Udupi: ಆರೂರು ಗ್ರಾಮದಲ್ಲಿ ಅಶೋಕ್ ವಾಸ್ತವ್ಯ, ಡೀಮ್ಡ್ ಫಾರೆಸ್ವ್‌ ಸಮಸ್ಯೆಗೆ ಶಾಶ್ವತ ಪರಿಹಾರ ಭರವಸೆ

Feb 20, 2022, 10:18 AM IST

ಉಡುಪಿ (ಫೆ. 20): ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ’ ಮತ್ತು ‘ಗ್ರಾಮವಾಸ್ತವ್ಯ’ ಕಾರ್ಯಕ್ರಮಗಳು  ಮತ್ತೆ ರಾಜ್ಯಾದ್ಯಂತ ಪ್ರಾರಂಭವಾಗಿದ್ದು ಶನಿವಾರ ಉಡುಪಿ ಜಿಲ್ಲೆಯ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಆರ್‌.ಅಶೋಕ ಪಾಲ್ಗೊಂಡು ಜನರ ಅಹವಾಲುಗಳನ್ನು ಆಲಿಸಿದರು.

ಮುಂದಿನ 15 ದಿನಗಳೊಳಗೆ ರಾಜ್ಯಾದ್ಯಂತ ಡೀಮ್ಡ್ ಫಾರೆಸ್ವ್‌ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದರು. ರಾಜ್ಯದಲ್ಲಿ ಸುಮಾರು 9 ಲಕ್ಷ ಎಕ್ರೆ ಡೀಮ್ಡ್ ಫಾರೆಸ್ವ್‌ ತಕರಾರಿನಲ್ಲಿದೆ. ಅದರಲ್ಲಿ 6 ಲಕ್ಷ ಎಕ್ರೆಯನ್ನು ಕಂದಾಯ ಇಲಾಖೆಗೆ, 3 ಲಕ್ಷ ಎಕ್ರೆಗಳನ್ನು ಅರಣ್ಯ ಇಸಾಖೆಗೆ ಸೇರಿಸಲಾಗುತ್ತಿದೆ. ಇದಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಗಳೆರಡೂ ಒಪ್ಪಂದ ಮಾಡಿಕೊಂಡಿದ್ದು, ಎರಡೂ ಇಲಾಖೆಗಳು ಸುಪ್ರೀಂ ಕೋರ್ಟಿಗೆ ಅಫಿದವತ್‌ ಸಲ್ಲಿಸಲಾಗಿದೆ. 2 ವಾರಗಳಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಅರಣ್ಯ, ಕಾನೂನು, ಕಂದಾಯ ಸಚಿವರ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.