
ವರದಿ : ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್
ಶಿವಮೊಗ್ಗ (ಜು.16): ಮಳೆಗಾಲ ಆರಂಭವಾಯ್ತು ಅಂದ್ರೆ ಉತ್ತರಕನ್ನಡ ಜಿಲ್ಲೆಯಲ್ಲಿ ಜಲಪಾತಗಳು ಮೈದುಂಬಿಕೊಳ್ಳುತ್ತವೆ. ಒಂದಕ್ಕಿಂತ ಇನ್ನೊಂದು ನಯನ ಮನೋಹರವಾಗಿರುವ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಶಿವಮೊಗ್ಗ ಜಿಲ್ಲೆಯ ಗಡಿ ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಿಂದ ಆಡುಕಟ್ಟಾ ಬಳಿ ತಿರುವು ಪಡೆದು, ಸುಮಾರು ಹತ್ತು ಕಿಲೋಮೀಟರ್ ಕ್ರಮಿಸಿದರೆ ಹೊಸೂರು ಗ್ರಾಮದ ರಸ್ತೆಯಂಚಿನ ಹೊಳೆಯಲ್ಲಿ ಜಲಪಾತವಾಗಿ ಧುಮುಕುತ್ತದೆ.
ಮಳೆಗಾಲದ ನಾಲ್ಕೈದು ತಿಂಗಳು ಧುಮ್ಮಿಕ್ಕಿ ಹರಿಯುವ ಈ ಹೊಸೂರು ಜಲಪಾತ (ನಿಪ್ಲಿ ಜಲಪಾತ) ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಅಂಬಳಿಕೆ, ಲಂಬಾಪುರ ಸೇರಿದಂತೆ ಕೆಲವು ಗ್ರಾಮಗಳಿಂದ ಮಳೆಗಾಲದಲ್ಲಿ ಹರಿದು ಬರುವ ಈ ಪುಟ್ಟ ಹೊಳೆಗೆ ಕೃಷಿ ಉಪಯೋಗಕ್ಕೆಂದು ಡ್ಯಾಂ ನಿರ್ಮಿಸಲಾಗಿದೆ.
ಉತ್ತಮ ಮಳೆಯಾದರೆ ಬೇಸಿಗೆ ಬೆಳೆಗೂ ಸಾಕಾಗುವಷ್ಟು ನೀರಿರುತ್ತದೆ. ಡ್ಯಾಂನಿಂದ ಮುಂದೆ ಈ ಹೊಳೆ ಕಲ್ಲುಬಂಡೆಗಳ ಮೇಲೆ ಚಿಮ್ಮಿ ಹರಿಯುತ್ತದೆ. ಡ್ಯಾಂನಿಂದ ಸುಮಾರು 100 ಮೀ. ದೂರದಲ್ಲಿ 8-10 ಅಡಿ ಎತ್ತರದಿಂದ ಸುಮಾರು 80 ಅಡಿ ಅಗಲದಲ್ಲಿ ಧುಮ್ಮಿಕ್ಕುವ ಈ ಹೊಳೆ ನೋಡುಗರ ಮನ ಸೆಳೆಯುತ್ತದೆ. ಇದೇ ನದಿ ಜಲಪಾತವಾಗಿ ಹರಿದಾಗ ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ನೀಡುವ ಜಲಧಾರೆ.
ಜಗತ್ಫಸಿದ್ಧ ಜೋಗದಿಂದ 20 ಕಿಲೋಮೀಟರ್ ಸಿದ್ದಾಪುರ ತಾಲ್ಲೂಕಿನ ಹುಸೂರು ಆಣೆಕಟ್ಟಿನ ಹಿನ್ನೀರು ರಮಣೀಯ ನಿಪ್ಲಿ ಫಾಲ್ಸ್ ಉದ್ಭವಕ್ಕೆ ಕಾರಣ. ಮಳೆಗಾಲದಲ್ಲಿ ಅದರಲ್ಲೂ ಜೋರು ಮಳೆ ಬಿದ್ದರೆ ಮಾತ್ರ ಫಾಲ್ಸ್ ರಮಣೀಯವಾಗಿ ಕಾಣುವುದು. ಇಲ್ಲಿ ಮಕ್ಕಳಿಂದ ಹಿರಿಯರೂ ಭಯವಿಲ್ಲದೆ, ಜಾರುವ ಆತಂಕವಿಲ್ಲದೆ ಓಡಾಡಬಹುದು. ಸುರಕ್ಷಿತಭಾವದೊಂದಿದೆ ಹರಿಯುವ ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದು. ಮೊಣಕಾಲಿನವರೆಗೂ ಏರದ ನೀರಿನಲ್ಲಿ ಮಲಗಿ, ಕೂತು ಮಸ್ತಿ ಮಾಡಲು ಮಕ್ಕಳಿಗೆ ಸಂಭ್ರಮವೋ ಸಂಭ್ರಮ.
ಹಾಲ್ನೊರೆಯಂತೆ ಬಂಡೆಗಳ ನಡುವೆ ಹರಿಯುತ್ತಾ ಸದ್ದು ಮಾಡುತ್ತಾ ಧುಮುಕಿ ಹರಿಯುವ ಮನೋಹರ ದೃಶ್ಯವನ್ನು ನೋಡುವುದೇ ಒಂದು ಚೆಂದ ಅದರಲ್ಲೂ ನಿರಂತರವಾಗಿ ಮಳೆಯಾಗುವುದರಿಂದ ನೀರಿನ ರಭಸ ಜೋರಾಗಿದ್ದು ಸ್ವರ್ಗವೇ ಧರೆಗುಳಿದಂತೆ ಭಾಸವಾಗುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಜಲಪಾತ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.