
ರೀಲ್ಸ್, ಯುಟ್ಯೂಬ್ ವಿಡಿಯೋ ಪ್ರಸಿದ್ಧಿ ತಂದುಕೊಡುವ ಜೊತೆಗೆ ಅಪಾಯಕ್ಕೂ ಕಾರಣವಾಗ್ತಿದೆ. ಜನರು ತಮ್ಮ ಪ್ರಾಣ ಲೆಕ್ಕಿಸದೆ ಮಾಡುವ ಕೆಲಸ ಅವರ ಪ್ರಾಣ ತೆಗೆಯುತ್ತಿದೆ. ಅದಕ್ಕೀಗ ಮತ್ತೊಬ್ಬ ಯಂಗ್ ಇನ್‌ಫ್ಲುಯೆನ್ಸರ್ ಸಾಕ್ಷ್ಯವಾಗಿದ್ದಾಳೆ. ತನ್ನ ಪ್ರವಾಸದ ಫೋಟೋ, ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ತಿದ್ದ 26 ವರ್ಷದ ಅನ್ವಿ ಕಾಮ್ದಾರ್, ರೀಲ್ಸ್ ಮಾಡುವ ಸಮಯದಲ್ಲಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಇನ್ಸ್ಟಾಗ್ರಾಮ್ (Instagram) ನಲ್ಲಿ ಟ್ರಾವೆಲ್ ಪೋಸ್ಟ್ ಗಳಿಂದ ಸುದ್ದಿಯಾಗಿದ್ದ ಅನ್ವಿ ಕಾಮ್ದಾರ್ ಗೆ ಪ್ರವಾಸದಲ್ಲಿ ಒಲವಿತ್ತು. ಇನ್ಸ್ಟಾಗ್ರಾಮ್ ನಲ್ಲಿ ಟ್ರಾವೆಲ್ (Travel) ಡಿಟೆಕ್ಟಿವ್ ಎಂದೇ ಬರೆದುಕೊಂಡಿದ್ದ ಅನ್ವಿ ಕಾಮ್ದಾರ್ (Anvi Kamdar), ರಾಯಗಢದ ಕುಂಭೆ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ನಿಪ್ಲಿ ಜಲಪಾತ, ಆದ್ರೆ ವಿಪರೀತ ಮಳೆಗೆ ಎಚ್ಚರವಿರಲಿ!
ಕುಂಭೆ ಜಲಪಾತದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದಾಗ ಅನ್ವಿ ಅಪಘಾತಕ್ಕೀಡಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರೀಲ್ ಚಿತ್ರೀಕರಣ ವೇಳೆ ಅನ್ವಿ ಕಾಮ್ದಾರ್ 300 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನ್ವಿ, ಜುಲೈ 16 ರಂದು ಏಳು ಸ್ನೇಹಿತರೊಂದಿಗೆ ಜಲಪಾತದ ಪ್ರವಾಸಕ್ಕೆ ತೆರಳಿದ್ದರು. ಈ ಪ್ರಯಾಣ ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ದುರಂತ ತಿರುವು ಪಡೆದುಕೊಂಡಿತು. ವೀಡಿಯೋ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ. ಸ್ಥಳೀಯ ಅಧಿಕಾರಿಗಳು ತಕ್ಷಣ ತುರ್ತು ಪರಿಸ್ಥಿತಿಗೆ ಸ್ಪಂದಿಸಿದ್ರು. ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿತ್ತು. ಕೋಸ್ಟ್ ಗಾರ್ಡ್ ಪಡೆಗಳೊಂದಿಗೆ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿಯ ಸಿಬ್ಬಂದಿಯಿಂದ ಹೆಚ್ಚುವರಿ ಸಹಾಯವನ್ನು ಕೋರಲಾಯಿತು. ಕಲ್ಲುಗಳು ನಿರಂತರವಾಗಿ ಕಂದಕಕ್ಕೆ ಬೀಳುತ್ತಲೇ ಇದ್ದ ಕಾರಣ, ರಕ್ಷಣಾ ಕಾರ್ಯಾಚರಣೆ ಇನ್ನಷ್ಟು ಅಡಚಣೆಯಾಗಿತ್ತು. ಆರು ಗಂಟೆಗಳ ಕಾರ್ಯಾಚರಣೆಯ ನಂತರ, ಅನ್ವಿಯನ್ನು ಹೊರತೆಗೆಯಲಾಯ್ತು. ಆದ್ರೆ ಗಂಭೀರ ಗಾಯಗೊಂಡಿದ್ದ ಅನ್ವಿಯನ್ನು ಉಳಿಸಲಾಗಲಿಲ್ಲ. ಅವರನ್ನು ಮನಗಾಂವ್ ಉಪಜಿಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಸ್ಪತ್ರೆಗೆ ದಾಖಲಿಸಿದ ಸ್ವಲ್ಪ ಸಮಯದಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಮುಲುಂಡ್ ನಿವಾಸಿಯಾಗಿರುವ ಅನ್ವಿಗೆ ಪ್ರವಾಸದಲ್ಲಿ ಆಸಕ್ತಿಯಿತ್ತು. ಅದನ್ನೇ ಅವರು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ಅನ್ವಿ ಸಿಎ ಓದಿದ್ದು, ಡೆಲಾಯ್ಟ್ ಎಂಬ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಮುಂಬೈನಲ್ಲಿ ನೆಲೆಸಿರುವ ಅನ್ವಿ ಕಾಮ್ದಾರ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಎರಡು ಲಕ್ಷ 54 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರು @theglocaljournal ಹೆಸರಿನ ಇನ್ಸ್ಟಾ ಖಾತೆಯಲ್ಲಿ ತಮ್ಮ ವಿಡಿಯೋಗಳನ್ನು ಹಂಚಿಕೊಳ್ತಿದ್ದರು.
ಈ ಘಟನೆಯ ನಂತರ ಸ್ಥಳೀಯ ಅಧಿಕಾರಿಗಳು, ತಹಸೀಲ್ದಾರ್ ಮತ್ತು ಮನಗಾಂವ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವಾಸಿಗರು ಮತ್ತು ನಾಗರಿಕರಿಗೆ ಮನವಿ ಮಾಡಿದ್ದಾರೆ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪ್ರವಾಸೋದ್ಯಮವನ್ನು ಆನಂದಿಸಬೇಕು ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿಯ ನೈಸರ್ಗಿಕ ಸೌಂದರ್ಯವನ್ನು ಆನಂದಿಸುವುದರೊಂದಿಗೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜೀವಕ್ಕೆ ಅಪಾಯ ತಂದೊಡ್ಡುವ ಅಪಾಯಕಾರಿ ವರ್ತನೆಯನ್ನು ತಪ್ಪಿಸಬೇಕು ಎಂದು ಒತ್ತಿ ಹೇಳಿದ್ದಾರೆ.
ಅನ್ವಿ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದು, ಎರಡು ದಿನಗಳ ಹಿಂದಷ್ಟೆ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಅದ್ರಲ್ಲಿ ಮಳೆಗಾಲದಲ್ಲಿ ಹೋಗಬಹುದಾದ ಐದು ಸ್ಥಳಗಳ ಪಟ್ಟಿಯನ್ನು ಅವರು ವೀಕ್ಷಕರಿಗೆ ನೀಡಿದ್ದರು.
ರೀಲ್ಸ್ ಮಾಡಲು ಹೋಗಿ ಫಾಲ್ಸ್ ನಲ್ಲಿ ಜಾರಿ ಬಿದ್ದ ದೀಪಿಕಾ ದಾಸ್!
ಇದಕ್ಕೆ ಒಂದು ದಿನ ಮೊದಲು ಅನ್ವಿ, ತಮ್ಮ ಲಡಾಖ್ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದರು. ನಾನು 20 ವರ್ಷದಲ್ಲಿದ್ದಾಗ ಈ ಪ್ರವಾಸಕೈಗೊಂಡಿದ್ದೆ ಎಂದು ಬರೆದಿದ್ದರು. ಸದಾ ಪ್ರವಾಸದಲ್ಲಿ ಬ್ಯುಸಿ ಇರ್ತಿದ್ದ ಅನ್ವಿ, 2 ಸಾವಿರ ಏಳುನೂರಕ್ಕೂ ಹೆಚ್ಚು ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.