
ಭಾರತದಲ್ಲಿ ಡಿವೋರ್ಸ್ ಕಾಲಿಟ್ಟು ಬಹಳ ದಶಕಗಳೇ ಕಳೆದಿವೆ. ಈಗಂತೂ ಇದು ಮಾಮೂಲು ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಕೌಟುಂಬಿಕ ಕೋರ್ಟ್ಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ 140 ವರ್ಷಗಳ ಹಿಂದೆ ಕಲ್ಪನೆ ಮಾಡಿಕೊಳ್ಳಿ. ಆಗಲೂ ಡಿವೋರ್ಸ್ ಇತ್ತಾ? ಇಂಥ ಕಲ್ಪನೆಯೂ ಇದ್ದಿರಲಿಕ್ಕಿಲ್ಲ ಎಂದುಕೊಳ್ಳುವವರೇ ಎಲ್ಲ. ಏಕೆಂದರೆ 50-60 ವರ್ಷಗಳ ಹಿಂದೆ ಹೋದರೆ ವಿಚ್ಛೇದನ ಎನ್ನುವುದು ನಗರ, ಮಹಾನಗರ ಪ್ರದೇಶಗಳಲ್ಲಿ ಮಾತ್ರ ಅಲ್ಲೊಂದು ಇಲ್ಲೊಂದು ಕೇಳಿಬರುತ್ತಿತ್ತೇನೋ. ಅಂಥದ್ದರಲ್ಲಿ ನೂರಾರು ವರ್ಷಗಳ ಹಿಂದೆ ಹೀಗೆ ಇದ್ದಿರಬಹುದು ಎಂದೂ ಊಹಿಸುವುದು ಕಷ್ಟ. ಆದರೆ ಕುತೂಹಲದ ಸಂಗತಿ ಏನೆಂದರೆ, 1885ರಲ್ಲಿ ಓರ್ವ ಮಹಿಳೆ ಪತಿಯಿಂದ ಡಿವೋರ್ಸ್ ಪಡೆದಿದ್ದಳು. ಇದು ಪತಿಯಿಂದ ಮಹಿಳೆಯೊಬ್ಬಳು ಖುದ್ದಾಗಿ ಪಡೆದ ವಿಚ್ಛೇದನವಾಗಿದೆ, ಅರ್ಥಾತ್ ಭಾರತದ ಮೊದಲ ಡಿವೋರ್ಸ್ ಪ್ರಕರಣ ಇದು. ಆದರೆ, ಆಕೆ ತೋರಿದ ಧೈರ್ಯ ಇಡೀ ಸ್ತ್ರೀ ಸಮುದಾಯಕ್ಕೆ ಅತ್ಯಂತ ಶಕ್ತಿಯುತ ಬುನಾದಿ ಹಾಕಲಾಗಿದೆ.
ಇದನ್ನೂ ಓದಿ: ತುಂಡು ಬಟ್ಟೆ ಧರಿಸಿದ್ರೆ ಸಂಸ್ಕಾರ... ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು? ಪರ-ವಿರೋಧ ನಿಲುವು
ಇದರ ರೋಚಕ ಸ್ಟೋರಿ ಇಲ್ಲಿದೆ. ಆಕೆಯ ಹೆಸರು ರುಕ್ಮಾಬಾಯಿ. 11 ನೇ ವಯಸ್ಸಿನಲ್ಲಿಯೇ 19 ವರ್ಷದ ದಾದಾಜಿ ಭಿಕಾಜಿ ಎಂಬ ಹುಡುಗನೊಂದಿಗೆ ವಿವಾಹ ಮಾಡಲಾಯಿತು. ಮುಂದೆ ವೈದ್ಯಕೀಯ ಅಧ್ಯಯನ ಮಾಡುವ ಉತ್ಸಾಹ ರುಕ್ಮಾಬಾಯಿಗೆ. ಇದೇ ಕಾರಣಕ್ಕೆ ಅವಳು ತನ್ನ ಮಲತಂದೆ ಮತ್ತು ತಾಯಿಯೊಂದಿಗೆ ಮನೆಯಲ್ಲಿಯೇ ಇದ್ದಳು ಮತ್ತು ತನ್ನ ಶಿಕ್ಷಣವನ್ನು ಮುಂದುವರೆಸಿದಳು. ಆದಾಗ್ಯೂ, ಅವಳ ಪತಿಗೆ ಇದು ಇಷ್ಟವಾಗಲಿಲ್ಲ ಮತ್ತು ಅವನು ಅವಳನ್ನು ತನ್ನೊಂದಿಗೆ ಇರಬೇಕೆಂದು ಒತ್ತಾಯಿಸಿದನು. ಆದರೆ ಆಕೆ ಒಪ್ಪಲಿಲ್ಲ. ಪತಿಯ ಮನೆ ಬಿಟ್ಟು ಅಮ್ಮನ ಮನೆಯಲ್ಲಿ ಇದ್ದ ಹೆಣ್ಣನ್ನು ಈಗಿನ ಸಮಾಜವೇ ಹೇಗೆ ನೋಡುತ್ತದೆ ಎನ್ನುವುದು ಗೊತ್ತು, ಇನ್ನು ಆಗ ಹೇಗಿದ್ದಿರಬೇಡ? ಶಿಕ್ಷಣವು ರುಕ್ಮಾಬಾಯಿಯನ್ನು ಭ್ರಷ್ಟಗೊಳಿಸಿದೆ ಎಂದು ಎಲ್ಲರೂ ಆಕೆಗೆ ಛೀಮಾರಿ ಹಾಕತೊಡಗಿದರು.
ರುಕ್ಮಾಬಾಯಿ ಸ್ಟೋರಿ ಇದು…
ಅದರ ಹೊರತಾಗಿಯೂ ಆಕೆ ಅಮ್ಮನ ಮನೆಯಲ್ಲಿಯೇ ಇದ್ದು ಶಿಕ್ಷಣ ಪೂರೈಸಿದಳು. ರುಕ್ಮಾಬಾಯಿ ಬೆಳೆದು ಸ್ವಲ್ಪ ದೊಡ್ಡವಳಾದ ಮೇಲೆ ತನ್ನ ವೈವಾಹಿಕ ಜೀವನವನ್ನು ಆಯ್ಕೆ ಮಾಡಲು ನಿರ್ಧರಿಸಿದಳು. ತನ್ನ ಪತಿಯ ಜೊತೆಗೆ ವಾಸಿಸಲು ನಿರಾಕರಿಸಿದಳು. ದಾದಾಜಿ ಭಿಕಾಜಿ ಪತ್ನಿಯ ವಿರುದ್ಧ ಪ್ರಕರಣ ದಾಖಲಿಸಿದ. ರುಕ್ಮಾಬಾಯಿ ತಾನು ಚಿಕ್ಕವಳಿದ್ದಾಗ ಮದುವೆಯಾದದ್ದರಿಂದ ತನ್ನ ಪತಿಯನ್ನು ಆರಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಎಂದು ವಾದಿಸಿದಳು. ಪತಿಯಿಂದ ದೂರ ಉಳಿಯುವುದು ಸಾಧ್ಯವಿಲ್ಲ, ಹೀಗೆ ಡಿವೋರ್ಸ್ ಆರಿಸಿಕೊಂಡರೆ ಆರು ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ. ಆಯ್ಕೆ ನಿಮ್ಮದು ಎಂದಿತು ಕೋರ್ಟ್. ಆತ ರುಕ್ಮಾಬಾಯಿ ನನಗೆ ಪತಿ ಬೇಡ, ಜೈಲಿಗೆ ಹೋಗುವೆ ಎಂದು ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಲು ರೆಡಿಯಾದಳು.
ಎ ಹಿಂದೂ ಲೇಡಿ' ಎಂಬ ಕಾವ್ಯನಾಮ
ಒಬ್ಬ ಧೈರ್ಯಶಾಲಿ ಮಹಿಳೆಯಾಗಿದ್ದ ಅವರು 'ಎ ಹಿಂದೂ ಲೇಡಿ' ಎಂಬ ಕಾವ್ಯನಾಮದಲ್ಲಿ ದಿ ಟೈಮ್ಸ್ ಆಫ್ ಇಂಡಿಯಾಕ್ಕೆ ಬರೆದರು. ಅವರು ಲಿಂಗ ಸಮಾನತೆ, ಸಾಮಾಜಿಕ ಸುಧಾರಣೆಗಳು, ಮಹಿಳಾ ಹಕ್ಕುಗಳು ಮತ್ತು ಮುಂತಾದವುಗಳ ಬಗ್ಗೆ ಬರೆಯುತ್ತಿದ್ದರು. ನ್ಯಾಯಾಲಯವು ರುಕ್ಮಾಬಾಯಿ ಪತಿಯ ಪರವಾಗಿ ತೀರ್ಪು ನೀಡಿದಾಗ, ಆಕೆಯ ಕಥೆಯು ರಾಣಿ ವಿಕ್ಟೋರಿಯಾ ಗಮನಕ್ಕೆ ಬಂತು. ರಾಣಿ ವಿಕ್ಟೋರಿಯಾ ಅವರು ರುಕ್ಮಾಬಾಯಿ ವಿರುದ್ಧ ತೀರ್ಪು ನೀಡಿದ್ದನ್ನು ರದ್ದುಗೊಳಿಸಿ, ಅವರಿಗೆ ವಿಚ್ಛೇದನ ನೀಡಿದರು. ರುಕ್ಮಾಬಾಯಿ ಜೀವನಗಾಥೆ ಮಿಂಚಿನ ವೇಗದಲ್ಲಿ ಎಲ್ಲೆಡೆ ಹಬ್ಬಿತು. ಭಾರತದಲ್ಲಿ ಬಾಲ್ಯ ವಿವಾಹದ ವಿರುದ್ಧ ಒಂದು ದೊಡ್ಡ ಚಳವಳಿಗೆ ಇದು ಕಾರಣವಾಯಿತು. ಇದು ಮಹಿಳೆಯರ ಹಕ್ಕುಗಳ ಪರವಾದ ಒಂದು ಕ್ರಾಂತಿಯಾಗಿತ್ತು.
ಮಹಿಳಾ ಸಮುದಾಯಕ್ಕೆ ಸಂದ ಜಯ:
ಇದು ರುಕ್ಮಾಬಾಯಿ ಮತ್ತು ದೇಶದ ಇತರ ಅನೇಕ ಮಹಿಳೆಯರಿಗೆ ಒಂದು ದೊಡ್ಡ ಜಯವಾಗಿತ್ತು. ಅವರ ಪ್ರಕರಣದಿಂದಾಗಿ, ಬಾಲ್ಯವಿವಾಹದ ಬಗ್ಗೆ ಚರ್ಚೆಗಳು ವೇಗ ಪಡೆದುಕೊಂಡವು ಮತ್ತು ಅಂತಿಮವಾಗಿ ಮದುವೆಯಾಗುವ ವಯಸ್ಸನ್ನು ಹೆಚ್ಚಿಸಲಾಯಿತು. ಇದಷ್ಟೇ ಅಲ್ಲ, ಅವರ ಕಥೆಯು ಅನೇಕ ಮಹಿಳೆಯರಿಗೆ ತಮ್ಮ ಹೃದಯವು ಬಯಸಿದ್ದನ್ನು ಅನುಸರಿಸಲು ಮತ್ತು ಸಮಾಜದ ಆದೇಶಗಳು ತಮ್ಮ ಜೀವನವನ್ನು ಆಳಲು ಬಿಡದಿರಲು ಸ್ಫೂರ್ತಿ ನೀಡಿತು. ವಿಚ್ಛೇದನ ಪಡೆದ ನಂತರ, ಅವರು ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ಫಾರ್ ವುಮೆನ್‌ನಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದರು. ಸೂರತ್‌ನ ಮಹಿಳಾ ಆಸ್ಪತ್ರೆಯ ಮುಖ್ಯಸ್ಥರಾಗಿ 35 ವರ್ಷಗಳ ಕಾಲ ಭಾರತಕ್ಕೆ ಹಿಂದಿರುಗಿದ ನಂತರ, ಅವರು ಪಾಶ್ಚಿಮಾತ್ಯ ವೈದ್ಯಕೀಯದಲ್ಲಿ ಮೊದಲ ಭಾರತೀಯ ಮಹಿಳಾ ವೈದ್ಯರಾದರು.
ಇದನ್ನೂ ಓದಿ: ಸುಳ್ಳು ವರದಕ್ಷಿಣೆ ಕೇಸ್ ಹಾಕುವವರೇ ಹುಷಾರ್! ಮಹಿಳೆಗೆ 1.8 ಕೋಟಿ ದಂಡ ವಿಧಿಸಿದ ಕೋರ್ಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.