
ಬೆಳಗೆದ್ದರೆ ಕೆಲಸದ ಹೊರೆ ಕರೆಯುತ್ತದೆ. “ಮಕ್ಕಳನ್ನು ಶಾಲೆಗೆ ರೆಡಿ ಮಾಡು, ಪತಿಗೆ ತಿಂಡಿ-ಮಧ್ಯಾಹ್ನದ ಬಾಕ್ಸ್ ಮಾಡು, ಅವರು ಹೋದ ಬಳಿಕ ಮನೆಕೆಲಸ ಕಂಪ್ಲೀಟ್ ಮಾಡ್ಕೊ, ಕ್ಲೀನಿಂಗ್ ಮುಗಿಸು, ಬಳಿಕ ನಿನ್ನ ಕೆಲಸಕ್ಕೆ ಕುಳಿತುಕೋ....’ ಇದು ಸಾಮಾನ್ಯವಾಗಿ ಅಮ್ಮಂದಿರ ದಿನಚರಿ. ಇದರಲ್ಲೂ ಅಲ್ಪಸ್ವಲ್ಪ ವ್ಯತ್ಯಾಸ ಇರಬಹುದು. ಪುಟ್ಟ ಮಗುವಿದ್ದರೆ ಆ ಪೇಚಾಟವೇ ಬೇರೆ. ಉದ್ಯೋಗಸ್ಥ ಮಹಿಳೆಯಾಗಿದ್ದರೆ ಅದರ ಪರಿಸ್ಥಿತಿಯೇ ಬೇರೆ. ಕೆರಿಯರ್ ರೂಪಿಸಿಕೊಳ್ಳಬೇಕೆಂಬ ಒತ್ತಡದೊಂದಿಗೆ ಮನೆಯ ಜವಾಬ್ದಾರಿ ಸತಾಯಿಸುತ್ತದೆ. ರಿಟೈರ್ ಸಮೀಪಿಸುತ್ತಿದ್ದರೆ ಅಂದಿನ ಒತ್ತಡವೇ ಬೇರೆ. ಒಟ್ಟಿನಲ್ಲಿ ಮಹಿಳೆಯರಿಗೆ ರಿಲ್ಯಾಕ್ಸ್ ಎನ್ನುವುದು ಇರುವುದೇ ಇಲ್ಲ.
ವೃತ್ತಿಪರ ಕಾರ್ಯ, ಮನೆಯ ಜವಾಬ್ದಾರಿ, ಮಕ್ಕಳ-ಪತಿಯ (Children-Husband) ಅಗತ್ಯಗಳನ್ನು ಪೂರೈಸುವಲ್ಲಿ ಸಾಕಾಗುತ್ತದೆ. ಗೃಹಿಣಿಯರಿಗೆ ಮಧ್ಯಾಹ್ನದ ಸಮಯ ಸ್ವಲ್ಪ ಬಿಡುವಿರಬಹುದು ಎಂದುಕೊಳ್ಳುವುದಷ್ಟೆ. “ಹೇಗೂ ಮನೆಯಲ್ಲೇ ಇರ್ತಾಳಲ್ಲ, ಏನೂ ಕೆಲಸವಿಲ್ಲ’ ಎಂದುಕೊಳ್ಳುವ ಮನೆಮಂದಿಯ ನಡುವೆ ಇನ್ನಷ್ಟು ಕೆಲಸಗಳು ಹೆಗಲೇರಿ ಕುಳಿತುಕೊಳ್ಳುತ್ತವೆ. ಹತ್ತು ನಿಮಿಷವೂ ರೆಸ್ಟ್ ಮಾಡಲು ಸಾಧ್ಯವಾಗದಷ್ಟು ದಿನಚರಿಯಲ್ಲಿ ಮುಳುಗುವುದು ಮಹಿಳೆಯರ ಮಟ್ಟಿಗೆ ಸಾಮಾನ್ಯ. ಇವೆಲ್ಲದರ ನಡುವೆ, ನಿಮಗಾಗಿ ನೀವು ಏನಾದರೂ ಮಾಡಿಕೊಂಡಿದ್ದೀರಾ, ಸ್ವಲ್ಪ ಸಮಯ ನೀಡಿದ್ದೀರಾ, ರಿಲ್ಯಾಕ್ಸ್ ಮಾಡಿಕೊಂಡಿದ್ದೀರಾ ಎನ್ನುವ ಪ್ರಶ್ನೆಯನ್ನು ಮಹಿಳೆಯರಿಗೆ ಕೇಳಿನೋಡಿ. ಬಹುತೇಕರಿಗೆ ತಮಗೆ ತಾವು ಸಮಯ ಕೊಟ್ಟುಕೊಳ್ಳಬೇಕು ಎನ್ನುವುದೂ ಅರಿವಿರುವುದಿಲ್ಲ. ಮನೆ, ಮಕ್ಕಳು, ಗಂಡ ಜತೆಗೆ ನೆಂಟರಿಷ್ಟರ ಸಂಸಾರವನ್ನು ನಿಭಾಯಿಸುವುದೇ ಜೀವನದ ಪರಮೋದ್ದೇಶ ಎಂದು ತಿಳಿದುಕೊಂಡಿರುವವರು ಸಾಕಷ್ಟಿದ್ದಾರೆ. ಈ ನಡುವೆಯೂ ತಮಗೆ ತಾವು ಸಮಯ ಕೊಟ್ಟುಕೊಳ್ಳುವುದು ಅತಿ ಮುಖ್ಯ.
ಅಪ್ಪ ಆದೋರು ಅಮ್ಮನಿಗೆ ಹೀಗೆ ಹೆಲ್ಪ್ ಮಾಡಿ
ದಿಯಾ ಮಿರ್ಜಾ ಮೆಸೇಜ್ (Dia Mirza)
ಖ್ಯಾತ ತಾರೆ ದಿಯಾ ಮಿರ್ಜಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುವ ಪೋಸ್ಟರ್ ಒಂದನ್ನು ಹಾಕಿದ್ದಾರೆ. “ಹೇ ಮಾಮ್ಸ್, ನಿಮಗೆ ನೀವು ಸಮಯ ನೀಡಿ’ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಕಣ್ತೆರೆಸುವಂಥದ್ದು. ಇದಕ್ಕೆ ಸ್ತ್ರೀ ರೋಗ ತಜ್ಞರೊಬ್ಬರು ಕೂಡ ದನಿಗೂಡಿಸಿರುವುದು ವಿಶೇಷ. ಹೌದು, ಮಹಿಳೆಯರು ತಮಗಾಗಿ ದಿನದ ಅಲ್ಪ ಸಮಯವನ್ನಾದರೂ ಮೀಸಲಿಟ್ಟುಕೊಳ್ಳುವುದು ಅಗತ್ಯ. ಆ ಸಮಯದಲ್ಲಿ ನೀವು ಏನೇ ಮಾಡಿ. ಅದು ನಿಮ್ಮ ಖುಷಿಯಾಗಿ, ನಿಮ್ಮ ಅಗತ್ಯಕ್ಕಾಗಿ, ನಿಮಗಾಗಿ ಇರಲಿ ಅಷ್ಟೆ.
ಸ್ವಲ್ಪ ಸ್ವಾರ್ಥಿಗಳಾಗಿ!
“ಪುರುಷರು ಸ್ವಾರ್ಥಿಗಳು (Selfish), ಅವರಿಗೆ ತಮ್ಮ ಕೆಲಸವಾದರಾಯಿತು’ ಎಂದು ಬಹಳಷ್ಟು ಮಹಿಳೆಯರು ಸಾಮಾನ್ಯವಾಗಿ ಹೇಳುತ್ತಾರೆ. ಹೌದು, ಅವರು ತಮಗಾಗಿ ಸಾಕಷ್ಟು ಸಮಯ ಕೊಡುತ್ತಾರೆ. ಅಂತಹ ಚೂರು ಸ್ವಾರ್ಥವನ್ನು ಮಹಿಳೆಯರೂ ರೂಢಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಏಕೆಂದರೆ, ಮಾನಸಿಕ (Mental) ಹಾಗೂ ದೈಹಿಕ (Physical) ಆರೋಗ್ಯಕ್ಕಾಗಿ ಇದು ಅತ್ಯಂತ ಮುಖ್ಯ. ಅದಕ್ಕಾಗಿ ನೀವು ಗಿಲ್ಟ್ ಫೀಲಿಂಗ್ ಅನುಭವಿಸಬೇಕಾಗಿಲ್ಲ. ನಿಮಗೆ ನೀವು ಸಮಯ ನೀಡುವ ಪರಿಪಾಠ ಆರಂಭಿಸಿದಾಗ ನಿಮಗೆ ಗಿಲ್ಟ್ ಆಗುವಂತೆ ಪತಿ ಹಾಗೂ ಮನೆಯ ಇತರ ಸದಸ್ಯರು ಮಾತನಾಡಬಹುದು, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
40 ವರ್ಷದ ಅಮ್ಮನನ್ನು ಪ್ರೀತಿಸೋರು ಯಾರೂ ಇಲ್ವಂತೆ
ಜೀವನಪ್ರೀತಿ ಇರಲಿ
ಬೆಳಗ್ಗಿನ ಸಮಯದಲ್ಲಾಗಿದ್ದರೂ ಪರವಾಗಿಲ್ಲ, ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ವ್ಯಾಯಾಮ, ಧ್ಯಾನ, ನಿಮ್ಮ ಖುಷಿಗಾಗಿ ಏನೋ ಒಂದನ್ನು ಮಾಡಿಕೊಂಡು ಸೇವನೆ ಮಾಡುವುದು ಸೇರಿದಂತೆ ನಿಮ್ಮ ದೇಹದ ಸೌಂದರ್ಯಕ್ಕಾಗಿ ಏನು ಬೇಕೋ ಅದನ್ನು ಮಾಡಿಕೊಳ್ಳಲು ಸಮಯ ಇಟ್ಟುಕೊಳ್ಳಬೇಕು. ಒಂದೊಮ್ಮೆ ನಿಮಗಾಗಿ ಸಮಯ ನೀಡಲು ಸಾಧ್ಯವಾಗದಿದ್ದರೆ ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಆಳವಾದ ಬೇಸರ ಕಾಡಬಹುದು. ಹಾರ್ಮೋನ್ ಸಮಸ್ಯೆ, ಮಧುಮೇಹ, ಹೈಪೋಥೈರಾಯ್ಡಿಸಮ್, ಹೈಪರ್ ಟೆನ್ಷನ್ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜೀವನಪ್ರೀತಿ ಉಳಿಸಿಕೊಳ್ಳುವುದಕ್ಕಾಗಿ ನಿಮ್ಮನ್ನು ನೀವು ಗೌರವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.