
ಸೀರಿಯಲ್ಗಳು ಎಂದರೆ ಅದು ಕೇವಲ ಇಂದು ಸೀರಿಯಲ್ ಆಗಿ ಉಳಿದಿಲ್ಲ. ಅದೆಷ್ಟೋ ವೀಕ್ಷಕರ ಅದರಲ್ಲಿಯೂ ಮಹಿಳೆಯರ ಜೀವನದ ಭಾಗವಾಗಿದೆ. ಸೀರಿಯಲ್ಗಳಲ್ಲಿ ಬರುವುದು ಎಲ್ಲವೂ ಸುಳ್ಳು, ಎಲ್ಲವೂ ಕೇವಲ ಕಥೆಗಳು ಎಂದು ತಿಳಿಯದ ಮನಸ್ಸುಗಳು ಅದೆಷ್ಟೋ ಇಂದಿಗೂ ಇವೆ. ಏಕೆಂದರೆ ಬದುಕಿನ ಭಾಗವಾಗಿ ಹಲವು ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ನಾಟುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಕೇವಲ ಸೀರಿಯಲ್ ಎಳೆಯುವುದಕ್ಕಾಗಿಯೋ ಅಥವಾ ಇನ್ನಾವುದೋ ಕಾರಣಕ್ಕೆ ಬರುವ ಕೆಲವೊಂದು ಸನ್ನಿವೇಶಗಳು ಅದೆಷ್ಟೋ ವೀಕ್ಷಕರ ಬದುಕನ್ನು ನರಕಕ್ಕೆ ದೂಕಬಹುದು ಇಲ್ಲವೇ ವರದಾನವೂ ಆಗಬಹುದು. ಆದರೆ ಅಂಥ ಸೂಕ್ಷ್ಮತೆಯನ್ನು ಸೀರಿಯಲ್ ಬರೆಯುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಕ್ಯಾನ್ಸರ್ ಅಥವಾ ಇನ್ನಾವುದೇ ರೋಗದ ಬಗ್ಗೆ ಹೇಳುವಾಗ, ಮುಂದೇ ಏನಾಗತ್ತೋ ಗೊತ್ತಿಲ್ಲ, ಆದರೆ ಆ ಕ್ಷಣದಲ್ಲಿ ಹೇಳುವ ಆಘಾತಕಾರಿ ಮಾತುಗಳು ಜನರ ಜೀವವನ್ನೇ ನರಕ ಮಾಡಬಹುದು. ಅದರಲ್ಲಿಯೂ ಅಲ್ಲಿರುವ ವೈದ್ಯರು ಬಣ್ಣ ಹಚ್ಚಿದ ನಕಲಿ ವೈದ್ಯರು ಮಾತ್ರ, ಇವರು ಸೀರಿಯಲ್ ಪಾತ್ರಧಾರಿಗಳು ಎನ್ನುವ ಅರಿವು ಇಲ್ಲದ ಮನಸ್ಸುಗಳು ಇರುವಾಗ, ಇಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಧೈರ್ಯ ತುಂಬುವ ಮಾತನಾಡಬೇಕೇ ವಿನಾ ಸಾವಿನ ಮಾತಲ್ಲ.
ಅಮೃತಧಾರೆ ಸೀರಿಯಲ್ (Amruthadhaare Serial) ಜನರು ವರ್ಷಗಳಿಂದ ಮೆಚ್ಚಿಕೊಂಡು ಬಂದಿದ್ದಾರೆ. ಅದರಲ್ಲಿರುವ ನವೀರಾದ ಪ್ರೇಮಕಥೆ, ವಿರಹ ವೇದನೆ, ಕೊನೆಗೆ ಭೂಮಿಕಾ-ಗೌತಮ್ ಒಂದಾಗಿದ್ದು ಎಲ್ಲವೂ ರೋಚಕ ತಿರುವಿನ ಜೊತೆ ಸಾಗಿ ಜನರನ್ನು ಸೀರಿಯಲ್ ನೋಡಲು ಇನ್ನಷ್ಟು ಹತ್ತಿರ ಮಾಡಿರುವುದು ಸುಳ್ಳಲ್ಲ. ಇದೀಗ ಸೀರಿಯಲ್ ಎಳೆಯುವುದಕ್ಕಾಗಿ ಟ್ವಿಸ್ಟ್ ತರಲಾಗಿದೆ. ಅದೂ ಸರಿ. ಇಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಎಂದು ಹೇಳಲಾಗಿದೆ. ಅದೂ ಓಕೆ, ಸೀರಿಯಲ್ ಕುತೂಹಲ ಬರಲಿ ಎನ್ನುವ ಕಾರಣಕ್ಕೆ ಈ ಟ್ವಿಸ್ಟ್ ನೀಡಿರಬಹುದು ಅಥವಾ ಕ್ಯಾನ್ಸರ್ ಅನ್ನು ಗೆದ್ದು ಭೂಮಿಕಾ ಎಲ್ಲರಿಗೂ ಮಾದರಿಯೂ ಆಗಬಹುದು. ಮುಂದಿನ ಮಾತು ಏನೇ ಇರಲಿ. ಆದರೆ ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ವೈದ್ಯೆ ಹೇಳಿದ ಮಾತು ಅದೆಷ್ಟೋ ಮನಸ್ಸುಗಳನ್ನು ಚೂರು ಚೂರು ಮಾಡಿದ್ದಂತೂ ನಿಜ. ಇಲ್ಲಿ ಬ್ರೆಸ್ಟ್ ಕ್ಯಾನ್ಸರ್ಗೆ ಸಾವೇ ಅಂತಿಮ ಎನ್ನುವ ರೀತಿಯಲ್ಲಿ ವೈದ್ಯೆ ಹೇಳಿದ್ದರಿಂದ ನೆಟ್ಟಿಗರು ಕಿಡಿಕಿಡಿಯಾಗಿದ್ದಾರೆ. ಅದರಲ್ಲಿಯೂ ಬ್ರೆಸ್ಟ್ ಕ್ಯಾನ್ಸರ್ ಬಂದಾಗ ಏನೇನಾಗುತ್ತದೆ ಎಂದು ವೈದ್ಯೆ ಹೇಳಿರುವುದು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.
ಇಂದು ಬ್ರೆಸ್ಟ್ ಕ್ಯಾನ್ಸರ್‌ನಿಂದ ಎಷ್ಟೋ ಜನ ಬಳಲುತ್ತಿದ್ದಾರೆ. ಅಲೋಪಥಿಯಲ್ಲಿ ಗುಣಪಡಿಸಿಕೊಳ್ಳಲು ಆಗದೇ ಇದ್ದವರು ಹೋಮಿಯೋಪಥಿ ಔಷಧದಿಂದ ಎಲ್ಲಾ ರೀತಿಯ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದು ನಮ್ಮ ಕಣ್ಣಮುಂದೆ ಇದೆ. ಮತ್ತೆ ಕೆಲವು ಬ್ರೆಸ್ಟ್ ಕ್ಯಾನ್ಸರ್ ರೋಗಿಗಳು ಕಿಮೋಥೆರಪಿ ಬಳಿಕವೂ ಯೋಗ, ಧ್ಯಾನ, ಮುದ್ರೆಗಳಿಂದ, ಸೂಕ್ತ ಡಯೆಟ್ ಪಾಲಿಸಿ ಗುಣಹೊಂದಿದ್ದಾರೆ. ಇದಾಗಲೇ ಅಂಥ ಕ್ಯಾನ್ಸರ್ ಮುಕ್ತರಾದವರು ಹಲವಾರು ಕಡೆಗಳಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ, ಕ್ಯಾನ್ಸರ್ಪೀಡಿತರಿಗೆ ಸಾವೇ ಅಂತಿಮವಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.
ಆದರೆ, ಇಂಥ ಭಾಷಣ ಕೇಳಲು ಹಲವರಿಗೆ ಟೈಮೇ ಇರುವುದಿಲ್ಲ. ಅವರು ಮನೆಯಲ್ಲಿ ಕುಳಿತು ಸೀರಿಯಲ್ ನೋಡುತ್ತಿರುತ್ತಾರೆ. ಧಾರಾವಾಹಿಗಳಲ್ಲಿ ಬಂದಿರೋದೇ ಅವರಿಗೆ ವೇದವಾಕ್ಯವಾಗಿರುತ್ತದೆ. ಅಂಥವರನ್ನು ಗಮನದಲ್ಲಿ ಇಟ್ಟುಕೊಂಡು ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ತಿಳಿಸಬೇಕಾಗುತ್ತದೆ. ಇಲ್ಲಿ ವೈದ್ಯೆ ಭೂಮಿಕಾಗೆ ಹೆಚ್ಚೆಂದರೆ ಐದು ತಿಂಗಳು ಟೈಮ್ ಇದೆ ಎನ್ನುತ್ತಾರೆ. ಅಂದರೆ ಬ್ರೆಸ್ಟ್ ಕ್ಯಾನ್ಸರ್ ಬಂದಲ್ಲ ಇಂದಲ್ಲ, ನಾಳೆ ಸಾಯುವುದೇ ಎನ್ನುವ ಅರ್ಥದಲ್ಲಿ ಹೇಳಿದಂತಿದೆ. ಇದನ್ನು ಕೇಳಿದ ಕ್ಯಾನ್ಸರ್ಪೀಡಿತರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆ ಬರುತ್ತದೆ ಎನ್ನುವ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು ಅಲ್ಲವೆ? ಅಲ್ಲಿ ವೈದ್ಯೆಯಾವಳು ಎಷ್ಟೋ ಮಂದಿ ಕ್ಯಾನ್ಸರ್ ಗೆದ್ದಿದ್ದಾರೆ, ಇದರಲ್ಲಿ ಭಯಪಡುವ ಅಗತ್ಯವಿಲ್ಲ ಎನ್ನುವ ಡೈಲಾಗ್ ಪ್ರೊಮೋದಲ್ಲಿ ಸೇರಿಸಿಬಿಟ್ಟಿದ್ದರೆ ಅಲ್ಲಿ ಅದೆಷ್ಟೋ ಮಂದಿಯ ಜೀವನದಲ್ಲಿ ಉತ್ಸಾಹ ಬರುತ್ತಿತ್ತು. ಇಂಥ ಸೂಕ್ಷ್ಮ ವಿಷಯಗಳ ಬಗ್ಗೆ ಗಮನಹರಿಸಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.