ಎಲ್ಲರನ್ನೂ, ಎಲ್ಲವನ್ನೂ ಪ್ರಾಮುಖ್ಯವಾಗಿಸುವ ಜಂಜಾಟದಲ್ಲಿ ನಮ್ಮನ್ನೇ ನಾವು ಕಡೆಗಣಿಸಿದ್ದೇವೆ. ಇತರರ ಬದುಕನ್ನು ಸುಲಭ ಮಾಡಿದ್ದರಿಂದ ನಮ್ಮ ಬದುಕನ್ನು ಅವರೆಲ್ಲ ಸೇರಿ ಸುಲಭಗೊಳಿಸುತ್ತಾರೆಂದುಕೊಳ್ಳುವುದು ಭ್ರಮೆ. ನಮಗೆ ಕನಿಷ್ಠ ಪಕ್ಷ ನಾವೂ ಇಲ್ಲವಾಗಿದ್ದೇವೆ.
ನಾವು ಗೆಳತಿಯರೆಲ್ಲ ಒಟ್ಟಿಗೆ ಸೇರಿದರೆ ಹರಟೆಗೆ ಬರವಿಲ್ಲ. ಮದುವೆಗೂ ಮುನ್ನ ಈ ಹರಟೆ ಹುಡುಗರು, ಪ್ರೀತಿ ಗೀತಿ ಇತ್ಯಾದಿ ಎಂದು ಮಜವಾಗಿರುತ್ತಿತ್ತು. ಆದರೆ, ಈಗ ಒಟ್ಟಾದ್ರೆ ಮಾತು ಎಷ್ಟೊಂದು ಬದಲಾಗಿದೆ ಎಂದರೆ, ಎಲ್ಲರಿಗೂ ತಮ್ಮ ಅತ್ತೆಯ ಮೇಲೆ ದೂರು, ಕೆಲಸದಲ್ಲಿ ತೃಪ್ತಿಯಿಲ್ಲ, ಬಿಡುವ ಮನಸ್ಸಿಲ್ಲ, ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲು, ಹಾಗಂಥ ಅವಕ್ಕೇನೂ ಕಡಿಮೆಯಾಗುವಂತಿಲ್ಲ, ಪತಿಯ ನಿರೀಕ್ಷೆಗಳನ್ನು ಪೂರೈಸಲು ಹಗಲಿರುಳೂ ಒದ್ದಾಟ, ಈ ಮಧ್ಯೆ ನಲುಗುತ್ತಿರುವ ನಮ್ಮ ಕನಸುಗಳಿಗೆ ಮತ್ತೆ ನೀರುಣಿಸಿ ಬದುಕಿಸಿಕೊಳ್ಳುವ ಹೋರಾಟ... ಸಮಾಜದ ದೃಷ್ಟಿಯಲ್ಲಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿರುವ ಸೂಪರ್ ವುಮನ್ ವರ್ಗದವರೇ ಎಲ್ಲ. ಈ ಹೆಸರೇ ಹೆಗ್ಗಳಿಕೆ ಎಂದು ಪಡೆಯಲು ಒದ್ದಾಡಿದ್ದಲ್ಲವೇ? ಆದರೆ, ಹೀಗೆ ಸೂಪರ್ ವುಮನ್ ಎನಿಸಿಕೊಳ್ಳಲು, ಎಲ್ಲ ಜವಾಬ್ದಾರಿಗಳನ್ನೂ ಪರ್ಫೆಕ್ಟ್ ಆಗಿ ನಿಭಾಯಿಸಲು ಪಡಿಪಾಟಲೆಷ್ಟು?
ಎದ್ದಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೂ ಟು ಡು ಲಿಸ್ಟ್‌ನಲ್ಲಿನ ಎಲ್ಲವನ್ನೂ ಮುಗಿಸುವ ತವಕ, ನಿಭಾಯಿಸಲಾಗದ ಅಸಹಾಯಕತೆ, ಎಲ್ಲವನ್ನೂ ಮಾಡಲು ಹೋಗಿ ಯಾವುದನ್ನೂ ಸರಿಯಾಗಿ ಮಾಡಲಾಗದ ಅಳಲು, ಮಧ್ಯೆ ಸುಸ್ತೆಂದು ಅಪ್ಪಿತಪ್ಪಿ 1 ಗಂಟೆ ಮಲಗಿದರೆ ಸಮಯ ವ್ಯರ್ಥ ಮಾಡುತ್ತಿದ್ದೇವೇನೋ ಎಂಬ ಪಶ್ಚಾತ್ತಾಪ, ಇಷ್ಟೆಲ್ಲದರ ಮಧ್ಯೆಯೂ ಕೊಡುತ್ತಿರುವ ಸಮಯ ಸಾಲದೆಂಬ ಮಕ್ಕಳು, ಪತಿರಾಯ, ಮಾಡುವ ಮನೆ ಕೆಲಸಕ್ಕೆ ಕೊಂಕಾಡುವ ಅತ್ತೆ...
ಗ್ರೆನೇಡ್ ದಾಳಿಯಲ್ಲಿ ಈಕೆ ಕಳೆದುಕೊಂಡಿದ್ದ ಕೈ ಮಾತ್ರ: ಆದರೆ ನಿಲ್ಲಲ್ಲಿಲ್ಲ ಬದುಕು ಕ್ಷಣಮಾತ್ರ
undefined
ನಮಗೆ ನಾವೂ ಇಲ್ಲ
ಒಟ್ಟಿನಲ್ಲಿ ಸೂಪರ್ ವುಮನ್ ಎಂಬುದೊಂದು ಸಿಂಡ್ರೋಮ್ ಅಷ್ಟೇ. ಇದೇನು ಜೀವ ಕಸಿಯುವುದಿಲ್ಲ, ಆದರೆ ಸಂತೋಷ, ಶಾಂತಿ, ನೆಮ್ಮದಿಯನ್ನಂತೂ ಖಂಡಿತಾ ಉಳಿಸುವುದಿಲ್ಲ.
ಎಲ್ಲ ಜವಾಬ್ದಾರಿಗಳನ್ನೂ ಪರ್ಫೆಕ್ಟ್ ಆಗಿ ನಿಭಾಯಿಸಿದರೆ ಸಂತೋಷವಾಗಿರುತ್ತೇವೆಂದುಕೊಂಡಿದ್ದು ನಮ್ಮದೇ ದಡ್ಡತನ. ಹಾಗಂಥ ಇದರಲ್ಲಿ ಮಕ್ಕಳು, ಮನೆಗೆಲಸ, ಉದ್ಯೋಗ, ಪತಿ ಯಾವುದನ್ನೂ ಬಿಡಲೂ ಆಗುವುದಿಲ್ಲವಲ್ಲ ಎಂದು ನೀವು ಕೇಳಬಹುದು. ಖಂಡಿತಾ ಆಗಲ್ಲ, ಆದರೆ, ಇವುಗಳ ಜೊತೆಗೆ ಮತ್ತೊಂದು ಬಿಟ್ಟು ಹೋಗಿದೆ. ಅದೇ ಅರ್ಧ ಸಂತೋಷ ಹಾಳಾಗಲು ಕಾರಣ. ಇನ್ನೂ ಒಂದು ಜವಾಬ್ದಾರಿನಾ ಎಂದು ಬಾಯಿ ಬಾಯಿ ಬಿಡಬೇಡಿ. ಅದು ಜವಾಬ್ದಾರಿಯಲ್ಲ, ಜರೂರತ್ತಾಗಿ ಮಾಡಬೇಕಾದ ಕೆಲಸ- ಅದೇ ಸೆಲ್ಫ್ ಕೇರ್.
ಹೌದು, ಎಲ್ಲರನ್ನೂ, ಎಲ್ಲವನ್ನೂ ಪ್ರಾಮುಖ್ಯವಾಗಿಸುವ ಜಂಜಾಟದಲ್ಲಿ ನಮ್ಮನ್ನೇ ನಾವು ಕಡೆಗಣಿಸಿದ್ದೇವೆ. ಇತರರ ಬದುಕನ್ನು ಸುಲಭ ಮಾಡಿದ್ದರಿಂದ ನಮ್ಮ ಬದುಕನ್ನು ಅವರೆಲ್ಲ ಸೇರಿ ಸುಲಭಗೊಳಿಸುತ್ತಾರೆಂದುಕೊಳ್ಳುವುದು ಭ್ರಮೆ. ನಮಗೆ ಕನಿಷ್ಠ ಪಕ್ಷ ನಾವೂ ಇಲ್ಲವಾಗಿದ್ದೇವೆ.
ಹೆಣ್ಣೇಕೆ ಲವ್ ಪ್ರಪೋಸ್ ಮಾಡೋದ್ರಲ್ಲಿ ಹಿಂದೆ?
ಸೂಪರ್ ವುಮನ್ ಸಿಂಡ್ರೋಮ್
ಇಂಥದೊಂದು ಮಾನಸಿಕ ಕಾಯಿಲೆ ಹುಟ್ಟಿಕೊಳ್ಳಲು ಕಾರಣ ನಮ್ಮ ಸಮಾಜ. ಈಗೀಗ ಎಲ್ಲರೂ ಶಿಕ್ಷಿತ ಮಹಿಳೆಯರು, ದೊಡ್ಡ ದೊಡ್ಡ ಹುದ್ದೆಗೇರುವವರನ್ನು ತಲೆಯೆತ್ತಿ ಹೆಮ್ಮೆಯಿಂದ ನೋಡುತ್ತೇವೆ. ಒಳ್ಳೆಯ ಬೆಳವಣಿಗೆಯೇ. ಆದರೆ ಈ ಸಮಾಜಕ್ಕೆ ನಿರೀಕ್ಷೆಗಳು ಬಹಳ. ಸಾಧನೆಯಷ್ಟೇ ಅದಕ್ಕೆ ಸಾಕಾಗದು. ಹೆಣ್ಣು ಎಂದ ಮೇಲೆ ಆಕೆ ಏನೇನು ಮಾಡಬೇಕು, ಏನೇನು ಮಾಡಬಾರದು, ಏನು ತೊಡಬೇಕು, ಏನು ತೊಡಬಾರದು ಎಲ್ಲವನ್ನೂ ಹೇರಲಾರಂಭಿಸುತ್ತದೆ. ಸಮಾಜದ ನಿರೀಕ್ಷೆಗಳನ್ನು ಭರಿಸುವ ಭರದಲ್ಲಿ ನಾವು ಜಿದ್ದಿಗೆ ಬೀಳುತ್ತಿದ್ದೇವೆ. ಹಾಗಂಥ ಕೇವಲ ಉದ್ಯೋಗಿ ಮಹಿಳೆಯರ ಪಾಡಲ್ಲ ಇದು, ತಾಯಂದಿರು, ಪತ್ನಿ, ಉದ್ಯೋಗಿಗಳು, ಹೋಂಮೇಕರ್ಸ್, ಕ್ರೀಡಾಪಟುಗಳು, ನಾಯಕಿಯರು, ನೀವು, ನಾನು ಪ್ರತಿಯೊಬ್ಬರೂ ಈ ಸೂಪರ್ ವುಮನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದವೆ. ಈ ಬಗ್ಗೆ ಮರಾಠಿಯಲ್ಲಿ 'ಉಂಬರಟಾ' ಎಂಬ ಚೆಂದದ ಸಿನಿಮಾವಿದೆ. ಸಾಧ್ಯವಾದರೆ ನೋಡಿ.
ಏನೇನು ಲಕ್ಷಣಗಳು?
ಸದಾ ಕಿರಿಕಿರಿ, ನಿದ್ರಾ ಸಮಸ್ಯೆಗಳು, ಆತಂಕ, ತಮ್ಮ ಬಗ್ಗೆ ಅಪನಂಬಿಕೆ, ಸುಸ್ತು, ಅಸಮಾಧಾನ, ದೈಹಿಕ ಕಾರಣಗಳಿಲ್ಲದ ನೋವುಗಳು, ಏಕಾಗ್ರತೆಯ ಕೊರತೆ, ಸ್ಮರಣ ಶಕ್ತಿ ಸಮಸ್ಯೆಗಳು, ಸದಾ ಅಸಂತೋಷ. ಹಲವಷ್ಟು ವಿಷಯಗಳನ್ನು ನಿಭಾಯಿಸುವಾಗ ಕೆಲವಾರು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಾಗುವುದು ಸಾಮಾನ್ಯವೇ. ಹೀಗೆ, ಸೂಪರ್ ವುಮನ್ ಸಿಂಡ್ರೋಮ್ ನಿಮ್ಮನ್ನು ಕಾಡುತ್ತಿದ್ದರೆ ತಕ್ಷಣ ಒಂದಿಷ್ಟು ಕ್ರಮಕ್ಕೆ ಮುಂದಾಗಿ.
ಹೀಗ್ ಮಾಡಿ
- ಮೊದಲು ಎಲ್ಲವನ್ನೂ ನೀವೊಬ್ಬರೇ ಮಾಡಲಾಗದು ಎಂಬುದನ್ನು ಒಪ್ಪಿಕೊಳ್ಳಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಬೇಕಾದ ಸಹಾಯ ಯಾಚಿಸಿ.
- ರಿಯಲಿಸ್ಟಿಕ್ ಆಗಿರುವಂಥ, ಪೂರೈಸಲು ಸಾಧ್ಯವಾಗುವಂಥ ಗುರಿಗಳನ್ನು ಹಾಕಿಕೊಳ್ಳಿ. ಹೀಗೆ ಗುರಿಗಳನ್ನು ಹಾಕಿಕೊಳ್ಳುವಾಗ ನಿಮ್ಮ ಆಸೆ, ಕನಸುಗಲಿಗೆ ಪ್ರಾಧಾನ್ಯತೆ ನೀಡಿ.
- ನಿಮ್ಮ ಹವ್ಯಾಸಗಳಿಗೆ ಹಾಗೂ ವ್ಯಾಯಾಮಕ್ಕೆ ಪ್ರತಿದಿನ ಸ್ವಲ್ಪ ಸಮಯ ನೀಡಿಕೊಳ್ಳಿ.
- ನನ್ನ ಕೆಲಸ ನಾನು ಮಾಡುತ್ತೇನೆ, ಫಲಿತಾಂಶ ದೇವರಿಗೆ ಬಿಟ್ಟಿದ್ದು ಎಂಬಂಥ ಚಿಂತನೆ ಬೆಳೆಸಿಕೊಳ್ಳಿ. ಇದರಿಂದ ಒತ್ತಡ ಹೆಗಲೇರುವುದಿಲ್ಲ.
- ಏನೇ ಮಾಡಿದರೂ ಅದು ನಿಮಗೆ ಖುಷಿ ನೀಡುತ್ತಿದೆಯೇ ಅಥವಾ ಒತ್ತಾಯಕ್ಕಾಗಿ ಮಾಡುತ್ತಿದ್ದೀರೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಿ. ಆಗ ನಿಮಗೇ ಎಲ್ಲಿ ಏನು ಬದಲಿಸಿಕೊಳ್ಳಬೇಕೆಂದು ತಿಳಿಯುತ್ತದೆ.
- ಪರ್ಫೆಕ್ಷನಿಸಂ ಎಂಬ ಪದವನ್ನು ನಿಮ್ಮ ಜೀವನದಿಂದ ದೂರವಿಡಿ. ಏಕೆಂದರೆ ಪರ್ಫೆಕ್ಷನ್ ಎಂಬುದೊಂದು ಭ್ರಮೆ. ಹಲವಾರು ಕೆಲಸಗಳನ್ನು ಮಾಡುತ್ತಾ ಪರ್ಫೆಕ್ಷನ್ ಸಾಧಿಸುವುದು ಸಾಧ್ಯವೂ ಇಲ್ಲ, ಹಾಗೊಂದು ವೇಳೆ ಸಾಧಿಸಿದರೆ, ಮುಂದೆ ಅದಕ್ಕೆ ಬೆಳವಣಿಗೆ ಎಂಬುದು ಇರುವುದಿಲ್ಲ.
ದುಡ್ಡು ಇರೋನೇ ಬೇಕು ಎಂದು ಹೆಣ್ಣು ಬಯಸೋದ್ರಲ್ಲಿ ತಪ್ಪೇನು?
ನಿಮ್ಮ ಬಗ್ಗೆ ನೀವು ಯೋಚಿಸುವುದು ಕಂಡಿತಾ ಸ್ವಾರ್ಥವಲ್ಲ. ಸೆಲ್ಫೆ ಕೇರ್ ಎಂಬುದು ಬಹಳ ಮುಖ್ಯ. ಇತರರ ಸಂತೋಷದ ಬಗ್ಗೆ ಯೋಚಿಸುವಾಗ, ನೀವು ಪ್ರತಿದಿನ ಕನ್ನಡಿಯಲ್ಲಿ ಕಾಣುವ ಮುಖದಲ್ಲಿ ಸಂತೋಷವಿದೆಯೇ ಎಂಬುದನ್ನು ಹುಡುಕಿ. ಏಕೆಂದರೆ ನಿಮ್ಮಲ್ಲೇ ಸಂತೋಷವಿಲ್ಲದಿದ್ದರೆ ಅದನ್ನು ಬೇರೆಯವರಿಗೆ ಕೊಡುವುದಾದರೂ ಹೇಗೆ?