ಗರ್ಭದಲ್ಲಿ ಭ್ರೂಣ ಬೆಳೆಯುತ್ತಿದೆ ಎಂದಾಗ ಆಗುವ ಸಂಭ್ರಮ ಅಷ್ಟಿಷ್ಟಲ್ಲ. ವಿಷ್ಯ ಗೊತ್ತಾಗ್ತಿದ್ದಂಗೆ ಮಹಿಳೆ ಬದಲಾಗ್ತಾಳೆ. ಮಗುವಿನ ಬಗ್ಗೆ ಕಾಳಜಿ ವಹಿಸಲು ಶುರು ಮಾಡುವ ಮಹಿಳೆ ಹುಟ್ಟುವ ಮಗು ಹಾಗಿರಬೇಕು, ಹೀಗಿರಬೇಕೆಂದು ಕನಸು ಕಾಣ್ತಾಳೆ. ಕನಸನ್ನು ನನಸು ಮಾಡ್ಕೊಳ್ಳೋದು ಹೇಗೆ ಗೊತ್ತಾ?
ಎಲ್ಲ ಅಮ್ಮಂದಿರಿಗೂ ತಮ್ಮ ಮಕ್ಕಳೆ ಮುದ್ದು. ಇದು ನೂರಕ್ಕೆ ನೂರು ಸತ್ಯವಾದ್ರೂ ನಮ್ಮ ಮಕ್ಕಳು ಬೆಳ್ಳಗೆ, ಗುಂಡ ಗುಂಡಗೆ ಇರಬೇಕೆಂದು ಗರ್ಭಿಣಿಯಾದವಳು ಬಯಸ್ತಾಳೆ. ಮಕ್ಕಳು ಸುಂದರವಾಗಿ ಹುಟ್ಟಬೇಕು ಎನ್ನುವ ಕಾರಣಕ್ಕೆ ಗರ್ಭಿಣಿಯಾದಾಗ ಅದು ಇದು ತಿನ್ನೋಕೆ ಸಲಹೆ ನೀಡ್ತಾರೆ.
ಮನೆ (House) ಯ ಮಗಳು ಗರ್ಭಿಣಿ (Pregnant) ಎಂಬ ವಿಷ್ಯ ತಿಳಿಯುತ್ತಿದ್ದಂತೆ ಹಣ್ಣುಗಳು ಮನೆಗೆ ಬರುತ್ವೆ. ಕೇಸರಿ (Saffron) ಹಾಲು ಕುಡಿಯುವಂತೆ ಕೆಲವರು ಸಲಹೆ ನೀಡ್ತಾರೆ. ಒಳ್ಳೆ ಪುಸ್ತಕಗಳನ್ನು ಓದ್ಬೇಕು, ಒಳ್ಳೊಳ್ಳೆ ವಿಷ್ಯವನ್ನು ಕೇಳಬೇಕು, ಒಳ್ಳೆ ವಿಡಿಯೋ (Video) ಗಳನ್ನು ನೋಡ್ಬೇಕು ಹೀಗೆ ಒಂದಾದ್ಮೇಲೆ ಒಂದರಂತೆ ಸಲಹೆಗಳು ಬರ್ತನೇ ಇರುತ್ವೆ. ಚೆಂದದ ಮಕ್ಕಳ ಫೋಟೋ ನೋಡಿದ್ರೆ ಸುಂದರ ಮಗು ಜನಿಸುತ್ತದೆ ಎಂಬ ಮಾತನ್ನೂ ಅನೇಕರು ಹೇಳಿರ್ತಾರೆ. ನಾವಿಂದು ಸುಂದರ ಮಗುವಿಗೂ ಚೆಂದದ ಫೋಟೋಕ್ಕೂ ಸಂಬಂಧ ಇದ್ಯಾ ಎಂಬುದನ್ನು ನಿಮಗೆ ಹೇಳ್ತೆವೆ.
Health Tips : ಉರ್ಫಿ ಜಾವೇದ್ ಗೆ ಕಾಡ್ತಿರುವ ಲಾರಿಂಜೈಟಿಸ್ ಅಪಾಯಕಾರಿಯೇ?
ಮಕ್ಕಳ ತಜ್ಞರ ಪ್ರಕಾರ, ಗರ್ಭಿಣಿ ಸುಂದರವಾದ ಮಗುವಿನ ಚಿತ್ರವನ್ನು ನೋಡಿದಾಗ ತಾಯಿ ದೇಹದಲ್ಲಿ ಗುಡ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಈ ಫೀಲ್ ಗುಡ್ ಹಾರ್ಮೋನುಗಳು ಬಿಡುಗಡೆಯಾದಾಗ ತಾಯಿ, ಮಗುವಿನೊಂದಿಗೆ ಭಾವನಾತ್ಮಕವಾಗಿ ಬೆರೆಯುತ್ತಾಳೆ. ಈ ಸಂದರ್ಭದಲ್ಲಿ ಖುಷಪಿಯ ಕೆಲವು ಸಂಕೇತಗಳು ಮೆದುಳನ್ನು ತಲುಪುತ್ತವೆ. ಇದು ಮಗುವಿನ ನೋಟದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.
ಗರ್ಭ ಸಂಸ್ಕಾರ ಹಾಗೂ ಮಗುವಿನ ಸೌಂದರ್ಯ : ಕೆಲವರು ಗರ್ಭ ಸಂಸ್ಕಾರ ಮಾಡುತ್ತಾರೆ. ಸಂಸ್ಕಾರ ಅಂದ್ರೆ ಒಳ್ಳೆ ವಿಷ್ಯವನ್ನು ಕಲಿಸುವುದು ಎಂದಾಗುತ್ತದೆ. ಗರ್ಭದಲ್ಲಿರುವ ಮಗುವಿಗೆ ಶಿಕ್ಷಣ ನೀಡುವುದನ್ನು ಇದು ಸೂಚಿಸುತ್ತದೆ. ಗರ್ಭ ಸಂಸ್ಕಾರವು ಮಗುವಿನ ಮಾನಸಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಹಾಗೂ ದೈಹಿಕ ಆರೋಗ್ಯಕ್ಯೆ ಒಳ್ಳೆಯದು ಎಂದು ಭಾವಿಸಲಾಗಿದೆ. ಗರ್ಭಿಣಿ ಮಂತ್ರ ಪಠಣೆ ಮಾಡಿದಾಗ ಅಥವಾ ಸಂಗೀತವನ್ನು ಕೇಳಿದಾಗ ಅದು ಗರ್ಭದಲ್ಲಿರುವ ಭ್ರೂಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಆದ್ರೆ ತಜ್ಞರ ಪ್ರಕಾರ, ಗರ್ಭ ಸಂಸ್ಕಾರ ಮಗುವಿನ ಆಕಾರದ ಜೊತೆ ಹೆಚ್ಚು ಸಂಬಂಧ ಹೊಂದಿಲ್ಲ. ಮಗು ಹೇಗೆ ಕಾಣುತ್ತದೆ ಎಂಬುದು ನಿಮ್ಮ ಮತ್ತು ನಿಮ್ಮ ಪತಿಯಿಂದ ಮಗು ಪಡೆಯುವ ಜೀನ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಮಗುವಿನ ಬಣ್ಣ, ಕೂದಲು, ಮೂಗು, ಉದ್ದ ಈವೆಲ್ಲವೂ ಬಹಳ ಮಟ್ಟಿಗೆ ವಂಶವಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಸುಂದರವಾದ ಮಗುವಿನ ಫೋಟೋವನ್ನು ನೋಡುವುದು ಮಗುವಿನ ನೋಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ ಎಂದು ವೈದ್ಯರು ಹೇಳ್ತಾರೆ.
ಮಗುವಿನ ಸೌಂದರ್ಯ ಹೆಚ್ಚಿಸಲು ಏನು ಮಾಡ್ಬೇಕು ? : ಮಗುವಿನ ಸೌಂದರ್ಯ ಹೆಚ್ಚಿಸಲು ಅದು ಜನಿಸುತ್ತಿದ್ದಂತೆ ಕೆಲ ಉಪಾಯಗಳನ್ನು ಹಿಂದಿನಿಂದಲೂ ಮಾಡುತ್ತ ಬಂದಿದ್ದಾರೆ. ತಲೆಯನ್ನು ಒತ್ತಿ ಅದನ್ನು ಗುಂಡಗೆ ಮಾಡುವ ಪ್ರಯತ್ನ ನಡೆಸುತ್ತಾರೆ. ಎರಡು ಕಣ್ಣಿನ ಮಧ್ಯೆ ಇರುವ ಮೂಗಿನ ಭಾಗವನ್ನು ಮೇಲಕ್ಕೆ ಎತ್ತುತ್ತಾರೆ. ಕೈ ಕಾಲುಗಳು ಸರಿಯಾಗಲಿ ಎನ್ನುವ ಕಾರಣಕ್ಕೆ ಎಣ್ಣೆ ಹಚ್ಚಿ ಕಾಲು – ಕೈಗಳನ್ನು ಸರಿಯಾಗಿ ಮಸಾಜ್ ಮಾಡ್ತಾರೆ. ಇದಲ್ಲದೆ ಮಗುವಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ಮಗುವಿನ ಅನಗತ್ಯ ಕೂದಲನ್ನು ತೆಗೆಯುತ್ತಾರೆ. ಹುಬ್ಬಿಗೆ ಎಣ್ಣೆ ಹಚ್ಚಿ ಅದು ದಟ್ಟವಾಗಿ ಬರುವಂತೆ ಮಾಡ್ತಾರೆ. ಹೀಗೆ ಒಂದೊಂದು ಕಡೆ ಒಂದೊಂದು ವಿಧಾನವನ್ನು ಅನುಸರಿಸಲಾಗುತ್ತದೆ. ನೀವು ಕೂಡ ಇವುಗಳನ್ನು ವೈದ್ಯರ ಸಲಹೆ ಮೇರೆಗೆ ಟ್ರೈ ಮಾಡಬಹುದು.
Woman Health: ಎರಡನೇ ಬಾರಿ ಅಮ್ಮನಾಗ್ತಿದ್ರೆ ನಿರ್ಲಕ್ಷ್ಯ ಬೇಡ
ಜೀನ್ ಗಳಿಂದ ನಿರ್ಧರಿಸಲ್ಪಡುವ ದೇಹದ ಆಕಾರ ಕೆಲವೊಮ್ಮೆ ಪರಿಸರದ ಪ್ರಭಾವಕ್ಕೆ ಒಳಗಾಗುತ್ತವೆ. ಗರ್ಭಿಣಿ ಸೇವನೆ ಮಾಡುವ ಆಹಾರ ಹಾಗೂ ಸೂರ್ಯನ ಬೆಳಕು ಕೂಡ ಮಗುವಿನ ಉದ್ದ ಹಾಗೂ ಮೈ ಬಣ್ಣದ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರುತ್ತದೆ. ಮಗುವಿನ ಆಕಾರ ಗರ್ಭದಲ್ಲಿಯೇ ನಿರ್ಧಾರವಾಗುತ್ತದೆ. ಹಾಗಾಗಿ ಗರ್ಭಿಣಿ ಅನಗತ್ಯ ವಿಷ್ಯಗಳಿಗೆ ಗಮನ ನೀಡುವ ಬದಲು ಆಹಾರಕ್ಕೆ ಹೆಚ್ಚು ಒತ್ತು ನೀಡಬೇಕು. ಹಾಗೆಯೇ ಒತ್ತಡವಿಲ್ಲದ ಜೀವನ ನಡೆಸಿದ್ರೆ ಮಗು ಆರೋಗ್ಯವಾಗಿ ಜನಿಸೋದ್ರಲ್ಲಿ ಎರಡು ಮಾತಿಲ್ಲ.