
ಅಲಿಘರ್: ಆಕೆಯ ಹೆಸರು ಸಂಗೀತಾ ವಯಸ್ಸು ಕೇವಲ 32 ಮದುವೆಯಾಗಿ 10 ವರ್ಷಗಳೇ ಕಳೆದಿತ್ತು, 10 ವರ್ಷದ ದಾಂಪತ್ಯಕ್ಕೆ ಪ್ರತಿಯಾಗಿ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ಆಕೆಯನ್ನು ಗಂಡನ ಮನೆಯವರು ಮಾತ್ರ ಹೊರಗಿನವಳಂತೆಯೇ ನೋಡುತ್ತಿದ್ದರು. ವರದಕ್ಷಿಣೆಯಾಗಿ ತವರು ಮನೆಯಿಂದ ಬುಲೆಟ್ ಬೈಕ್ ಹಾಗೂ ಎಮ್ಮೆಯೊಂದನ್ನು ತರುವಂತೆ ಆಕೆಯನ್ನು ದಿನಾ ಪೀಡಿಸುತ್ತಿದ್ದರು. ಆಕೆ ಈ ಬೇಡಿಕೆ ಈಡೇರಿಸದೇ ಹೋದಾಗ ಆಕೆಯನ್ನು ದೈಹಿಕವಾಗಿ ಹಿಂಸೆ ನೀಡಿ ಎರಡು ಮಕ್ಕಳಿದ್ದಾರೆ ಎಂಬುದನ್ನೂ ನೋಡದೇ ಕೊಂದೇ ಬಿಟ್ಟಿದ್ದಾರೆ ಪಾಪಿಗಳು. ಇಂತಹ ಹೃದಯ ವಿದ್ರಾವಕ ಘಟನೆ ನಡೆದಿರುವುದು ಉತ್ತರ ಪ್ರದೇಶ ಅಲಿಘರ್‌ನಲ್ಲಿ.
ಹಾಗಂತ ಆಕೆಗೆ ನೀಡಿದ್ದು, ಸಣ್ಣಪುಟ್ಟ ಹಿಂಸೆಯಲ್ಲ, ಕಬ್ಬಿಣವನ್ನು ಕಾಯಿಸಿದ ಪಾಪಿಗಳು ಆಕೆಯ ಗುಪ್ತಾಂಗಕ್ಕೆ ಇಟ್ಟಿದ್ದಾರೆ. ನೋವು ಕಿರುಕುಳ ಚಿತ್ರಹಿಂಸೆ ತಾಳದೇ ಆ ತಾಯಿ ಜೀವವನ್ನೇ ಬಿಟ್ಟಿದ್ದಾಳೆ. ಆಕೆಗೆ ಆಕೆಯ ಅತ್ತೆ ಮನೆಯವರು ದಿನ ಕಿರುಕುಳ ನೀಡುತ್ತಿದ್ದರು ಎಂದು ಸಂಗೀತಾಳ ಪೋಷಕರು ದೂರಿದ್ದಾರೆ. ಬುಲೆಟ್ ಬೈಕ್ ಹಾಗೂ ಎಮ್ಮೆಯನ್ನು ತವರು ಮನೆಯಿಂದ ತರುವಂತೆ ಪೀಡಿಸುತ್ತಿದ್ದರು ಎಂದು ಅವರು ದೂರಿದ್ದಾರೆ. ಆದರೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವರದಕ್ಷಿಣೆ ಕೇಸ್ ಬದಲು ಕೊಲೆ ಪ್ರಕರಣ ದಾಖಲಿಸಿದ್ದರೆ.
10 ವರ್ಷಗಳ ಹಿಂದೆ ಸಂಗೀತಾ ಅಲಿಘರ್‌ನ ಬಾನುಪುರ ಗ್ರಾಮದ ನಿವಾಸಿಯಾದ ಬಂಟಿಕುಮಾರ್‌ನನ್ನು ಮದುವೆಯಾಗಿದ್ದರು. 10 ವರ್ಷದ ದಾಂಪತ್ಯದಲ್ಲಿ ಅವರು ಇಬ್ಬರು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಸಂಗೀತಾಳ ತಾಯಿ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಸಂಗೀತಾ ಹಾಗೂ ಬಂಟಿಕುಮಾರ್ ಎರಡು ವರ್ಷಗಳ ಕಾಲ ಚೆನ್ನಾಗೇ ಇದ್ದರು. ಆದರೆ ನಂತರ ಅದೇನಾಯ್ತೋ ಏನು ಬಂಟಿ ಹಾಗೂ ಆತನ ಮನೆಯವರು ಆಕೆಗೆ ಬೇಡಿಕೆಗಳನ್ನು ಇರಿಸಿ ನಿರಂತರ ಕಿರುಕುಳ ನೀಡುತ್ತಾ ಬಂದರು. ತವರು ಮನೆಯಿಂದ ವಸ್ತುಗಳನ್ನು ತರುವಂತೆ ಬಂಟಿ ಸಂಗೀತಾಗೆ ದಿನವೂ ಹೊಡೆಯುತ್ತಿದ್ದ. ತಾರದೇ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದ ಆತ ಕೊನೆಗೂ ಸಂಗೀತಾಳನ್ನು ಕೊಂದೇ ಬಿಟ್ಟಿದ್ದಾನೆ.
ಮಂಗಳವಾರ, ಬಂಟಿ ಹಾಗೂ ಆತನ ಪೋಷಕರು ಮತ್ತು ಆತನ ಇಬ್ಬರು ಸಹೋದರಿಯರು ಸಂಗೀತಾಳನ್ನು ಥಳಿಸಲು ಪ್ರಾರಂಭಿಸಿದರು ಮತ್ತು ಆಕೆಯ ದೇಹದ ಮೇಲೆ ಬಿಸಿ ಕಬ್ಬಿಣದ ರಾಡನ್ನು ಒತ್ತಿ ಚಿತ್ರಹಿಂಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಜನನಾಂಗವೂ ಸೇರಿದಂತೆ ಆಕೆಯ ದೇಹದ ಹಲವಾರು ಭಾಗಗಳಲ್ಲಿ ಸುಟ್ಟ ಗಾಯಗಳಾಗಿದ್ದು, ನೋವು ತಡೆಯಲಾಗದೇ ಸಂಗೀತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ನಮಗೆ ಮಾಹಿತಿ ಬಂದ ನಂತರ, ಪೊಲೀಸ್ ತಂಡ ಸಂಗೀತಾ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಮರಣೋತ್ತರ ಪರೀಕ್ಷೆ ಅಂತಿಮವಾಗದ ಕಾರಣ, ಒಳಾಂಗಗಳನ್ನು ಸಂರಕ್ಷಿಸಲಾಗಿದೆ ಎಂದು ಸರ್ಕಲ್ ಆಫೀಸರ್ (ಛರ್ರಾ) ಧನಂಜಯ್ ಸಿಂಗ್ ಹೇಳಿದ್ದಾರೆ. ಚಿತ್ರಹಿಂಸೆ ನೀಡಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಲಾದ ಬಂಟಿ ಕುಟುಂಬದ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಂಗೀತಾಳ ಹತ್ಯೆಯ ಬಳಿಕ ಆಕೆಯ ಗಂಡನೂ ಸೇರಿದಂತೆ ಆತನ ಮನೆಯವರೆಲ್ಲರೂ ನಾಪತ್ತೆಯಾಗಿದ್ದು, ಮನೆಗೆ ಬೀಗ ಹಾಕಲಾಗಿದೆ. ಈ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.