
ಕಿರುತೆರೆಯ ಲೋಕದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಹಾಗೂ ಅರಸಿ ಧಾರಾವಾಹಿಯ ಮೂಲಕ ನಾಡಿನಾದ್ಯಂತ ಮನೆಮಾತಾಗಿರುವ ಪ್ರತಿಭೆ ಹರ್ಷಿತಾ ಗೌಡ. ಟಿ.ಎನ್. ಸೀತಾರಾಮ್ ಅವರ ನಿರ್ದೇಶನದ 'ಮಗಳು ಜಾನಕಿ' ಸರಣಿಯು ಇವರ ಕಲಾ ಬದುಕಿಗೆ ಹೊಸ ತಿರುವು ನೀಡಿತ್ತು.
ಹರ್ಷಿತಾ ಅವರಿಗೆ ನಟನೆ ಎನ್ನುವುದು ಆಕಸ್ಮಿಕವಾಗಿ ಒಲಿದ ಕಲೆ. ಕೇವಲ ಮೂರನೇ ತರಗತಿಯಲ್ಲಿದ್ದಾಗಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಇವರು, ಬಾಲ ನಟಿಯಾಗಿ ನಟಿಸುವುದರ ಜೊತೆಗೆ ಧ್ವನಿ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದರು. ಇಂದಿಗೂ ಇವರು ಬೆಳ್ಳಿತೆರೆಯ ಹಲವು ನಾಯಕಿಯರಿಗೆ ಹಿನ್ನೆಲೆ ಧ್ವನಿ ನೀಡುತ್ತಿದ್ದಾರೆ. ಇವರ ಇಷ್ಟೊಂದು ಸಾಧನೆಗೆ ತಾಯಿ ಇಂದಿರಾ ಅವರ ಪ್ರೋತ್ಸಾಹವೇ ಮುಖ್ಯ ಕಾರಣ.
ಹಿರಿಯ ನಿರ್ದೇಶಕ ರಾಮದಾಸ್ ರಾವ್ ಅವರ 'ಮೊಗ್ಗಿನ ಒಲ್ಲೆ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಹರ್ಷಿತಾ, ನಂತರ 'ಪ್ರೀತಿಯಲ್ಲಿ ಸಹ' ಮತ್ತು 'ಸಲೀಲ' ಸಿನಿಮಾಗಳಲ್ಲಿ ನಟಿಸಿದರು. 'ಅರಸಿ' ಮತ್ತು 'ಶ್ರೀ ರಾಘವೇಂದ್ರ ವೈಭವ' ಧಾರಾವಾಹಿಗಳಲ್ಲಿ ನಟಿಸಿದರು. ಕೆಲವು ದಿನಗಳ ವಿರಾಮದ ಬಳಿಕ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ‘ವಲವಾರ’ ಸಿನಿಮಾದಲ್ಲಿ ತಾಯಿ ಪಾತ್ರ ಮಾಡಿದ್ದರು. ಈ ಸಿನಿಮಾವನ್ನು ಬೇರೆ ಭಾಷೆಯವರು ಕೂಡ ಮೆಚ್ಚಿದ್ದರು. ಥಿಯೇಟರ್‌ನಲ್ಲಿ ಹಿಟ್ ಆಗಿಲ್ಲವಾದರೂ ಕೂಡ ಈ ಚಿತ್ರ, ಪಾಸಿಟಿವ್ ಪ್ರತಿಕ್ರಿಯೆ ಪಡೆದಿದೆ.
ನೃತ್ಯ ಲೋಕದಲ್ಲಿಯೂ ಸಾಧನೆ ನಟನೆಯ ಜೊತೆಗೆ ಹರ್ಷಿತಾ ಅವರಿಗೆ ನೃತ್ಯದ ಮೇಲೂ ಅತೀವ ಒಲವಿದೆ. ವಿದುಷಿ ಶ್ರೀಮತಿ ಮಂಜುಳಾ ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ನಿರಂತರವಾಗಿ ಭರತನಾಟ್ಯ ಕಲಿಯುತ್ತಿರುವ ಇವರು, ಈಗಾಗಲೇ 'ವಿದ್ವತ್' ಪರೀಕ್ಷೆ ಪೂರೈಸಿದ್ದಾರೆ. ನೂರಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು, ಕಳೆದ ನಾಲ್ಕು ವರ್ಷಗಳಿಂದ ಶಾಲಾ ಮಕ್ಕಳಿಗೆ ನೃತ್ಯ ಶಿಕ್ಷಕಿಯಾಗಿ ಭರತನಾಟ್ಯವನ್ನು ಧಾರೆ ಎರೆಯುತ್ತಿದ್ದಾರೆ.
ಅಭಿನಯ ಹಾಗೂ ನೃತ್ಯ ಎರಡರಲ್ಲೂ ಪಳಗಿರುವ ಹರ್ಷಿತಾ ಗೌಡ ಅವರಿಗೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯ ಪಾತ್ರಗಳು ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.