡಲು ಸಮಯ ಅನ್ನೋದೇ ಇಲ್ಲ. ಸಾಕಷ್ಟು ನಿದ್ರೆ ಇರುತ್ತಿರಲಿಲ್ಲ, ಮತ್ತು ನೀವು ಮಗುವಿಗೆ ಹಾಲುಣಿಸಬೇಕಾದಾಗ ನಿಮ್ಮ ಎಲ್ಲಾ ಚಟುವಟಿಕೆಗಳನ್ನು ನೀವು ಸುತ್ತಲೂ ಇಡಲು ಪ್ರಯತ್ನ ಮಾಡುತ್ತೀರಿ' ಎಂದು ಹೇಳಿದ್ದಾರೆ.
ಏನು ಅಗತ್ಯವಾಗಿತ್ತೋ ಅದೆಲ್ಲವನ್ನೂ ನಾನು ಮಾಡಿದೆ. ಆದರೆ, 3 ತಿಂಗಳ ಬಳಿಕ ನಾನು ಮಕ್ಕಳ ವೈದ್ಯರ ಭೇಟಿಯಾಗಿದ್ದೆ. ಅವರೊಂದಿಗೆ ಮಾತನಾಡುವ ವೇಳೆ,'ನೋಡಿ ನಾನು ಬಹಳ ಸುಸ್ತಾಗಿದ್ದೇನೆ. ಮತ್ತೆ ಇದನ್ನು ಮುಂದುವರಿಸಲು ಸಾಧ್ಯವಿಲ್ಲ' ಎಂದಿದ್ದೆ. ಅವರು ಇನ್ನೊಂದು ತಿಂಗಳು ಮುಂದುವರಿಸುವಂತೆ ನನಗೆ ಹೇಳಿದ್ದರು. ಅದಕ್ಕೆ ನಾನು, 'ಹಾಗೇನಾದರೂ ಮಾಡಿದರೆ ನಾನು ಹುಚ್ಚಿಯಾಗುತ್ತೇನೆ. ಭಾವನಾತ್ಮಕವಾಗಿ ನನಗೆ ಬಹಳ ಕಷ್ಟವಾಗುತ್ತಿದೆ. ಈಗಾಗಲೇ ನಾನು ಗರ್ಭ ನಂತರದ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಸಾರ್ವಜನಿಕವಾಗಿ ತಿರುಗಾಡುವಾಗ ಬಾಡಿಶೇಮಿಂಗ್ ಆಗುತ್ತಿದೆ' ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.
ಸಾನಿಯಾ ಮಿರ್ಜಾ ಮತ್ತು ಮಾಜಿ ಪತಿ ಶೋಯೆಬ್ ಮಲಿಕ್ 2018 ರಲ್ಲಿ ಮಗ ಇಜಾನ್‌ರನ್ನು ಸ್ವಾಗತಿಸಿದ್ದರು. ದಿ ಮಾಸೂಮ್ ಮಿನಾವಾಲಾ ಶೋನಲ್ಲಿ, ಸಾನಿಯಾ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದಲು ಕಾರಣಗಳನ್ನು ಹಂಚಿಕೊಂಡರು, ಇದು ಹೆಚ್ಚಾಗಿ ತನ್ನ ಮಗನೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಬಯಕೆಯಿಂದ ಮಾಡಿದ್ದಾಗಿ ತಿಳಿಸಿದ್ದಾರೆ. ಇಜಾನ್‌ನ ಬೆಳವಣಿಗೆಯ ವರ್ಷಗಳಲ್ಲಿ ಹಾಜರಿರಬೇಕು ಮತ್ತು ಅವನಿಗೆ ಅಗತ್ಯವಾದ ಸ್ಥಿರತೆ ಮತ್ತು ಕಾಳಜಿಯನ್ನು ಒದಗಿಸಬೇಕು ಎಂದು ಅವರು ಬಯಸಿದ್ದಾಗಿ ಹೇಳಿದ್ದಾರೆ.
ಸಾನಿಯಾ ಮಿರ್ಜಾ ಕಳೆದ ವರ್ಷ ಪತಿ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲೀಕ್‌ಗೆ ವಿಚ್ಛೇದನ ನೀಡಿದ್ದಾರೆ. ಅಂದಿನಿಂದಲೂ ಸಾನಿಯಾ ಸಿಂಗಲ್ ಮದರ್ ಆಗಿಯೇ ಇಜಾನ್‌ನನ್ನು ಬೆಳೆಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.