ಒಮಾನ್‌ ದೇಶದಲ್ಲಿ ಭಾರತೀಯತೆಯ ಕಂಪು ಹರಡಿದ ಕವಿತಾ ರಾಮಕೃಷ್ಣ

Published : Mar 10, 2024, 12:49 PM IST
ಒಮಾನ್‌ ದೇಶದಲ್ಲಿ ಭಾರತೀಯತೆಯ ಕಂಪು ಹರಡಿದ ಕವಿತಾ ರಾಮಕೃಷ್ಣ

ಸಾರಾಂಶ

ಬದುಕು ಯಾರನ್ನು ಯಾವ ಹಾದಿಯಲ್ಲಿ ಕರೆದೊಯ್ಯುವುದೋ ಯಾರಿಗೂ ತಿಳಿಯುವುದಿಲ್ಲ. ಆದರೆ ತಾವು ಹೋಗುವ ಎಲ್ಲಾ ದಾರಿಗಳನ್ನೂ ತಮ್ಮ ಕೌಶಲದಿಂದ, ಸ್ವ ಸಾಮರ್ಥ್ಯದಿಂದ ಸುಂದರವಾಗಿಸುವ ಕಲೆ ಕೆಲವರಿಗಷ್ಟೇ ತಿಳಿದಿರುತ್ತದೆ. ಅಂಥಾ ಒಬ್ಬರು ಪ್ರತಿಭಾವಂತೆ ಕವಿತಾ ರಾಮಕೃಷ್ಣ.

ಬದುಕು ಯಾರನ್ನು ಯಾವ ಹಾದಿಯಲ್ಲಿ ಕರೆದೊಯ್ಯುವುದೋ ಯಾರಿಗೂ ತಿಳಿಯುವುದಿಲ್ಲ. ಆದರೆ ತಾವು ಹೋಗುವ ಎಲ್ಲಾ ದಾರಿಗಳನ್ನೂ ತಮ್ಮ ಕೌಶಲದಿಂದ, ಸ್ವ ಸಾಮರ್ಥ್ಯದಿಂದ ಸುಂದರವಾಗಿಸುವ ಕಲೆ ಕೆಲವರಿಗಷ್ಟೇ ತಿಳಿದಿರುತ್ತದೆ. ಅಂಥಾ ಒಬ್ಬರು ಪ್ರತಿಭಾವಂತೆ ಕವಿತಾ ರಾಮಕೃಷ್ಣ.

ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಕವಿತಾ ರಾಮಕೃಷ್ಣ ಪ್ರಸ್ತುತ ಒಮಾನ್ ದೇಶದ ಮಸ್ಕಟ್‌ನಲ್ಲಿದ್ದಾರೆ. ನಮ್ಮ ದೇಶದಿಂದ ದೂರ ಇದ್ದರೂ ಅವರು ನಮ್ಮತನ ಬಿಟ್ಟಿಲ್ಲ. ನಮ್ಮ ಸಂಸ್ಕೃತಿಯನ್ನು ಪಸರಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಯೋಗ ಸಾಧನೆ
ಮೂಲತಃ ಬರಹಗಾರ್ತಿಯಾಗಿರುವ ಅವರು ಅಪ್ರತಿಮ ಯೋಗಪಟು. ಅವರು ಎಂಥಾ ಅದ್ಭುತ ಯೋಗ ಪಟು ಎಂದರೆ ಒಂದೇ ಸಲ ನಿರಂತರವಾಗಿ 648 ಸೂರ್ಯ ನಮಸ್ಕಾರ ಮಾಡಿದ ಹೆಗ್ಗಳಿಕೆ ಅವರಿಗಿದೆ. ಅವರು ತಾವಷ್ಟೇ ಯೋಗದಿಂದ ಉಪಯೋಗ ಪಡೆದುಕೊಳ್ಳಲಿಲ್ಲ. ಜೊತೆಗೆ ವಿದೇಶದಲ್ಲಿ ಯೋಗ ಮಹತ್ವ ತಿಳಿಸುವ ಮನಸ್ಸು ಮಾಡಿದರು. ಯೋಗದ ಉಪಯೋಗವನ್ನು ಅ‍ವರಿಗೂ ಕಲಿಸಿಕೊಟ್ಟರು.

ಒಮಾನ್‌ನ ರಾಜವಂಶಸ್ಥರೂ ಸೇರಿದಂತೆ ಒಮಾನ್‌ನ ಹಲವಾರು ಪ್ರತಿಷ್ಠಿತ ವ್ಯಕ್ತಿಗಳಿಗೆ ಅವರು ಯೋಗ ಕಲಿಸಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ಜಗತ್ತಿನಲ್ಲಿ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಕವಿತಾ ಅವರು ಸೂರ್ಯ ನಮಸ್ಕಾರ ಮತ್ತು ವಿವಿಧ ಯೋಗಾಸನಗಳ ಮೂಲಕ ಶ್ವಾಸಕೋಶದ ಆರೋಗ್ಯ ವೃದ್ಧಿಸುವುದು ಹೇಗೆ ಎನ್ನುವುದನ್ನು ಕಲಿಸಿಕೊಟ್ಟು ಅವರೆಲ್ಲರ ಗೌರವಾದರಕ್ಕೆ ಪಾತ್ರರಾಗಿದ್ದರು.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಮಾನ್‌ಗೆ ಭೇಟಿ ಕೊಟ್ಟಾಗ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕ ಏಕೈಕ ಮಹಿಳೆ ಕವಿತಾ ರಾಮಕೃಷ್ಣ. ಮೋದಿಯವರು ಇವರ ಯೋಗ ಸಾಧನೆ ಬಗ್ಗೆ ತಿಳಿದು ಯೋಗದ ಕುರಿತು ಪುಸ್ತಕ ಬರೆಯಿರಿ ಎಂದು ತಿಳಿಸಿದ್ದರು. ಹಾಗೆ ಮೋದಿಯಿಂದ ಸ್ಫೂರ್ತಿ ಪಡೆದು ಯೋಗದ ಕುರಿತು ಅವರು ರಚಿಸಿದ ಪುಸ್ತಕದ ಹೆಸರು ‘ತಮೋಘ್ನ’. ಇಂಗ್ಲಿಷಿನಲ್ಲಿ ಯೋಗದ ಇತಿಹಾಸ, ಮಾಹಿತಿ, ಸೂರ್ಯ ನಮಸ್ಕಾರದ ವಿವರ ಸೇರಿದಂತೆ ಎಲ್ಲಾ ವಿವರಗಳಿರುವ ಈ ಕೃತಿ ಅಪಾರ ಮನ್ನಣೆಗೆ ಪಾತ್ರವಾಗಿದೆ. ಕವಿತಾ ರಾಮಕೃಷ್ಣ ಅವರು ಯೋಗದಲ್ಲಿ ಸಾಧಿಸಿರುವ ಪರಿಣತಿ ಮತ್ತು ಯೋಗದಿಂದ ಅವರು ಸಮಾಜಕ್ಕೆ ನೀಡಿರುವ ನೆರವಿಗಾಗಿ ಅಮೆರಿಕಾದ ಫ್ಲೋರಿಡಾದ ಯೋಗ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ.

ಇವರು ಸಮಾಜದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದರೆ ತಮ್ಮ ‘ತಮೋಘ್ನ’ ಪುಸ್ತಕ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಅವರು ಒಮಾನ್ ಕ್ಯಾನ್ಸರ್‌ ಅಸೋಸಿಯೇಷನ್‌ಗೆ ನೀಡಿದ್ದಾರೆ.

ತಂಜಾವೂರು ಚಿತ್ರಕಲೆ ಪರಿಣತಿ
ತಂಜಾವೂರು ಚಿತ್ರಕಲೆಯಲ್ಲಿ ಅಪಾರ ಪರಿಣತಿ ಸಾಧಿಸಿದ್ದಾರೆ. ಒಮಾನ್ ರಾಜ ಪರಿವಾರ, ಒಮಾನ್ ಸರ್ಕಾರದ ಮಂತ್ರಿಗಳು, ಪ್ರತಿಷ್ಠಿತ ವ್ಯಕ್ತಿಗಳ ಚಿತ್ರವನ್ನು ತಂಜಾವೂರು ಚಿತ್ರಕಲೆ ಮೂಲಕ ಚಿತ್ರಿಸಿ ಖ್ಯಾತಿ ಗಳಿಸಿದ್ದಾರೆ.

ಒಮಾನ್‌ನ ಹಿರಿಯ ನಾಯಕ ದಿವಂಗತ ಎಚ್‌ಎಂ ಸುಲ್ತಾನ್‌ ಕಾಬೂಸ್‌ ಸೈದ್‌ ಅವರ ಚಿತ್ರವನ್ನು 24 ಕ್ಯಾರೆಟ್‌ ಬಂಗಾರ ಮತ್ತು ಬಂಗಾರದ ಫಾಯಿಲ್‌ ಬಳಸಿ ತಂಜಾವೂರು ಶೈಲಿಯಲ್ಲಿ ಅವರು ರಚಿಸಿದ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿತ್ತು. ಅವರು ರಚಿಸಿದ ಚಿತ್ರಗಳನ್ನು ಒಮಾನ್ ಪ್ರತಿಷ್ಟಿತರಿಗೆ ಮತ್ತು ಭಾರತದಿಂದ ಆಗಮಿಸುವ ಗಣ್ಯರಿಗೆ ನೆನಪಿನ ಕಾಣಿಕೆಯಾಗಿ ನೀಡಲಾಗುತ್ತದೆ.

ಇದರೊಂದಿಗೆ ಸಂಸ್ಕೃತ ಪರಿಣತಿ, ಬರವಣಿಗೆ ಖ್ಯಾತಿ ಗಳಿಸಿದ ಕವಿತಾ ರಾಮಕೃಷ್ಣ ಸಮಾಜ ಸೇವೆಯಲ್ಲಿ ಮುಂಚೂಣಿಯ ಹೆಸರಾಗಿದ್ದಾರೆ. ಅಸಹಾಯಕರಿಗೆ ಇವರು ಸದಾ ನೆರವಿನ ಹಸ್ತ ಚಾಚಿರುತ್ತಾರೆ. ಒಮಾನ್‌ನಲ್ಲಿ ಸಾಂಸ್ಕೃತಿಕ ವಲಯದಲ್ಲಿಯೂ ಮುಂಚೂಣಿಯಲ್ಲಿ ಇರುವ ಕವಿತಾ ರಾಮಕೃಷ್ಣ ಸಹಸ್ರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಪತಿ ಜಿ.ವಿ. ರಾಮಕೃಷ್ಣ ಅವರು ಕವಿತಾರವರ ಎಲ್ಲಾ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಪತ್ನಿಯ ಸಾಧನೆಗೆ ನೆರವಾಗಿದ್ದಾರೆ. ಈ ಜೋಡಿಯು ಒಮಾನ್‌ ದೇಶದಲ್ಲಿ ಭಾರತೀಯತೆ ಮತ್ತು ಕನ್ನಡದ ಖ್ಯಾತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ