
ಭಾರತೀಯ ಸಂಸ್ಕೃತಿ, ಆಚರಣೆಗಳು ಮತ್ತು ಸಂಪ್ರದಾಯಗಳು ವಿಶ್ವದಾದ್ಯಂತ ಪ್ರಸಿದ್ಧವಾಗಿವೆ. ಭಾರತದಲ್ಲಿ ಎಷ್ಟೇ ವೈವಿಧ್ಯತೆಗಳಿದ್ದರೂ, ಅಷ್ಟೇ ವಿಶಿಷ್ಟ ಸಂಪ್ರದಾಯಗಳೂ ಕಂಡುಬರುತ್ತವೆ. ದೇಶದಾದ್ಯಂತ ಅನೇಕ ಹಬ್ಬಗಳನ್ನು ಒಂದೇ ರೀತಿಯಲ್ಲಿ ಆಚರಿಸಿದರೂ, ವಿವಿಧ ರಾಜ್ಯಗಳು, ಧರ್ಮಗಳು, ಸಮುದಾಯಗಳು ಮತ್ತು ಜನಾಂಗಗಳಿಗೆ ತಮ್ಮದೇ ಆದ ಸಂಪ್ರದಾಯಗಳಿವೆ. ಕೆಲವು ಆಚರಣೆಗಳು ಪುರುಷರಿಗೆ ಸಂಬಂಧಿಸಿದರೆ, ಇನ್ನೂ ಕೆಲವು ವಿಶೇಷ ಸಂಪ್ರದಾಯಗಳನ್ನು ಮಹಿಳೆಯರು ಇಂದಿಗೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅಂತಹ ಅಪರೂಪದ ಸಂಪ್ರದಾಯವೊಂದು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಿನಿ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಿನಿ ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ತಿಂಗಳಲ್ಲಿ ಐದು ದಿನಗಳ ಕಾಲ ಮಹಿಳೆಯರು ಬಟ್ಟೆ ಧರಿಸದೆ ಮನೆಯಿಂದ ಹೊರಬರದೇ ಏಕಾಂತ ಜೀವನ ನಡೆಸುತ್ತಾರೆ. ಅದನ್ನು ಈಗಲೂ ನಡೆಸಿಕೊಂಡು ಬರುತ್ತಿದ್ದಾರಂತೆ ಅಲ್ಲಿನ ಜನ. ಈ ಅವಧಿಯಲ್ಲಿ ಮಹಿಳೆಯರು ಪುರುಷರಿಂದ ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಅಂತರ ಕಾಯ್ದುಕೊಳ್ಳುತ್ತಾರೆ. ಅಷ್ಟೇ ಯಾಕೆ ಈ ಐದು ದಿನಗಳ ಕಾಲ ನಗುವುದು, ಸಂಭ್ರಮಿಸುವುದು ಕೂಡಾ ನಿರ್ಬಂಧಿತವಾಗಿದೆ ಎಂದು ಹೇಳಲಾಗುತ್ತದೆ. ಈ ಐದು ದಿನಗಳಲ್ಲಿ ಗ್ರಾಮದೊಳಗೆ ಹೊರಗಿನವರಿಗೆ ಪ್ರವೇಶವಿರುವುದಿಲ್ಲ. ಪುರುಷರು ಸಹ ಬೇರೆಯೇ ಇರುತ್ತಾರೆ. ಅದೇ ಸಮಯದಲ್ಲಿ ಪುರುಷರು ಮದ್ಯಪಾನ ಹಾಗೂ ಮಾಂಸಾಹಾರ ಸೇವಿಸುವುದನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂಬ ನಿಯಮವೂ ಇದೆ. ಇಂದಿಗೂ ಜನ ಸಂಪೂರ್ಣ ಶ್ರದ್ಧಾ ಭಕ್ತಿಯಿಂದ ಈ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಈ ಸಂಪ್ರದಾಯದ ಹಿಂದಿರುವ ನಂಬಿಕೆ ಏನು?
ಸ್ಥಳೀಯ ಜನರ ಪ್ರಕಾರ, ಹಿಂದೆ ಈ ಪ್ರದೇಶದಲ್ಲಿ ಮಹಿಳೆಯರಿಗೆ ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದ ದುಷ್ಟ ರಾಕ್ಷಸನೊಬ್ಬ ಇದ್ದನೆಂದು ಹೇಳಲಾಗುತ್ತದೆ. ವಿಶೇಷವಾಗಿ ಅಲಂಕಾರಿಕ ಉಡುಪು ಧರಿಸಿದ್ದ ಮಹಿಳೆಯರನ್ನು ಅಪಹರಿಸುತ್ತಿದ್ದನೆಂಬ ಕಥೆ ಪ್ರಸಿದ್ಧವಾಗಿದೆ. ಆ ದುಷ್ಟಶಕ್ತಿಯಿಂದ ತಪ್ಪಿಸಿಕೊಳ್ಳಲು ಮತ್ತು ಮನೆಯ ಆಧ್ಯಾತ್ಮಿಕ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಮಹಿಳೆಯರು ಈ ಸಂಪ್ರದಾಯವನ್ನು ಪಾಲಿಸಲು ಆರಂಭಿಸಿದರು ಎನ್ನಲಾಗಿದೆ. ಈ ಸಂಪ್ರದಾಯವನ್ನು ಉಲ್ಲಂಘಿಸಿದರೆ ಗ್ರಾಮಕ್ಕೆ ದುರಾದೃಷ್ಟ, ಅನಾಹುತ ಅಥವಾ ಗ್ರಾಮದೇವರ ಕೋಪ ಎದುರಾಗಬಹುದು ಎಂಬ ನಂಬಿಕೆ ಇಂದಿಗೂ ಸ್ಥಳೀಯರಲ್ಲಿ ಇದೆ. ಒಂದ್ವೇಳೆ ಮಹಿಳೆ ತನ್ನ ದೇಹವನ್ನು ಮುಚ್ಚಲು ಬಯಸಿದರೆ, ಅವಳು ಉಣ್ಣೆಯಿಂದ ಮಾಡಿದ ಪಾಟ್ಕಾವನ್ನು ಸರಳವಾಗಿ ಬಳಸಬಹುದು. ಇದನ್ನು ಬಿಟ್ಟು ಬೇರೆ ಯಾವುದೇ ಬಟ್ಟೆಯನ್ನು ಧರಿಸುವಂತಿಲ್ಲ. ಹಾಗಾಗಿ ಇಂದಿಗೂ ತಪ್ಪದೇ ಜನ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.