ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಭೆ ಚಪ್ಪಾಳೆ ಮೂಲಕ ಅನುಮೋದನೆ ನೀಡಿತು. ಈ ಬಗ್ಗೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲು ತೀರ್ಮಾನ
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಅ.29): ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಳ ಮಾಡುವ ಕುರಿತ ಕೇಂದ್ರ ಸರ್ಕಾರದ ಕಾನೂನು ಶೀಘ್ರದಲ್ಲೇ ಜಾರಿಯಾಗಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಹಾಯಧನ 10 ಲಕ್ಷ ರೂ.ಗೆ ಹೆಚ್ಚಳ ಮಾಡಬೇಕು ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಮಹಿಳೆಯರಿಗೆ ಸಾಲ ನವೀಕರಣ ಮಾಡಬೇಕೆನ್ನುವುದು ಸೇರಿದಂತ ಹಲವು ಮಹತ್ವದ ತೀರ್ಮಾನಗಳನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ನಿನ್ನೆ(ಶುಕ್ರವಾರ) ನಡೆದ ನಾಯಕ ಜನಾಂಗದ ಮಹಿಳೆಯರ ಸಮಾವೇಶದಲ್ಲಿ ಕೈಗೊಳ್ಳಲಾಗಿದೆ.
undefined
ಶ್ರೀ ವಾಲ್ಮೀಕಿ ಪ್ರತಿಷ್ಠಾನ ಮತ್ತು ಸಾರ್ವಜನಿಕ ವಾಲ್ಮೀಕಿ ಜಯಂತೋತ್ಸವ ಸಮಿತಿ ವತಿಯಿಂದ ನಗರದ ಸರ್ಕಾರಿ ಪ್ರೌಢಕಲಾ ಮೈದಾನದಲ್ಲಿ ಹಮ್ಮಿಕೊಂಡಿರುವ 17 ದಿನಗಳ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದ 15 ನೇ ದಿನವಾದ ಶುಕ್ರವಾರ ನಡೆದ ನಾಯಕ ಸಮಾಜದ ಮಹಿಳೆಯರ ಸಮಾವೇಶದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆರಂಭದಲ್ಲಿ ಸಮಾಜದ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ಎತ್ತಿದ ಪ್ರಸ್ತಾಪ, ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಳ ಮಾಡುವ ಕುರಿತು ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಭೆ ಚಪ್ಪಾಳೆ ಮೂಲಕ ಅನುಮೋದನೆ ನೀಡಿತು. ಈ ಬಗ್ಗೆ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
DAVANAGERE: ಪ್ರಾಣಬಿಟ್ಟೇವು ಮೀಸಲಾತಿ ಬಿಡೆವೆಂದ ವಚನಾನಂದ ಸ್ವಾಮೀಜಿ
ಮದುವೆ ವಯಸ್ಸು ಮುಂದೂಡಿಕೆಯಿಂದ ಸಮಾಜದಲ್ಲಿ ಮಹೀಳಾ ಸಬಲೀಕರಣವಾಗಲಿದೆ. ಅವರ ಶಿಕ್ಷಣ ಪೂರ್ಣ ವಾಗಲಿದೆ. ದೇಶದಲ್ಲಿ ಕನಿಷ್ಠ 20 ಕೋಟಿ ಜನಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ದೇಶಕ್ಕೂ ಲಾಭವಾಗಲಿದೆ. ಈಗಾಗಲೇ ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಿದ್ದು, ಶೀಘ್ರವೇ ಕಾನೂನಾಗಿ ಜಾರಿಗೆ ಬರಲಿ ಎಂದು ಒತ್ತಾಯಿಸಿ ತೀರ್ಮಾನ ಕೈಗೊಳ್ಳಲಾಯಿತು.
ಮಹಿಳಾ ಸ್ವ ಸಹಾಯ ಸಂಘಗಳಿಗೆ ಇದೀಗ ನೀಡುತ್ತಿರುವ 2.50 ಲಕ್ಣ ರೂ ಸಾಲ ಯಾವುದಕ್ಕೂ ಸಾಲದು, ಪ್ರತಿ ಸಂಘದಲ್ಲೂ 10. ಸದಸ್ಯೆಯರು ಇದ್ದು, ಇದೀಗ ನೀಡುತ್ತಿರುವ 2.50 ಲಕ್ಷ ಯಾವುದೇ ಸ್ವಯಂ ಉದ್ಯೋಗಕ್ಕೆ ಸಾಲದು . ಈ ಹಿನ್ನೆಲೆಯಲ್ಲಿ ಸಾಲದ ಮೊತ್ತವನ್ನು 10 ಲಕ್ಷರೂಗೆ ಹೆಚ್ಚಳ ಮಾಡಬೇಕು ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಮಹಿಳೆಯರಿಗೆ ಸಾಲ ನವೀಕರಣ ಮಾಡಿ ಅವರನ್ನು ಪ್ರೋತ್ಸಾಹಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ತರಲು ತೀರ್ಮಾನ ಕೈಗೊಳ್ಳಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ಪೋಕ್ಸೊ ಕಾಯಿದೆಯಡಿ ಇಂದು ನೂರಾರು ಯುವಕರು ಜೈಲುಗಳಲ್ಲಿ ಇದ್ದಾರೆ. ಇಂಥಹ ಸಂದರ್ಭದಲ್ಲಿ ಕಾಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂಥಹ ನೂರಾರು ಜನರು ಜೈಲಿನಲ್ಲಿರುವುದರಿಂದ ಕೋಟ್ಯಾಂತರ ಹೆಣ್ಣು ಮಕ್ಕಳು ಸುರಕ್ಷಿತರಾಗಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ನೂರು ಜನ ಜೈಲಿನಲ್ಲಿರುವವರನ್ನು ನೋಡದೇ ಕೋಟ್ಯಾಂತರ ಹೆಣ್ಣುಮಕ್ಕಳನ್ನು ನೋಡಬೇಕು.ಈ ಕಾಯಿದೆಯನ್ನು ಮತ್ತಷ್ಟು ಬಲಪಡಿಸಬೇಕಿದೆ, ಈ ಕಾಯಿದೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿರದೇ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ ಎಂದರು.
ಮಹಿಳೆಯರು ದೌರ್ಜನ್ಯಕ್ಕೆ ತುತ್ತಾಗಿದ್ದರೆ ಸಾಂತ್ವಾನ ಸಮಿತಿಗೆ ಅರ್ಜಿ ನೀಡಿದರೆ, ಡಿವಿ ಕಾಯಿದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ವಾಗುತ್ತದೆ, ಹೆಣ್ಣು ಮಕ್ಕಳು ಅವರ ಸ್ವಂತ ಕಾಲ ಮೇಲೆ ನಿಲ್ಲುವವರೆಗೂ ಮದುವೆ ಮಾಡಬೇಡಿ ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಸದಸ್ಯೆ ಮಂಜುಳಾ, ಮಾತನಾಡಿ, ಮಕ್ಕಳ ಮದುವೆ ವಯಸ್ಸನ್ನು 18 ರಿಂದ 21 ಕ್ಕೆ ಏರಿಕೆ ಮಾಡಿದರೆ ಸಾಲದು, ಅವರಿಗೆ ಉನ್ನತ ಶಿಕ್ಷಣವನ್ನೂ ಕೂಡ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸ್ಪೂರ್ತಿ ಎನ್‌ಜಿಒ ಮುಖ್ಯಸ್ಥೆ ಶ್ರೀಮತಿ ರೇಣುಕಾ ಮಾತನಾಡಿ, ಉನ್ನತ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರಿಗೆ ಕಾಲೇಜು ಆಡಳಿತ ಮಂಡಳಿಗಳು ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ, ಈ ಕೂಡಲೇ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Davanagere: ಮಾಜಿ ಶಾಸಕ ಶಿವಶಂಕರ್‌ಗೆ ಗೆಲ್ಲುವ ತಾಕತ್ತಿಲ್ಲ: ಶಾಸಕ ರಾಮಪ್ಪ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀಮತಿ ಇಂದಿರಾ ಎಸ್.ವಿ.ರಾಮಚಂದ್ರ ಮಾತನಾಡಿ, ಮಹಿಳಾ ಸ್ವ ಸಹಾಯ ಸಂಘಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಪಾಲಿಕೆ ಸದಸ್ಯೆ ಸವಿತಾ ಹುಲ್ಮನಿ ವಹಿಸಿದ್ದರು, ಮುಖ್ಯ ಅತಿಥಿಯಾಗಿ ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ ,ಉಪಸ್ಥಿತರಿದ್ದರು. ಸಿದ್ದಿ ಜನಾಂಗದ ಸೀತಾ ಸಿದ್ದಿ, ಹಕ್ಕಿಪಿಕ್ಕಿ ಜನಾಂಗದ ಶರಣಮ್ಮ, ಕ್ರಿಕೆಟ್ ಆಟಗಾರ್ತಿ ರಕ್ಷಿತಾ ನಾಯಕ,ವಿಶಾಲಾಕ್ಷಮ್ಮ, ಜಯಶ್ರೀ ,ಸೇರಿದಂತೆ ಸಮಾಜದ ನೂರಾರು ಮಹಿಳೆಯರು ಭಾಗವಹಿಸಿದ್ದರು.