ರಾಜಕುಮಾರಿ ಕೇಟ್‌ ಮಿಡ್ಲ್‌ಟನ್ ಹೆರಿಗೆ ನೋವಿನಿಂದ ಪಾರಾಗಿದ್ದು ಹೇಗೆ?

By Suvarna NewsFirst Published Feb 27, 2020, 4:10 PM IST
Highlights

ರಾಜಕುಮಾರಿಯಾದ ಮಾತ್ರಕ್ಕೆ ಹೆರಿಗೆ ನೋವು ತಪ್ಪಿದ್ದಲ್ಲವಲ್ಲ. ಮೂರು ಬಾರಿಯೂ ನಾರ್ಮಲ್ ಡೆಲಿವರಿ ಮಾಡಿಕೊಂಡ ಕೇಟ್ ತಾನು ಗರ್ಭಿಣಿಯಾಗಿದ್ದಾಗ ಅನುಭವಿಸಿದ ಸಂಕಟ, ಹೆರಿಗೆ ವೇಳೆ ಅನುಭವಿಸಿದ ನೋವನ್ನು ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್ ನ ರಾಜ ಮನೆತನ ಅಂದರೆ ಜಗತ್ತಿಗೆ ಬೆರಗು. ಆಳುವ ಅಧಿಕಾರ ಕಳೆದು ಬಹಳ ಕಾಲ ಆಗಿದ್ದರೂ ಇಂದಿಗೂ ಆ ರಾಜ ಮನೆತನವರನ್ನು ಸ್ಪೆಷಲ್ ಆಗಿ ನೋಡ್ತಾರೆ ಜಗತ್ತಿನ ಜನ. ರಾಣಿ ಎಲಿಜಬೆತ್‌ ಸಣ್ಣ ಅಸಮಾಧಾನ ಕಂಡರೂ ಅದು ಸುದ್ದಿಯಾಗುತ್ತೆ, ರಾಜ ಮನೆತನದ ಸೊಸೆ ಕಾರಿನ ಡೋರ್ ಸ್ವತಃ ತಾನೇ ಹಾಕಿದರೆ ಅದನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಹಿಂದಿನ ರಾಜಕುಮಾರಿ ಡಯಾನಾ ಅಂತೂ ಸುದ್ದಿಗಾಗಿ ಹದ್ದಿನಂತೆ ಎರಗುವ ಈ ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡಳು.

ಆದರೆ ಸೌಮ್ಯ ಸ್ವಭಾವದ ಕೇಟ್ ಮಿಡ್ಲ್ ಟನ್ ಎಂದೂ ಸಾರ್ವಜನಿಕವಾಗಿ ಸಭ್ಯತೆಯ ಗೆರೆ ದಾಟಿದವಳಲ್ಲ. ಮೂವತ್ತೆಂಟು ವರ್ಷದ ಕೇಟ್ ಒಂಭತ್ತು ವರ್ಷಗಳ ಹಿಂದೆ ಪ್ರಿನ್ಸ್ ವಿಲಿಯಂ ನನ್ನು ಪ್ರೇಮ ವಿವಾಹವಾದಾಗ ಜಗತ್ತಿನಾದ್ಯಂತದ ಮಾಧ್ಯಮಗಳು ವರ್ಣರಂಜಿತ ಸುದ್ದಿ ಮಾಡಿದ್ದೇ ಮಾಡಿದ್ದು. ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ ಮಧ್ಯಮ ವರ್ಗದ ಹುಡುಗಿ ಇಂಗ್ಲೆಂಡ್ ನ ರಾಜ ಕುಮಾರನ ಮನ ಕದ್ದಿದ್ದು ಬೇರೆಯದೇ ಕತೆ. ಸುಮಾರು ಹತ್ತು ವರ್ಷಗಳ ಪ್ರೇಮದ ಬಳಿಕ ಇವರಿಬ್ಬರೂ ಮದುವೆಯಾದರು. ಆಗೆಲ್ಲ ಈ ಮಧ್ಯಮ ವರ್ಗದ ಹುಡುಗಿ ಅರುಸೊತ್ತಿಗೆಗೆ ಹೇಗೆ ಹೊಂದಿಕೊಳ್ಳುತ್ತಾಳೋ, ಇಲ್ಲಿನ ನೀತಿ, ನಿಯಮಗಳನ್ನು ಹೇಗೆ ಪಾಲಿಸುತ್ತಾಳೋ, ಇವಳೂ ಹಿಂದಿನ ರಾಜ ಕುಮಾರಿ ಡಯಾನಾ ಥರ ಆಗಬಹುದಾ ಅಂತೆಲ್ಲ ಸುದ್ದಿ ಮಾಧ್ಯಮಗಳು ರೆಕ್ಕೆ ಪುಕ್ಕ ಸೇರಿಸಿ ಕತೆ ಬರೆದಿದ್ದವು. ಆದರೆ ಆರಂಭದಿಂದ ಇಂದಿನವರೆಗೂ ರಾಯಲ್ ಸೌಜನ್ಯಗಳನ್ನು ಮೀರದಿರುವ ನಗೆಮೊಗದ ಈಕೆ ಈಗ 'ಡಚೆಸ್ ಆಫ್ ಕೇಂಬ್ರಿಡ್ಜ್' ಹುದ್ದೆಗೇರಿದ್ದಾಳೆ.

ಯಾವ ಪೊಸಿಶನ್‌ನಲ್ಲಿದ್ದರೇನಂತೆ, ತಾಯಿಯಾಗೋ ಹಂಬಲ ಜನ ಸಾಮಾನ್ಯರ ಹಾಗೆ ಈಕೆಗೂ ಇತ್ತು. ರಾಜಕುಮಾರಿ ಅಂದಾಕ್ಷಣ ಹೆಣ್ಣಿನ ಕನಸುಗಳಿಂದ ಮುಕ್ತವಾಗೋದು ಸಾಧ್ಯವೇ.. ಈಕೆಯೂ ಮಗುವಾಗಿ ಹಂಬಲಿಸಿ ಒಂದಲ್ಲ, ಎರಡಲ್ಲ ಮೂರು ಮಕ್ಕಳ ತಾಯಿಯಾದಳು. ಮೂರನೇ ಮಗು ಲೂಯಿಸ್ ಗೆ ಇನ್ನೂ ಎರಡು ವರ್ಷ ತುಂಬಿಲ್ಲ. ರಾಜಕುಮಾರಿಯಾದ ಮಾತ್ರಕ್ಕೆ ಹೆರಿಗೆ ನೋವು ತಪ್ಪಿದ್ದಲ್ಲವಲ್ಲ. ಮೂರು ಬಾರಿಯೂ ನಾರ್ಮಲ್ ಡೆಲಿವರಿ ಮಾಡಿಕೊಂಡ ಕೇಟ್ ತಾನು ಗರ್ಭಿಣಿಯಾಗಿದ್ದಾಗ ಅನುಭವಿಸಿದ ಸಂಕಟ, ಹೆರಿಗೆ ವೇಳೆ ಅನುಭವಿಸಿದ ನೋವನ್ನು ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಗರ್ಭಿಣಿ ಹೊಟ್ಟೆ ಗಾತ್ರ ನೋಡಿ ಮಗು ಹೆಣ್ಣಾ, ಗಂಡಾ ಅಂತ ತಿಳೀಬಹುದಾ? 

'ಗರ್ಭಿಣಿಯಾಗಿದ್ದಾಗ ಕೆಟ್ಟ ಮಾರ್ನಿಂಗ್ ಸಿಕ್ ನೆಸ್ ಇತ್ತು. ಮೂರು ಮಕ್ಕಳು ಹೊಟ್ಟೆಯಲ್ಲಿದ್ದಾಗಲೂ ಯಾವತ್ತೂ ಗರ್ಭಾವಸ್ಥೆಯನ್ನು ಸಂಭ್ರಮಿಸೋದು ನನ್ನಿಂದಾಗಲಿಲ್ಲ. ಗಂಡ ವಿಲಿಯಂ ಬಳಿ ಇದೆಲ್ಲವನ್ನೂ ಸಂಕಟವನ್ನೆಲ್ಲ ಹೇಳಿ ಒಂದೇ ಸವನೆ ಅಳುತ್ತಿದ್ದೆ. ಪಾಪ ಆತ ಅಸಹಾಯಕನಾಗಿ ಕೇಳುತ್ತಿದ್ದ, ಸಮಾಧಾನಿಸುತ್ತಿದ್ದ, ಕೆಲವೊಮ್ಮೆ ಅಸಹಾಯಕತೆಯಿಂದ ಒದ್ದಾಡುತ್ತಿದ್ದ. ಒಂದು ಹಂತದ ನೋವು ತಿಂದ ಮೇಲೆ ನಾನು ಈ ನೋವು ಕಡಿಮೆ ಮಾಡುವಂಥಾ ಥೆರಪಿಗಳತ್ತ ಗಮನ ಹರಿಸಿದೆ. ಈ ಟೈಮ್ ನಲ್ಲಿ ನನ್ನ ಸಹಾಯಕ್ಕೆ ಬಂದದ್ದು ಹಿಪ್ನೋ ಬರ್ತಿಂಗ್ ಎಂಬ ಟೆಕ್ನಿಕ್. ಇದು ನೋವು ಕಡಿಮೆ ಮಾಡುವಂಥಾ ಔಷಧಿ ಏನಲ್ಲ. ಆದರೆ ನಮ್ಮ ಹೆರಿಗೆ ನೋವನ್ನು ನಾವೇ ಹೇಗೆ ಕಂಟ್ರೋಲ್ ಮಾಡಬಹುದು, ಕೆಲವು ಉಸಿರಾಟದ ಎಕ್ಸರ್ ಸೈಸ್ ಗಳು, ರಿಲ್ಯಾಕ್ಸೇಶನ್ ಮೂಲಕ ಹೇಗೆ ನಮ್ಮನ್ನ ನಾವೇ ಹೇಗೆ ಸಮಾಧಾನಪಡಿಸಿಕೊಳ್ಳಬಹುದು, ಕಡು ನೋವಿನ ಹೆರಿಗೆಯ ಪ್ರತೀ ಕ್ಷಣವನ್ನು ಹೇಗೆ ಖುಷಿಯ ಅನುಭವವಾಗಿ ಪರಿವರ್ತಿಸಬಹುದು ಅನ್ನೋದನ್ನು ಈ ಹಿಪ್ನೋ ಬರ್ತಿಂಗ್ ಟೆಕ್ನಿಕ್ ಕಲಿಸುತ್ತದೆ. ಹೆರಿಗೆಯಲ್ಲಿ ಸತ್ತೇ ಹೋಗುತ್ತೇನೆ ಎಂಬಷ್ಟು ನೋವು ತಿನ್ನುತ್ತಿದ್ದ ನಾನು ಈ ಟೆಕ್ನಿಕ್ ಮೂಲಕ ಬದುಕುಳಿದೆ. ಹೆರಿಗೆಯನ್ನೂ ಎನ್ ಜಾಯ್ ಮಾಡಬಹುದು ಅನ್ನೋದನ್ನು ಕಂಡುಕೊಂಡೆ. ಇದೊಂದು ಮರೆಯಲಾರದ ಅನುಭವ' ಅಂತ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಕ್ಯಾಥರಿನ್ ಮಿಡ್ಲ್ ಟನ್.

ಬ್ರಿಟನ್‌ ರಾಜಪ್ರಭುತ್ವ ತ್ಯಜಿಸಿದ ಪ್ರಿನ್ಸ್‌ ಹ್ಯಾರಿ-ಮೇಘನ್‌ ದಂಪತಿ ...

ಈ ಟೆಕ್ನಿಕ್ ನ ಮೂಲಕ ಎಲ್ಲ ಹೆಣ್ಮಕ್ಕಳ್ಳೂ ಹೆರಿಗೆ ನೋವಿನಿಂದ ಪಾರಾಗಬಹುದು ಅನ್ನೋದು ಅವರ ಅನುಭವದ ಮಾತು. ನಮ್ಮ ದೇಶದಲ್ಲೂ ಈ ಹಿಪ್ನೋ ಬರ್ತಿಂಗ್ ಅನ್ನೋ ಟೆಕ್ನಿಕ್ ಜನಪ್ರಿಯವಾಗುತ್ತಿದೆ. ನಮ್ಮ ಬೆಂಗಳೂರಿನಲ್ಲೇ ಹಿಪ್ನೋ ಬರ್ತಿಂಗ್ ತರಬೇತಿ ಕೇಂದ್ರಗಳಿವೆ. ಆದರೆ ಇದು ತುಸು ಹೆಚ್ಚೇ ದುಬಾರಿಯಾಗಿರುವ ಕಾರಣ ಸಾಮಾನ್ಯ ಹೆಣ್ಣುಮಕ್ಕಳನ್ನು ತಲುಪುತ್ತಿಲ್ಲ.

click me!