ಬಾಡಿಗೆ ಮನೆ ಟೆನ್ಷನ್ ಇಲ್ಲ, ಹೊಟೇಲ್ ಬುಕ್ ಮಾಡ್ಬೇಕಾಗಿಲ್ಲ- ನಿವೃತ್ತರಲ್ಲಿ ಟ್ರೆಂಡ್‌ ಆಗ್ತಿದೆ ಹೋಮ್ ಸ್ವ್ಯಾಪಿಂಗ್

Published : Nov 05, 2026, 11:41 AM IST
Home swapping

ಸಾರಾಂಶ

ವಾರ – ತಿಂಗಳ ಪ್ರವಾಸದಲ್ಲಿ ಹೊಟೇಲ್‌ ರೂಮ್‌ ಖರ್ಚು ಹೆಚ್ಚಾಗುತ್ತೆ. ಊಟ ಕೂಡ ಸರಿಯಾಗಿ ಆಗೋದಿಲ್ಲ. ಪ್ರವಾಸ ಚೆನ್ನಾಗಿರ್ಬೇಕು, ಊಟ- ನಿದ್ರೆ ಎಲ್ಲವೂ ನೆಮ್ಮದಿಯಿಂದಾಗ್ಬೇಕು ಅಂದ್ರೆ ನೀವೂ ಈ ಹೊಸ ಟ್ರೆಂಡ್‌ ಟ್ರೈ ಮಾಡಿ.

ರಿಟೈರ್ಮೆಂಟ್ ನಂತ್ರ ಆರಾಮವಾಗಿ ಪ್ರವಾಸ ಮಾಡ್ಬೇಕು, ಹೊಸ ಹೊಸ ಜಾಗ ನೋಡ್ಬೇಕು ಅಂತ ಕೆಲವರು ಆಶಿಸ್ತಾರೆ. ಆದ್ರೆ ಬೇರೆ ಕಡೆ ಹೋಗೋದು ಸುಲಭವಲ್ಲ. ಅಲ್ಲಿ ಹೊಟೇಲ್‌ ಬುಕ್‌ ಮಾಡೋದು, ಊಟ – ಬಾಡಿಗೆಗೆ ಹಣ ಖರ್ಚು ಮಾಡೋದು ದೊಡ್ಡ ಸಮಸ್ಯೆ. ಆದ್ರೆ ಚೀನಾ ಮಂದಿ ಈ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಹೊಸ ಐಡಿಯಾ ಈಗ ಚೀನಾದಲ್ಲಿ ಟ್ರೆಂಡ್‌ ಆಗ್ತಿದೆ.

ಹೋಮ್‌ ಸ್ವ್ಯಾಪಿಂಗ್ ಟ್ರೆಂಡ್

ಚೀನಾದ ಹಿರಿಯ ನಾಗರಿಕರು ಹೋಮ್‌ ಸ್ವ್ಯಾಪಿಂಗ್‌ ಐಡಿಯಾ ಫಾಲೋ ಮಾಡ್ತಿದ್ದಾರೆ. ಟ್ರಿಪ್‌ ಹೋದಾಗ ಹೊಟೇಲ್‌ ಬುಕ್‌ ಮಾಡ್ಬೇಕು, ಒಳ್ಳೆ ಊಟಕ್ಕೆ ಹುಡುಕಾಟ ನಡೆಸ್ಬೇಕು ಎಂಬ ಟೆನ್ಷನ್‌ ಅವರಿಗಿಲ್ಲ. ಹೋಮ್ ಸ್ವ್ಯಾಪಿಂಗ್ (Home Swapping) ಅಂದ್ರೆ ಹೋಟೆಲ್ನಲ್ಲಿ ಹಣ ಕೊಟ್ಟು ಉಳಿಯುವ ಬದಲು, ತಮ್ಮ ಮನೆಯನ್ನು ಬೇರೆಯವರಿಗೆ ವಾಸ್ತವ್ಯಕ್ಕೆ ನೀಡಿ, ಅವರ ಮನೆಯಲ್ಲಿ ತಾವು ಕೆಲವು ದಿನ ಉಳಿಯುವುದು.

ಹೋಮ್ ಸ್ವ್ಯಾಪಿಂಗ್ ಎಂದರೆ ಇಬ್ಬರು ವ್ಯಕ್ತಿಗಳು ಅಥವಾ ಕುಟುಂಬಗಳು ಪರಸ್ಪರ ಒಪ್ಪಂದದ ಮೂಲಕ ಕೆಲವು ದಿನಗಳ ಕಾಲ ತಮ್ಮ ಮನೆಗಳನ್ನು ಬದಲಾಯಿಸಿಕೊಂಡು ವಾಸಿಸೋದು. ಉದಾಹರಣೆಗೆ, ಬೆಂಗಳೂರಿನಲ್ಲಿ ವಾಸಿಸುವ ನಿವೃತ್ತ ದಂಪತಿ ಕೆಲವು ದಿನ ಶಿಮ್ಲಾದಲ್ಲಿ ಕಾಲ ಕಳೆಯಲು ಬಯಸುತ್ತಾರೆ ಎಂದಿಟ್ಟುಕೊಳ್ಳಿ. ಅದೇ ರೀತಿ ಶಿಮ್ಲಾದಲ್ಲಿರುವ ಮತ್ತೊಂದು ಕುಟುಂಬ ಬೆಂಗಳೂರಿಗೆ ಬರಲು ಬಯಸಿದರೆ, ಇಬ್ಬರೂ ತಮ್ಮ ಮನೆಗಳನ್ನು ಪರಸ್ಪರ ಬದಲಾಯಿಸಿಕೊಳ್ಳಬಹುದು. ಬೆಂಗಳೂರಿನವರು ಶಿಮ್ಲಾದ ಮನೆಯಲ್ಲಿ, ಶಿಮ್ಲಾದವರು ಬೆಂಗಳೂರಿನ ಮನೆಯಲ್ಲಿ ವಾಸ್ತವ್ಯ ಹೂಡಬಹುದು. ರಜೆ ಮುಗಿದ ಬಳಿಕ ಮತ್ತೆ ತಮ್ಮ ತಮ್ಮ ಮನೆಗಳಿಗೆ ಮರಳಬಹುದು. ಇದರಿಂದ ಹೋಟೆಲ್ ಬಾಡಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದರ ಜೊತೆಗೆ ಹೊಸ ಊರಿನ ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸಬಹುದು.

ಹೋಟೆಲ್ ಖರ್ಚು ಉಳಿಸಲು ನಿವೃತ್ತರ ಹೊಸ ಐಡಿಯಾ

ಚೀನಾದಲ್ಲಿ ನಿವೃತ್ತಿಯ ನಂತರ ಪ್ರವಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ದುಬಾರಿ ಹೋಟೆಲ್ ಬಾಡಿಗೆ ಮತ್ತು ವಸತಿ ವೆಚ್ಚ ಪ್ರವಾಸದ ಬಜೆಟ್ಗೆ ಹೊಡೆತ ನೀಡುತ್ತಿದೆ. ಹೀಗಾಗಿ ತಮ್ಮ ಖಾಲಿ ಮನೆಗಳನ್ನು ಬೇರೆಯವರಿಗೆ ನೀಡಿ, ಅವರ ಮನೆಗಳಲ್ಲಿ ಉಳಿಯುವ ವ್ಯವಸ್ಥೆಯನ್ನು ಹಲವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಟ್ರೆಂಡ್ನಲ್ಲಿ ನಿವೃತ್ತರಷ್ಟೇ ಅಲ್ಲದೆ, ಅನೇಕ ಕಿರಿಯ ವಯಸ್ಕರೂ ಭಾಗಿಯಾಗಿದ್ದಾರೆ. ಇವರ ಬಳಿ ಸ್ವಂತ ಮನೆ ಹಾಗೂ ಪ್ರವಾಸಕ್ಕೆ ಬೇಕಾದಷ್ಟು ಸಮಯ ಇರುವುದರಿಂದ ಹೋಮ್ ಸ್ವ್ಯಾಪಿಂಗ್ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಚೀನಾದಲ್ಲಿ ವಿಶೇಷ ಗ್ರೂಪ್ಗಳು ಮತ್ತು ಏಜೆನ್ಸಿಗಳೂ ಆರಂಭವಾಗಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರು ಪರಸ್ಪರ ಸಂಪರ್ಕ ಸಾಧಿಸಿ ತಮಗೆ ಇಷ್ಟವಾದ ನಗರಗಳಲ್ಲಿ ಮನೆಗಳನ್ನು ಹುಡುಕುತ್ತಿದ್ದಾರೆ.

1950ರ ದಶಕದಲ್ಲೇ ಆರಂಭವಾಗಿತ್ತು ಈ ಟ್ರೆಂಡ್

ಮನೆಗಳನ್ನು ಬದಲಾಯಿಸಿಕೊಂಡು ರಜೆ ಕಳೆಯುವ ಪರಿಕಲ್ಪನೆ ಈಗಿನದ್ದಲ್ಲ. 1950ರ ದಶಕದಲ್ಲಿ ಯುರೋಪ್ನ ಕೆಲವು ಶಿಕ್ಷಕರ ನಡುವೆ ಈ ಪದ್ಧತಿ ಆರಂಭವಾಗಿತ್ತು. 2006ರಲ್ಲಿ ಬಿಡುಗಡೆಯಾದ ಹಾಲಿವುಡ್ನ ದಿ ಹಾಲಿಡೇ (The Holiday) ಸಿನಿಮಾ ಬಳಿಕ ಜಗತ್ತಿನ ಹಲವು ಕಡೆ ಈ ವಿಧಾನ ಜನಪ್ರಿಯವಾಯಿತು. ಚೀನಾದಲ್ಲಿ 2023ರ ಸುಮಾರಿಗೆ ಯುವಜನರ ನಡುವೆ ಈ ಟ್ರೆಂಡ್ ಹೆಚ್ಚಾಗತೊಡಗಿತ್ತು. ಹೋಟೆಲ್ ಬಾಡಿಗೆ ದುಬಾರಿಯಾಗುತ್ತಿದ್ದಂತೆ ಪ್ರವಾಸಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಿದವರು ಹೋಮ್ ಸ್ವ್ಯಾಪಿಂಗ್ ಮೊರೆ ಹೋಗಿದ್ದರು. ಇದೀಗ ನಿವೃತ್ತರೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಮನೆ ಬದಲಾಯಿಸುವ ಮುನ್ನ ಈ ನಿಯಮಗಳು ಕಡ್ಡಾಯ

ಅಪರಿಚಿತರಿಗೆ ತಮ್ಮ ಮನೆಯನ್ನು ಬಿಟ್ಟುಕೊಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಮನೆ ಬದಲಾಯಿಸುವ ಮುನ್ನ ಎರಡೂ ಕಡೆಯವರು ಕೆಲವು ನಿಯಮಗಳನ್ನು ಪಾಲಿಸುತ್ತಾರೆ.

• ಪರಸ್ಪರ ಗುರುತಿನ ಚೀಟಿ ಮತ್ತು ಅಗತ್ಯ ದಾಖಲೆಗಳನ್ನು ಹಂಚಿಕೊಳ್ಳುತ್ತಾರೆ.

• ಮನೆಯಲ್ಲಿ ಇರುವ ಬೆಲೆಬಾಳುವ ವಸ್ತುಗಳ ವಿವರ ನೀಡುತ್ತಾರೆ.

• ವಿದ್ಯುತ್, ನೀರು ಸೇರಿದಂತೆ ಇತರ ಬಿಲ್ಗಳನ್ನು ಯಾರು ಪಾವತಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ.

• ಮನೆಯಲ್ಲಿರುವವರು ಹಾಸಿಗೆ ಮತ್ತು ಇತರ ವಸ್ತುಗಳನ್ನು ಸ್ವಚ್ಛವಾಗಿಡಬೇಕು.

• ವಾಸ್ತವ್ಯ ಮುಗಿದ ಬಳಿಕ ಮನೆಯನ್ನು ಸ್ವಚ್ಛಗೊಳಿಸಿ ಹಸ್ತಾಂತರಿಸಬೇಕು.

ಕೆಲವರು ಮನೆ ಖಾಲಿ ಮಾಡುವ ಮೊದಲು ವಿಡಿಯೋ ಮಾಡಿ ಮಾಲೀಕರಿಗೆ ಕಳುಹಿಸುತ್ತಾರೆ. ಇದರಿಂದ ಮನೆಯ ಸ್ಥಿತಿಗತಿಯ ಬಗ್ಗೆ ಇಬ್ಬರಿಗೂ ಸ್ಪಷ್ಟತೆ ಸಿಗುತ್ತದೆ.

ಸುರಕ್ಷತೆಯ ಬಗ್ಗೆ ಆತಂಕವೂ ಇದೆ!

ಹೋಮ್ ಸ್ವ್ಯಾಪಿಂಗ್ ಜನಪ್ರಿಯವಾಗುತ್ತಿದ್ದಂತೆ ಕೆಲವು ಆತಂಕಗಳೂ ಎದುರಾಗಿವೆ. ಅಪರಿಚಿತರಿಗೆ ಮನೆ ಬಿಟ್ಟುಕೊಡುವುದರಿಂದ ಬೆಲೆಬಾಳುವ ವಸ್ತುಗಳ ಕಳ್ಳತನ, ಆಸ್ತಿಗೆ ಹಾನಿ ಮತ್ತು ವೈಯಕ್ತಿಕ ಮಾಹಿತಿಯ ದುರುಪಯೋಗದ ಅಪಾಯವಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವರ್ಷಕ್ಕೆ 9 ಲಕ್ಷ ರೂ. ಪ್ರವಾಸಕ್ಕೆ ಖರ್ಚು, ತಿಂಗಳಿಗೆ 60 ಸಾವಿರ ರೂ. ಬಾಡಿಗೆ! ಬೆಂಗಳೂರಿನ ಟೆಕ್ಕಿ ದಂಪತಿಯ ಜೀವನಶೈಲಿ ವೈರಲ್
ಭಾರತದ 'ಚಹಾ ರಾಜಧಾನಿ' ಯಾವುದು ಗೊತ್ತಾ? ಊಟಿ ಅಲ್ಲವೇ ಅಲ್ಲ, ಕರ್ನಾಟಕದಲ್ಲಿ ಬೆಳೆಯುತ್ತೆ ಈ ಸ್ಪೆಷಲ್ ಟೀ!