ಷೇರು ಮಾರುಕಟ್ಟೆ ಅಪಾಯಕಾರಿ. ಅದ್ರಲ್ಲಿ ಹಣ ಹೂಡಿದ್ರೆ ನಷ್ಟ ಗ್ಯಾರಂಟಿ ಎನ್ನುವ ಮಾತಿದೆ. ಆದ್ರೆ ಎಚ್ಚರಿಕೆ ಹೆಜ್ಜೆ ಇಟ್ಟರೆ ಇಲ್ಲೂ ಯಶಸ್ಸು ಸಾಧ್ಯ. ಈಗ ಮಹಿಳೆಯರ ಆಲೋಚನೆ ಕೂಡ ಬದಲಾಗಿದ್ದು, ಷೇರು ಅವರನ್ನು ಸೆಳೆಯುತ್ತಿದೆ.
ಷೇರು ಮಾರುಕಟ್ಟೆಯನ್ನು ಹಣದ ಬಾವಿ ಎಂದು ಕರೆಯುವುದಿದೆ. ನೀರು ಬರುವ ಜಾಗದಲ್ಲಿ ಅಗೆದಷ್ಟು ಬಾವಿ ತುಂಬುವಂತೆ ಷೇರು ಮಾರುಕಟ್ಟೆ ಕೂಡ ಹಣ ನೀಡುವ ಜಾಗ. ಕೊರೊನಾ ಸಾಂಕ್ರಾಮಿಕ ರೋಗದ ನಂತ್ರ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೊಸ ಹೊಸ ಹೂಡಿಕೆದಾರರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಆಗ್ತಿದೆ. ಮಹಿಳೆಯರ ಪಾಲ್ಗೊಳ್ಳುವಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಭಾರತೀಯ ಮಹಿಳೆಯರು ಷೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡ್ತಿದ್ದಾರೆ.
ವರದಿ (Report) ಯೊಂದರ ಪ್ರಕಾರ, ಮಹಿಳೆಯರ ಹೆಸರಿನಲ್ಲಿ ತೆರೆಯಲಾದ ಡಿಮ್ಯಾಟ್ (Demat) ಖಾತೆಗಳ ಸಂಖ್ಯೆ ಮತ್ತು ಅವರ ಹೆಸರಿನಲ್ಲಿ ಸಕ್ರಿಯವಾಗಿರುವ ಖಾತೆ (Account) ಗಳ ಸಂಖ್ಯೆ ಎರಡೂ ಗಮನಾರ್ಹವಾಗಿ ಹೆಚ್ಚಾಗಿದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಮುಖ ಬ್ರೋಕರೇಜ್ ಕಂಪನಿ ಯೆಸ್ ಸೆಕ್ಯುರಿಟೀಸ್ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಡಿಮ್ಯಾಟ್ ಖಾತೆಯನ್ನು ಮಾತ್ರ ಮಹಿಳೆಯರು ತೆರೆಯುತ್ತಿಲ್ಲ, ಈ ಖಾತೆಯಲ್ಲಿ ಬಂಡವಾಳ ಹೂಡಿಕೆ ಮಾಡಿ, ಸಕ್ರಿಯವಾಗಿ ಅದ್ರ ಮೇಲೆ ಕೆಲಸ ಮಾಡ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಿಮ್ಮ ಹೆಣ್ಣುಮಗುವಿಗೆ ಇದಕ್ಕಿಂತ ಉತ್ತಮ ಉಡುಗೊರೆ ಬೇರಿಲ್ಲ;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆಕೆ ಭವಿಷ್ಯ ಭದ್ರ
ಜನವರಿ 31, 2024ರವರೆಗೆ ಮಹಿಳೆಯರು ನಿರಂತರವಾಗಿ ಹೂಡಿಕೆ ಖಾತೆ ತೆರೆದಿದ್ದಾರೆ. ಇಲ್ಲಿಯವರೆಗೆ ಶೇಕಡಾ 75 ಬೆಳವಣಿಗೆ ಕಂಡುಬಂದಿದೆ. ರೆಲಿಗೇರ್ ಬ್ರೋಕಿಂಗ್ ವೇದಿಕೆಯಲ್ಲಿ ಶೇಕಡಾ 30ರಷ್ಟು ಖಾತೆಗಳು ಸಕ್ರಿಯವಾಗಿವೆ ಎಂದು ವರದಿ ಹೇಳಿದೆ.
ಈ ಹಿಂದೆ ಮಹಿಳೆಯರು ಬರಿ ಬಂಗಾರದಲ್ಲಿ ಹೂಡಿಕೆ (Gold Investment) ಮಾಡುತ್ತಿದ್ದರು. ಅದೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೂಡಿಕೆ ನಡೆಯುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಷೇರುಮಾರುಕಟ್ಟೆ ಬಗ್ಗೆ ಮಹಿಳೆಯರ ಆಸಕ್ತಿ ಹೆಚ್ಚಾಗಿದೆ. ಷೇರು ಮಾರುಕಟ್ಟೆ ಬಗ್ಗೆ ಮಹಿಳೆಯರು ಹೆಚ್ಚೆಚ್ಚು ತಿಳಿದುಕೊಳ್ತಿದ್ದಾರೆ. ಷೇರು ಮಾರುಕಟ್ಟೆ ಸೇರಿದಂತೆ ಸೂಕ್ತ ಸ್ಥಳದಲ್ಲಿ ಹೂಡಿಕೆ ಮಾಡುವ ಬಗ್ಗೆ ಮಹಿಳೆಯರಿಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಸರಿಯಾದ ಮಾರ್ಗದರ್ಶನ ಸಿಕ್ಕ ಮಹಿಳೆಯರು ತನ್ನ ಹಣವನ್ನು ಷೇರಿನಲ್ಲಿ ಹೂಡಿಕೆ ಮಾಡುವ ನಿರ್ಧಾರ ಮಾಡುತ್ತಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಸದಾ ಲಾಭವಿರೋದಿಲ್ಲ. ಅಲ್ಲಿ ಹೂಡಿಕೆ ಮಾಡುವ ಮಹಿಳೆಯರು ನಷ್ಟದ ಬಗ್ಗೆಯೂ ಜ್ಞಾನ ಹೊಂದಿರಬೇಕು. ನಷ್ಟವನ್ನು ಸ್ವೀಕರಿಸುವ ಧೈರ್ಯ ಹೊಂದಿರಬೇಕು. ಮಾರುಕಟ್ಟೆಯಲ್ಲಿ ಏರಿಳಿತವನ್ನು ಅರಿತು ಹೂಡಿಕೆ ಮಾಡಬೇಕು. ನಷ್ಟವಾಗುವ ಸಮಯದಲ್ಲಿ ಅದರಿಂದ ಹೊರಗೆ ಬರುವ ಅರಿವಿರಬೇಕು ಎನ್ನುತ್ತಾರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮಹಿಳೆ.
ಮಹಿಳೆಯ ಆರ್ಥಿಕ ಸ್ವಾತಂತ್ರ್ಯದ (Women Financial Independence) ಕಲ್ಪನೆ ವೇಗವಾಗಿ ಬೆಳೆಯುತ್ತಿದೆ. ಮಹಿಳೆಯರು ಸ್ವಭಾವತಃ ಕುತೂಹಲ ಹೊಂದಿರುತ್ತಾರೆ. ಹೊಸದನ್ನು ಕಲಿಯಲು ಬಯಸುತ್ತಾರೆ. ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಅವರು ಮನೆಯಿಂದ ಹೊರಗೆ ಹೋಗಿ ದುಡಿಯಬೇಕಾಗಿಲ್ಲ. ಮನೆಯಲ್ಲೇ ಕೆಲಸ ಮಾಡಿ ಹಣ ಗಳಿಸಬಹುದು. ಕೆಲವೇ ಗಂಟೆಗಳನ್ನು ಇದಕ್ಕೆ ಮೀಸಲಿಡಬೇಕಾಗುತ್ತದೆ. ಇದ್ರ ಬಗ್ಗೆ ಆಸಕ್ತಿ, ಜ್ಞಾನ ಹೊಂದಿರುವ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಈ ಕ್ಷೇತ್ರಕ್ಕೆ ಧುಮುಕುತ್ತಿದ್ದಾರೆ ಎನ್ನುತ್ತಾರೆ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಇನ್ನೊಬ್ಬ ಯುವತಿ.
ನವೋದ್ಯಮದಲ್ಲೂ ಭಾರತೀಯ ನಾರಿ ಸಕ್ಸಸ್; ದೇಶದ 8000 ಸ್ಟಾರ್ಟ್ ಅಪ್ ಗಳ ಮಾಲೀಕರು ಮಹಿಳೆಯರೇ!
ಅನೇಕ ಮಹಿಳೆಯರು ಷೇರು ಮಾರುಕಟ್ಟೆಯಲ್ಲಿ ತಾವು ಹೂಡಿಕೆ ಮಾಡಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ಬಹುತೇಕರ ಉತ್ತರದಲ್ಲಿ ಷೇರು ಮಾರುಕಟ್ಟೆಯ ಅಪಾಯ ನಿರ್ವಹಣೆ ಮುಖ್ಯ ಎನ್ನುವ ಅಂಶವಿತ್ತು. ಅಲ್ಲದೆ ವ್ಯಾಪಾರದ ಸ್ಥಳ ಮತ್ತು ಸಮಯದ ನಮ್ಯತೆಯೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ಷೇರುಮಾರುಕಟ್ಟೆಯಲ್ಲಿ ವ್ಯಾಪಾರ ಶುರು ಮಾಡುವ ಆರಂಭಿಕ ವ್ಯಾಪಾರಸ್ಥರು ಹಾಗೂ ಈಗಾಗಲೇ ಸಕ್ರಿಯವಾಗಿರುವ ಮಹಿಳೆಯರ ಆಯ್ಕೆ ಸಣ್ಣ ಮೊತ್ತವಾಗಿದೆ. ಹೆಚ್ಚು ಅಪಾಯಕಾರಿ ಕ್ಷೇತ್ರ ಇದಾಗಿರುವ ಕಾರಣ ನಷ್ಟ ಮೈಮೇಲೆಳೆದುಕೊಳ್ಳಲು ಮಹಿಳೆಯರು ಮುಂದಾಗೋದಿಲ್ಲ.