
ನೀವು ವಿಕಲಾಂಗರಾಗಿರಿ ಇಲ್ಲ ಎಲ್ಲ ಅಂಗಗಳೂ ಸರಿಯಾಗೇ ಇರಲಿ, ಸಾಧಿಸುವ ಛಲ ಇಲ್ಲದೆ ಹೋದ್ರೆ ನೀವು ಏನು ಮಾಡಲೂ ಸಾಧ್ಯವಿಲ್ಲ. ಧೈರ್ಯದಿಂದ ಏನಾದ್ರೂ ಸಾಧನೆ ಮಾಡ್ತೇನೆ ಎಂಬ ಬಲವಾದ ಗುರಿ ಹೊಂದಿದ್ದರೆ ಅದನ್ನು ಯಾರು ಬೇಕಾದ್ರೂ ತಲುಪಬಹುದು. ಸಾಧನೆಗೆ ವಯಸ್ಸು, ಜಾತಿ, ಲಿಂಗ ಹಾಗೂ ವಿಕಲಾಂಗ ಎನ್ನುವ ಬೇಧವಿಲ್ಲ. ಮನೆಯಲ್ಲಿ ಹೆಣ್ಣು ಜನಿಸೋದೆ ಒಂದು ಶಾಪ ಎನ್ನುವ ಕಾಲ ಈಗಿಲ್ಲ. ಆದ್ರೆ ಹೆಣ್ಣು ಮಕ್ಕಳು ವಿಕಲಾಂಗರಾಗಿ ಹುಟ್ಟಿದಾಗ ಪಾಲಕರು ನೊಂದುಕೊಳ್ಳುವ ಜೊತೆಗೆ ಸವಾಲುಗಳನ್ನು ಎದುರಿಸುತ್ತಾರೆ. ಅವರಿಗೆ ಶಿಕ್ಷಣ ನೀಡುವುದ್ರಿಂದ ಹಿಡಿದು ಅವರನ್ನು ಒಂದು ದಡತಲುಪಿಸುವವರೆಗೂ ಪಾಲಕರ ಕೆಲಸ ದೊಡ್ಡದಿರುತ್ತದೆ. ನಾವು ವಿಕಲಾಂಗರು, ನಮಗೆ ಸಮಸ್ಯೆ ಇದೆ, ಸಾಧನೆ ಮಾಡಲು ಸಾಧ್ಯವಿಲ್ಲ ಅಂತ ಮಕ್ಕಳು ಕುಳಿತುಬಿಟ್ರೆ ಪಾಲಕರ ಸ್ಥಿತಿ ಮತ್ತಷ್ಟು ಕಷ್ಟವಾಗುತ್ತದೆ. ಆದ್ರೆ ದೀಪಾಲಿ ಶರ್ಮಾ ಮತ್ತು ಛಾವಿ ಶರ್ಮಾರಂತ ಮಕ್ಕಳು ಹುಟ್ಟಿದ್ರೆ ಅಲ್ಲಿ ವಿಕಲಾಂಗತೆ ಮಹತ್ವ ಪಡೆಯೋದೇ ಇಲ್ಲ. ಈ ಇಬ್ಬರು ಸಹೋದರಿಯರು ಎಲ್ಲವೂ ಇದ್ದ ಇಲ್ಲದಂತೆ ಇರುವ ಅನೇಕ ಜನರ ಕಣ್ಣು ತೆರೆಸಿದ್ದಾರೆ. ಸಾಧನೆ ಮಾಡಬೇಕೆಂಬ ಜನರಿಗೆ ಸ್ಫೂರ್ತಿಯಾಗಿದ್ದಾರೆ. ವಿಕಲಾಂಗರಿಗೆ ಮಾದರಿಯಾಗಿದ್ದಾರೆ.
ದೀಪಾಲಿ ಶರ್ಮಾ ಮತ್ತು ಛಾವಿ ಶರ್ಮಾ ಇಬ್ಬರು ಜೈಪುರ (Jaipur) ದವರು. ಅವರಿಬ್ಬರೂ ಒಂದೇ ತಾಯಿಯ ಮಕ್ಕಳು. ಇವರ ಜೀವನ (Life) ದ ಕಥೆ ಅಧ್ಬುತವಾಗಿದೆ. ಶೇಕಡಾ 80ರಷ್ಟು ವಿಕಲಾಂಗತೆ ಹೊಂದಿರುವ ಸಹೋದರಿಯರಿಗೆ ಕಿವಿ ಕೇಳೋದಿಲ್ಲ. ಮಾತನಾಡಲು ಬರೋದಿಲ್ಲ. ಈ ಎರಡೂ ಅಂಗ ಕೈಕೊಟ್ಟಿದ್ರೂ ಅವರ ಬುದ್ಧಿ ಹಾಗೂ ಕಲೆ ಅವರ ಕೈ ಹಿಡಿದಿದೆ.
ಜಗತ್ತಿನಲ್ಲಿ ಅತ್ಯಾಕರ್ಷಕವಾಗಿ ಕಾಣುವ ಗಗನಸಖಿಯರನ್ನು ಹೊಂದಿದ ಟಾಪ್-10 ದೇಶಗಳು
ದೀಪಾಲಿ ಶರ್ಮಾ ಮತ್ತು ಛಾವಿ ಶರ್ಮಾ ಮತ್ತೆ ಮತ್ತೆ ನೋಡಬೇಕೆನ್ನಿಸುವ ಅತ್ಯದ್ಭುತ ಚಿತ್ರಗಳನ್ನು ಬಿಡಿಸುತ್ತಾರೆ. ಈಗಾಗಲೇ 400ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿದ್ದಾರೆ. ಅವರ ಕುಂಚದಲ್ಲಿ ಅರಳಿದ ಕಲೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ.
ದೀಪಾಲಿ ಶರ್ಮಾ ಮತ್ತು ಛಾವಿ ಶರ್ಮಾ ಇಬ್ಬರೂ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ತಮ್ಮ ಬಾಲ್ಯದಲ್ಲಿಯೇ ಅವರು ಚಿತ್ರಕಲೆಯನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದರು. ಸಹೋದರಿಯರು ಪರಸ್ಪರ ಭಾವನೆಯನ್ನು ಅರಿಯುತ್ತಾರೆ. ಇಬ್ಬರೂ ಒಟ್ಟಿಗೆ ಕುಳಿತು ಚಿತ್ರ ಬಿಡಿಸುತ್ತಾರೆ. ದೀಪಾಲಿ ಶರ್ಮಾ ಮತ್ತು ಛಾವಿ ಶರ್ಮಾ, ಐಸಿಜಿ ಕಾಲೇಜಿನಲ್ಲಿ ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಬ್ಬರೂ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ.
ಇವರು ಬಿಡಿಸಿದ ಚಿತ್ರಗಳು ಆಗಾಗ ಪ್ರದರ್ಶನಗೊಳ್ಳುತ್ತಿರುತ್ತವೆ. ಸಿಂಗಾಪುರದಲ್ಲಿ ಕೂಡ ಈ ಸಹೋದರಿಯರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರಿಗೆ ಸರ್ಕಾರದಿಂದ ದಿವ್ಯಾಂಗ್ ಜನ್ ರಾಜ್ಯ ಕಲಾ ಪ್ರಶಸ್ತಿ ಸಿಕ್ಕಿದೆ. ದೀಪಾಲಿ ರಾಷ್ಟ್ರಪತಿಗಳ ಪ್ರಶಸ್ತಿಗೆ ಒಮ್ಮೆ ನಾಮನಿರ್ದೇಶನಗೊಂಡಿದ್ದರು. ಟಾಟಾ ಫೌಂಡೇಶನ್‌ನಿಂದ ಸಬಲ್ ಪ್ರಶಸ್ತಿಯನ್ನು ಇವರು ಬಾಚಿಕೊಂಡಿದ್ದಾರೆ.
ನೀವು ಶ್ರೀಮಂತರಾಗಿದ್ರೆ ನನ್ನ ಪತಿಯಾಗ್ಬಹುದು...ಆಫರ್ ಕೇಳಿ ದಂಗಾದ ಜನ
ದೀಪಾಲಿ ಶರ್ಮಾ ಮತ್ತು ಛಾವಿ ಶರ್ಮಾ ಸಾಧನೆಗೆ ಅವರ ಕುಟುಂಬವೇ ಸ್ಫೂರ್ತಿ. ಅವರ ತಂದೆ ಎಸ್ ಬಿಐ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದರು. ಆದ್ರೆ ಮಕ್ಕಳ ಕಲೆಗೆ ಹಾಗೂ ಉನ್ನತ ಶಿಕ್ಷಣಕ್ಕೆ ನೆರವಾಗಬೇಕು ಎನ್ನುವ ಕಾರಣಕ್ಕೆ ವಿಆರ್ ಎಸ್ ತೆಗೆದುಕೊಂಡಿದ್ದಾರೆ. ಚಿತ್ರಕಲೆ ಕ್ಷೇತ್ರದಲ್ಲಿ ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎಂಬುದು ಅವರ ತಂದೆಯ ಆಸೆಯಾಗಿದೆ. ಮಾತು ಬಾರದ ಮಕ್ಕಳ ಮಾತನ್ನು ಅವರ ತಂದೆ ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಲ್ಲದೆ ಮಕ್ಕಳ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ದೀಪಾಲಿ ಈಗ ವಿಷುಯಲ್ ಆರ್ಟ್‌ನಲ್ಲಿ ಪಿಎಚ್‌ಡಿ ಮಾಡ್ತಿದ್ದರೆ, ಛಾವಿ ಶರ್ಮಾ ಯುಎಸ್ ಮ್ಯಾಗಜೀನ್‌ನ ಕವರ್ ಪೇಜ್ ವಿನ್ಯಾಸಗೊಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.