
ಫಿಟ್‌ನೆಸ್ ಎಂಬುದು ಪ್ರತಿಯೊಬ್ಬರಿಗೂ ಸುಲಭವಾಗಿ ಒಲಿಯುವ ವಿಚಾರವಲ್ಲ. ಆದರೆ, ಕೆಲವರಿಗೆ ಇದು ಪ್ರತಿದಿನವೂ ಸ್ವಇಚ್ಛೆಯಿಂದ ಆಯ್ಕೆ ಮಾಡಿಕೊಳ್ಳುವ ಜೀವನಶೈಲಿಯಾಗಿರುತ್ತದೆ. ಅಹಮದಾಬಾದ್ ಮೂಲದ ಕಂಟೆಂಟ್ ಕ್ರೀಯೇಟರ್, ಫಿಟ್‌ನೆಸ್ ಉದ್ಯಮಿ ಹಾಗೂ ಪ್ರೀತಿಯ ಅಜ್ಜಿಯಾಗಿರುವ ರೇಣು ಸಿಧು ಇದಕ್ಕೆ ಅತ್ಯುತ್ತಮ ಉದಾಹರಣೆ. ಮಾತ್ರವಲ್ಲ ಅನೇಕ ಮಂದಿಗೆ ಈ ಇಳಿವಯಸ್ಸಿನ ಅಜ್ಜಿ ಸ್ಪೂರ್ತಿಯಾಗಿದ್ದಾರೆ.
ಆಗಸ್ಟ್ 30 ರಂದು ರೇಣು ಅವರು ತಮ್ಮ 66ನೇ ಹುಟ್ಟುಹಬ್ಬದ ಅಂಗವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಮೊಮ್ಮಗಳನ್ನು ಎತ್ತಿಕೊಂಡು ಜಿಮ್‌ನಲ್ಲಿ ವರ್ಕ್ಔಟ್ ಮಾಡುತ್ತಿರುವುದನ್ನು ಕಾಣಬಹುದು. ತಮ್ಮ ಅರ್ಧದಷ್ಟು ವಯಸ್ಸಿನ ಯುವಕ-ಯುವತಿಯರೂ ಹುಬ್ಬೇರಿಸುವಂತೆ ಅವರು ಈ ವಯಸ್ಸಿನಲ್ಲೂ ಕಸರತ್ತು ನಡೆಸಿದ್ದಾರೆ.
ವೀಡಿಯೊದಲ್ಲಿ ರೇಣು ಅವರು ತಮ್ಮ ಮೊಮ್ಮಗಳನ್ನು ತೋಳುಗಳಲ್ಲಿ ಹಿಡಿದುಕೊಂಡು ವಿವಿಧ ರೀತಿಯ ಕಠಿಣ ವ್ಯಾಯಾಮಗಳನ್ನು ಸಲೀಸಾಗಿ ಮಾಡಿದ್ದಾರೆ. ಒಂದು ಕೈಯಲ್ಲಿ ಕೆಟಲ್‌ಬೆಲ್ (Kettlebell) ಹಾಗೂ ಇನ್ನೊಂದು ಕೈಯಲ್ಲಿ ಮೊಮ್ಮಗಳನ್ನು ಹಿಡಿದು 'ಬಲ್ಗೇರಿಯನ್ ಸ್ಪ್ಲಿಟ್ ಸ್ಕ್ವಾಟ್ಸ್', ವಿವಿಧ ಮಾದರಿಯ ಸ್ಕ್ವಾಟ್‌ಗಳು ಹಾಗೂ 'ವೇಟೆಡ್ ಹಿಪ್ ಥ್ರಸ್ಟ್' (Weighted Hip Thrusts) ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ವೀಡಿಯೊಗೆ, ಬಲವಾದ ಬೇರುಗಳು ಬಲವಾದ ಕೊಂಬೆಗಳನ್ನು ಬೆಳೆಸುತ್ತವೆ! ಎಂದು ರೇಣು ಶೀರ್ಷಿಕೆ ನೀಡಿದ್ದಾರೆ. ಮುಂದುವರಿದು, ನನ್ನ ಮೊಮ್ಮಗಳು ಶಕ್ತಿಯನ್ನು ಕೇವಲ ಒಂದು ಆಯ್ಕೆಯಾಗಿ ನೋಡದೆ, ಜೀವನದ ಮಾನದಂಡವಾಗಿ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಸ್ನಾಯುಗಳನ್ನು ಬಲಪಡಿಸುವುದು ಕೇವಲ ಫಿಟ್ ಆಗಿ ಕಾಣಲು ಮಾತ್ರವಲ್ಲ, ಅದು ಜೀವಮಾನವಿಡೀ ಉಳಿಯುವ ಆರೋಗ್ಯಕ್ಕೆ ಅಡಿಪಾಯ ಹಾಕಿಕೊಡುತ್ತದೆ ಎಂದು ಬರೆದುಕೊಂಡಿದ್ದಾರೆ.
ನಾಳೆ ನಾನು ಅವಳ ಜೊತೆ ಸಂತೋಷದಿಂದ ಇರಬೇಕೆಂದರೆ, ಇಂದು ನನ್ನ ದೇಹವನ್ನು ದಂಡಿಸಬೇಕು. ನನ್ನ ಆರೋಗ್ಯಕ್ಕಾಗಿ ನಾನು ಶ್ರಮಿಸಿದರೆ ಮಾತ್ರ ಅವಳಿಗಾಗಿಯೂ ಸಮಯ ನೀಡಲು ಸಾಧ್ಯ. ಭವಿಷ್ಯದಲ್ಲಿ ಮೊಮ್ಮಗಳ ಜೊತೆ ಓಡಾಡಲು, ಆಟವಾಡಲು ಹಾಗೂ ಅವಳ ಬೆಳವಣಿಗೆಯ ಪ್ರತಿಯೊಂದು ಮೈಲಿಗಲ್ಲಿನಲ್ಲೂ ಜೊತೆಯಾಗಿರಲು ನಾನು ಬಯಸುತ್ತೇನೆ ಎಂದು ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ರೇಣು ಸಿಧು ಅವರ ಜೀವನ ಪಯಣ ಪ್ರತಿಯೊಬ್ಬರಿಗೂ ಪ್ರೇರಣಾದಾಯಕ. ಮೂರು ಮಕ್ಕಳ ತಾಯಿಯಾಗಿರುವ ಇವರು ಕೇವಲ ಜಿಮ್‌ಗೆ ಹೋಗುವ ಸಾಮಾನ್ಯ ಅಭ್ಯಾಸ ಬೆಳೆಸಿಕೊಳ್ಳಲಿಲ್ಲ. ಬದಲಿಗೆ ಸ್ವತಃ ಜಿಮ್ ಒಂದನ್ನು ಆರಂಭಿಸಿದರು! ತಮ್ಮ 54ನೇ ವಯಸ್ಸಿನಲ್ಲಿ ಅಹಮದಾಬಾದ್‌ನಲ್ಲಿ 'ಸಮುರಾಯ್ ಫಿಟ್‌ನೆಸ್' ಆರಂಭಿಸುವ ಮೂಲಕ ಫಿಟ್‌ನೆಸ್ ಉದ್ಯಮಿಯಾದರು. ಅವರು ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ರೇಣು ಅವರ ಜೀವನ ಶೈಲಿಯಲ್ಲಿ ಸರಳ ತತ್ವವೊಂದಿದೆ, ತಾತ್ಕಾಲಿಕ ಪ್ರೇರಣೆಗಿಂತ (Motivation) ನಿರಂತರ ಶಿಸ್ತು (Discipline) ಮುಖ್ಯ. ಅವರಿಗೆ ಫಿಟ್‌ನೆಸ್ ಎಂಬುದು ಕೇವಲ ಒಂದು ಹವ್ಯಾಸವಲ್ಲ, ಶಿಸ್ತಿನಿಂದ ಕೂಡಿದ ಜೀವನ ಪದ್ಧತಿ. ಇತ್ತೀಚಿನ ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡುವಾಗ, ಫಿಟ್‌ನೆಸ್ ಎಂಬುದು ಹಠಾತ್ ಬಂದು ಹೋಗುವ ಉತ್ಸಾಹದಿಂದ ಸಿಗುವುದಿಲ್ಲ. ಅದು ನಾವು ದಿನನಿತ್ಯ ಕಟ್ಟುನಿಟ್ಟಾಗಿ ರೂಢಿಸಿಕೊಳ್ಳುವ ಅಭ್ಯಾಸಗಳಿಂದ ಹಾಗೂ ಯಾರೂ ನೋಡದಿರುವಾಗ ನಾವು ಮಾಡುವ ಸರಿ ಆಯ್ಕೆಗಳಿಂದ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.