
ಬೆಂಗಳೂರು (ಅ.15): ಒಂದು ಕಾಲದ ಆಪ್ತ ಮಿತ್ರರಾಗಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (ತಾಲಿಬಾನ್ ಆಡಳಿತ) ನಡುವೆ ಭೀಕರ ಸಂಘರ್ಷ ಭುಗಿಲೆದ್ದಿದೆ. ಯಾವ ಉಗ್ರ ಸಂಘಟನೆಯನ್ನು ಪಾಕಿಸ್ತಾನ ತನ್ನ ಸ್ವಾರ್ಥಕ್ಕಾಗಿ 'ಆಸ್ತಿ' ಎಂದು ನಂಬಿ ಸಾಕಿ ಬೆಳೆಸಿತೋ, ಅದೇ ಸರ್ಪ ಈಗ ಸಾಕಿದವರನ್ನೇ ನುಂಗಲು ಹೊರಟಿದ್ದು, ಡ್ಯೂರಂಡ್ ಗಡಿ ರೇಖೆಯುದ್ದಕ್ಕೂ ಉದ್ವಿಗ್ನತೆ ಯುದ್ಧದ ರೂಪ ಪಡೆದುಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ಸಂಭ್ರಮದ ವಾತಾವರಣವಿದ್ದು, ಪಾಕಿಸ್ತಾನದ 'ಪಾತಕಿಗಳ ಹುಟ್ಟಡಗಿಸಿದವರಿಗೆ' ಸಮ್ಮಾನ ನೀಡಲಾಗುತ್ತಿದೆ. ಅಫ್ಘಾನ್ ವರದಿಗಳ ಪ್ರಕಾರ, ಅವರ ಪಡೆಗಳು 25ಕ್ಕೂ ಹೆಚ್ಚು ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನು ಆಕ್ರಮಿಸಿಕೊಂಡು, 58 ಪಾಕಿಸ್ತಾನಿ ಸೈನಿಕರನ್ನು ಕೊಂದಿದೆ. ಇದನ್ನು ಅವರು 'ಪ್ರತೀಕಾರದ ಕಾರ್ಯಾಚರಣೆ' ಎಂದು ಕರೆಯುತ್ತಿದ್ದಾರೆ.
ಪಾಕಿಸ್ತಾನವು ಭಾರಿ ಸೋಲಿನ ಸುಳಿಯಲ್ಲಿ ಸಿಲುಕಿದ್ದು, ಸೇನೆಯು ಅಡಗಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಾಕ್ ಈ ತನಕ ಕೇವಲ 23 ಸೈನಿಕರ ನಷ್ಟವನ್ನು ಮಾತ್ರ ಅಧಿಕೃತವಾಗಿ ಒಪ್ಪಿಕೊಂಡಿದೆ.