
ಓಲಾ ಅಂದರೆ ನೆನಪಾಗೋದೇ ಓಲಾ ಕ್ಯಾಬ್ (Ola Cab) ಹಾಗೂ ಓಲಾ ಆಟೋ (Ola Auto). ಆದರೆ, ಓಲಾ ಈಗ ಅದಕ್ಕಿಂತಲೂ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈಗ ಭಾರತದ ಇವಿ ಕ್ರಾಂತಿಯ ನಾಯಕನಾಗಿ ಓಲಾ ಬದಲಾಗಿದೆ. ಓಲಾ ಎಲೆಕ್ಟ್ರಿಕ್ (ola electric) ಮೂಲಕ ಈ ಕನಸನ್ನು ಸಾಕಾರ ಮಾಡಿರುವುದು ಸಂಸ್ಥಾಪಕ ಹಾಗೂ ಸಿಇಒ ಭವೀಶ್ ಅಗರ್ವಾಲ್ (Bhavish Aggarwal). ಆಗಸ್ಟ್ 15 ರಂದು ಓಲಾ ತನ್ನ ಹೊಸ ಗಿಗಾ ಫ್ಯಾಕ್ಟರಿಯಲ್ಲಿ 'ಸಂಕಲ್ಪ್ 2025' (Sankalp 2025) ಕಾರ್ಯಕ್ರಮದ ಮೂಲಕ ಹೊಸ ಪ್ರಾಡಕ್ಟ್‌ಗಳು, ಈಗಾಗಲೇ ಬಿಡುಗಡೆಯಾಗಿರುವ ಸ್ಕೂಟರ್‌ಗಳ ಬೆಲೆ ಕಡಿತದೊಂದಿಗೆ ಭವಿಷ್ಯದ ದಿನಗಳಲ್ಲಿ ಭಾರತದ ಇವಿ ಉದ್ಯಮವನ್ನೇ ಬದಲಾಯಿಸಬಲ್ಲ ಭಾರತ್ ಸೆಲ್‌ಅನ್ನು ಪರಿಚಯ ಮಾಡಿತು. ಅದರೊಂದಿಗೆ ರೇರ್ ಅರ್ತ್ ಬಳಕೆಯೇ ಮಾಡದ ಮೋಟಾರ್‌ಅನ್ನು ಜಗತ್ತಿಗೆ ಪರಿಚಯಿಸಿದೆ.
ಇದೆಲ್ಲದರ ನಡುವೆ ಅಲ್ಲಿ ಗಮನಸೆಳೆದಿದ್ದು, ಓಲಾದ ಗಿಗಾಫ್ಯಾಕ್ಟರಿಯಲ್ಲಿನ ಉದ್ಯೋಗಿಗಳ ಬಗ್ಗೆ. ಓಲಾದ ಗಿಗಾ ಹಾಗೂ ಫ್ಯೂಚರ್ ಫ್ಯಾಕ್ಟರಿಯಲ್ಲಿ (ಸ್ಕೂಟರ್‌ಗಳ ಉತ್ಪಾದನಾ ಘಟಕ) ಹೆಚ್ಚಿನವರು ಮಹಿಳಾ ಉದ್ಯೋಗಿಗಳು. ಸ್ವತಃ ಭವೀಶ್ ಅಗರ್ವಾಲ್ ಹೇಳುವ ಪ್ರಕಾರ, ಕೆಲವೊಂದು ಮ್ಯಾನೇಜ್‌ಮೆಂಟ್ ಪೋಸ್ಟ್‌ಗಳಲ್ಲಿ ಸೂಕ್ತ ಮಹಿಳೆಯರು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಪುರುಷರು ನೇಮಕವಾಗಿದ್ದಾರೆ ಬಿಟ್ಟರೆ,ಬಹುತೇಕ ಪ್ರಾಡಕ್ಟ್ ಲೈನ್‌ನಲ್ಲಿ ಉದ್ಯೋಗಿಗಳು ಮಹಿಳೆಯರೇ ಆಗಿದ್ದಾರೆ. ಓಲಾ ಫ್ಯೂಚರ್‌ಫ್ಯಾಕ್ಟರಿ ಹಾಗೂ ಗಿಗಾಫ್ಯಾಕ್ಟರಿಯಲ್ಲಿ ನಿಂತು ನೋಡುವಾಗ ಮಹಿಳಾ ಸಬಲೀಕರಣದ ನಿಜಾರ್ಥ ಗೊತ್ತಾಗುತ್ತದೆ.
ಗಿಗಾ ಫ್ಯಾಕ್ಟರಿ ಹೊಸದಾಗಿ ಆರಂಭವಾಗಿದ್ದರೂ, ಫ್ಯೂಚರ್ ಫ್ಯಾಕ್ಟರಿ ಹೊಕ್ಕಾಗ ನಿಮಗೆ ಎಲ್ಲಾ ವಿಭಾಗದಲ್ಲಿ ಮಹಿಳೆಯರೇ ಕಾಣುತ್ತಾರೆ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ದೀರ್ಘಕಾಲ ನಿಂತು, ಫಿಟ್ಟಿಂಗ್ ಕೆಲಸಗಳನ್ನು ಮಾಡಲು ಮಹಿಳೆಯರು ಅಂಜುತ್ತಾರೆ. ಆದರೆ, ಇಲ್ಲಿ ಹಾಗಲ್ಲ. ಉದ್ಯೋಗಕ್ಕೆ ಸೇರುವ ಮುನ್ನ ಮಹಿಳೆಯರಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಒಂದು ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡ ಬಳಿಕ ಇನ್ನೊಂದು ವಿಭಾಗಕ್ಕೆ ಅವರಿಗೆ ಭಡ್ತಿ ನೀಡಲಾಗುತ್ತದೆ.
ಆಗಷ್ಟೇ ಕಾಲೇಜು ಮುಗಿಸಿ ಬಂದ ಯುವತಿಯರನ್ನೇ ಹೆಚ್ಚಾಗಿ ಇಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅವರಿಗೆ ಓರಿಯಂಟೇಷನ್, ಸೂಕ್ತ ತರಬೇತಿ ನೀಡಲಾಗಿದ್ದು, ಅದಕ್ಕಾಗಿಯೇ ಓಲಾ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಷ್ಣಗಿರಿಯ ಪೂಚಂಪಲ್ಲಿ ಪ್ರದೇಶದಲ್ಲಿ ಮ್ಯಾನುಫ್ಯಾಕ್ಟರಿಂಗ್ ವ್ಯವಸ್ಥೆಗಳೇ ಇದ್ದಿರಲಿಲ್ಲ. ಹಾಗಾಗಿ ಇಲ್ಲಿನ ಯಾರೊಬ್ಬರಿಗೂ ಪ್ರಾಡಕ್ಟ್ ಪ್ಲಾಂಟ್‌ನಲ್ಲಿ ಮಾಡುವ ಕೆಲಸ ಹೇಗಿರುತ್ತದೆ ಎನ್ನುವ ಸಣ್ಣ ಅಂದಾಜು ಕೂಡ ಇದ್ದಿರಲಿಲ್ಲ. ಹಾಗಾಗಿ ಎಲ್ಲವನ್ನೂ ಶೂನ್ಯದಿಂದಲೇ ಆರಂಭಿಸಿ ಯಶಸ್ಸು ಕಂಡಿದ್ದು ಭವೀಶ್ ಅಗರ್ವಾಲ್.
ಇಲ್ಲಿ ಕೆಲಸಕ್ಕಿರುವ ಹೆಚ್ಚಿನ ಯುವತಿಯರು ಬಹಳ ಯಂಗ್. ಈಗ ತಾನೆ ಡಿಪ್ಲೋಮಾ ಮುಗಿಸಿ ಕೆಲಸಕ್ಕೆ ಸೇರಿದ್ದಾರೆ. ಅವರಿಗೆ ಟ್ರೇನಿಂಗ್ ನೀಡಿದ್ದು ಮಾತ್ರವಲ್ಲ. ಪ್ರತಿ ಹಂತದಲ್ಲೂ ಅವರ ಕೌಶಲವನ್ನು ಅಳತೆ ಮಾಡಲಾಗುತ್ತದೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಒಂದೇ ವರ್ಷದಲ್ಲಿ ಭಡ್ತಿ ಸಿಗುತ್ತದೆ. ಹಾಗಾಗಿ ಕೃಷ್ಣಗಿರಿ ಪ್ರದೇಶದ ಕೆಲವೊಂದು ಮನೆಗಳಲ್ಲಿ ಈ ಯುವತಿಯರೇ ಲೀಡರ್ ಆಗಿದ್ದಾರೆ. ಮನೆಯ ಎಲ್ಲಾ ಹಣಕಾಸನ್ನು ಸ್ವತಃ ತಾವೇ ನಿಭಾಯಿಸುತ್ತಾರೆ.
ಭವೀಶ್ ಪಂಜಾಬಿ ಬನಿಯಾ. ಅವರ ಪತ್ನಿ ರಾಜಲಕ್ಷ್ಮೀ ತಮಿಳುನಾಡು ಮೂಲದವರು. ಇಬ್ಬರೂ ಭೇಟಿಯಾಗಿದ್ದು ಮುಂಬೈನಲ್ಲಿ. ಭವೀಶ್ ಐಐಟಿಯಲ್ಲಿ ಓದುತ್ತಿದ್ದರೆ, ರಾಜಲಕ್ಷ್ಮೀ ಅಲ್ಲಿನ ಸ್ಥಳೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಹೆಚ್ಚಿನ ಮಹಿಳೆಯರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಬೇಕು ಎನ್ನುವುದೇ ಅವರ ಆಸೆಯಾಗಿತ್ತು. ಸಾಮಾನ್ಯವಾಗಿ ಒಬ್ಬ ಉದ್ಯಮಿಯ ಆರಂಭಿಕ ದಿನಗಳು ಹೆಚ್ಚಾಗಿ ಏಕಾಂಗಿಯಾಗಿಯೇ ಇರುತ್ತದೆ. ಈ ಹಂತದಲ್ಲಿ ಭವೀಶ್ ಅಗರ್ವಾಲ್‌ಗೆ ಜೊತೆಯಾಗಿ ನಿಂತಿದ್ದು ರಾಜಲಕ್ಷ್ಮೀ.
ಓಲಾ ಎಲೆಕ್ಟ್ರಿಕ್‌ನ ಯಶಸ್ಸಿನಲ್ಲಿ ಭವೀಶ್ ಅಗರ್ವಾಲ್ ಪಾತ್ರ ಎಷ್ಟಿದೆಯೋ, ಅವರ ಪತ್ನಿ ರಾಜಲಕ್ಷ್ಮೀ ನೀಡಿದ ತೆರೆಮರೆಯ ಬೆಂಬಲ ಕೂಡ ಅಷ್ಟೇ ಮುಖ್ಯ. ಓಲಾ ಫ್ಯೂಚರ್ ಫ್ಯಾಕ್ಟರಿಗೆ ಉದ್ಯೋಗಿಗಳ ನೇಮಕಾತಿ ಮಾಡುವ ನಿಟ್ಟಿನಲ್ಲಿ ಭವೀಶ್ ಅಗರ್ವಾಲ್ ಉನ್ನತ ಅಧಿಕಾರಿಗಳ ಜೊತೆ ಚರ್ಚೆಗಳನ್ನು ಆರಂಭಿಸಿದಾಗ ಎಷ್ಟು ಪ್ರಮಾಣದಲ್ಲಿ ಯುವತಿಯರನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಗೊಂದಲ ಉಂಟಾಗಿತ್ತಂತೆ. 50:50 ಅನುಪಾತದಲ್ಲಿ ಯುವತಿಯರು ಇರಬೇಕೇ? ಅಥವಾ ಪೂರ್ಣ ಪ್ರಮಾಣದಲ್ಲಿ ಇರಬೇಕೇ? ಎನ್ನುವ ಬಗ್ಗೆ ಗೊಂದಲವಿತ್ತು. ಈ ಹಂತದಲ್ಲಿ ರಾಜಲಕ್ಷ್ಮೀ ಆಗಿದ್ದಾಗಲಿ ಫ್ಯೂಚರ್ ಫ್ಯಾಕ್ಟರಿಯ ಎಲ್ಲಾ ಉದ್ಯೋಗಳನ್ನು ಯುವತಿಯರಿಗೆ ನೀಡುವ ತೀರ್ಮಾನ ಮಾಡಿದ್ದರು. ಮಹಿಳೆಯರು ಹೇಗೆ ಕೆಲಸ ಮಾಡುತ್ತಾರೆ ಅನ್ನೋದು ಮಹಿಳೆಯರಿಗೆ ಗೊತ್ತಿರುತ್ತೆ. ಹಾಗಾಗಿ ಪತ್ನಿ ಮಾತನ್ನು ನೇರವಾಗಿ ಪಾಲಿಸಲು ಭವೀಶ್ ಇಳಿದಿದ್ದರು.
ಹಾಗಾಗಿ ಇಂದು ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಶಿಸ್ತು ಕಾಣುತ್ತದೆ. ಯುವತಿಯರನ್ನು ಕೆಲಸಕ್ಕೆ ಆರಿಸಿಕೊಂಡಿರುವುದು ಓಲಾ ಪಾಲಿಗೆ ಬೆಸ್ಟ್ ನಿರ್ಧಾರ ಕೂಡ ಹೌದು ಎನ್ನುತ್ತಾರೆ ಭವೀಶ್ ಅಗರ್ವಾಲ್. ಪುರುಷರಿಗಿಂತ ಅವರು ಹೆಚ್ಚು ಶಿಸ್ತಿನಲ್ಲಿರುತ್ತಾರೆ. ಕೆಲಸಕ್ಕೆ ರಜೆ ಹಾಕುವ ಪ್ರಮೇಯವೂ ಕಡಿಮೆ. ಇತರ ಸಮಸ್ಯೆಗಳೂ ಕೂಡ ಕಡಿಮೆ.ಇನ್ನು ಓಲಾ ಫ್ಯೂಚರ್ ಫ್ಯಾಕ್ಟರಿ 24*7 ಓಪನ್ ಆಗಿಯೇ ಇರುತ್ತದೆ. ಮಹಿಳೆಯರು ಕೂಡ ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಅವರ ಪಿಕಪ್-ಡ್ರಾಪ್ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಓಲಾ ಮಾಡುತ್ತದೆ.
ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ದಿನಕ್ಕೆ 3 ಸಾವಿರ ಸ್ಕೂಟರ್‌ಗಳು ನಿರ್ಮಾಣವಾಗುತ್ತದೆ. ಒಂದು ವರ್ಷಕ್ಕೆ 1 ಲಕ್ಷಕ್ಕಿಂತಲೂ ಹೆಚ್ಚು ಸ್ಕೂಟರ್ ನಿರ್ಮಾಣವಾಗುತ್ತದೆ. ಸ್ಕೂಟರ್‌ನ ಎಲ್ಲಾ ಪಾರ್ಟ್‌ಗಳು ಫ್ಯಾಕ್ಟರಿಯಲ್ಲಿಯೇ ನಿರ್ಮಾಣವಾಗುವ ಕಾರಣ, ಓಲಾಕ್ಕೆ ಪೂರೈಕೆಯ ಸಮಸ್ಯೆಗಳೇ ಇಲ್ಲ. ಈಗ ಇನ್ನೂ ಫ್ಯಾಕ್ಟರಿಯ ಮೇಲೆ ಹೂಡಿಕೆಗಳು ಆಗುತ್ತಿವೆ. ಮುಂದಿನ ವರ್ಷದ ವೇಳೆ 2 ಲಕ್ಷಕ್ಕೂ ಅಧಿಕ ಸ್ಕೂಟರ್‌ಗಳನ್ನು ವರ್ಷಕ್ಕೆ ನಿರ್ಮಾಣ ಮಾಡುವ ಗುರಿ ಹೊಂದಿದೆ.
ಇಡೀ ದೇಶದಲ್ಲಿ ಇರುವ ಓಲಾ ಸ್ಟೋರ್ ಹಾಗೂ ಸರ್ವೀಸ್ ಸೆಂಟರ್‌ಗಳು ಓಲಾದ ಮಾಲೀಕತ್ವದಲ್ಲೇ ಇವೆ. ಅವರು ಡೀಲರ್‌ಷಿಪ್ ಮಾಡೋದಿಲ್ಲ. ಇದೇ ಕಾರಣಕ್ಕಾಗಿ ಸರ್ವಿಸ್ ವಿಚಾರದಲ್ಲಿ ಓಲಾ ಕೊಂಚ ಹಿಂದುಳಿದಿದೆ ಅನ್ನೋದನ್ನೂ ಭವೀಶ್ ಒಪ್ಪಿಕೊಳ್ಳುತ್ತಾರೆ. ಆದರೆ, ಮುಂದಿನ ವರ್ಷದ ವೇಳೆಗೆ ದೇಶಾದ್ಯಂತ ಇನ್ನೂ 1 ಸಾವಿರ ಸ್ಟೋರ್ ಹಾಗೂ ಸರ್ವೀಸ್ ಸೆಂಟರ್‌ಅನ್ನು ತೆರೆಯುವ ಗುರಿಯಲ್ಲಿದ್ದು, ಈ ಸಮಸ್ಯೆಗೆ ಪರಿಹಾರ ನೀಡುವ ಗುರಿಯಲ್ಲಿದ್ದಾರೆ.
ಓಲಾದ ಫ್ಯೂಚರ್ ಫ್ಯಾಕ್ಟರಿ ಹಾಗೂ ಗಿಗಾ ಫ್ಯಾಕ್ಟರಿಯಲ್ಲಿ ಒಟ್ಟಾರೆಯಾಗಿ ಅಂದಾಜು 6 ಸಾವಿರ ಉದ್ಯೋಗಿಗಳಿದ್ದಾರೆ. ಇದರಲ್ಲಿ ಗಿಗಾ ಫ್ಯಾಕ್ಟರಿಯಲ್ಲಿ ಅಂದಾಜು 500 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈಗ ತಾನೇ ಇಂಜಿನಿಯರಿಂಗ್ ಮುಗಿಸಿರುವ ಪದವೀಧರರಲ್ಲಿ ಸೂಕ್ತರನ್ನು ಆಯ್ಕೆ ಮಾಡಿ ಕೆಲಸ ನೀಡಲಾಗಿದೆ. 2026ರ ಕೊನೆಯ ವೇಳೆಗೆ 10 ಸಾವಿರಕ್ಕೆ ಇದು ಏರಿಕೆಯಾಗಲಿದೆ. ಓಲಾ ಶಾಪ್‌ಗಳು ಸೇರಿದಂತೆ ಅಂದಾಜು ಓಲಾ ಗ್ರೂಪ್‌ನಲ್ಲಿ 12 ಸಾವಿರ ಉದ್ಯೋಗಿಗಳಿದ್ದು, ಇದರಲ್ಲಿ ಬಹುಪಾಲು ಮಹಿಳೆಯರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.