ಬಾಡಿಗೆ ತಾಯಿಯಿಂದ ಮಗು ಪಡೆಯುವುದು ಈಗ ತಪ್ಪಾ?

By Kannadaprabha NewsFirst Published Oct 15, 2022, 7:44 AM IST
Highlights

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಹಾಗೂ ರಾಜ್ಯ ಬಾಡಿಗೆ ತಾಯ್ತನ ಮಂಡಳಿಯನ್ನು ರಚಿಸಿವೆ

ಬೆಂಗಳೂರು(ಅ.15):  ಕಳೆದ ಜೂನ್‌ನಲ್ಲಿ ವಿವಾಹವಾದ ಖ್ಯಾತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರು ಕೇವಲ 4 ತಿಂಗಳಿನಲ್ಲೇ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾಗಿ ಘೋಷಿಸಿದ್ದಾರೆ. ಮಕ್ಕಳನ್ನು ಬಾಡಿಗೆ ತಾಯ್ತನ ವಿಧಾನದ ಮೂಲಕ ಪಡೆದುಕೊಂಡಿರುವ ಬಗ್ಗೆ ದಂಪತಿ ಹೇಳಿಲ್ಲವಾದರೂ ತಮಿಳುನಾಡು ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಬಾಡಿಗೆ ತಾಯ್ತನದ ನಿಯಮಾವಳಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಏನಿದು ಬಾಡಿಗೆ ತಾಯ್ತನ?

Latest Videos

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021ರ ಪ್ರಕಾರ, ಮಗುವನ್ನು ಪಡೆಯಲು ಉದ್ದೇಶಿಸಿದ ದಂಪತಿಗಾಗಿ ಅನ್ಯ ಮಹಿಳೆಯೊಬ್ಬಳು ಅವರ ಪರವಾಗಿ ಮಗುವನ್ನು ಹೆತ್ತು್ತಕೊಡುವುದು ಹಾಗೂ ಜನಿಸಿದ ಮಗುವನ್ನು ಅವರಿಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ‘ಬಾಡಿಗೆ ತಾಯ್ತನ’ ಎಂದು ಕರೆಯಲಾಗುತ್ತದೆ.

Surrogacy: ಈ ದೇಶದಲ್ಲಿ ಬಾಡಿಗೆ ಗರ್ಭಕ್ಕೆ ಸಿಗುತ್ತೆ ಕೈ ತುಂಬಾ ಹಣ

ಬಾಡಿಗೆ ತಾಯ್ತನದ ಪ್ರಕ್ರಿಯೆ ಏನು?

ಬಾಡಿಗೆ ತಾಯ್ತನದಲ್ಲಿ 2 ಪ್ರಮುಖ ವಿಧಾನಗಳಿವೆ. ಮೊದಲನೇದಾಗಿ ಸಾಂಪ್ರದಾಯಿಕ ವಿಧಾನದಲ್ಲಿ ತಂದೆಯಾಗಲು ಬಯಸಿದ ವ್ಯಕ್ತಿಯ ವೀರ್ಯಾಣುವನ್ನು ಬಳಸಿ ಕೃತಕ ಗರ್ಭಧಾರಣೆಯಾಗುವಂತೆ ಮಾಡಲಾಗುತ್ತದೆ. ಈ ವಿಧಾನದ ಮೂಲಕ ಗರ್ಭಿಣಿಯಾದ ಬಾಡಿಗೆ ತಾಯಿಯೇ ಹುಟ್ಟಿದ ಮಗುವಿನ ಬಯಾಲಾಜಿಕಲ್‌ ಮದರ್‌ ಆಗಿರುತ್ತಾಳೆ.

ಅದೇ ಇನ್‌ ವಿಟ್ರೋ ಫರ್ಟಿಲೈಸೇಶನ್‌ (ಐವಿಎಫ್‌) ವಿಧಾನದಲ್ಲಿ ಉದ್ದೇಶಿತ ತಾಯಿಯಿಂದ ಅಂಡಾಣು ಹಾಗೂ ತಂದೆಯಿಂದ ವೀರ್ಯಾಣು ಪಡೆದು ಫಲವತ್ತಾದ ಭ್ರೂಣ ಸೃಷ್ಟಿಯಾದ ಮೇಲೆ ಅದನ್ನು ಬಾಡಿಗೆ ತಾಯಿಯ ಗರ್ಭಾಶಯದಲ್ಲಿಡಲಾಗುತ್ತದೆ. ಈ ವಿಧಾನದಲ್ಲಿ ಬಾಡಿಗೆ ತಾಯಿ ಕೇವಲ ಉದ್ದೇಶಿತ ದಂಪತಿಯ ಮಗುವನ್ನು ಹೆತ್ತುಕೊಡುತ್ತಾಳೆ. ಆಕೆಗೂ ಮಗುವಿಗೂ ಯಾವುದೇ ಆನುವಂಶಿಕ ಸಂಬಂಧಗಳಿರುವುದಿಲ್ಲ. ಅಂಡಾಣು ನೀಡಿದ ಮಹಿಳೆಯೇ ಮಗುವಿನ ಬಯಾಲಾಜಿಕಲ್‌ ಮದರ್‌ ಎನಿಸಿಕೊಳ್ಳುತ್ತಾಳೆ.

ನಿಯಮಗಳೇನು?

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ (2021) ಸಂತಾನಹೀನ ಭಾರತೀಯ ವಿವಾಹಿತ ದಂಪತಿಗೆ ಬಾಡಿಗೆ ತಾಯ್ತನ ವಿಧಾನದ ಮೂಲಕ ಮಗುವನ್ನು ಪಡೆಯಲು ಅನುಮತಿ ನೀಡುತ್ತದೆ. ಈ ವಿಧಾನದ ಮೂಲಕ ಮಗು ಪಡೆಯಲು ಇಚ್ಛಿಸುವ ದಂಪತಿ ವಿವಾಹವಾಗಿ 5 ವರ್ಷವಾಗಿರಬೇಕು.

ಬಾಡಿಗೆ ತಾಯ್ತನದ ಪ್ರಕ್ರಿಯೆಗೆ ಒಳಗಾಗುವ ಮುನ್ನ ಪತಿಯ ವಯಸ್ಸು 26-55 ವರ್ಷ ಒಳಗೆ ಹಾಗೂ ಪತ್ನಿಯ ವಯಸ್ಸು 23-50 ವರ್ಷದೊಳಗೆ ಇರಬೇಕು. ಹುಟ್ಟಿದ ಮಗುವಿನ ಸರಿಯಾದ ಆರೈಕೆಯನ್ನು ಖಚಿತಪಡಿಸಲು ಇಳಿವಯಸ್ಸಿನ ದಂಪತಿಗೆ ಬಾಡಿಗೆ ತಾಯ್ತನದ ಪ್ರಕ್ರಿಯೆಗೆ ಒಳಗಾಗದಂತೆ ನಿರ್ಬಂಧಿಸಲಾಗಿದೆ.

ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) (ನಿಯಂತ್ರಣ) ಕಾಯ್ದೆಯು ವಿವಾಹಿತ ದಂಪತಿ, ಲಿವ್‌-ಇನ್‌ ಜೋಡಿಗಳು, ಒಂಟಿ ಮಹಿಳೆ ಹಾಗೂ ವಿದೇಶಿಯರಿಗೆ ಬಾಡಿಗೆ ತಾಯ್ತನಕ್ಕೆ ಅನುಮತಿ ನೀಡುತ್ತದೆ.
ಮಗು ಪಡೆಯಲು ಇಚ್ಛಿಸುವವರು ಜಿಲ್ಲಾ ವೈದ್ಯ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯಬೇಕು. ಇದರಲ್ಲಿ ದಂಪತಿಗೆ ಮಗು ಪಡೆಯುವ ಸಾಮರ್ಥ್ಯವಿಲ್ಲ ಎಂಬುದನ್ನು ಖಚಿತಪಡಿಸಬೇಕು. ಬಾಡಿಗೆ ತಾಯ್ತನದ ಮೂಲಕ ಪಡೆದ ಮಗುವನ್ನು ಯಾವುದೇ ಸನ್ನಿವೇಶದಲ್ಲೂ ದಂಪತಿ ನಿರಾಕರಿಸುವಂತಿಲ್ಲ.

ಈಗಾಗಲೇ ಜೈವಿಕವಾಗಿ ಅಥವಾ ದತ್ತು ಪಡೆದ ಮಕ್ಕಳು ಹೊಂದಿರುವ ದಂಪತಿ ಮತ್ತೆ ಬಾಡಿಗೆ ತಾಯ್ತನಕ್ಕೆ ಮೊರೆ ಹೋಗುವಂತಿಲ್ಲ. ಅಂಗವಿಕಲ ಮಗು ಅಥವಾ ಮಾರಣಾಂತಿಕ ಕಾಯಿಲೆಯಿಂದ ಮಗು ಬಳಲುತ್ತಿರುವ ವಿಶೇಷ ಪ್ರಕರಣಗಳಲ್ಲಿ ಮಾತ್ರ ಬಾಡಿಗೆ ತಾಯ್ತನಕ್ಕೆ ಅನುಮತಿ ನೀಡಲಾಗುತ್ತದೆ.

ಬಾಡಿಗೆ ತಾಯಿ ಯಾರಾಗಬಹುದು?

ವಿವಾಹಿತೆ ಹಾಗೂ ತನ್ನ ಸ್ವಂತ ಮಗುವನ್ನು ಪಡೆದ 25 ರಿಂದ 35 ವರ್ಷಗಳ ಮಹಿಳೆ ಬಾಡಿಗೆ ತಾಯಿಯಾಗಬಹುದು. ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಬಾಡಿಗೆ ತಾಯಿಯಾಗಬಹುದು. ಮಹಿಳೆಯು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿರುವ ಬಗ್ಗೆ ವೈದ್ಯಕೀಯ ದೃಢೀಕರಣ ಹಾಗೂ ಬಾಡಿಗೆ ತಾಯ್ತನದ ಪ್ರಕ್ರಿಯೆಗೆ ಒಳಗಾಗುವುದಕ್ಕೂ ಮುನ್ನ ಲಿಖಿತ ಒಪ್ಪಿಗೆ ಸಲ್ಲಿಸುವುದು ಅನಿವಾರ್ಯವಾಗಿರುತ್ತದೆ.

ಗರ್ಭಪಾತಕ್ಕೆ ಅವಕಾಶ ಇದೆ

ಬಾಡಿಗೆ ತಾಯ್ತನದ ಪ್ರಕರಣದಲ್ಲೂ ಗರ್ಭಪಾತಕ್ಕೆ ಅವಕಾಶವಿದೆ. ಇದಕ್ಕೆ ತಾಯಿಯ ಒಪ್ಪಿಗೆ ಬೇಕಾಗಿರುತ್ತದೆ. ಪ್ರಸ್ತುತ ಗರ್ಭಪಾತಕ್ಕಿರುವ ಎಲ್ಲ ನಿಯಮಗಳನ್ನೂ ಇಲ್ಲಿ ಪಾಲಿಸಬೇಕಾಗುತ್ತದೆ.

ವಾಣಿಜ್ಯಾತ್ಮಕ ಬಾಡಿಗೆ ತಾಯ್ತನಕ್ಕೆ ನಿಷೇಧ

ಭಾರತದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ತಾಯ್ತನ ಪ್ರಕ್ರಿಯೆಗೆ ಒಳಗಾಗುವುದನ್ನು ನಿಷೇಧಿಸಲಾಗಿದೆ. ವೈದ್ಯಕೀಯ ವೆಚ್ಚ ಹಾಗೂ ಬಾಡಿಗೆ ತಾಯಿ ಭರಿಸುತ್ತಿರುವ ಇತರೆ ನಿಗದಿ ಪಡಿಸಿದ ವೆಚ್ಚಗಳು ಹಾಗೂ ವಿಮಾ ರಕ್ಷಣೆಯನ್ನು ಹೊರತುಪಡಿಸಿ, ಬಾಡಿಗೆ ತಾಯಿಯಾದವಳು ಮಗುವನ್ನು ಪಡೆಯಲು ಬಯಸಿದ ದಂಪತಿಯಿಂದ ಯಾವುದೇ ಹಣದ ಪಾವತಿ, ಪ್ರತಿಫಲಗಳು ಅಥವಾ ಶುಲ್ಕಗಳನ್ನು ಪಡೆಯುವಂತಿಲ್ಲ.

ದೂರುಗಳು ಇದ್ದರೆ ಇಲ್ಲಿ ಕೊಡಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಹಾಗೂ ರಾಜ್ಯ ಬಾಡಿಗೆ ತಾಯ್ತನ ಮಂಡಳಿಯನ್ನು ರಚಿಸಿವೆ. ಇವು ಬಾಡಿಗೆ ತಾಯ್ತನದ ಪ್ರಕ್ರಿಯೆ ನಡೆಸುವ ಕ್ಲಿನಿಕ್‌ಗಳ ನೀತಿ ಸಂಹಿತೆಗಳನ್ನು ರಚಿಸುತ್ತವೆ. ಅವುಗಳನ್ನು ಉಲ್ಲಂಘಿಸಿದಲ್ಲಿ ಕ್ಲಿನಿಕ್‌ಗಳ ಲೈಸನ್ಸ್‌ ರದ್ದು ಪಡಿಸುವುದು ಹಾಗೂ ಕಾಯ್ದೆಯ ಉಲ್ಲಂಘನೆಯ ದೂರುಗಳನ್ನು ಪರಿಶೀಲಿಸುವ ಕಾರ್ಯ ನಿರ್ವಹಿಸುತ್ತವೆ.

ಮಗಳ ಮಗುವನ್ನೇ ಹೆತ್ತುಕೊಟ್ಟ ತಾಯಿ..! ಇದು ಭಾರತದ ಮೊದಲ ಬಾಡಿಗೆ ತಾಯ್ತನದ ಕಥೆ

ನೋಂದಾಯಿತ ಕ್ಲಿನಿಕ್‌ಗಳು ಮಾತ್ರ ಬಾಡಿಗೆ ತಾಯ್ತನ ಪ್ರಕ್ರಿಯೆಗಳನ್ನು ನಡೆಸಲು ಅರ್ಹರಾಗಿರುತ್ತವೆ. ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಬಾಡಿಗೆ ತಾಯ್ತನದ ಸೌಲಭ್ಯ ಒದಗಿಸುವ ಕ್ಲಿನಿಕ್‌ಗಳ ಸಂಖ್ಯೆ 1000ಕ್ಕಿಂತಲೂ ಕಡಿಮೆಯಿದೆ.

ಉಲ್ಲಂಘನೆಗಿದೆ 10 ವರ್ಷ ಶಿಕ್ಷೆ

ಬಾಡಿಗೆ ತಾಯ್ತನದ ನಿಯಮಗಳನ್ನು ಮೀರಿದರೆ ಕಠಿಣ ಶಿಕ್ಷೆಯಿದೆ. ವಾಣಿಜ್ಯಾತ್ಮಕ ಬಾಡಿಗೆ ತಾಯ್ತನ, ಭ್ರೂಣಗಳ ಮಾರಾಟ, ಬಾಡಿಗೆ ತಾಯ್ತನದ ಮೂಲಕ ಪಡೆದ ಮಗುವನ್ನು ನಿರಾಕರಿಸುವುದು ಮೊದಲಾದವುಗಳನ್ನು ಅಪರಾಧ ಎಂದು ಪರಿಗಣಿಸಲಾಗಿದ್ದು, ಇದಕ್ಕೆ 10 ವರ್ಷ ಜೈಲು ಹಾಗೂ 10 ಲಕ್ಷ ರು.ವರೆಗೆ ದಂಡ ವಿಧಿಸಬಹುದಾಗಿದೆ.
 

click me!