ಅಮ್ಮ ಅಂದ್ರೆ ಮಕ್ಕಳ ಪಾಲಿಗೆ ಸರ್ವಸ್ವ. ಆಕೆ ಹಳ್ಳಿ ಗುಗ್ಗಿಯಾದ್ರೂ, ವಿದ್ಯಾಭ್ಯಾಸವಿಲ್ಲದಿದ್ದರೂ ಹೆತ್ತ ಮಕ್ಕಳ ಪಾಲಿಗೆ ಎಲ್ಲವೂ ಸರ್ವಸ್ವವೂ ಹೌದು. ಆದ್ರೆ ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಭಾಗ್ಯಳ ಮಗಳು ತನ್ವಿಗೆ ಆಕೆಯನ್ನು ಕಂಡ್ರೆ ಆಗಲ್ಲ. ಅಮ್ಮನಿಗೆ ವಿದ್ಯಾಭ್ಯಾಸ ಇಲ್ಲ, ಇಂಗ್ಲಿಷ್ ಬರಲ್ಲ ಅಂತ ಯಾವಾಗ್ಲೂ ಸಿಡಿಮಿಡಿಗೊಳ್ತಾಳೆ. ಇಷ್ಟಕ್ಕೂ ಅಮ್ಮನಿಗೆ ಇಂಗ್ಲಿಷ್ ಬರಲ್ಲಾಂದ್ರೆ ನಾಚಿಕೆ ವಿಷ್ಯಾನ?
ಹಾಕೋ ಬಟ್ಟೆ, ಧರಿಸೋ ಚಪ್ಪಲಿ, ಹೋಗೋ ಹೊಟೇಲ್, ಮಾಡೋ ಕೆಲ್ಸದ ಬಗ್ಗೆ ಯಾರಿಗಾದ್ರೂ ನಾಚಿಕೆಯಿರಬಹುದು. ನಾನು ಇಂಥಾ ಕಡೆ ಕೆಲ್ಸ ಮಾಡ್ತೀನಿ, ಇಷ್ಟು ಸಂಪಾದಿಸ್ತೀನಿ ಅನ್ನೋದಕ್ಕೆ ಅಂಜಿಕೆಯಿರಬಹುದು. ಆದ್ರೆ ಹೆತ್ತಮ್ಮನ ಬಗ್ಗೆ ಯಾರಿಗಾದ್ರೂ ನಾಚಿಕೆ ಇರೋಕೆ ಸಾಧ್ಯಾನ. ಇಲ್ಲ ಅಂತ ಅಲ್ಲಗಳೆಯುವಂತಿಲ್ಲ. ಅಂಥವರೂ ಇದ್ದಾರೆ. ಅಮ್ಮ ನೀಡಿದ ದುಡ್ಡಿನಲ್ಲಿ ಓದು ಮುಗಿಸಿ, ಜಾಬ್ ಗಿಟ್ಟಿಸಿಕೊಂಡು ಮಾರ್ಡನ್ ಬಟ್ಟೆ ತೊಟ್ಟು, ಹೈ ಹೀಲ್ಸ್ ಧರಿಸಿದ ನಂತ್ರ ಅಮ್ಮನನ್ನೇ ಮರೆತುಬಿಡುವವರು. ನನ್ನ ಅಮ್ಮ ಈಕೆ ಎಂದು ಪರಿಚಯಿಸಿಕೊಳ್ಳೋಕು ನಾಚಿಕೆ. ಅಮ್ಮನಿಗೆ ಓದು ಬರಲ್ಲ, ಬರೀ ಸೀರೆ ಉಡ್ತಾಳೆ ಅಂತ ರೇಜಿಗೆ. ಇಂಗ್ಲಿಷ್ ಮಾತನಾಡಿದ್ರೆ ಕಣ್ಣು ಬಾಯಿ ಬಿಡ್ತಾಳೆ ಅನ್ನೋ ಹಿಂಜರಿಕೆ. ಹಾಗಿದ್ರೆ ಅಮ್ಮನಿಗೆ ಇಂಗ್ಲಿಷ್ ಬರಲ್ಲಾಂದ್ರೆ ನಾಚಿಕೆ ವಿಷ್ಯಾನ?
ಸ್ಕೂಲ್ ಮೆಟ್ಟಿಲು ಹತ್ತಿದ ಭಾಗ್ಯ, ಮಗಳು ತನ್ವಿ ಸಿಟ್ಟು
ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಅಂಥದ್ದೇ ಸೀನ್ ಕ್ರಿಯೇಟ್ ಆಗಿದೆ. ಮಗಳು (Daughter) ತನ್ವಿಗೆ ಅಮ್ಮನನ್ನು ಕಂಡ್ರೆ ಆಗಲ್ಲ. ಒಂಭತ್ತನೇ ಕ್ಲಾಸ್ ಓದಿದ ಅಮ್ಮನಿಗೆ ಮ್ಯಾನರ್ಸ್ ಇಲ್ಲ, ಇಂಗ್ಲಿಷ್ ಓದೋಕೆ ಬರಲ್ಲ ಅಂತ ಉರಿದು ಉರಿದು ಬೀಳ್ತಾಳೆ. ಹೀಗಾಗಿಯೇ ಅಮ್ಮ ಸ್ಕೂಲಿಗೆ ಸೇರುವುದು ಆಕೆಯ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದೆ. ಅತ್ತೆ (Mother in law) ಕುಸುಮಾ ಚಾಲೆಂಜ್‌ಗೆ ಮಣಿದು ಭಾಗ್ಯ ಸ್ಕೂಲ್ ಮೆಟ್ಟಿಲು ಹತ್ತಿದ್ದಾಳೆ. ಆದ್ರೆ ಟೀಚರ್ ಅಟೆಂಡೆನ್ಸ್ (Attendance) ತೆಗೆದುಕೊಳ್ಳುವಾಗ ತನ್ವಿ ಇನ್ನೂ ಶಾಲೆಗೆ ಬರದಿದ್ದನ್ನು ತಿಳಿದು ಭಾಗ್ಯ ಕಂಗಾಲಾಗುತ್ತಾಳೆ. ಅವಳನ್ನು ಹುಡುಕಿ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರ ಓಡಿ ಬರುತ್ತಾಳೆ, ಆದರೆ ಎಲ್ಲಿ ಹುಡುಕಿದರೂ, ಯಾರ ಬಳಿ ಕೇಳಿದರೂ ತನ್ವಿ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ತಾಂಡವ್‌ಗೆ ಕರೆ ಮಾಡಿದರೂ ಆತ ಫೋನ್ ರಿಸೀವ್ ಮಾಡುವುದಿಲ್ಲ. ಅಮ್ಮ ಸ್ಕೂಲ್‌ಗೆ ಸೇರಿರುವ ಸಿಟ್ಟಿನಲ್ಲಿ ತನ್ವಿ ಸ್ಕೂಲ್‌ಗೆ ಬಂದಿರುವುದಿಲ್ಲ.
undefined
ತಾಳಿ ಕಟ್ಟಿದ ಕೂಡ್ಲೇ ಗಂಡ ಆಗ್ತಾನಾ? ಸೀರಿಯಲ್ಸ್ ಸಮಾಜಕ್ಕೆ ತಪ್ಪು ಸಂದೇಶ ನೀಡ್ತಿವೆಯಾ?
ನನ್ನಮ್ಮ ದಡ್ಡಿ, ಅವಳು ಪಾಸಾಗೋದಿಲ್ಲ ಎಂದು ಬೈಯುತ್ತಿರುವ ತನ್ವಿ
ಪಾರ್ಕ್‌ನಲ್ಲಿ ಕೆಟ್ಟ ಮನಸ್ಥಿತಿಯ ಮಕ್ಕಳ ಜೊತೆ ಕೂತು ತನ್ವಿ ತಾಯಿ ಭಾಗ್ಯಾಗೆ ಬೈಯ್ಯುತ್ತಿದ್ದಾಳೆ. ನನ್ನ ತಂದೆ ಪ್ಯಾಕೆಟ್ ಮನಿ (Pocket Money) ನೀಡುತ್ತಾರೆ, ಅವರು ದೊಡ್ಡ ಆಫೀಸರ್, ಅಮ್ಮ ಎಂದರೆ ನನಗೆ ಇಷ್ಟವಿಲ್ಲ ಎಂದು ಸ್ನೇಹಿತರ ಬಳಿ ಮಗಳು ಹೇಳುವುದನ್ನು ನೋಡಿ ಭಾಗ್ಯ ಗಾಬರಿ ಆಗುತ್ತಾಳೆ, ಅಲ್ಲದೆ ಆ ಸ್ನೇಹಿತರು (Friends) ತನ್ವಿಯ ದುಡ್ಡಿಗಾಗಿ ಆಸೆ ಪಡುವವರು ಎಂದು ತಿಳಿದು ಅವಳಿಗೆ ಬೇಸರವಾಗುತ್ತದೆ. ತನ್ನಮ್ಮ ದಡ್ಡಿ, ಅವಳು ಪಾಸಾಗೋದಿಲ್ಲ ಅನ್ನೋ ಮಾತನ್ನೆಲ್ಲ ತನ್ನ ಅಮ್ಮನ (Mother) ಎದುರೇ ತನ್ವಿ ಹೇಳುತ್ತಿರುವಾಗ ಭಾಗ್ಯಾಗೆ ಅವಧೂತರೊಬ್ಬರು ಹೇಳಿದ ಮಾತು ನೆನಪಾಗುತ್ತೆ. ಅವರು, ತಾಯಿ ಅಂದರೆ ಸೌಮ್ಯ ಸರಸ್ವತಿ ಅಷ್ಟೇ ಅಲ್ಲ, ಅವಳು ದುರ್ಗಿಯೂ ಆಗಬೇಕು ಅನ್ನೋ ಮಾತು ಹೇಳಿದ್ದಾರೆ. ಇಲ್ಲಿಂದ ಭಾಗ್ಯನ ಸ್ವಭಾವ ಬದಲಾಗುತ್ತೆ.
ಅಮ್ಮನಿಗೆ ಇಂಗ್ಲಿಷ್ ಬರಲ್ಲಾಂದ್ರೆ ನಾಚಿಕೆ ವಿಷ್ಯಾನ?
ಅಮ್ಮನ ಬಗ್ಗೆ ನಾಚಿಕೆ ಪಟ್ಟುಕೊಳ್ಳುವವರಿಗೆ. ನೀವು ಸಹ ಹುಟ್ಟಿನಿಂದಲೇ ಮ್ಯಾನರ್ಸ್ ಕಲಿತಿದ್ರಾ, ಇಂಗ್ಲಿಷ್ ಬರ್ತಿತ್ತಾ. ಬ್ರಾಂಡೆಡ್ ಡ್ರೆಸ್, ಸ್ಯಾಂಡಲ್ಸ್, ಶೂ ಹಾಕಿ ಓಡಾಡ್ತಿದ್ರಾ. ಏನೂ ಅಲ್ಲದ ನೀವು ಇಷ್ಟರಮಟ್ಟಿಗೆ ಬೆಳೆದಿದ್ದು ಹೇಗೆ? ಅಮ್ಮನಿಂದಲೇ ಅಲ್ಲವಾ..ಆಕೆಯ ತ್ಯಾಗ ಇಲ್ಲದಿದ್ದರೆ ಇದೆಲ್ಲಾ ಸಾಧ್ಯವಿತ್ತಾ. ಗರ್ಭದಲ್ಲಿ ಎಂಟು ತಿಂಗಳು ಹೊತ್ತು ಆ ನಂತರ ಹಲವು ಕಷ್ಟಗಳ ಮಧ್ಯೆ ನಿಮ್ಮನ್ನು ಸಾಕಿ ಬೆಳೆಸಿದಾಗ ಆಕೆ ಅದೆಷ್ಟು ನೋವುಂಡಿರಬಹುದು ನಿಮಗೆ ತಿಳಿದಿದ್ಯಾ? ಆಗ ಆಕೆ ಹಠಮಾರಿ ಮಗು, ಯಾವಾಗ್ಲೂ ಅಳ್ತಿರುತ್ತೆ, ಕಾಯಿಲೆ ಬೀಳುತ್ತೆ, ಮ್ಯಾನರ್ಸ್ ಇಲ್ಲ, ಬೇಗ ಮಾತನಾಡ್ತಿಲ್ಲ, ನಡೀತಿಲ್ಲ ಅಂತ ನಿಮ್ಮನ್ನು ದೂರ ತಳ್ಳಿಲ್ಲ.
Amruthadhare Serial : ಮೂಗು ಮುಚ್ಚಿಕೊಂಡು ಟೇಸ್ಟಿ ಚಿಕನ್ ಕರಿ ಮಾಡ್ತಿದ್ದಾಳೆ ಭೂಮಿ.. ರೆಸಿಪಿ ಇಲ್ಲಿದೆ.
ಹೀಗಿರುವಾಗ ನೀವು ಬೆಳೆದು ಬಂದ ಮೇಲೆ ನೀವು ನಡೆದುಬಂದ ದಾರಿಯೇ ಯಾಕೆ ಮರೆತು ಹೋಗುತ್ತದೆ. ಬಾಳಿಗೆ ಬೆಳಕಾದವಳೇ ಯಾಕೆ ಕೆಟ್ಟವಳೆನಿಸುತ್ತಾಳೆ. ಆಕೆ ಕೈ ಹಿಡಿದು ನೀವು ಹೆಜ್ಜೆಯಿಡಲು ಕಲಿಸಿದ್ದಾಳೆ. ಈಗ ನಿಮ್ಮ ಸರದಿ. ಆಕೆ ನಿಮ್ಮ ತಪ್ಪುಗಳನ್ನು, ಕೊರತೆಗಳನ್ನೆಲ್ಲಾ ಮರೆತು ಒಳ್ಳೆಯದನ್ನು ಮಾತ್ರ ಕಂಡಿದ್ದಾಳೆ. ನಿಮಗೇಕೆ ಹಾಗೆ ಮಾಡಲಾಗದು. ಕೊನೆಗೊಂದು ಮಾತು, ಎಂಥಾ ಹಳ್ಳಿ ಗುಗ್ಗಾಗಿದ್ದರೂ, ಮ್ಯಾನರ್ಸ್ ಇಲ್ಲದಿದ್ದರೂ ನಿಮಗೆ ಕಷ್ಟವಿದೆ ಅನ್ನುವಾಗ ಪ್ರಪಂಚದ ಯಾವುದೇ ಮೂಲೆಯಿಂದಾದರೂ ಓಡಿ ಬರುವವಳು ಅವಳೇ. ಅಮ್ಮ. ಹೊಸ ಬದುಕು, ಹೊಸ ಪರಿಸರದಲ್ಲಿ ಅದೆಷ್ಟೋ ಹೊಸ ಮಂದಿಯ ಪರಿಚಯವಾದರೂ ಇನ್ಯಾರನ್ನೂ ಅಮ್ಮ ಎಂದು ಕರೆಯಲು ಸಾಧ್ಯವೇ ಇಲ್ಲ. ಇದು ನಿಜ ಅಲ್ವಾ?