
8 ವರ್ಷ ಹಳೆಯದಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೆಲವು ಪಾಠಗಳನ್ನು ಕಲಿಸುವ ರೀತಿಯಲ್ಲೇ ಕಲಿಸಿದರೆ ಚೆನ್ನಾ ಎಂಬುದನ್ನು ತೋರಿಸುತ್ತಿದೆ. ಕಾಲೇಜು ಅಂದರೆ ಅದೊಂತರ ಹದಿಹರೆಯದ ವಯಸ್ಸು, ಹುಚ್ಚುಕೋಡಿ ಮನಸ್ಸು, ಮಾಡಬೇಡಿ ಎಂದಿದ್ದಾನೆ ಮಾಡಬೇಕೆನಿಸುವ ಹುಮ್ಮಸ್ಸು, ಯಾರು ಏನೇ ಅಂದರೂ ಆನೆ ನಡೆದಿದ್ದೆ ಹಾದಿ ಎಂಬಂತೇ ಯಾರು ಹೇಳಿದ ಮಾತನ್ನು ಕೂಡ ತಲೆಗೆ ಹಾಕಿಕೊಳ್ಳದೇ ನಾವ್ ಆಡಿದ್ದೆ ಆಟ ಎಂದು ಕೊಂಕಾಡುವ ವಯಸ್ಸು. ಈ ವಯಸ್ಸಲ್ಲಿ ಅಲಂಕಾರ ಮಾಡೋದು ಹೆಚ್ಚು ಕನ್ನಡಿ ಮುಂದೆ ಕುಣಿಯೋದು ಇನ್ನು ಹೆಚ್ಚು. ಹೀಗಿರುವಾಗ ಮಕ್ಕಳ ಈ ಹಾವಳಿಯನ್ನು ನಿಯಂತ್ರಿಸಲು ಮನೆಯಲ್ಲಿ ಪೋಷಕರು ಶಾಲೆಯಲ್ಲಿ ಶಿಕ್ಷಕರು ಬಹಳ ಕಷ್ಟಪಡುತ್ತಿರುತ್ತಾರೆ. ಹೇಳಿದ ಮಾತು ಕೇಳದೇ ಇದ್ದಾಗ ಬೇರೆಯದೇ ತಂತ್ರ ಪ್ರಯೋಗಿಸುತ್ತಾರೆ.
ಅದೇ ರೀತಿ ಇಲ್ಲೊಂದು ವೀಡಿಯೋದಲ್ಲಿ, ಕಾಲೇಜು ಹುಡುಗಿಯರು ಎಷ್ಟು ಹೇಳಿದರೂ ಕೇಳದೇ ತುಟಿಗೆ ದಪ್ಪನೇ ಲಿಫ್ಟಿಕ್ ಬಳಿದು ಕಾಲೇಜು ವಾಶ್‌ರೂಮ್‌ನ ಕನ್ನಡಿಗೆ ಮುತ್ತಿಕ್ಕಿ ಬರುತ್ತಾರೆ. ಇದರಿಂದ ಟಾಯ್ಲೆಟ್ ವಾಶ್‌ರೂಮ್ ಕ್ಲೀನ್ ಮಾಡುವ ವ್ಯಕ್ತಿಗೆ ಈ ಅಂಟಿನಂತಿರುವ ಲಿಪ್‌ಸ್ಟಿಕನ್ನು ತೆಗೆದು ಸ್ವಚ್ಛ ಮಾಡಲು ಅರ್ಧ ಗಂಟೆ ಹೆಚ್ಚೆ ಸಮಯ ತಗುಲುತ್ತಿತ್ತು. ಹೀಗಾಗಿ ಆತ ಈ ಬಗ್ಗೆ ಕಾಲೇಜು ಪ್ರಿನ್ಸ್‌ಪಾಲ್‌ಗೂ ಈ ಬಗ್ಗೆ ದೂರು ನೀಡ್ತಾರೆ. ಆದರೆ ಕಾಲೇಜು ವಿದ್ಯಾರ್ಥಿನಿಯರದ್ದು, ಮತ್ತದೇ ದುಂಡಾವರ್ತನೆ, ಕ್ಲೀನರ್ ಹೇಳಿದ್ದನ್ನು ತಾವೇಕೆ ಕೇಳಬೇಕು, ಆತ ಇರುವುದೇ ಸ್ವಚ್ಛಗೊಳಿಸಲು ಎಂಬ ನಿರ್ಲಕ್ಷ್ಯ, ಹೀಗಾಗಿ ಎಷ್ಟು ಹೇಳಿದ್ದರೂ ಈ ವಿದ್ಯಾರ್ಥಿನಿಯರ ಈ ವರ್ತನೆ ಮುಂದುವರೆದಿತ್ತು. ಪ್ರಿನ್ಸಿಪಾಲರೇ ಕರೆದು ವಾರ್ನ್ ಮಾಡಿದ್ರೂ ಕೇಳದ ಈ ಮಕ್ಕಳ ಹಾವಳಿಗೆ ಬುದ್ಧಿ ಕಲಿಸಲು ಸ್ವತಃ ಕ್ಲೀನರ್ ಒಂದು ನಿರ್ಧಾರಕ್ಕೆ ಬಂದಿದ್ದರು.
ಪ್ರಾಂಶುಪಾಲರೆದುರೇ ಕಾಲೇಜು ವಿದ್ಯಾರ್ಥಿಗಳನ್ನು ವಾಶ್‌ರೂಮ್‌ಗೆ ಕರೆಸಿ ಈ ರೀತಿ ನೀವು ಲಿಪ್ಸ್ಟಿಕ್ ಹಾಕಿ ಕನ್ನಡಿಗೆ ಮುತ್ತಿಕ್ಕುವುದರಿಂದ ಅದನ್ನು ಸ್ವಚ್ಛ ಮಾಡಲು ತನಗೆ ಅರ್ಧ ಗಂಟೆ ಹೆಚ್ಚು ಸಮಯ ಬೇಕು ನಾನು ಪ್ರತಿದಿನ ಲೇಟಾಗಿ ಕೆಲಸದಿಂದ ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳಿದ ಕ್ಲೀನರ್ ಈ ವಿದ್ಯಾರ್ಥಿನಿಯರಿಗೆ ತಾನು ಹೇಗೆ ಈ ಲಿಫ್ಸ್ಟಿಕ್ ತುಂಬಿದ ಕನ್ನಡಿಯನ್ನು ಕ್ಲೀನ್ ಮಾಡುವೆ ಎಂಬುದರ ಪ್ರಾತ್ಯಕ್ಷಿಕೆ ತೋರಿಸಲು ಮುಂದಾಗುತ್ತಾರೆ. ಕ್ಲೀನ್ ಮಾಡುವ ಬ್ರಶನ್ನು ಸೀದಾ ಟಾಯ್ಲೆಟ್ ಕಾಮೋಡ್‌ಗೆ ಅದ್ದಿದ ಆತ ಸೀದಾ ತೆಗೆದುಕೊಂಡು ಬಂದು ಲಿಪ್ಸ್ಟಿಕ್ ತುಂಬಿದ ಕನ್ನಡಿಯನ್ನು ಸ್ವಚ್ಚಗೊಳಿಸುತ್ತಾನೆ. ಇದನ್ನು ನೋಡಿದ ವಿದ್ಯಾರ್ಥಿನಿಯರು ಬಾಯಿಗೆ ಕೈ ಹಿಡಿದು ಅಲ್ಲಿಂದ ಓಡುತ್ತಾರೆ....!
ಯಾವುದೋ ಸಿನಿಮಾ ಅಥವಾ ಸೀರಿಸ್ ಒಂದರ ತುಣುಕು ಈ ವೀಡಿಯೋ ಆಗಿದ್ದುಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗಿಯಬೇಕು ಎಂಬ ಗಾದೆ ಮಾತಿದೆ. ಕೆಲವೊಮ್ಮೆ ಸಮಾಧಾನವಾಗಿ ಹೇಳಿದ್ದನ್ನು ಕೇಳದೇ ಇದ್ದಾಗ ಬೇರೆಯದೇ ವಿಭಿನ್ನ ಮಾರ್ಗವನ್ನು ಹಿಡಿಯಬೇಕಾಗುತ್ತದೆ. ಅದೇ ರೀತಿ ಇಲ್ಲಿ ಕ್ಲೀನರ್ ಮಾಡಿದ ಈ ಕೆಲಸದಿಂದ ವಿದ್ಯಾರ್ಥಿನಿಯರು ಮತ್ತೆಂದು ಕನ್ನಡಿಗೆ ಮುತ್ತಿಡಲು ಹೋಗಲಾರರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಕ್ಲೀನರ್‌ನ ಪಾಠ ಕಲಿಸುವ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೆಂದು ಈ ಸಹೋದರನಿಗೆ ಕನ್ನಡಿಯನ್ನು ಸ್ವಚ್ಛ ಮಾಡುವ ಕೆಲಸ ಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವೊಂದು ಬದುಕಿನ ಪಾಠಗಳನ್ನು ಪುಸ್ತಕಗಳು ಕಲಿಸಲಾಗುವುದಿಲ್ಲ ಎಂದು ಈ ವೀಡಿಯೋ ನೋಡಿದ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಒಟ್ಟಿನಲ್ಲಿ ಈ ವೀಡಿಯೋ ಬಗ್ಗೆ ನಿಮ್ಮೆ ಅಭಿಪ್ರಾಯವೇನು ಕಾಮೆಂಟ್ ಮಾಡಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.