
ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ. ಪತಿಯ ಮನೆಯಲ್ಲಿ ಅವರಿಗೆ ಆಗುತ್ತಿರುವ ಹಿಂಸೆ, ಕ್ರೌರ್ಯ ಇತ್ಯಾದಿಗಳನ್ನು ಮನಗಂಡ ಭಾರತದಲ್ಲಿ ಮಹಿಳೆಯರ ಪರವಾಗಿ ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ ನಿಜ. ಆದರೆ ಅದನ್ನೇ ಬಂಡವಾಳವಾಗಿಸಿಕೊಂಡು ಗಂಡ ಮತ್ತು ಆತನ ಮನೆಯವರ ಮೇಲೆ ಸುಳ್ಳು ವರದಕ್ಷಿಣೆ ಕೇಸ್ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಇದಾಗಲೇ ಹಲವಾರು ಪುರುಷ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಿಯಾಗಿದೆ. ಅನಾವಶ್ಯಕವಾಗಿ ಪತಿಯ ಮನೆಯವರ ಎಲ್ಲರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಿ, ಅವರನ್ನು ಜೈಲಿಗೆ ಅಟ್ಟುತ್ತಿರುವ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವ ಘಟನೆಗಳು ಹಲವಾರು ನಡೆದಿವೆ. ಮಹಿಳೆಯರ ಪರವಾಗಿ ಇರುವ ಕಾನೂನುಗಳು ಈ ರೀತಿ ದುರ್ಬಳಕೆ ಆಗುತ್ತಿರುವ ಬಗ್ಗೆ ಖುದ್ದು ನ್ಯಾಯಾಲಯಗಳೇ ಗರಂ ಆಗಿರುವ ಉದಾಹರಣೆಗಳೂ ಇವೆ. ಆದರೆ ಅದೆಷ್ಟೋ ಅಮಾಯಕರು ಜೈಲಿಗೆ ಹೋಗುತ್ತಿದ್ದಾರೆ. ಮಾತ್ರವಲ್ಲದೇ ಗಂಡನ ಮನೆಯಲ್ಲಿ ಕಿರುಕುಳ ಅನುಭವಿಸುತ್ತಿರುವ ನಿಜವಾದ ಸಂತ್ರಸ್ತರು ನೀಡುವ ದೂರುಗಳಿಗೂ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶದ ಗುರುಗ್ರಾಮದ ಕೋರ್ಟ್, ಸುಳ್ಳು ವರದಕ್ಷಿಣೆ ಕೇಸ್ ಹಾಕಿರೋ ಮಹಿಳೆಯೊಬ್ಬಳಿಗೆ 1.8 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿ ವಿರುದ್ಧ ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಪರಿಹಾರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದ. ವಿನಾ ಕಾರಣ ತನ್ನನ್ನು ಈ ಕೇಸ್ನಲ್ಲಿ ಆಕೆ ಸಿಲುಕಿರುವ ಬಗ್ಗೆ ಸಾಕ್ಷಿ ಸಹಿತ ದಾಖಲೆ ಒದಗಿಸಿದ್ದ. ಆದ್ದರಿಂದ ಈ ರೀತಿ ಮಾನಸಿಕವಾಗಿ ಹಿಂಸೆ ನೀಡಿದಾಕೆ ತನಗೆ 1.80 ಕೋಟಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದ.
ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ಮನೀಶ್ ಕುಮಾರ್ ಪತಿಯ ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ಈ ರೀತಿ ಸುಳ್ಳು ಕೇಸು ದಾಖಲು ಮಾಡಿ ಮಹಿಳಾ ಪರ ಕಾನೂನುಗಳ ದುರ್ಬಳಕೆ ಬಗ್ಗೆ ಕೋರ್ಟ್ ಆತಂಕ ಹಾಗೂ ಕಳವಳ ವ್ಯಕ್ತಪಡಿಸಿದೆ.
ಅಷ್ಟಕ್ಕೂ ಈ ಪ್ರಕರಣದಲ್ಲಿ ವಾದಿ ಗುರುಶರಾಮ್ ಲಾಲ್ ಅವಸ್ಥಿ ಎಂಬಾತನ ವಿರುದ್ಧ ಪತ್ನಿ ದೂರು ದಾಖಲು ಮಾಡಿದ್ದಳು. ಈ ಹಿನ್ನೆಲೆಯಲ್ಲಿ ವಾದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A (ಕ್ರೌರ್ಯ), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಬಂಧಿಸಲಾಗಿತ್ತು. ಆದರೆ ತನ್ನ ವಿರುದ್ಧ ವೃಥಾ ಆರೋಪ ಹೊರಿಸಲಾಗಿದೆ ಎಂದು ಆತ ವಾದಿಸಿದ್ದ. 2016 ರಲ್ಲಿ ಕೆಳ ನ್ಯಾಯಾಲಯ ಆತನ ಪರ ಆದೇಶ ಹೊರಡಿಸಿತ್ತು. ಆದರೆ ಸುಮ್ಮನಾಗದ ಪತ್ನಿ 2018 ರಲ್ಲಿ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಳು. ಅಲ್ಲಿಯೂ ಆತನ ಪರವಾಗಿಯೇ ಆದೇಶ ಬಂದಿತ್ತು. ಕೊನೆಗೆ, ಇಷ್ಟು ಸತಾಯಿಸಿದ ಮಾಜಿ ಪತ್ನಿಗೆ ಸುಮ್ಮನೇ ಬಿಡಬಾರದು ಎನ್ನುವ ಕಾರಣಕ್ಕೆ, 16 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಆರ್ಥಿಕ ನಷ್ಟ ಮತ್ತು ವೈಯಕ್ತಿಕ ನೋವನ್ನು ಉಲ್ಲೇಖಿಸಿ, ದುರುದ್ದೇಶಪೂರಿತ ಮೊಕದ್ದಮೆಗಾಗಿ ತನ್ನ ಮಾಜಿ ಪತ್ನಿಯ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದ. ಅದನ್ನೀಗ ಕೋರ್ಟ್ ಪರಿಗಣಿಸಿ, ಪತ್ನಿಗೆ ಭಾರಿ ದಂಡ ವಿಧಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.