
ಮುಟ್ಟು ನೈಸರ್ಗಿಕ ಕ್ರಿಯೆ. ಹೆಣ್ಣಿಗೆ ಇದೊಂದು ಹೆಮ್ಮೆಯ ವಿಷ್ಯವೆಂದ್ರೂ ತಪ್ಪಾಗಲಾರದು. ಪಿರಿಯಡ್ಸ್ ಸರಿಯಾದ ಸಮಯದಲ್ಲಿ ಶುರುವಾದ್ರೆ ತಾಯಿ, ಕುಟುಂಬಸ್ಥರ ಒಂದು ಆತಂಕ ಕಡಿಮೆಯಾಗುತ್ತದೆ. ಮಗಳು ಬೆಳೆದಿದ್ದಾಳೆ ಎಂಬ ಖುಷಿ ಒಂದೆಡೆಯಾದ್ರೆ ಮುಂದೆ ಮಕ್ಕಳನ್ನು ಪಡೆಯಲು ಮಗಳಿಗೆ ಯಾವುದೇ ಸಮಸ್ಯೆಯಾಗಲಾರದು ಎಂಬ ನಂಬಿಕೆಯನ್ನು ಅವರು ಹೊಂದುತ್ತಾರೆ. ಮಗಳು ಮೊದಲ ಬಾರಿ ಪಿರಿಯಡ್ಸ್ ಆದಾಗ ಅದನ್ನು ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುವುದು ಮಾತ್ರವಲ್ಲದೆ ಆಚರಣೆ ಕೂಡ ಭಿನ್ನವಾಗಿರುತ್ತದೆ.
ದಕ್ಷಿಣ ಭಾರತ (South India ) ದಲ್ಲಿ ಮಗಳು ಮೈನೆರೆಯುವುದನ್ನು ಕುಟುಂಬಸ್ಥರು ಹಬ್ಬದಂತೆ ಆಚರಣೆ ಮಾಡ್ತಾರೆ. ಮಗಳಿಗೆ ಅಲಂಕಾರ ಮಾಡಿ, ಸೀರೆ ಉಡಿಸಿ, ತಲೆ ತುಂಬ ಹೂ ಮುಡಿಸಿ, ಆಕೆಗೆ ಆರತಿ ಎತ್ತಿ ಹಬ್ಬದಂತೆ ಇದನ್ನು ಸಂಭ್ರಮಿಸುತ್ತಾರೆ. ಜೊತೆಗೆ ಸಂಬಂಧಿಕರು, ಸ್ನೇಹಿತರನ್ನು ಕರೆದು ಊಟ ಹಾಕಿಸುವ ಪದ್ಧತಿಯೂ ಅನೇಕ ಕಡೆಗಿದೆ. ದಕ್ಷಿಣ ಭಾರತ ಮತ್ತು ಈಶಾನ್ಯ (Northeast) ಭಾರತದ ಜಿಲ್ಲೆಗಳಲ್ಲಿ ಮಗಳು ಮೊದಲ ಬಾರಿ ಪಿರಿಯಡ್ಸ್ (periods) ಆದಾಗ ಹೇಗೆ ಆಚರಣೆಗಳು ನಡೆಯುತ್ತವೆ ಎಂಬ ವಿವರ ಇಲ್ಲಿದೆ.
ಮಹಿಳೆಯರ ಆರ್ಗಸಂ ಕುರಿತಾದ ಅಚ್ಚರಿಯ ಮಾಹಿತಿ ಇಲ್ಲಿದೆ…
ಕರ್ನಾಟಕ (Karnataka): ಕರ್ನಾಟಕದ ಅನೇಕ ಕಡೆ ಹಾಗೂ ಕೆಲ ಸಮುದಾಯದಲ್ಲಿ ಇದನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಹೆಣ್ಣು ಮಗಳು ಮೊದಲ ಬಾರಿ ಮುಟ್ಟಾದಾಗ ಅದನ್ನು ಋತುಶುದ್ಧಿ, ಋತು ಕಲಾ ಸಂಸ್ಕಾರದ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಹುಡುಗಿಗೆ ಮೊದಲ ಬಾರಿ ಸೀರೆ ಉಡಿಸಲಾಗುತ್ತದೆ. ಅರ್ಧ ಸೀರೆಯನ್ನು ಮಾತ್ರ ಈ ಸಮಯದಲ್ಲಿ ಉಡಿಸಲಾಗುತ್ತದೆ. ಅಂದ್ರೆ ಮದುವೆಯಾಗುವವರೆಗೆ ಹುಡುಗಿ ಅರ್ಧ ಸೀರೆಯನ್ನು ಮಾತ್ರ ಧರಿಸಬೇಕು ಎಂಬುದು ಇಲ್ಲಿನ ಉದ್ದೇಶವಾಗಿದೆ. ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಕಾಲಿಟ್ಟಿದ್ದಾರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರಬುದ್ಧರಾಗಿದ್ದಾರೆ ಎಂಬುದನ್ನು ತಿಳಿಸಲು ಈ ಶಾಸ್ತ್ರ ಮಾಡಲಾಗುತ್ತದೆ. ಹಿಂದೆ ಋತುಶುದ್ಧಿ ಸಂದರ್ಭದಲ್ಲಿ ಹುಡುಗಿಯರಿಗೆ ಮುಟ್ಟಿನ ಬಗ್ಗೆ ಮಾಹಿತಿ ನೀಡಲಾಗ್ತಿತ್ತು. ಮುಂದೆ ಅವರಿಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವ ಉದ್ದೇಶಕ್ಕೆ ಇದನ್ನು ಆಚರಿಸುತ್ತಿದ್ದರು.
ಕನ್ಯತ್ವ ಉಳಿಸಿಕೊಂಡ ಹುಡುಗಿಯರಿಗೆ ಹೈ ಡಿಮ್ಯಾಂಡ್! ಭಾರತೀಯ ಹುಡುಗರಿಗೆ ಮದ್ವೆ ಚಾನ್ಸ್ ಇಲ್ಲ!
ಆಂಧ್ರಪ್ರದೇಶ (AndhraPradesh): ಆಂಧ್ರಪ್ರದೇಶದಲ್ಲಿ ಇದನ್ನು ಪೆದ್ಮಾನಿಷಿ ಪಂಡಗ ಎಂದು ಕರೆಯಲಾಗುತ್ತದೆ. ಈ ಆಚರಣೆಯನ್ನು ಪಿರಿಯಡ್ಸ್ ನ ಮೊದಲ, ಐದನೇ ಮತ್ತು ಕೊನೆಯ ದಿನದಂದು ಆಚರಿಸಲಾಗುತ್ತದೆ. ಮೊದಲ ದಿನವೇ ಮಂಗಳ ಸ್ನಾನ ಮಾಡಲಾಗುತ್ತದೆ. ಐವರು ಮಹಿಳೆಯರು ಮಂಗಲ ಸ್ನಾನದಲ್ಲಿ ಬಾಲಕಿಗೆ ಸ್ನಾನ ಮಾಡಿದ್ದು, ಅದರಲ್ಲಿ ಬಾಲಕಿಯ ತಾಯಿ ಇಲ್ಲ. ಪಿರಿಯಡ್ಸ್ ಸಮಯದಲ್ಲಿ ಹುಡುಗಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಈ ಅವಧಿಯಲ್ಲಿ ಹುಡುಗಿ ಎಲ್ಲಿಗೂ ಹೋಗುವಂತಿಲ್ಲ. ದಿನವಿಡೀ ನಡೆಯುವ ಪೆದ್ಮಾನಿಷಿ ಪಂಡಗ ಸಮಾರಂಭದಲ್ಲಿ ಹುಡುಗಿಯ ಊಟದಿಂದ ಹಿಡಿದು ಹಾಸಿಗೆಯ ತನಕ ಎಲ್ಲವನ್ನೂ ಪ್ರತ್ಯೇಕಿಸಲಾಗುತ್ತದೆ. ಕೊನೆಯ ದಿನ ಶ್ರೀಗಂಧದ ಪೇಸ್ಟ್ ಅನ್ನು ಹುಡುಗಿಗೆ ಲೇಪಿಸಲಾಗುತ್ತದೆ.
ಅಸ್ಸಾಂ (Assam): ಅಸ್ಸಾಂನಲ್ಲಿ ಮೊದಲ ಬಾರಿ ಮಗಳು ಋತುಚಕ್ರಕ್ಕೆ ಒಳಗಾದ್ರೆ ಅದನ್ನು ತುಲೋನಿಯಾ ಬಿಯಾ ಹೆಸರಿನಲ್ಲಿ ಆಚರಣೆ ಮಾಡಲಾಗುತ್ತದೆ. ಇದನ್ನು ಮದುವೆಯಂತೆ ಮಾಡಲಾಗುತ್ತದೆ. ಮೊದಲ ಬಾರಿ ಪಿರಿಯಡ್ಸ್ ಗೆ ಒಳಗಾದ ಹುಡುಗಿ 7 ದಿನಗಳ ಕಾಲ ಯಾವುದೇ ಕೆಲಸ ಮಾಡುವಂತಿಲ್ಲ. ಆಕೆಯನ್ನು ಒಂದು ರೂಮಿನಲ್ಲಿ ಬಂಧಿ ಮಾಡಲಾಗುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳನ್ನು ಆಕೆ ನೋಡುವಂತಿಲ್ಲ. 7ನೇ ದಿನ ಆಕೆಯನ್ನು ಸಿಂಗರಿಸಿ, ಬಾಳೆ ಗಿಡಕ್ಕೆ ಮದುವೆ ಮಾಡಲಾಗುತ್ತದೆ. ಇದನ್ನು ಅದ್ಧೂರಿಯಾಗಿ ಮಾಡುವುದಲ್ಲದೆ, ಹುಡುಗಿಗೆ ಉಡುಗೊರೆ ನೀಡಲಾಗುತ್ತದೆ.
ಒಡಿಶಾ (Odisha): ಮುಟ್ಟಾದ ಮೂರು ದಿನವನ್ನು ಇಲ್ಲಿ ಸಂಭ್ರಮಿಸಲಾಗುತ್ತದೆ. ಇದನ್ನು ರಾಜ ಪ್ರಭಾ ಎಂದು ಕರೆಯಲಾಗುತ್ತದೆ. ಇದು ಸಂಸ್ಕೃತ ಪದದಿಂದ ಬಂದಿದೆ. ಮೂರು ದಿನ ಭೂತಾಯಿಯೂ ಋತುಚಕ್ರಕ್ಕೆ ಒಳಗಾಗ್ತಾಳೆ ಎಂದು ಇಲ್ಲಿನವರು ನಂಬುತ್ತಾರೆ. ನಾಲ್ಕನೇ ದಿನ ಮಗಳಿಗೆ ಸ್ನಾನ ಮಾಡಿಸಿ, ಸಿಂಗಾರ ಮಾಡಿ ಹಬ್ಬ ಆಚರಿಸುತ್ತಾರೆ. ಈ ಸಮಯದಲ್ಲಿ ಹುಡುಗಿಯರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಅವರು ಹೊಸ ಬಟ್ಟೆ ಧರಿಸಿ, ಸಿಹಿ ಹಂಚಿ ಸಂಭ್ರಮಿಸಬಹುದಾಗಿದೆ.
ತಮಿಳುನಾಡು (Tamilnadu): ಮಂಜಲ್ ನೀರತು ವೀಸಾ ಹೆಸರಿನಲ್ಲಿ ಈ ಹಬ್ಬ ಆಚರಣೆ ಮಾಡಲಾಗುತ್ತದೆ. ಹುಡುಗಿ ಚಿಕ್ಕಪ್ಪ ತೆಂಗಿನಕಾಯಿ, ಮಾವು ಮತ್ತು ಬೇವಿನ ಎಲೆಗಳಿಂದ ಮಾಡಿದ ಗುಡಿಸಲು ನಿರ್ಮಿಸುತ್ತಾನೆ. ಹುಡುಗಿಗೆ ಅರಿಶಿನ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಈ ಗುಡಿಸಲಿನಲ್ಲಿ ಪೊರಕೆಯೊಂದಿಗೆ, ಅನೇಕ ರುಚಿಕರವಾದ ಭಕ್ಷ್ಯಗಳನ್ನು ಇರಿಸಲಾಗುತ್ತದೆ. ಸ್ನಾನದ ನಂತರ ಹುಡುಗಿಗೆ ರೇಷ್ಮೆ ಸೀರೆಯನ್ನು ಉಡಿಸಲಾಗುತ್ತದೆ. ಆಭರಣಗಳನ್ನು ಸಹ ಧರಿಸಲಾಗುತ್ತದೆ. ಪುಣ್ಯ ಧನದೊಂದಿಗೆ ಸಮಾರಂಭ ಮುಕ್ತಾಯವಾಗುತ್ತದೆ. ಇದನ್ನು ಸಾಮಾನ್ಯವಾಗಿ 9, 11 ಮತ್ತು 15 ನೇ ದಿನದಂದು ಮಾಡಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.