ಸೀರೆ ಎಂಬ ಮುಗಿಯದ ಬಾಂಧವ್ಯ, ಹೆಣ್ಣಿಗ್ಯಾಕೆ ಸೀರೆ ಮೇಲಿಷ್ಟು ವ್ಯಾಮೋಹ?

By Kannadaprabha News  |  First Published May 26, 2024, 11:31 AM IST

ಹೆಣ್ಣಿಗೂ, ಸೀರೆಗೂ ಅದೇನೋ ವಿಶೇಷ ಬಾಂಧವ್ಯ. ಅದರಲ್ಲಿಯೂ ಮದುವೆಯ ದಾರೆ ಸೀರೆ ಎಂದರೆ ಎಂಥದ್ದೋ ಅಪ್ಯಾಯಮಾನ ನಾರಿಗೆ. ಇದೇ ಹೆಣ್ಣು ಮತ್ತು ಅವಳು  ಅಕ್ಕರೆಯಿಂದ ಉಡೋ ಸೀರೆ ಬಾಂಧವ್ಯ ಹೇಗಿರುತ್ತೆ? 


- ಗಾಯತ್ರಿ ನಾತು

ಇದು ನನ್ನ ಮದುವೆಯ ಧಾರೆಸೀರೆ.

Tap to resize

Latest Videos

ಹದಿನೆಂಟು ವರ್ಷಗಳ ಹಿಂದೆ ಹುಬ್ಬಳ್ಳಿಯ ಎಸ್ ಟಿ ಭಂಡಾರಿ ಜವಳಿಸಾಲ್ ಅಂಗಡಿಯಲ್ಲಿ ಖರೀದಿಸಿದೆ. ನನ್ನ ಮದುವೆಯ ಹೊತ್ತಲ್ಲಿ ಈ ಕಂಚಿ ಸಿಲ್ಕ್ ಸೀರೆಯ ಬೆಲೆ ಮೂರೂವರೆ ಸಾವಿರ. ಆಗ ನನಗೋಸ್ಕರ ಕೊಂಡುಕೊಂಡ ಐದು ಸೀರೆಗಳಿಗೆ ಖರ್ಚಾದದ್ದು ಹದಿನೈದು ಸಾವಿರ ರುಪಾಯಿ ಅಂತ ನೆನಪು.

ಅಷ್ಟಕ್ಕೂ ಈ ಸೀರೆಯನ್ನು ಆಯ್ಕೆ ಮಾಡಿದ್ದು ನಾನಲ್ಲ. ನನಗೆ ಸೀರೆ ಸೆಲೆಕ್ಟ್ ಮಾಡುವುದೇ ಗೊತ್ತಿರಲಿಲ್ಲ. ನನ್ನ ದೊಡ್ಡಮ್ಮ ಮತ್ತು ಅಮ್ಮ ಇದು ಚೆನ್ನಾಗಿದೆ ಅಂದರು. ನಾನು ಹೂಂ ಅಂದೆ.

ಈ ಹಳೇ ಸೀರೆಯ ಪ್ರಸಂಗ ಈಗೇಕೆ ನೆನಪಾಯಿತು ಅಂತ ಕೇಳಿದರೆ, ಈ ಪ್ರಸಂಗ ಹೇಳುತ್ತೇನೆ. ಕಳೆದ ತಿಂಗಳು ಲಯನ್ಸ್ ರಾಜ್ಯ ಸಮಾವೇಶ ಬೆಳಗಾವಿಯಲ್ಲಿ ನಡೆಯಿತು. ಅದರ ಸ್ವಾಗತ ಸಮಿತಿಯಲ್ಲಿ ನನ್ನ ಹೆಸರು ಸೇರಿಸಿದ್ದರು. ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಬರಬೇಕು ಅಂತಲೂ ಸೂಚಿಸಿದ್ದರು, ನನ್ನ ಬಳಿ ಹಳದಿ ಸೀರೆ ಇದೆಯಾ ಅಂತ ಯೋಚಿಸಿದಾಗ ಹೊಳೆದದ್ದು ನನ್ನ ಧಾರೆ ಸೀರೆ. ಅದನ್ನು ಉಟ್ಟುಕೊಂಡು ಹೋದಾಗ ಅಲ್ಲಿ ನಡೆದ ಬ್ಯಾನರ್ ಪ್ರೆಸೆಂಟೇಶನ್ ಕಾರ್ಯಕ್ರಮದಲ್ಲಿ ಎಲ್ಲರೂ ನನ್ನ ಸೀರೆಯನ್ನೇ ನೋಡುತ್ತಿದ್ದರು. ಅನೇಕರು ಮೆಚ್ಚಿಕೊಂಡರು.

Cannes 2024: ಪಿಂಕ್‌ ಸ್ಯಾರಿಯಲ್ಲಿ ದೇವತೆಯಂತೆ ಕಂಡ ಪ್ರೀತಿ ಜಿಂಟಾ, ವಯಸ್ಸು 49 ಅಂದ್ರೆ ನಂಬೋಕಾಗ್ತಿಲ್ಲ!

ಈ ಹಳೆಯ ಧಾರೆ ಸೀರೆಗಳು ಹಳೆಯ ಮದುವೆಯ ಹಾಗೆ ಬಹಳ ಗಟ್ಟಿ. ಒಂದಿಡೀ ದಾಂಪತ್ಯ ಬಾಳಿಗೆ ಬರುತ್ತವೆ. ಎಷ್ಟೋ ಸಲ ಮಕ್ಕಳ ಕಾಲಕ್ಕೂ ಧಾರೆ ಸೀರೆ ಬಳುವಳಿಯಾಗಿ ಕೊಡುವುದನ್ನು ನೋಡಿದ್ದೇನೆ. ಈ ಕಾಲದ ಸೀರೆಗಳು ಮೂರು ಸಲ ಉಟ್ಟರೆ ಝರಿಯೆಲ್ಲ ಜೋತುಬೀಳುತ್ತವೆ. ಹಳೆಯದೆಲ್ಲ ಚಿನ್ನ ಅನ್ನುವುದು ಸೀರೆಯ ವಿಚಾರದಲ್ಲೂ ನಿಜವೇ.

ಸೀರೆಯ ಮೇಲಿನ ಹೆಣ್ಮಕ್ಕಳ ಪ್ರೀತಿ ಅನವರತ. ಎಷ್ಟೇ ಸೀರೆಯಿದ್ದರೂ ಹೊಸದು ಕಂಡಾಗ ಬೇಕು ಅನ್ನಿಸುತ್ತದೆ. ಹಾಗ್ಯಾಕೆ ಅನ್ನಿಸುತ್ತದೋ ನನಗಂತ ಗೊತ್ತಿಲ್ಲ. ನಮ್ಮ ಡಿಎನ್ಎನಲ್ಲೇ ಈ ಸೀರೆ ವ್ಯಾಮೋಹ ಬಂದಿರಬಹುದು. ನನ್ನ ಹತ್ತಿರವಂತೂ ಕಾಂಚಿಪುರಂ, ಬನಾರಸ್, ಮಹಾರಾಷ್ಟ್ರ ಪೈಠಣಿ, ಓಡಿಸ್ಸಾ ಸಿಲ್ಕ್, ಇಲಕಲ್ಲ, ಬೆಂಗಳೂರು ಸಿಲ್ಕ್, ಲಕ್ನೌ ಚಿಕನ್, ಧಾರವಾಡ ಎಮ್ರಾಯಡ್ರಿ, ಬನಹಟ್ಟಿ ಕಾಟನ್, ಕೋಟಾ ಸಿಲ್ಕ್ ಸೀರೆಗಳ ಸಂಗ್ರಹವಿದೆ. ಆದರೂ ಮೈಸೂರು ಸಿಲ್ಕ್ ಇಲ್ಲ ಅನ್ನುವ ಒಂದು ಕೊರಗು ಉಳಿದಿದೆ. ಯಾವತ್ತಾದರೂ ಮೈಸೂರು ರೇಷ್ಮೆ ಸೀರೆ ಕೊಳ್ಳಬೇಕು ಅನ್ನೋ ಆಸೆ ಚಿಗುರುತ್ತಲೇ ಇರುತ್ತದೆ.

'ಹುಡುಗರಿಗೆ ಕ್ಯಾಚ್‌ ಹಾಕೋಕೆ ರೆಡಿ..' ಬ್ರೇಕಪ್ ನಂತ್ರ ಸೀರೆಯಲ್ಲಿ ಮಿಂಚಿದ ಶ್ರುತಿ ಹಾಸನ್‌ಗೆ ಹೀಗೆ ಹೇಳೋದಾ?

ಆಧುನಿಕ ಉಡುಗೆಗಳು ಎಷ್ಟೇ ಮಿಂಚಲಿ, ಗರಿಗರಿಯಾದ ಸೀರೆಯ ಗರಿಮೆಯೇ ಬೇರೆ. ಅದನ್ನು ಉಟ್ಟವರ ಘನತೆಯೇ ಬೇರೆ. ಹೀಗಾಗಿಯೇ ಸೀರೆಯೆಂಬುದು ಮುಗಿಯದ ಆಸೆಯ ಬಾಗಿಲು.

click me!