Relationship Tips: ಅಪ್ಪ ಆಗಿದ್ದೀರಾ? ಪತ್ನಿಗೆ ಹೀಗೆಲ್ಲ ಸಹಾಯ ಮಾಡ್ಬೋದು
ಹಾಲೂಡುವ ಅಮ್ಮಂದಿರಿಗೆ ನಾಲ್ಕು ಕೈಗಳಿದ್ದರೂ ಸಾಲುವುದಿಲ್ಲ. ಈ ಸಮಯದಲ್ಲಿ ಪತಿ ಸಹಕಾರ ನೀಡುವುದು ಮುಖ್ಯ. ವರ್ಕ್ ಫ್ರಂ ಹೋಮ್ ಅಮ್ಮಂದಿರಿಗೂ ಇನ್ನಷ್ಟು ಅನಿವಾರ್ಯತೆ ಇರುತ್ತದೆ. ಪತ್ನಿಗೆ ಸಹಕಾರ ನೀಡಬೇಕೆನ್ನುವ ಆಸೆ ನಿಮಗಿದ್ದರೆ ಹೀಗ್ಮಾಡಿ.
ಅಮ್ಮನಾಗುವ ಹೊತ್ತು ಪ್ರತಿ ಮಹಿಳೆಗೆ ಖುಷಿ, ಪುಳಕದೊಂದಿಗೆ ಆತಂಕವನ್ನೂ ಉಡುಗೊರೆಯಾಗಿ ನೀಡುತ್ತದೆ. ಪಿಳಿಪಿಳಿ ಕಣ್ಣುಬಿಡುವ ಪುಟಾಣಿ ಗೊಂಬೆಯನ್ನು ನೋಡಿಕೊಳ್ಳುವುದು ಹೇಗೆಂದು ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಹಿರಿಯರು ಈ ಸಂದರ್ಭದಲ್ಲಿ ಸಹಾಯಕ್ಕೆ ನಿಲ್ಲುತ್ತಾರೆ. ಆದರೆ ಅದು ಕೆಲವೇ ದಿನಗಳು. ಮೂರು-ಆರು ತಿಂಗಳಲ್ಲಿ ಬಾಣಂತಿತನ ಮುಗಿದುಹೋಗುತ್ತದೆ. ಆಗ ಅವರು ತಮ್ಮ ತಮ್ಮ ಮನೆಗಳಿಗೆ, ಕಾರ್ಯಕ್ಕೆ ಧಾವಿಸಬೇಕಾಗುತ್ತದೆ. ಮನೆಯಲ್ಲಿ ಯಾರೂ ಹಿರಿಯರು ಇಲ್ಲದಿದ್ದರೆ ಅಥವಾ ಇದ್ದರೂ ಸಹಾಯಕ್ಕೆ ಒದಗದಿದ್ದರೆ ಪುಟ್ಟ ಮಗುವನ್ನು ನಿಭಾಯಿಸುವುದು ಅಮ್ಮಂದಿರಿಗೆ ಕಷ್ಟವಾಗಬಹುದು. ಆದರೆ, ಕೆಲವು ವಿಚಾರಗಳಲ್ಲಿ ಪತಿಯ ಸಹಕಾರ ದೊರೆತರೆ ಸುಲಭವಾಗಿ ಪರಿಸ್ಥಿತಿ ನಿಭಾಯಿಸಬಹುದು.
ಆಧುನಿಕ ಅಪ್ಪಂದಿರು ಮೊದಲಿನ ಹಾಗಲ್ಲ. ಮಗುವಾದ ಬಳಿಕ ಅಮ್ಮನಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತಾರೆ. ನೀವೂ ಸಹ ಅಂತಹ ಅಪ್ಪಂದಿರಾಗಿದ್ದರೆ ಪತ್ನಿಗೆ (Wife) ಏನೆಲ್ಲ ಸಹಾಯ ಮಾಡಬಹುದು ಎಂದು ನೋಡಿಕೊಳ್ಳಿ. ನಿಮ್ಮ ಪತ್ನಿ ಇದೇ ಮೊದಲ ಬಾರಿ ಹೇಗೆ ಅಮ್ಮನಾದ ಪುಳಕ ಅನುಭವ ಅನುಭವಿಸುತ್ತಿದ್ದಾಳೋ ಹಾಗೆಯೇ ನಿಮಗೂ ಇದು ಮೊದಲ ಅನುಭವ. ಅದನ್ನು ಸಾರ್ಥಕವಾಗಿಸಿಕೊಳ್ಳಿ.
ಈಗಂತೂ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಬಹುತೇಕ ಅಮ್ಮಂದಿರಿಗೆ ದೊರೆಯುತ್ತಿದೆ. ಹೀಗಾಗಿ, ಮಗುವನ್ನು ನಿಭಾಯಿಸುತ್ತ ಅವರು ತಮ್ಮ ಕೆಲಸ ಮುಂದುವರಿಸಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಸಹಜವಾಗಿ ಅವರು ಅಪ್ಪಂದಿರಿಗಿಂತ ಹೆಚ್ಚು ಜವಾಬ್ದಾರಿ ನಿಭಾಯಿಸುತ್ತಾರೆ. ನೀವು ಸಹ ಕಚೇರಿಗೆ ಹೋಗುವವರಾಗಿದ್ದರೆ ಅಥವಾ ಮನೆಯಿಂದಲೇ ಕೆಲಸ ಮಾಡುವವರಾಗಿದ್ದರೆ ಪತ್ನಿಗೆ ಅನೇಕ ರೀತಿಯಲ್ಲಿ ಸಹಕಾರ ನೀಡಬಹುದು.
ಇದನ್ನೂ ಓದಿ: ಸ್ತನದಲ್ಲಿ ಕಾಣಿಸುವ ಇಂಥ ಸಮಸ್ಯೆಗೇನೂ ಟೆನ್ಷನ್ ಮಾಡಿಕೊಳ್ಳೋದು ಬೇಡ!
• ಪತ್ನಿಗೆ ಕಷ್ಟವಾಗುತ್ತಿರುವ ಕೆಲಸಗಳನ್ನು ನೀವು ನೋಡಿಕೊಳ್ಳಿ.
ಮೂರು ಹೊತ್ತು ಅಡುಗೆ ಮನೆಯ ಕೆಲಸ, ಪದೇ ಪದೆ ನ್ಯಾಪ್ ಕಿನ್ ಬದಲಾಯಿಸುವುದು ಸೇರಿದಂತೆ ಪತ್ನಿಗೆ ಕಷ್ಟವಾಗುತ್ತಿರುವ ಕೆಲಸಗಳನ್ನು ಗುರುತಿಸಿ. ಅವರ ಬಳಿ ಮಾತನಾಡಿ. ಅದರಲ್ಲಿ ಕೆಲವು ಭಾಗವನ್ನು ನೀವು ವಹಿಸಿಕೊಳ್ಳಿ. ಸಮಯದ ಹೊಂದಾಣಿಕೆ ಮಾಡಿಕೊಳ್ಳಿ. ರಾತ್ರಿ ನಿದ್ರೆ ಮಾಡದಿರುವ ಮಗುವಾದರೆ ನಿಭಾಯಿಸುವುದು ಇನ್ನೂ ಕಷ್ಟವಾಗುತ್ತದೆ. ಆಗ ಏನು ಮಾಡಬೇಕೆಂದು ಪರಸ್ಪರ ಮಾತಾಡಿ. ಅವರ ಸಮಸ್ಯೆ ಎದುರಿಗೇ ಕಾಣುವಂತಿದ್ದರೂ ಅವಾಯ್ಡ್ ಮಾಡಬೇಡಿ. ಇದರಿಂದ ಅವರಲ್ಲಿ ಅಸಹಾಯಕತೆ ಮೂಡುತ್ತದೆ.
• ಪತ್ನಿ ತನ್ನ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡಿ
ಮನೆ ಹಾಗೂ ಕಚೇರಿ ಕೆಲಸಗಳನ್ನು ನಿಭಾಯಿಸುವಲ್ಲಿ ಬಹಳಷ್ಟು ಮಹಿಳೆಯರು ಸೋತು ಹೋಗುತ್ತಾರೆ. ಆರಂಭದಲ್ಲಿ ಇದು ಅರಿವಿಗೆ ಬಾರದಿದ್ದರೂ ಕ್ರಮೇಣ ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ವಾರಕ್ಕೊಮ್ಮೆಯಾದರೂ ಅವರು ಖುಷಿಯಾಗಿ, ಸ್ವಲ್ಪ ಹೆಚ್ಚು ಹೊತ್ತು ಸ್ನಾನ ಮಾಡುವಂತೆ ನೋಡಿಕೊಳ್ಳಿ. ಒಬ್ಬರೇ ಕುಳಿತು ಶಾಂತವಾಗಿ ಟೀ, ಕಾಫಿ ಕುಡಿಯಲು ಆಸ್ಪದ ನೀಡಿ. Breastfeed ಸಮಯದಲ್ಲಿ ನಿದ್ರೆಗೆ ಭಾರೀ ಅಡೆತಡೆ ಉಂಟಾಗುತ್ತಿರುತ್ತದೆ. ಆಕೆ ಬೆಳಗ್ಗೆ ಏಳುವುದು ತಡವಾಗುತ್ತಿದ್ದರೆ ಬೇಸರಿಸಿಕೊಳ್ಳಬೇಡಿ. ನೀವೇ ಎದ್ದು ಕೆಲಸ ಮಾಡಿಕೊಳ್ಳಲು ಯತ್ನಿಸಿ. ಕ್ರಮೇಣ ಅಭ್ಯಾಸವಾಗುತ್ತದೆ.
ಇದನ್ನೂ ಓದಿ: ಗರ್ಭಿಣಿ ಈ ತಿಂಗಳಲ್ಲಿ ಯೋಗಾಭ್ಯಾಸ ಶುರು ಮಾಡಿದ್ರೆ ಆರೋಗ್ಯಕ್ಕೊಳ್ಳೆಯದು
• ಪತ್ನಿ ಜತೆಗೆ ಏಕಾಂತ ಇಲ್ಲದಿದ್ದರೆ ಬೇಸರಿಸಿಕೊಳ್ಳಬೇಡಿ
ಮನೆಗೆ ಹೊಸ ಅತಿಥಿಯ ಆಗಮನವಾದಾಗ ಪತ್ನಿ ಜತೆಗೆ ಏಕಾಂತದಲ್ಲಿರಲು ಹಿಂದಿನಂತೆ ಸಾಧ್ಯವಾಗುವುದಿಲ್ಲ. ಆಗ ಅದರ ಬಗ್ಗೆ ಅಸಹನೆ ತೋರಬೇಡಿ. ಏಕೆಂದರೆ, ಪತ್ನಿಗೂ ನಿಮ್ಮ ಸಾಂಗತ್ಯ ಬೇಕಾಗುತ್ತದೆ, ಆದರೆ ಅದು ಸಾಧ್ಯವಾಗುವುದಿಲ್ಲ ಅಷ್ಟೆ. ಒಂದೊಮ್ಮೆ ನೀವು ಅಸಹನೆ ತೋರಿದರೆ ಆಕೆ ಇನ್ನಷ್ಟು ವಿಹ್ವಲತೆಗೆ ಒಳಗಾಗಬಹುದು. ಆಕೆ ನಿಮ್ಮ ಮಗುವಿನ ಅಮ್ಮ ಎನ್ನುವುದು ನೆನಪಿನಲ್ಲಿ ಇರಲಿ. ಹಾಗೆಯೇ, ಆಕೆ ನಿಮಗೆ ಆರ್ಥಿಕ ಸಹಕಾರ ನೀಡುವ ಜತೆಗೆ ಮನೆಗೂ ಬೆಳಕಾಗಿದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಮಗುವಿನ ಜವಾಬ್ದಾರಿಯನ್ನು ಇಬ್ಬರೂ ಹೊತ್ತರೆ ಮಾತ್ರ ಸಂಸಾರ ಸುಗಮವಾಗುತ್ತದೆ. ಅಮ್ಮಂದಿರೂ ಒತ್ತಡದಿಂದ ಮುಕ್ತರಾಗುತ್ತಾರೆ. ಇದರ ನಡುವೆಯೂ ಪರಸ್ಪರ ಏಕಾಂತದ ಸಮಯ ಮಾಡಿಕೊಂಡು ಆಪ್ತತೆ ಉಳಿಸಿಕೊಳ್ಳಿ.