
- ಪ್ರಿಯಾ ಕೆರ್ವಾಶೆ
ಹೆಚ್ ಆರ್ ಲೀಲಾವತಿ ಹುಟ್ಟಿದ್ದು 1934, ಫೆಬ್ರವರಿ 8ಕ್ಕೆ ಅಂತ ವಿಕಿಪೀಡಿಯಾ ಹೇಳುತ್ತೆ. ಸುಗಮ ಸಂಗೀತ ಅಂದರೆ ಇಂದಿಗೂ ಪುಟ್ಟಮಗುವಿನ ಉತ್ಸಾಹದಿಂದ ಮಾತಾಡ್ತಾರೆ. ಪ್ರತಿ ದಿನ ಸಂಜೆ ಮಕ್ಕಳಿಗೆ, ದೊಡ್ಡವರಿಗೆ ಮ್ಯೂಸಿಕ್ ಕ್ಲಾಸ್ ತಗೊಳ್ತಾರೆ. ಹೊಸಬರ ಹಾಡುಗಳನ್ನು ಪಟ್ಟಾಗಿ ಕೂತು ಕೇಳ್ತಾರೆ. ಅಪ್ಪಟ ಶಾಸ್ತ್ರೀಯ ಸಂಗೀತದಿಂದ ಹಿಡಿದು ರವೀಂದ್ರ ಸಂಗೀತ್, ಪಾಪ್, ಜಾಸ್ ಅಂತ ಜಗತ್ತಿನ ಎಲ್ಲ ಬಗೆಯ ಸಂಗೀತಗಳಿಗೂ ಕುತೂಹಲದ ಕಿವಿಯಾಗ್ತಾರೆ. ‘ಸಂಗೀತ ಅಂದರೆ ಅದೇ ಸ್ವರ, ಹಾಡುವ ರೀತಿಯಲ್ಲಿ ಮಾತ್ರ ವ್ಯತ್ಯಾಸ ಇರುತ್ತೆ’ ಅನ್ನುತ್ತಾ ಯಾವುದೋ ಲಹರಿಗೆ ಜಾರುತ್ತಾರೆ. ‘ಹೊಸತು ಎಲ್ಲಿ ಸಿಕ್ಕಿದ್ರೂ ಕಲೀಬೇಕು ಪುಟ್ಟಾ..ಕಲೀತಾನೇ ಇರಬೇಕು. ನಾನೀಗಲೂ ಸಂಗೀತದ ವಿಧೇಯ ವಿದ್ಯಾರ್ಥಿ’ ಎಂಬ ಇವರಿಗೆ ಈಗ 89ರ ಹರೆಯ ಅಂದರೆ ನಂಬಲೇ ಬೇಕು. ಒಂದು ಕಾಲದಲ್ಲಿ ಇವರು ಕರ್ನಾಟಕದ ಲತಾ ಮಂಗೇಶ್ಕರ್ ಅಂತಲೇ ಫೇಮಸ್ ಆದವರು. ಅವರ ಮಾತಲ್ಲೇ ಅವರ ಕಥೆ.
ಉಸಿರಾಡಿದ್ದೇ ಸಂಗೀತವನ್ನು..
ನಮ್ಮ ಮನೆಯಲ್ಲಿ ತಂದೆ, ತಾಯಿ ಎಲ್ಲರೂ ಹಾಡುವವರೇ. ತಂದೆ ಬಾಪೂ ರಾಮಣ್ಣ ಅಂತ. ಬಿಎಂಶ್ರೀ ಅವರ ‘ಇಂಗ್ಲೀಷ್ ಗೀತೆಗಳು’ ಸಂಕಲನದ ಶೇ.99ರಷ್ಟುಕವಿತೆಗಳಿಗೆ ರಾಗ ಸಂಯೋಜನೆ ಮಾಡಿದ್ದರು, ಹಾಡಿದ್ದರು. ಆಗ ಸುಗಮಸಂಗೀತ ಅನ್ನೋ ಪ್ರಕಾರವೇ ಹುಟ್ಟಿರಲಿಲ್ಲ. ಆದರೆ ನಮ್ಮ ಮನೆಯಲ್ಲಿ ಎಲ್ಲ ಬಗೆಯ ಸಂಗೀತ ಕೇಳ್ತಾ ಬೆಳೆದೆ. ಅದು ಶ್ರೇಷ್ಠ, ಇದು ಕನಿಷ್ಠ ಅನ್ನೋ ಭೇದ ಇರಲಿಲ್ಲ. ಆಕಾಶವಾಣಿಗೆ ಎಂಟ್ರಿ ಆಗಿದ್ದೂ ಅಪ್ಪ ಕಲಿಸಿದ ಹಾಡಿನ ಮೂಲಕವೇ. ಆಕಾಶವಾಣಿಯಲ್ಲಿ ಆಗ ಹೆಚ್ಚು ಭಾವಗೀತೆ ಇರಲಿಲ್ಲ. ಆ ಹೊತ್ತಿಗೆ ಪ್ರತಿಭಾ ಶೋಧ ಅಂತ ಮಾಡಿದರು. ನಾನು ಹೈಸ್ಕೂಲ್ ಹುಡುಗಿ. ನಮ್ಮ ಹೈಸ್ಕೂಲಿಂದ ಕರ್ಕೊಂಡು ಆಕಾಶವಾಣಿಗೆ ಕರ್ಕೊಂಡು ಹೋಗಿದ್ರು, ನನಗೆ ಬಹುಮಾನ ಬಂತು. ಆಮೇಲೆ ಒಂದಿನ ಆಕಾಶವಾಣಿಯಿಂದ ಕಾಂಟ್ರಾಕ್ಟ್ ಲೆಟರೂ ಬಂತು. ನಾನು ಆಕಾಶವಾಣಿ ಕುಟುಂಬ ಸೇರಿಕೊಂಡೆ.
ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ
ಅವರ ಹಾಡು ಕೇಳಿ ಹುಚ್ಚಿಯಂತೆ ಅವರನ್ನು ಹುಡುಕಿ ಹೊರಟೆ!
ಅವರ ಹೆಸರು ಎ ವಿ ಕೃಷ್ಣಮಾಚಾರ್. ಬಹುದೊಡ್ಡ ಪಿಟೀಲು ವಿದ್ವಾಂಸರು. ಅನೇಕ ಭಾಷೆ ಬಲ್ಲವರು. ಅವರ ಕಾವ್ಯನಾಮ ಪದ್ಮಚರಣ. ಆಗ ಆಕಾಶವಾಣಿಯಲ್ಲಿದ್ದರು. ನಾನು ಶಾಲೆಯಲ್ಲಿದ್ದೆ. ಅದೊಂದು ದಿನ, ಶಾಲಾ ಕಾರ್ಯಕ್ರಮ ರೇಡಿಯೋದಲ್ಲಿ ಪ್ರಸಾರವಾಗ್ತಿತ್ತು. ನಾವು ಮಕ್ಕಳು ಆ ಹಾಡು ಕೇಳಲೇ ಬೇಕಿತ್ತು. ಹಾಗೆ ಕೇಳಿದ ಹಾಡದು. ಆ ಹಾಡನ್ನು ಕೇಳ್ತಿದ್ದ ಹಾಗೆ ನನ್ನೊಳಗೇ ರೋಮಾಂಚನ. ಹುಚ್ಚು ಹಿಡಿದವಳ ಹಾಗೆ ಆ ಸಂಗೀತಗಾರರನ್ನು ಹುಡುಕಿಕೊಂಡು ಹೊರಟೆ. ಅವರೇ ಪದ್ಮಚರಣರು. ನನಗಾಗ ಹದಿನಾರು ವರ್ಷ ವಯಸ್ಸು. ಅವರ ಬಳಿ ಸಂಗೀತ ಕಲಿಯತೊಡಗಿದೆ. ಒಂದು ಪಿಟೀಲು, ಒಂದು ತಬಲ, ಅಷ್ಟೇ. ಅದರಲ್ಲೇ ಕಲಿಕೆ, ಆಕಾಶವಾಣಿ ರೆಕಾರ್ಡಿಂಗ್‌ಗೂ ಇವೆರಡೇ ಪಕ್ಕವಾದ್ಯಗಳು. ಹೀಗೆ ಶುರುವಾದ ನನ್ನ ಸಂಗೀತ ಯಾತ್ರೆ ಮುಂದುವರಿಯುತ್ತಲೇ ಹೋಯ್ತು. ಆರಂಭದಲ್ಲಿ ಕಾಳಿಂಗ್ ರಾವ್ ಮತ್ತು ನಾನು ಇಬ್ಬರೇ ಹಾಡುತ್ತಿದ್ದೆವು. ಆಕಾಶವಾಣಿಯ ಯಾವ ಕಾರ್ಯಕ್ರಮ ಇದ್ದರೂ ನನಗೆ ಕರೆ ಬರುತ್ತಿತ್ತು. ನಾನು ಬೇರೆ ಕಾರ್ಯಕ್ರಮಗಳಲ್ಲಿದ್ದರೆ ಅಲ್ಲಿಗೇ ಆಕಾಶವಾಣಿಯ ಕಾರು ಬರುತ್ತಿತ್ತು.
ಕರ್ನಾಟಕದ ಲತಾ ಮಂಗೇಶ್ಕರ್ ಆದದ್ದು
ಒಮ್ಮೆ ಆಕಾಶವಾಣಿಗೆ ರಾಜಪ್ಪ ಶೆಟ್ಟರು ಅಂತ ಪ್ರೋಗ್ರಾಂ ಎಕ್ಸಿಕ್ಯುಟಿವ್ ಬಂದ್ರು. ಈ ಹುಡುಗಿ ಇಷ್ಟುಚೆನ್ನಾಗಿ ಹಾಡ್ತಾಳಲ್ಲಾ.. ಅವಳ ದನಿಯಲ್ಲಿ ಹಿಂದಿ ಹಾಡು ಯಾಕೆ ಹಾಡಿಸಬಾರದು ಎಂದು ನನ್ನಿಂದ ಹಿಂದಿ ಗೀತೆಗಳನ್ನು ಹಾಡಿಸಲು ಶುರು ಮಾಡಿದರು. ಹೀಗಾಗಿ ನನ್ನ ನಾಲ್ಕನೇ ಕಾರ್ಯಕ್ರಮವೇ ಹಿಂದಿ ಗೀತೆ ಆಯ್ತು. ಮೊದಲಿಗೆ ಆ ಬಚ್ಚನ್ ಅವರ ಗೀತೆ ಹಾಡಿದೆ. ಬರ್ತಾ ಬರ್ತಾ ಹಿಂದಿ, ಕನ್ನಡ ಎರಡೂ ಗೀತೆಗಳನ್ನೂ ಹಾಡಲು ಶುರು ಮಾಡಿದೆ. ಒಂದು ಹಂತದಲ್ಲಿ ಗೀತೆಗಳು ಜನಪ್ರಿಯವಾದವು. ಆ ಹೊತ್ತಿಗೆ ಜನ ಬೇರೆಯೇ ತಿಳ್ಕೊಂಡರು. ಲೀಲಾವತಿ ಅಂದರೆ ಇಬ್ಬರಿದ್ದಾರೆ. ಒಬ್ಬರು ಹಿಂದಿ ಗೀತೆ, ಭಜನ್ಸ್ ಹಾಡ್ತಾರೆ. ಒಬ್ಬರು ಕನ್ನಡ ಹಾಡ್ತಾರೆ ಅಂತ. ಮುಂದೆ ಹಿಂದಿ ಹಾಡುಗಳು, ಸಿನಿಮಾ ಹಾಡುಗಳು ಜನಪ್ರಿಯವಾದವು. ಒಂದು ಹಂತದಲ್ಲಿ ನನ್ನ ಕರ್ನಾಟಕದ ಲತಾ ಮಂಗೇಶ್ಕರ್ ಅಂತಲೇ ಕರೆಯತೊಡಗಿದರು.
ಕೃತಕ ಬರಹಗಾರ; ಕಂಪ್ಯೂಟರ್ ಕೈ ಬರೆಯುತ್ತದೆ
ಬೇಂದ್ರೆ, ಕುವೆಂಪು, ಜಿಎಸ್‌ಎಸ್ ಪ್ರೀತಿ
ಒಂದು ಕಾರ್ಯಕ್ರಮದಲ್ಲಿ ಬೇಂದ್ರೆಯವರ ಎರಡು ಗೀತೆಗಳನ್ನು ಹಾಡಿದ್ದೆ. ಅದು ಅವರಿಗೆ ಎಷ್ಟುಪ್ರಿಯವಾಯ್ತು ಅಂದರೆ ನಾನು ವೇದಿಕೆ ಇಳಿದದ್ದೇ ನನ್ನ ಕೈಗಳನ್ನು ಹಿಡಿದುಕೊಂಡು, ‘ಎಷ್‌್ಟಛಲೋ ಹಾಡ್ತ್ಯವ್ವಾ ತಾಯಿ..’ ಅಂದರು. ಆ ಕ್ಷಣ ಅವಿಸ್ಮರಣೀಯ. ಕುವೆಂಪು ಅವರ ಅನೇಕ ಗೀತೆಗಳಿಗೆ ದನಿಯಾಗಿದ್ದೇನೆ. ಆಗ ಆಕಾಶವಾಣಿಗೆ ಕುವೆಂಪು ಅವರು, ‘ನನ್ನ ಗೀತೆಗಳನ್ನು ಲೀಲಾವತಿ, ಕಾಳಿಂಗ ರಾಯರನ್ನು ಬಿಟ್ಟು ಬೇರೆಯವರಿಂದ ಹಾಡಿಸುವಂತಿಲ್ಲ’ ಎಂದು ಪತ್ರ ಬರೆದಿದ್ದರು. ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ‘ನನ್ನ ಗೀತೆಗಳನ್ನು ನೀವು ಹಾಡದಿದ್ದರೆ ಅವುಗಳೆಲ್ಲ ಕಪಾಟಿನಲ್ಲಿ ಪುಸ್ತಕಗಳಾಗಿಯಷ್ಟೇ ಉಳಿದು ಬಿಡುತ್ತಿದ್ದವು’ ಎಂದು ಕುವೆಂಪು ಹೇಳಿದ್ದರು. ಜಿಎಸ್‌ಎಸ್ ಅವರ ‘ಉಡುಗಣ ವೇಷ್ಟಿತ ಚಂದ್ರ ಸುಶೋಭಿತ..’ ಹಾಡು ನನ್ನ ದನಿಯಲ್ಲಿ ಬಹಳ ಫೇಮಸ್ ಆಯ್ತು. ಬಹಳ ಆಪ್ತವಾಗಿ ಜಿಎಸ್‌ಎಸ್ ಇದಕ್ಕೆ ಪ್ರತಿಕ್ರಿಯಿಸಿದ್ದರು.
ರಿಯಾಲಿಟಿ ಶೋ ಟ್ರೈನಿಂಗ್ ಕೊಡಲ್ಲ
ರಿಯಾಲಿಟಿ ಶೋ ಬಗ್ಗೆ ನನಗೆ ದ್ವೇಷ ಇಲ್ಲ. ಹಿಂದಿಯ ಕೆಲವು ರಿಯಾಲಿಟಿ ಹಾಡುಗಳನ್ನೂ ನಾನು ಕೇಳ್ತೀನಿ. ಆದರೆ ನಮ್ಮಲ್ಲಿ ಕೆಲವು ಹೆತ್ತವರು ರಿಯಾಲಿಟಿ ಶೋಗಾಗಿಯೇ ಮಕ್ಕಳನ್ನು ರೆಡಿ ಮಾಡ್ತಿದ್ದಾರೆ. ಈಗಿನ ಮಕ್ಕಳೂ ಬಹಳ ಜಾಣರಿದ್ದಾರೆ, ಬಹಳ ಬೇಗ ಕಲಿತುಬಿಡ್ತಾರೆ. ಆದರೆ ಮಕ್ಕಳ ಹಾಡಿಗೂ ಇಷ್ಟುಹಣ ಕೊಡಬೇಕು ಅಂತ ಡಿಮ್ಯಾಂಡ್ ಮಾಡೋ ಹೆತ್ತವರನ್ನು ಕಂಡು ಅಚ್ಚರಿ ಪಟ್ಟಿದ್ದೇನೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.