ಗರ್ಭ ನಿರೋಧಕ ಮಾತ್ರ ಸೇವಿಸೋ ಮಹಿಳೆಯರಿನ್ನು ತುಸು ನಿರಾಳ, ಏನಿದು ಸುದ್ದಿ

By Roopa Hegde  |  First Published Nov 21, 2024, 3:30 PM IST

 ಜನನ ನಿಯಂತ್ರಣ ಮಾತ್ರೆಗಳು ಗರ್ಭಧಾರಣೆಯನ್ನು ತಡೆಯುವಲ್ಲಿ ಶೇಕಡಾ 99ರಷ್ಟು ಪರಿಣಾಮಕಾರಿ. ಅನೇಕ ಮಹಿಳೆಯರು ಇದ್ರ ಸೇವನೆ ಮಾಡ್ತಾರೆ. ಈಗ ಈ ಮಾತ್ರೆ ಮೇಲೆ ಮಹತ್ವದ ಸಂಶೋಧನೆಯೊಂದು ನಡೆದಿದೆ. 
 


ಗರ್ಭಾವಸ್ಥೆ (Pregnancy) ಯನ್ನು ತಡೆಗಟ್ಟಲು ಮತ್ತು ಮೊಡವೆ, ಮುಟ್ಟಿನ ಸೆಳೆತ ಮತ್ತು ಅಂಡಾಶಯದ ಚೀಲಗಳ ಅಪಾಯವನ್ನು ಕಡಿಮೆ ಮಾಡಲು  ಗರ್ಭನಿರೋಧಕ (contraception) ಅಥವಾ ಜನನ ನಿಯಂತ್ರಣ ಮಾತ್ರೆ (birth control pill ) ಗಳನ್ನು ಮಹಿಳೆಯರು ತೆಗೆದುಕೊಳ್ಳುತ್ತಾರೆ. ಕೆಲವು ಮೌಖಿಕ ಗರ್ಭನಿರೋಧಕಗಳು (oral contraceptive) ವಿಶ್ರಾಂತಿ ಸಮಯದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತವೆಯಾದ್ರೂ  ತೀವ್ರವಾದ ದೈಹಿಕ ಚಟುವಟಿಕೆಯ ಸಮಯದಲ್ಲಿ ರಕ್ತದೊತ್ತಡದ ಮೇಲೆ ಈ ಔಷಧಿಗಳ ಪರಿಣಾಮ ಹೇಗಿರುತ್ತದೆ ಎನ್ನುವ ಬಗ್ಗೆ ಸರಿಯಾದ ವರದಿ ದೊರೆತಿರಲಿಲ್ಲ. ಈಗ  ಮೌಖಿಕ ಗರ್ಭನಿರೋಧಕ ಬಳಸುವ ಮಹಿಳೆಯರಿಗೆ ಸಕಾರಾತ್ಮಕ ಸುದ್ದಿಯೊಂದು ಸಿಕ್ಕಿದೆ. ಸಂಶೋಧಕರು ಮೌಖಿಕ ಗರ್ಭನಿರೋಧಕದ ಬಗ್ಗೆ ಮಹತ್ವದ ವರದಿಯೊಂದನ್ನು ನೀಡಿದ್ದಾರೆ. 

ಐಐಟಿ ಮದ್ರಾಸ್ ಮತ್ತು ಯುನಿವರ್ಸಿಟಿ ಆಫ್ ಮಿನ್ನೇಸೋಟ, ಯುಎಸ್ಎ ಸಂಶೋಧಕರು ಮೌಖಿಕ ಗರ್ಭನಿರೋಧಕಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಮೌಖಿಕ ಗರ್ಭನಿರೋಧಕಗಳು ದೊಡ್ಡ ಸ್ನಾಯುವಿನ ಚಟುವಟಿಕೆಗಳಲ್ಲಿ ಅಂದ್ರೆ ಸೈಕ್ಲಿಂಗ್ ಅಥವಾ ಓಟದಂತಹ ವ್ಯಾಯಾಮದ ವೇಳೆ ರಕ್ತದೊತ್ತಡ  ಹೆಚ್ಚಿಸುವುದಿಲ್ಲ ಎಂಬ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ. 

Latest Videos

undefined

ಎರಡು ವಾರದಲ್ಲಿ 158 ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡ ಯುವತಿ, ಅಮ್ಮನೇ ತಂದುಕೊಡ್ತಿದ್ರು

20 -25 ವರ್ಷದೊಳಗಿನ ಮಹಿಳೆಯರ ಮೇಲೆ ಈ ಅಧ್ಯಯನ ನಡೆದಿದೆ. ಪಿರಿಯಡ್ಸ್ ವೇಳೆ ಈ ಮೌಖಿಕ ಗರ್ಭನಿರೋಧಕಗಳು, ವ್ಯಾಯಾಮದ ರಕ್ತದೊತ್ತಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಪತ್ತೆ ಮಾಡಿದ್ದಾರೆ. ಮಹಿಳೆಯರಲ್ಲಿ ಪ್ರೆಸ್ಸರ್ ರಿಫ್ಲೆಕ್ಸ್, ಅಂದ್ರೆ ಹೃದಯದಿಂದ ಸ್ನಾಯುಗಳಿಗೆ ರಕ್ತದ ಹರಿವನ್ನು ನಿಯಂತ್ರಿಸುವಲ್ಲಿ ವ್ಯಾಯಾಮವು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಈ ಸಂಶೋಧನೆಯಲ್ಲಿ ಹೇಳಲಾಗಿದೆ. 

ದೇಹದ ಮೇಲ್ಭಾಗದ ವ್ಯಾಯಾಮದ ಸಮಯದಲ್ಲಿ ಮೌಖಿಕ ಗರ್ಭನಿರೋಧಕಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು ಎಂದು ಸೂಚಿಸುವ ಹಿಂದಿನ ಸಂಶೋಧನೆಗಳಿಗೆ ಇದು ವ್ಯತಿರಿಕ್ತವಾಗಿದೆ. ಮೌಖಿಕ ಗರ್ಭನಿರೋಧಕ ಬಳಸುವ ಮತ್ತು ಬಳಸದ ಮಹಿಳೆಯರಿಬ್ಬರಲ್ಲೂ ರಕ್ತದೊತ್ತಡದ ಪ್ರತಿಕ್ರಿಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಸಂಶೋಧನಾ ವರದಿ ಹೇಳಿದೆ.  ಪ್ರಮುಖ ಸಂಶೋಧಕರಲ್ಲಿ ಐಐಟಿ ಮದ್ರಾಸ್ ನ ನಿನಿತಾ ಎಜೆ ಮತ್ತು ಮಿನ್ನೇಸೋಟ ವಿಶ್ವವಿದ್ಯಾಲಯ ಮಂಡಾ ಕೆಲ್ಲರ್ ರಾಸ್ ಸೇರಿದ್ದಾರೆ. ಅಮೇರಿಕನ್ ಜರ್ನಲ್ ಆಫ್ ಫಿಸಿಯಾಲಜಿಯಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ. 

ಮಹಿಳೆಯರಲ್ಲಿ ವ್ಯಾಯಾಮದ ಸಮಯದಲ್ಲಿ ರಕ್ತದೊತ್ತಡವನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ  ಸಹಾಯ ಮಾಡುತ್ತದೆ ಎಂದು ಐಐಟಿ ಮದ್ರಾಸ್‌ನ ಡಾ.ನಿನಿತಾ ಎ.ಜೆ. ಹೇಳಿದ್ದಾರೆ. ಇಪಿಆರ್ ಋತುಬಂಧದ ನಂತರ ಮಹಿಳೆಯರಲ್ಲಿ ಹೃದಯರಕ್ತನಾಳದ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಂದಿನ ಹಂತವಾಗಿದೆ. ಸರಿಸುಮಾರು ಶೇಕಡಾ 70ರಷ್ಟು ಮಹಿಳಾ ಕ್ರೀಡಾಪಟುಗಳು ತಮ್ಮ ವೃತ್ತಿಜೀವನದ ಕೆಲವು ಹಂತದಲ್ಲಿ ಮೌಖಿಕ ಗರ್ಭನಿರೋಧಕಗಳನ್ನು ತೆಗೆದುಕೊಂಡಿದ್ದಾರೆ. ಅವರು ರಕ್ತದೊತ್ತಡದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಇದು ಸಹಕಾರಿಯಾಗಿದೆ ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಡಾ.ಮಂಡಾ ಕೆಲ್ಲರ್ ರಾಸ್ ತಿಳಿಸಿದ್ದಾರೆ. 

ಪಿರಿಯಡ್ಸ್‌ ಟೈಂನಲ್ಲಿ ನಾಗಾ ಸಾಧುಗಳು ಏನು ಮಾಡ್ತಾರೆ?

ಮೌಖಿಕ ಗರ್ಭನಿರೋಧಕಗಳು ಅಥವಾ ಜನನ ನಿಯಂತ್ರಣ ಮಾತ್ರೆಗಳು ಗರ್ಭಧಾರಣೆಯನ್ನು ತಡೆಯುವ ಔಷಧಿಗಳಾಗಿವೆ.  ಪ್ರತಿದಿನ ಇದನ್ನು ಸೇವನೆ ಮಾಡಿದ್ರೆ ಶೇಕಡಾ 99ರಷ್ಟು ಗರ್ಭಧಾರಣೆ ತಡೆಯಬಹುದು. ಇದು ಎರಡು ಹಾರ್ಮೋನುಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿನ್ ಸಂಯೋಜನೆಯಾಗಿದೆ. ಇಲ್ಲವೇ ಒಂದೇ ಹಾರ್ಮೋನ್  ಪ್ರೊಜೆಸ್ಟಿನ್ ಅನ್ನು ಹೊಂದಿರುತ್ತವೆ. 

click me!