Latest Videos

Domestic Violence : ದ.ಕ.ದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಪ್ರಮೀಳಾ ನಾಯ್ಡು

By Kannadaprabha NewsFirst Published Mar 2, 2023, 12:31 PM IST
Highlights

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಪ್ರೇಮ ಪ್ರಕರಣಗಳು, ಅನೈತಿಕ ಸಂಬಂಧದಿಂದ ದೌರ್ಜನ್ಯ ಪ್ರಕರಣಗಳು ಕೂಡ ಏರಿಕೆಯಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

ಮಂಗಳೂರು (ಮಾ.2) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೆ, ಪ್ರೇಮ ಪ್ರಕರಣಗಳು, ಅನೈತಿಕ ಸಂಬಂಧದಿಂದ ದೌರ್ಜನ್ಯ ಪ್ರಕರಣಗಳು ಕೂಡ ಏರಿಕೆಯಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು(Pramila Naidu) ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಜಾಗೃತಿಯ ಕಾರಣದಿಂದ ದೂರು ದಾಖಲಿಸಲು ಹೆಚ್ಚಿನ ಮಹಿಳೆಯರು ಮುಂದಾಗುತ್ತಿದ್ದಾರೆ. ಹೀಗಾಗಿ ಬೇರೆಡೆ ಹೋಲಿಸಿದರೆ ರಾಜ್ಯದಲ್ಲಿ ಮಹಿಳಾ ದೌರ್ಜನ್ಯದ ಪ್ರಕರಣ(Violence against women case)ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ; ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಕಳವಳ

ದ.ಕ. ಜಿಲ್ಲೆಯಲ್ಲಿ ಸಿಡಿಪಿಒನಲ್ಲಿ ಒಟ್ಟು 722 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 520 ಪ್ರಕರಣಗಳನ್ನು ಸಂಧಾನದ ಮೂಲಕ ಪರಿಹರಿಸಲಾಗಿದ್ದರೆ, 170 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದರು.

ರಾಜ್ಯದಲ್ಲಿ 6,728 ದೂರು: ಆಯೋಗವು ರಾಜ್ಯದಲ್ಲಿ 2020ರಿಂದ ಈವರೆಗೆ ಒಟ್ಟು 6728 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 4,120 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 2608 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. ಈ ದೂರುಗಳ ಪೈಕಿ 1,494 ಪ್ರಕರಣಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ್ದರೆ, 1905 ಪ್ರಕರಣಗಳು ರಕ್ಷಣೆ ಕೋರಿ, 347 ವರದಕ್ಷಿಣೆ ಕಿರುಕುಳ, 26 ವರದಕ್ಷಿಣೆ ಸಾವು/ಕೊಲೆ, 37 ಲೈಂಗಿಕ ದೌರ್ಜನ್ಯ, 208 ಪೊಲೀಸ್‌ ದೌರ್ಜನ್ಯ ಪ್ರಕರಣಗಳಾಗಿವೆ ಎಂದು ನಾಯ್ಡು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 280 ಪ್ರಕರಣಗಳನ್ನು ಸ್ವೀಕರಿಸಲಾಗಿದ್ದು, ಇದುವರೆಗೆ 151 ಪ್ರಕರಣಗಳನ್ನು ಪರಿಹರಿಸಲಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಆಂತರಿಕ ದೂರು ಸಮಿತಿ ರಚಿಸುವಂತೆ 2500 ಕಂಪೆನಿಗಳಿಗೆ ಪತ್ರ ಬರೆದಿದ್ದು, ಇದುವರೆಗೆ 1100 ಕಂಪೆನಿಗಳಿಂದ ಉತ್ತರ ಸ್ವೀಕರಿಸಲಾಗಿದೆ ಎಂದರು.

ಮಾದಕ ದ್ರವ್ಯ ಸೇವನೆಯ ಕುರಿತಾಗಿ ದ.ಕ. ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಎಂದ ಪ್ರಮೀಳಾ ನಾಯ್ಡು, ಆಯೋಗದ ವತಿಯಿಂದ ಮಾದಕ ದ್ರವ್ಯ ಸೇವನೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳ ಬಗ್ಗೆ ವಿವರ ಕೋರಿ ಎಲ್ಲ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್‌ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಕೌನ್ಸಿಲಿಂಗ್‌ ಮೂಲಕ ಕುಟುಂಬ ಪುನರ್ಮಿಲನ ಒತ್ತು ನೀಡುತ್ತಿದ್ದೇವೆ. ಅಲ್ಲದೆ, ಹದಿಹರೆಯದವರಲ್ಲಿ ಪ್ರೇಮ ಪ್ರಕರಣಗಳು, ಲಿವ್‌ ಇನ್‌ ರಿಲೇಶನ್‌ಶಿಪ್‌ ಮತ್ತು ಸೈಬರ್‌ ಅಪರಾಧಗಳ ಕುರಿತು ಶಾಲೆ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಪಂ ಸಿಇಒ ಡಾ.ಕುಮಾರ್‌, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಇದ್ದರು.

ಕೊಂಚಾಡಿ, ಕಂಕನಾಡಿಯಲ್ಲಿ ವಸತಿಗೃಹ

2022-23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ಮಹಿಳಾ ಉದ್ಯೋಗಿಗಳಿಗಾಗಿ ಕೊಂಚಾಡಿ ಮತ್ತು ಕಂಕನಾಡಿಯಲ್ಲಿ ಎರಡು ವಸತಿಗೃಹ ಆರಂಭಿಸಲು ಈಗಾಗಲೇ ಕಟ್ಟಡ ಗುರುತಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಐದು ಮಹಿಳಾ ವಸತಿಗೃಹಗಳಿದ್ದು, 450 ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಜಿಪಂ ಸಿಇಒ ಡಾ.ಕುಮಾರ್‌ ತಿಳಿಸಿದರು.

2020-2023ರ ಅವಧಿಯಲ್ಲಿ ದ.ಕ.ದ ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ಒಟ್ಟು 1790 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಶೇ.95ರಷ್ಟುಪ್ರಕರಣಗಳನ್ನು ಕೌನ್ಸೆಲಿಂಗ್‌ ಮೂಲಕ ಬಗೆಹರಿಸಲಾಗಿದ್ದು, ಶೇ.5ರಷ್ಟುಪ್ರಕರಣಗಳು ಮಾತ್ರ ನ್ಯಾಯಾಲಯದ ಮೆಟ್ಟಿಲೇರಿವೆ ಎಂದರು.

ವೈವಾಹಿಕ ಸಂಬಂಧದಲ್ಲಿ ಹಿಂಸಾಚಾರದಿಂದ ಮಹಿಳೆಯನ್ನು ಕಾಡೋ ಸಮಸ್ಯೆಗಳಿವು

ಪೊಲೀಸ್‌ ವಿರುದ್ಧ ಸೆಕ್ಸ್‌ ಆರೋಪದ ಬಗ್ಗೆ ಗಮನ

ಇತ್ತೀಚೆಗೆ ತೃತೀಯ ಲಿಂಗಿಗಳ ಕುಂದುಕೊರತೆ ಸಭೆಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಸೆಕ್ಸ್‌ಗೆ ಆಹ್ವಾನ ನೀಡಿದ್ದರ ಬಗ್ಗೆ ತೃತೀಯ ಲಿಂಗಿಯೊಬ್ಬರು ನ್ಯಾಯಾಧೀಶರ ಎದುರಲ್ಲೇ ಗಂಭೀರ ಆರೋಪ ಮಾಡಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಮೀಳಾ ನಾಯ್ಡು, ಆ ಪೊಲೀಸ್‌ ಅಧಿಕಾರಿ ಯಾರು ಎಂಬುದನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆರೋಪ ಮಾಡಿದ ವ್ಯಕ್ತಿಯನ್ನು ಕರೆಸಿ ಮಾತನಾಡುತ್ತೇನೆ ಎಂದರು. ಆರೋಪ ಮಾಡಿದ ಬೆನ್ನಲ್ಲೇ ಪೊಲೀಸರು ಆ ತೃತೀಯ ಲಿಂಗಿಯನ್ನು ವಿಚಾರಣೆಗೆ ಒಳಪಡಿಸಿರುವ ಬಗ್ಗೆಯೂ ಮಾಹಿತಿ ಪಡೆಯಲಿದ್ದೇನೆ ಎಂದು ತಿಳಿಸಿದರು.

click me!