ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

By Suvarna News  |  First Published Jan 4, 2020, 2:43 PM IST

ಗರ್ಭಿಣಿಯರು ಇಬ್ಬರಿಗಾಗಿ ಆಹಾರ ಸೇವಿಸಬೇಕಾ? ಇದೊಂದು ತಪ್ಪು ಕಲ್ಪನೆ. ಇಂಥ ಹಲವಾರು ಅಪಕಲ್ಪನೆಗಳು ನಮ್ಮ ಸಮಾಜದಲ್ಲಿ ಗರ್ಭಿಣಿಯರ ಆಹಾರಸೇವನೆ ಬಗ್ಗೆ ಇವೆ. ಇವುಗಳನ್ನು ನಿವಾರಿಸೋಣ ಬನ್ನಿ.
 


ಗರ್ಭೀಣಿಯರು ಏನು ಮಾಡಬೇಕು, ಏನು ಮಾಡಬಾರದು ಎಂಬ ವಿಚಾರದಲ್ಲಿ ಎಲ್ಲರೂ ನೂರೆಂಟು ಸಲಹೆ ನೀಡುತ್ತಾರೆ.ಅದರಲ್ಲಿ ಆಹಾರ ಸೇವಿಸುವ ಕುರಿತ ಸಲಹೆಗಳೇ ಹೆಚ್ಚು. ಹಲವರು ತಪ್ಪು ಕಲ್ಪನೆಗಳನ್ನು ಬಿತ್ತುತ್ತಾರೆ. ಹೆಚ್ಚಿನವರು, ಮೊದಲ ಬಾರಿ ಮಗುವಿಗೆ ತಾಯಿಯಾಗುತ್ತಿರುವವರು ಇದನ್ನು ನಂಬುವುದು ಹೆಚ್ಚು, ಅಂಥ ನಂಬಿಕೆಗಳನ್ನು ಪುನಃ ಒಂದ್ಸಲ ಚೆಕ್‌ ಮಾಡೋಣ.

Tap to resize

Latest Videos

ತಪ್ಪು: ಎರಡು ಜೀವಗಳಿಗಾಗಿ ತಿನ್ನುವುದು

ಸರಿ: ಗರ್ಭಾವಸ್ಥೆಯಲ್ಲಿ ದೇಹದ ತೂಕ ಸುಮಾರು 10 - 12 ಕಿಲೋದಷ್ಟು ಹೆಚ್ಚಾಗುತ್ತದೆ. ಇದಕ್ಕಿಂತಲೂ ಹೆಚ್ಚು ತೂಕ ಗಳಿಸಿದರೆ ಮಗು ಸ್ಥೂಳಕಾಯ ಹೊಂದುವ ಸಾಧ್ಯತೆಗಳಿವೆ. ನಿಮ್ಮ ರಕ್ತದೊತ್ತಡ, ಕೊಲೆಸ್ಟ್ರಾಲ್‌ ಕೂಡ ಹೆಚ್ಚಾಗಬಹುದು. ಮೊದಲ ಮೂರು ತಿಂಗಳಲ್ಲಿ ಮಗುವಿಗಾಗಿ ಹೆಚ್ಚಿನ ಆಹಾರ ಸೇವಿಸುವ ಅಗತ್ಯವಿಲ್ಲ. ನಾಲ್ಕನೇ ತಿಂಗಳಿನ ಬಳಿಕ ಮಗುವಿಗಾಗಿ ಹೆಚ್ಚಿನ ಕ್ಯಾಲೊರಿ ಸೇವಿಸಬೇಕು. ಸರಾಸರಿ 300 ಕ್ಯಾಲೊರಿಯಷ್ಟು ಹೆಚ್ಚು ಸೇವಿಸಿದರೆ ಸಾಕು. ಕಡಿಮೆ ಕಾರ್ಬೋಹೈಡ್ರೇಟ್‌ ಮತ್ತು ಹೆಚ್ಚಿನ ಪ್ರೋಟೀನ್‌ ಆಹಾರಕ್ಕೆ ಒತ್ತು ನೀಡಬೇಕು.

ತಪ್ಪು: ಕಬ್ಬಿಣದ ಪೋಷಕಾಂಶ ಕಡಿತ

ಸರಿ: ಮೊದಲ ಮೂರು ತಿಂಗಳಲ್ಲಿ ವಾಕರಿಕೆ ಮತ್ತು ಮಲಬದ್ಧತೆ ಕಾಡಬಹುದು, ಇದಕ್ಕಾಗಿ ಮಹಿಳೆಯರು ಕಬ್ಬಿಣದ ಅಂಶ ಸೇವನೆ ನಿಲ್ಲಿಸುತ್ತಾರೆ. ಅದು ತಪ್ಪು. ತಾಯಿಯಲ್ಲಿ ಯಾವಾಗಲೂ ರಕ್ತದ ಪ್ರಮಾಣ ಹೆಚ್ಚಿರಬೇಕು. ರಕ್ತ, ಹಿಮೋಗ್ಲೋಬಿನ್‌ ಅಂಶ, ಭ್ರೂಣದ ರಕ್ತಪರಿಚಲನಾ ವ್ಯವಸ್ಥೆಯ ಬೆಳವಣಿಗೆ ಮತ್ತು ಭ್ರೂಣದ ಕಬ್ಬಿಣದಂಶ ಇತ್ಯಾದಿಗಳಿಗಾಗಿ ಐರನ್‌ ಕಂಟೆಂಟ್‌ ಹೆಚ್ಚಾಗಿ ಸೇವಿಸಬೇಕು. ಒಂದು ಸರಳ ಪರಿಹಾರವೆಂದರೆ ಮಲಗುವ ಸಮಯದಲ್ಲಿ ಐರನ್‌ ಕ್ಯಾಪ್ಸೂಲ್‌ ಸೇವಿಸುವುದು ಆಹಾರದಲ್ಲಿ ನಾರಿನಂಶ ಹೆಚ್ಚಿಸುವುದು. ಒಣ ಹಣ್ಣುಗಳು, ಬೀನ್ಸ್‌ ಮತ್ತು ಹಸಿರು ಎಲೆ ತರಕಾರಿ ಪ್ರತಿದಿನ ಸೇವಿಸಿ.

ತಪ್ಪು: ಫೋಲಿಕ್‌ ಆ್ಯಸಿಡ್‌ ಕಡಿತ

ಸರಿ: ಫೋಲಿಕ್‌ ಆ್ಯಸಿಡ್‌ ಗರ್ಭಿಣಿಗೆ ಅತ್ಯಗತ್ಯ. ಏಕೆಂದರೆ ಇದು ಮಗುವಿನ ನರಮಂಡಲದ ಆರೋಗ್ಯಕರ ಬೆಳವಣಿಗೆಗೆ ಅವಶ್ಯಕವಾಗಿದೆ, ಇದು ಭ್ರೂಣದ ಮೊದಲ 45 ದಿನಗಳಲ್ಲಿ ಅಗತ್ಯವಾಗಿ  ಬೇಕು. ವಾಸ್ತವವಾಗಿ, ನೀವು ಮಗುವನ್ನು ಹೊಂದಲು ಯೋಜಿಸುತ್ತಿರುವಾಗಲೇ ಫೋಲಿಕ್‌ ಆ್ಯಸಿಡ್‌ ಸೇವಿಸುವುದು ಒಳ್ಳೆಯದು. ಫೋಲಿಕ್‌ ಆಮ್ಲವು ಹಸಿರು ತರಕಾರಿ, ಪಾಲಕ್‌, ಕಿತ್ತಳೆ ರಸ, ದ್ವಿದಳ ಧಾನ್ಯಗಳು, ಬೀಜಗಳು, ಹಣ್ಣು ಮತ್ತು ಹಾಲಿನಲ್ಲಿರುತ್ತದೆ.

ಅಬ್ಬಬ್ಬಾ! ಮಗು ಹೆರಬೇಕಂದ್ರೆ ದೇಹ ಇಷ್ಟೆಲ್ಲ ಬದಲಾಗಬೇಕು

ತಪ್ಪು: ಕ್ಯಾಲ್ಸಿಯಂ ಸೇವನೆ ಕಡಿತ

ಸರಿ: ಕ್ಯಾಲ್ಸಿಯಂ ತಾಯಿಗೆ ಅಗತ್ಯವಿರುವ ಖನಿಜಾಂಶ. ಗರ್ಭಾವಸ್ಥೆಯಲ್ಲಿ ಸುಮಾರು ಕ್ಯಾಲ್ಸಿಯಂ 1,200 ಮಿಗ್ರಾಂ ಆದರೂ ಸೇವಿಸಬೇಕು. ಅಂದರೆ ನಿತ್ಯದ ಅಗತ್ಯಕ್ಕಿಂತ 400 ಮಿಗ್ರಾಂ ಹೆಚ್ಚು. ಕೆನೆರಹಿತ ಹಾಲು, ಬೆಣ್ಣೆ, ಮೊಸರು, ಪುಡಿಂಗ್‌ ಇತ್ಯಾದಿ ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಅಧಿಕ. ಕೋಸುಗಡ್ಡೆ, ಬೀನ್ಸ್‌, ಎಳ್ಳು, ಅಂಜೂರದ ಹಣ್ಣು, ಬೀನ್ಸ್‌, ಬಾದಾಮಿ ಮತ್ತು ಕಿತ್ತಳೆ ರಸದಲ್ಲಿ ಕ್ಯಾಲ್ಸಿಯಂ ಇರುತ್ತೆ.

ತಪ್ಪು: ಬ್ರೇಕ್‌ಫಾಸ್ಟ್‌ ಮೊಟಕು

ಸರಿ: ರಕ್ತದಲ್ಲಿರುವ ಗ್ಲೂಕೋಸ್‌ (ಸಕ್ಕರೆ) ಮಟ್ಟವನ್ನು ಕಾಪಾಡಿಕೊಳ್ಳಲು ಗರ್ಭಿಣಿಯರು ಮೂರು ಸಣ್ಣ ಊಟ ಮತ್ತು ಎರಡು ತಿಂಡಿಗಳನ್ನು ನಿಯಮಿತವಾಗಿ ಸೇವಿಸಬೇಕು. ಆದರೆ ಅನೇಕ ಮಹಿಳೆಯರು ಬೆಳಗ್ಗಿನ ಬ್ರೇಕ್‌ಫಾಸ್ಟ್‌ ಬಿಟ್ಟುಬಿಡುತ್ತಾರೆ. ಅದು ಒಳ್ಳೆಯದಲ್ಲ. ಬೆಳಿಗ್ಗೆ ನಿಮ್ಮ ದೇಹ ಆಹಾರವನ್ನು ಕೇಳುತ್ತಿರುತ್ತದೆ. ಆಗ ಅದಕ್ಕೆ ಅಗತ್ಯ ಕ್ಯಾಲೊರಿ ಪೂರೈಸಬೇಕು.

ತಪ್ಪು: ವೈನ್‌ ಸೇವನೆ

ಸರಿ: ಕೆಲವರು ವೈದ್ಯರು, ಗರ್ಭಿಣಿಯರು ವೈನ್‌ ಸೇವಿಸಬಹುದು ಎಂದು ಹೇಳುತ್ತಾರೆ. ಆದರೆ, ಇದು ಗರ್ಭಿಣಿಯರ ಹಾಗೂ ಮಗುವಿನ ಆರೋಗ್ಯಕ್ಕೆ ಪೂರಕವೋ ಮಾರಕವೋ ಎಂಬುದ ಅಧ್ಯಯನಗಳಿಂದ ಇನ್ನೂ ನಿರ್ಧಾರವಾಗಿಲ್ಲ. ಆದ್ದರಿಂದ, ಅದನ್ನು ತಪ್ಪಿಸುವುದು ಉತ್ತಮ.

click me!