Grape Fruit Uses: ಚಕ್ಕೋತಾ ಹಣ್ಣು ಮಾತ್ರವಲ್ಲ ಸಿಪ್ಪೆಯಲ್ಲೂ ಇದೆ ಹಲವು ಪ್ರಯೋಜನ

By Suvarna NewsFirst Published Dec 22, 2022, 12:35 PM IST
Highlights

ಹಣ್ಣುಗಳು ನಮ್ಮ ಆರೋಗ್ಯ ಕಾಪಾಡುತ್ತವೆ. ಹಾಗೆಯೇ ಅವುಗಳ ಸಿಪ್ಪೆ ಕೂಡ ಪ್ರಯೋಜನಕ್ಕೆ ಬರುತ್ತದೆ. ಅದ್ರಲ್ಲಿ ಚಕ್ಕೋತ ಕೂಡ ಸೇರಿದೆ. ದಪ್ಪ ಸಿಪ್ಪೆ ಅಂತಾ ಅದನ್ನು ಬಿಸಾಕುವ ಬದಲು ಹೀಗೆ ಬಳಕೆ ಮಾಡಿ.
 

ಚಕ್ಕೋತ ಹಣ್ಣಿನ ಹೆಸರು ಕೇಳಿದ್ರೆ ಕೆಲವರ ಬಾಯಲ್ಲಿ ನೀರು ಬರುತ್ತದೆ. ಅದಕ್ಕೆ ಉಪ್ಪು ಹಾಗೂ ಸ್ವಲ್ಪ ಖಾರ ಮಿಕ್ಸ್ ಮಾಡಿ ತಿನ್ನುತ್ತಿದ್ದರೆ ನಾಲಿಗೆ ಮತ್ತಷ್ಟು, ಇನ್ನಷ್ಟು ಎನ್ನುತ್ತದೆ. ಈ ಚಕ್ಕೋತವನ್ನು ಕಿತ್ತಳೆ ಹಣ್ಣು ಬೆಳೆಯುವ ಎಲ್ಲ ಪ್ರದೇಶದಲ್ಲಿ ಬೆಳೆಯಬಹುದು. ಚಕ್ಕೊತ ದಕ್ಷಿಣ ಪೂರ್ವ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಹಣ್ಣು.

ಚಕ್ಕೋತ (Grapefruit) ಸಿಟ್ರಸ್ ಹಣ್ಣಾಗಿದ್ದು, ಇದ್ರಲ್ಲಿ ವಿಟಮಿನ್ ಸಿ (Vitamin C ) ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಒಂದು ಚಕ್ಕೋತ ಹಣ್ಣನ್ನು ನೀವು ತಿಂದ್ರೆ ಸಾಕು, ನಿಮಗೆ ಒಂದು ದಿನಕ್ಕೆ ಬೇಕಾಗುವಷ್ಟು ವಿಟಮಿನ್ ಸಿ ಅದ್ರಿಂದಲೇ ಸಿಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಈ ಚಕ್ಕೋತಾಗೆ ಇದೆ. ಪೊಟ್ಯಾಶಿಯಂ ಇದ್ರಲ್ಲಿ ಅಧಿಕವಾಗಿದೆ. ನಾರಿನಂಶ ಕೂಡ ಇದ್ರಲ್ಲಿದೆ. ಸತು, ತಾಮ್ರ, ಆಂಟಿ ಆಕ್ಸಿಡೆಂಟ್ ಗಳಿಂದ ಕೂಡಿರುವ ಈ ಚಕ್ಕೋತ ತಿಂದು ಅದ್ರ ಸಿಪ್ಪೆ (peel) ಯನ್ನು ಎಸೆಯಬೇಡಿ. ಚಕ್ಕೋತ ಸಿಪ್ಪೆ ಕೂಡ ಸಾಕಷ್ಟು ಪ್ರಯೋಜನಕಾರಿ. ನಾವಿಂದು ಅದ್ರ ಪ್ರಯೋಜನವೇನು ಎಂಬುದನ್ನು ನಿಮಗೆ ಹೇಳ್ತೆವೆ.

Kitchen Tips: ಕುಕ್ಕರ್ ಸೀಟಿ ಹೊಡೆಸುವ ಮುನ್ನ ಇದನ್ನೆನಲ್ಲಾ ಗೊತ್ತು ಮಾಡ್ಕೊಳ್ಳಿ!

ಚಕ್ಕೋತ ಸಿಪ್ಪೆ ಕ್ಯಾಂಡಿ : ಇದಕ್ಕೆ ಬೇಕಾಗುವ ಪದಾರ್ಥಗಳು, ಚಕ್ಕೋತ ಸಿಪ್ಪೆ ಹಾಗೂ ಸಕ್ಕರೆ. ಅಗತ್ಯಕ್ಕೆ ತಕ್ಕಷ್ಟು ನೀರು. ಚಕ್ಕೋತ ಕ್ಯಾಂಡಿ ಮಾಡುವ ವಿಧಾನ : ಮೊದಲು ಚಕ್ಕೋತ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಂಡು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿಯಲು ಶುರುವಾದ್ಮೇಲೆ ನೀರನ್ನು ಸೋಸಿ. ಮತ್ತೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಹೀಗೆ ನಾಲ್ಕೈದು ಬಾರಿ ನೀವು ಸಿಪ್ಪೆಗೆ ನೀರು ಹಾಕಿ ಕುದಿಸಬೇಕು. ನಂತ್ರ ಒಂದು ಬಾಣೆಲೆ ತೆಗೆದುಕೊಂಡು ಅದಕ್ಕೆ ಸಕ್ಕರೆ ಹಾಗೂ ಸ್ವಲ್ಪ ನೀರನ್ನು ಹಾಕಿ ಕುದಿಸಬೇಕು. ಸಕ್ಕರೆ ಪಾಕ ಬರಲು ಶುರುವಾಗ್ತಿದ್ದಂತೆ ಚಕ್ಕೋತ ಸಿಪ್ಪೆಯನ್ನು ಹಾಕ್ಬೇಕು. ಅದನ್ನು 15 – 20 ನಿಮಿಷ ಕುದಿಸಬೇಕು. ನಂತ್ರ ಟ್ರೇನಲ್ಲಿ ಹಾಕಿ 2 ರಿಂದ 4 ಗಂಟೆಗಳ ಕಾಲ ಫಿಲ್ಟರ್ ಮಾಡಿ ಒಣಗಿಸಿ.  ನಂತರ ಸಿಪ್ಪೆಯನ್ನು ಹೆಚ್ಚು ಸಕ್ಕರೆಯಲ್ಲಿ ಟಾಸ್ ಮಾಡಿದ್ರೆ ನಿಮ್ಮ ಕ್ಯಾಂಡ್ ಸಿದ್ಧವಾಗುತ್ತದೆ. 

ಕ್ಲೀನಿಂಗ್ ಸ್ಕ್ರಬ್ ಆಗಿ ಬಳಸಿ ಚಕ್ಕೋತ ಸಿಪ್ಪೆ : ಸಿಟ್ರಸ್ ವಸ್ತುಗಳನ್ನು ನಾವು ಮನೆ ಸ್ವಚ್ಛಗೊಳಿಸಲು ಬಳಸಬಹುದು. ಇದ್ರಲ್ಲಿರುವ ಆಮ್ಲೀಯತೆ ಸುಲಭವಾಗಿ ಕಲೆ ತೆಗೆಯುತ್ತದೆ. ನೀವು ಚಕ್ಕೋತ ಸಿಪ್ಪೆಯನ್ನು ಕೂಡ ಮನೆ ಕ್ಲೀನ್ ಮಾಡಲು ಬಳಸಬಹುದು. ಇದಕ್ಕೆ ಚಕ್ಕೋತ ಸಿಪ್ಪೆ, ಬೊರಾಕ್ಸ್ ಪುಡಿ ಮತ್ತು 5 ಚಮಚ ಅಡಿಗೆ ಸೋಡಾ ಬೇಕಾಗುತ್ತದೆ. ಚಕ್ಕೋತ ಸಿಪ್ಪೆಯನ್ನು ತೆಗೆದು ಅದನ್ನು ಕತ್ತರಿಸಿ ಒಣಗಿಸಬೇಕು. ಸಿಪ್ಪೆ ಒಣಗಿದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಪುಡಿ ಮಾಡಿದ ಸಿಪ್ಪೆಗೆ ಸ್ವಲ್ಪ ಬೋರಾಕ್ಸ್ ಮತ್ತು ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿದ್ರೆ ಸ್ಕ್ರಬ್ ಸಿದ್ಧವಾಗುತ್ತದೆ. ಇದನ್ನು ನೀವು ಅಡುಗೆ ಮನೆ ಸೇರಿದಂತೆ ಜಿಡ್ಡಿರುವ ಪ್ರದೇಶವನ್ನು ಕ್ಲೀನ್ ಮಾಡಲು ಬಳಸಬಹುದು. 

Cooking Tips: ಗೃಹಿಣಿಯರೇ, ಅಪ್ಪಿತಪ್ಪಿಯೂ ಇಂಥಾ ಪದಾರ್ಥ ಮಿಕ್ಸಿಗೆ ಹಾಕ್ಬೇಡಿ !

ಚಕ್ಕೋತ ಸಿಪ್ಪೆಯಿಂದ ರೂಮ್ ಫ್ರೆಶ್ನರ್ : ಅನೇಕ ಬಾರಿ ಮನೆಯಲ್ಲಿರುವ ಡಸ್ಟಬಿನ್ ವಾಸನೆ ಬರುತ್ತದೆ. ಇದ್ರಿಂದ ಅಡುಗೆ ಮನೆಯಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಆಗ ನಾವು ಅಡುಗೆ ಮನೆಗೆ ರೂಮ್ ಫ್ರೆಶ್ನರ್ ಹಾಕ್ತೇವೆ. ನೀವು ಚಕ್ಕೋತ ಸಿಪ್ಪೆಯಿಂದ ರೂಮ್ ಫ್ರೆಶ್ನರ್ ಸಿದ್ಧಪಡಿಸಬಹುದು. ಇದಕ್ಕೆ ಚಕ್ಕೋತ ಸಿಪ್ಪೆ ಹಾಗೂ ನಿಂಬೆ ಹಣ್ಣು ಬೇಕಾಗುತ್ತದೆ. ಮೊದಲು ಚಕ್ಕೋತ ಸಿಪ್ಪೆ ತೆಗೆದು ಬಿಸಿಲಿನಲ್ಲಿ ಒಣಗಿಸಿ. ನಂತ್ರ ಅದನ್ನು ಪುಡಿ ಮಾಡಿ. ಈ ಪುಡಿಗೆ ನಿಂಬೆ ರಸವನ್ನು ಹಾಕಿ ವಾಸನೆ ಬರುವ ಜಾಗದಲ್ಲಿ ಇಡಿ. ಅದರ ತಾಜಾ ವಾಸನೆ ಇಡೀ ಮನೆಯನ್ನು  ಆವರಿಸುತ್ತದೆ. 
 

click me!