ಕನ್ಫರ್ಮ್ ರೈಲು ಟಿಕೆಟ್ ಅನ್ನು ಯಾರು ಯಾರಿಗೆ ವರ್ಗಾಯಿಸಬಹುದು? ಭಾರತೀಯ ರೈಲ್ವೆ ನಿಯಮಗಳ ಪ್ರಕಾರ ಟಿಕೆಟ್ ವರ್ಗಾವಣೆ ಹೇಗೆ ಮಾಡುವುದು? ಟಿಕೆಟ್ ರದ್ದು ಮಾಡಿದ್ರೆ ಎಷ್ಟು ಹಣ ರೀಫಂಡ್ ಆಗುತ್ತೆ?
ನವದೆಹಲಿ: ನೀವು ರೈಲು ಪ್ರಯಾಣಿಕರಾಗಿದ್ರೆ ಈ ವಿಷಯವನ್ನು ಖಂಡಿತವಾಗಿ ತಿಳಿದುಕೊಳ್ಳಬೇಕು. ಈ ವಿಷಯದಿಂದ ಪ್ರಯಾಣಿಕರ ಮತ್ತಷ್ಟು ಆರಾಮದಾಯಕವಾಗಲಿದೆ. ಇಂದು ಬಹುತೇಕ ಪ್ರಯಾಣಿಕರು ಸುಮಾರು 15 ರಿಂದ 30 ದಿನಗಳ ಮುಂಚೆಯೇ ಟಿಕೆಟ್ ಬುಕ್ ಮಾಡುತ್ತಾರೆ. ಈ ಮೂಲಕ ತಮ್ಮ ಆಸನವನ್ನು ಕನ್ಫರ್ಮ್ ಮಾಡಿಕೊಂಡಿರುತ್ತಾರೆ. ಆದ್ರೆ ಅನಿವಾರ್ಯ ಕಾರಣಗಳಿಂದ ಪ್ರಯಾಣ ರದ್ದು ಆದ್ರೆ ಕನ್ಫರ್ಮ್ ಟಿಕೆಟ್ ನಿಮ್ಮ ಆಪ್ತರು ಅಥವಾ ಸಂಬಂಧಿಕರಿಗೆ ವರ್ಗಾಯಿಸಬಹುದಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇರುತ್ತದೆ. ಕೊನೆ ಕ್ಷಣದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಹಣ ಕಡಿತಗೊಂಡು ಕಡಿಮೆ ಮೊತ್ತ ರೀಫಂಡ್ ಆಗುತ್ತದೆ. ಅದೇ ಟಿಕೆಟ್‌ನ್ನು ಮತ್ತೊಬ್ಬರಿಗೆ ವರ್ಗಾಯಿಸಿದ್ರೆ ಪೂರ್ಣ ಪ್ರಮಾಣದ ಹಣ ಸಿಗುತ್ತೆ ಅನ್ನೋದು ಬಹುತೇಕ ಪ್ರಯಾಣಿಕರ ಮಾತು.
ನಿಮ್ಮ ಕನ್ಫರ್ಮ್ ಟಿಕೆಟ್‌ನ್ನು ಆಪ್ತರಿಗೆ ವರ್ಗಾಯಿಸಬಹುದಾ ಎಂಬುದರ ಬಗ್ಗೆ ಭಾರತೀಯ ರೈಲ್ವೆಯ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ರೈಲ್ವೆ ನಿಯಮಗಳ ಪ್ರಕಾರ, ಕನ್ಫರ್ಮ್ ಆಗಿರುವ ಟಿಕೆಟ್‌ನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸಬಹುದಾ?
ಭಾರತೀಯ ರೈಲ್ವೆ ನಿಯಮ ಏನು ಹೇಳುತ್ತೆ?
ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ನಿಮ್ಮ ಬಳಿ ಕನ್ಫರ್ಮ್ ಟಿಕೆಟ್ ಇದೆ. ಆದ್ರೆ ಕೊನೆ ಕ್ಷಣದಲ್ಲಿ ನಿಮ್ಮ ಪ್ರಯಾಣ ರದ್ದುಗೊಳ್ಳುತ್ತದೆ. ಈ ಸಮಯದಲ್ಲಿ ಕನ್ಫರ್ಮ್ ಆಗಿರೋ ಟಿಕೆಟ್‌ನ್ನು ನಿಮ್ಮ ಪತ್ನಿ ಅಥವಾ ಮಕ್ಕಳಿಗೆ ವರ್ಗಾಯಿಸಬಹುದಾಗಿದೆ. ಇದು ಕೇವಲ ನಿಮ್ಮ ಸಂಬಂಧಿಕರು ಅಂದ್ರೆ ತಂದೆ, ತಾಯಿ, ಪತ್ನಿ, ಮಕ್ಕಳು, ಸೋದರ ಮತ್ತು ಸೋದರಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೂರನೇ ವ್ಯಕ್ತಿಗೆ ಟಿಕೆಟ್ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿನನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಮಂಗಳೂರು-ಮುಂಬೈ ಇನ್ನು ಕೇವಲ 12 ಗಂಟೆ, ಶೀಘ್ರದಲ್ಲೇ ಹೊಸ ವಂದೇ ಭಾರತ್ ರೈಲು
ಕನ್ಫರ್ಮ್ ಟಿಕೆಟ್ ವರ್ಗಾವಣೆ ಮುನ್ನ ನೀವು ರೈಲು ಅಧಿಕಾರಿಗಳನ್ನು ಸಂಪರ್ಕಿಸಬೇಕಾಗುತ್ತದೆ. ಟ್ರೈನ್ ಹೊರಡುವ ಮುನ್ನ ಟ್ರಾನ್ಸಫರ್ ಟಿಕೆಟ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಈ ವೇಳೆ ಅಲ್ಲಿ ಕೇಳಲಾಗುವ ಗುರುತಿನ ಚೀಟಿಯ ನಕಲು ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ. ರೈಲು ಹೊರಡುವ 24 ಗಂಟೆಗಳ ಮುಂಚೆ ಈ ಕೆಲಸವನ್ನು ಮಾಡಬೇಕಾಗುತ್ತದೆ. ಇಲ್ಲವಾದ್ರೆ ನಿಮ್ಮ ಟಿಕೆಟ್ ಕ್ಯಾನ್ಸಲ್ ಆಗುತ್ತದೆ.
ಕನ್ಫರ್ಮ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಎಷ್ಟು ರೀಫಂಡ್ ಸಿಗುತ್ತೆ?
ರೈಲು ಹೊರಡುವ 48 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯದ ಮೊದಲೇ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಯಾವುದೇ ಕ್ಯಾನ್ಸಲೇಷನ್ ಚಾರ್ಜ್ ಕಡಿತಗೊಳಿಸಲ್ಲ.
48 ಗಂಟೆಯಿಂದ 12 ಗಂಟೆಯ ಮುನ್ನ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಶೇ.25ರಷ್ಟು ಕಡಿತಗೊಳಿಸಲಾಗುತ್ತದೆ. ಶೇ.75ರಷ್ಟು ಟಿಕೆಟ್ ಹಣ ರೀಫಂಡ್ ಆಗುತ್ತದೆ.
ರೈ ಲು ಹೊರಡುವ 4 ಗಂಟೆ ಮುನ್ನ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಯಾವುದೇ ರೀ ಫಂಡ್ ಸಿಗಲ್ಲ.
ಇದನ್ನೂ ಓದಿ: ಭಾರತೀಯ ರೈಲ್ವೆಯಲ್ಲಿ LHB ಕೋಚ್-ICF ಕೋಚ್ ಎಂದರೇನು? ಆಕ್ಸಿಡೆಂಟ್ ಆದಾಗ ಹೆಚ್ಚಿನ ರಕ್ಷಣೆ ಸಿಗುವುದೆಲ್ಲಿ?