ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತನ್ನ ಅಮ್ಮ, ಹೆಣ್ಣು ಕೊಟ್ಟ ಅತ್ತೆ ಮಾವ ಮತ್ತು ತನ್ನ ಹೆಂಡತಿಯನ್ನೇ ಸನ್ಮಾನಿಸಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಕಾಟ್ಯರಿಂಗ್ ಉದ್ಯಮಿಯೊಬ್ಬರು ಆಚರಿಸಿದ್ದಾರೆ.
ಉಡುಪಿ (ಮಾ.8): ಮಹಿಳಾ ದಿನಾಚರಣೆಯ ದಿನ ಹತ್ತಾರು ಕಡೆಗಳಲ್ಲಿ ಅನೇಕ ಸಂಘ ಸಂಸ್ಥೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸುವುದೂ ಅದರ ಭಾಗವಾಗಿ ನಡೆದೇ ನಡೆಯುತ್ತವೆ. ಆದರೆ ಇಲ್ಲೊಬ್ಬರು ತನ್ನ ಅಮ್ಮ, ಹೆಣ್ಣು ಕೊಟ್ಟ ಅತ್ತೆ ಮಾವ ಮತ್ತು ತನ್ನ ಹೆಂಡತಿಯನ್ನೇ ಸನ್ಮಾನಿಸಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಕಾರ್ಕಳದ ಕೃಷಿಕರೂ , ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿಗಳೂ , ಸಾವಯವ ಕೃಷಿ ಪರಿವಾದ ಸಕ್ರಿಯ ಸದಸ್ಯರೂ , ಕಾಟ್ಯರಿಂಗ್ ಉದ್ಯಮಿಯೂ ಆಗಿರುವ ಇರ್ವತ್ತೂರು ಶ್ರೀನಿವಾಸ ಭಟ್ಟರು ಹೀಗೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಿದ್ದಾರೆ
ಬುಧವಾರ ತನ್ನ ವೈವಾಹಿಕ ಜೀವನದ 25 ನೇ ವರ್ಷವೂ ಆಗಿದ್ದರಿಂದ ಇರ್ವತ್ತೂರಿನ ಹಿತ್ತಿಲು ಮನೆಯಲ್ಲಿ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಭಟ್ಟರು ಅದೇ ಸಂದರ್ಭದಲ್ಲಿ ತನಗೆ ಜನ್ಮನೀಡಿ ಬಹಳ ಕಷ್ಟದಿಂದ ಸಾಕಿ ಬೆಳೆಸಿದ್ದು ಮಾತ್ರವಲ್ಲದೇ ಇಂದಿಗೂ ಕೃಷಿ ಕಾರ್ಯ ಮತ್ತು ಮನೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಸಕ್ರಿಯರಾಗಿ ನೆರವಾಗುತ್ತಿರುವ ಅಮ್ಮ ಪ್ರೇಮಾ ಭಟ್ , ಕೃಷಿ ಎಂದರೆ ಮೂಗು ಮುರಿಯುವ ಮತ್ತು ಕೃಷಿಕ ಯುವಕರಿಗೆ ಹೆಣ್ಣುಕೊಡಲು ಹಿಂದು ಮುಂದು ನೋಡುವ ಕಾಲದಲ್ಲಿ ತನಗೆ ಅತ್ಯಂತ ಪ್ರೀತಿಯಿಂದಲೇ ಮಗಳನ್ನು ಕೊಟ್ಟು ಕನ್ಯಾದಾನ ಮಾಡಿದ ಅತ್ತೆ ಮಾವನವರಾದ ಶೃಂಗೇರಿ ಸಮೀಪದ ಅಡ್ಡಗದ್ದೆ ನಿವಾಸಿಗಳಾದ ರಾಮಕೃಷ್ಣಯ್ಯ ಸುನಂದಾ ದಂಪತಿ , ಮತ್ತು ತನ್ನನ್ನು ವರಿಸಿ , ಈ ತನಕದ 25 ವರ್ಷಗಳಲ್ಲಿ ತನ್ನೊಂದಿಗೆ ಅತ್ಯಂತ ಕಷ್ಟಕರವಾದ ಕೃಷಿಗೆ ಭರಪೂರ ನೆರವು , ಕ್ಯಾಟರಿಂಗ್ ಉದ್ಯಮಕ್ಕೆ ಸಹಕಾರ , ತನ್ನ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ , ಮಕ್ಕಳಿಗೆ ಉತ್ತಮ ಸಂಸ್ಕಾರ , ಹಳ್ಳಿ ಮನೆಯ ಬದುಕಿನ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಹುಟ್ಟಿದ ಮನೆ , ಕಾಲಿಟ್ಟ ಮನೆಯ ಕೀರ್ತಿ ಬೆಳಗುತ್ತಿರುವ ಪ್ರೀತಿಯ ಮಡದಿ ಸುಜಾತಾ ಭಟ್ ಅವರನ್ನು ನೂರಾರು ಬಂಧುಗಳ ಉಪಸ್ಥಿತಿಯಲ್ಲಿ ಸನ್ಮಾನಿಸಿ ಧನ್ಯತೆ ಅನುಭವಿಸಿದ್ದಾರೆ.
undefined
ಜೀವವಿದ್ದಾಗಲೇ ಹೂಳಲ್ಪಟ್ಟು ಜೀವಂತ ದಂತಕಥೆಯಾಗಿ ಎದ್ದುಬಂದು ಪದ್ಮಶ್ರೀ ಪಡೆದ ಸಾಧಕಿ
ಇದರ ಜೊತೆಗೆ ಮನೆಯ ಕುಲಪುರೋಹಿತರಾಗಿ ಎಲ್ಲ ರೀತಿಯ ಮಾರ್ಗದರ್ಶನ ಆಶೀರ್ವಾದ ಮಾಡುತ್ತಿರುವ ವೇದಮೂರ್ತಿ ರೆಂಜಾಳ ಗುರುರಾಜ ಉಪಾಧ್ಯಾಯರನ್ನೂ ಸನ್ಮಾನಿಸಿದರು. ಇದೊಂದು ಅರ್ಥಪೂರ್ಣ ಹಾಗೂ ಮಾದರಿ ಕಾರ್ಯಕ್ರಮವಾಗಿ ನಡೆದಿದೆ . ಸಮಾಜದ ಎಲ್ಲೆಲ್ಲೋ ಇರುವ ಸಾಧಕ ಮಹಿಳೆಯರನ್ನು ಸನ್ಮಾನಿಸುವುದು ಒಂದು ಬಗೆಯಾದರೆ ತನ್ನ ಮನೆ ಬದುಕು ಉದ್ಯಮ ಕೃಷಿಗೆ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಶ್ರಮ ಶ್ರದ್ಧೆಯಿಂದ ಜೀವನ ನಡೆಸುತ್ತಿರುವ ತಾಯಿ , ಹೆಂಡತಿ ,ಮತ್ತು ಕೃಷಿ ಬದುಕು ಅತ್ಯಂತ ಕಷ್ಟವೆಂದು ಗೊತ್ತಿದ್ದರೂ ರೈತ ಯುವಕನಿಗೆ ಹೆಣ್ಣು ಕೊಟ್ಡ ಅತ್ತೆ ಮಾವನನ್ನು ಸನ್ಮಾನಿಸುವ ಪರಿಪಾಠ ಅತ್ಯಂತ ಶ್ಲಾಘನೀಯ ಎಂದೇ ನೆರೆದ ಬಂಧುಗಳು ಸಂತಸ ಪಟ್ಟರು.
ಮಹಿಳಾ ದಿನಾಚರಣೆ, ವೋಡಾಫೋನ್ ಐಡಿಯಾದಿಂದ ಮಹಿಳೆಯರಿಗೆ ಭರ್ಜರಿ ಕೊಡುಗೆ, ಸಾವಿರಾರು ಉದ್ಯೋಗವಕಾಶ!
ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿ ಪ್ರಸ್ತಾವನೆಗೈದರು . ಶ್ರೀನಿವಾಸ ಭಟ್ ಧನ್ಯವಾದ ಅರ್ಪಿಸಿದರು .ಅವರ ಸಹೋದರರಾದ ಕೃಷ್ಣ ಭಟ್ ಮತ್ತು ವರದರಾಜ ಭಟ್ ಹಾಗೂ ಪುತ್ರರಾದ ಶ್ರೀಶ ಭಟ್ ಶ್ರೀನಿಧಿ ಭಟ್ ಸಹಕರಿಸಿದರು.