90ರ ದಶಕದಲ್ಲಿ ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಶಾಲೆಗೆ ಹೋಗ್ತಿದ್ದ ವ್ಯಕ್ತಿಯೊಬ್ಬರು ಇದೀಗ ಅಮೆರಿಕದಲ್ಲಿ ದೊಡ್ಡ ಕೆಲಸದಲ್ಲಿದ್ದಾರೆ. ಅವರಿಗೆ ತಾನು ಶಾಲೆಗೆ ಹೋಗ್ತಿದ್ದ ಬಸ್, ಡ್ರೈವರ್ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ. ಅದಕ್ಕೆ ಕಾರಿಗೆ ಬಸ್ ನಂಬರನ್ನೇ ಇಟ್ಟಿದ್ದಾರೆ. ಇದನ್ನ ಬಸ್ ಡ್ರೈವರ್ ಖುಷಿಯಿಂದ ಸ್ಮರಿಸಿಕೊಂಡಿದ್ದಾರೆ.
ಅದು 90ರದ ದಶಕ. ಬೆಂಗಳೂರಿನ ಶಾಲೆಯೊಂದಕ್ಕೆ ಹೋಗುತ್ತಿದ್ದ ಪುಟಾಣಿಗಳಿಗೆ ಕೆಎ 01, ಎಫ್ 232 ನಂಬರಿನ ಬಸ್ ಅಂದರೆ ಭಾರೀ ಪ್ರೀತಿ. ಅದರಲ್ಲಿರೋ ಡ್ರೈವರ್ ಧನಪಾಲ್ ಮಕ್ಕಳ ಕ್ಲೋಸ್ ಫ್ರೆಂಡ್. ಬಸ್‌ನ ಬಾನೆಟ್ ಏರಿ ಸ್ಕೂಲ್‌ವರೆಗೂ ಹರಟೆ ಹೊಡೆಯುತ್ತಾ, ತಮಾಷೆ ಮಾಡುತ್ತಾ ಖುಷಿ ಖುಷಿಯಾಗಿರುತ್ತಿದ್ದರು ಮಕ್ಕಳು. ಅವರಿಗೆ ಬಸ್ ಡ್ರೈವರ್ ಧನಪಾಲ್ ಮೇಲೆ ವಿಶೇಷ ಅಕ್ಕರೆ. ಧನಪಾಲ್ ಅವರಿಗೂ ಮಕ್ಕಳು ಅಂದರೆ ಬಹಳ ಪ್ರೀತಿ. ಪ್ರತೀ ವರ್ಷ ಹೊಸ ಮಕ್ಕಳು ಬರೋದು, ದೊಡ್ಡ ಮಕ್ಕಳು ಶಾಲೆ ಬಿಟ್ಟು ಉನ್ನತ ವಿದ್ಯಾಭ್ಯಾಸಕ್ಕೆ ಹೋಗೋದು ನಡೀತಾನೇ ಇತ್ತು. ಇಷ್ಟಾದರೂ ಈ ಡ್ರೈವರ್ ಧನಪಾಲ್ ಅವರು ಮಕ್ಕಳನ್ನು ಮರೆತವರಲ್ಲ. ಮಕ್ಕಳೂ ಎಷ್ಟೇ ದೊಡ್ಡವರಾದರೂ ಅವರನ್ನು ಮರೆತಿಲ್ಲ.
ಇದಕ್ಕೆ ತಾಜಾ ಉದಾಹರಣೆ ಅನ್ನುವಂಥಾ ಘಟನೆಯೊಂದನ್ನು ಬಿಎಂಟಿಸಿ ಬಸ್ ಡ್ರೈವರ್ ಧನಪಾಲ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ನಾನು 1992ರಲ್ಲಿ ಬಿಎಂಟಿಸಿ ಘಟಕ 11ರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುವಾಗ ಅನೇಕ ಶಾಲಾ ಮಕ್ಕಳಿಗೆ ನನ್ನ ಬಸ್ಸೆಂದರೆ ತುಂಬಾ ಅಚ್ಚುಮೆಚ್ಚಾಗಿತ್ತು. ಆ ಮಕ್ಕಳಲ್ಲಿ ಚೆಂಗಪ್ಪ ಮತ್ತು ಆದಿತ್ಯ ಎಂಬ ಹುಡುಗರು ನನ್ನ ವಾಹನದ ಬಾನೆಟ್ ಮೇಲೆ ಕುಳಿತು ಕೆಲವು ವರ್ಷ ಪ್ರಯಾಣ ಮಾಡಿದ್ದಾರೆ. ಅದರಲ್ಲಿ ಆದಿತ್ಯ ಈಗ ಜರ್ಮನಿಯಲ್ಲಿದ್ದಾನೆ. ಚೆಂಗಪ್ಪ ಅಮೆರಿಕಾದ ಕ್ಯಾಲಿಫೋರ್ನಿಯದಲ್ಲಿದ್ದಾನೆ. ಇತ್ತೀಚೆಗೆ ಚೆಂಗಪ್ಪ ಒಂದು ಕಾರನ್ನು ಖರೀದಿಸಿದ್ದಾನೆ. ಅದರ ನಂಬರ್ ಆಗ ನಾನು ಚಲಾಯಿಸುತ್ತಿದ್ದ ಬಿಎಂಟಿಸಿ ಬಸ್ಸಿನ ನಂಬರೇ. ಅದೇ ನಂಬರನ್ನೇ ಆತ ತೆಗೆದುಕೊಂಡು ತನ್ನ ಕಾರಿಗೆ ಇಟ್ಟುಕೊಂಡಿದ್ದಾನೆ. ಈಗಲೂ ಅವನು ನನ್ನ ಸಂಪರ್ಕದಲ್ಲಿದ್ದಾನೆ. ಅವನ ಅಭಿಮಾನಕ್ಕೆ ನಾನು ಚಿರಋಣಿ' ಎಂದು ಧನಪಾಲ್ ಬರೆದುಕೊಂಡಿದ್ದಾರೆ.
ಡೈವೋರ್ಸ್ ಫೋಟೋಶೂಟ್ ಮಾಡಿದ ಶಾಲಿನಿಯ ನರಕದ ಬದುಕು!
ಇದನ್ನು ನೋಡಿ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ಶಾಲೆಗೆ ಹೋಗುತ್ತಿದ್ದಾಗಿನ ಬಸ್, ಡ್ರೈವರ್, ಅವರ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಚೆಂಗಪ್ಪ ಅವರು ಕೊಂಡಿರೋದು ಟೆಸ್ಲಾ ಕಾರ್. ಅದರ ರಿಜಿಸ್ಟ್ರೇಶನ್ ನಂಬರ್ KA1F232. ಅವರು ಬೆಂಗಳೂರಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಧನಪಾಲ್ ಡ್ರೈವರ್ ಆಗಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆ ಬಸ್‌ನ ನಂಬರ್ ಸಹ ಇದೇ. ತನ್ನ ಬಾಲ್ಯದ ಸ್ನೇಹಿತ, ಹೀರೋನಂತಿದ್ದ ಡ್ರೈವರ್ ಧನಪಾಲ್ ಅವರಿಗೆ ಈ ಕಾರನ್ನು ನಂಬರ್ ಹಾಗೂ ತನ್ನ ಫೋಟೋದೊಂದಿಗೆ ಚೆಂಗಪ್ಪ ಕಳಿಸಿದ್ದಾರೆ. ಚೆಂಗಪ್ಪ ಅವರು ತಾನು ಹಿಂದೆ ಓಡಿಸುತ್ತಿದ್ದ ಬಸ್‌ನ ಫೋಟೋದ ಜೊತೆಗೆ ಅಂದು ಬಾಲಕನಾಗಿದ್ದ ಈಗ ಅಮೆರಿಕಾ ನಿವಾಸಿಯಾಗಿರುವ ಚೆಂಗಪ್ಪ ಅವರ ವೀಡಿಯೋ ಸಹ ಇದೆ. ಇದರಲ್ಲಿ ಚೆಂಗಪ್ಪ ಅವರು ಕಾರಿನ ಜೊತೆಗೆ ನಿಂತು ಪೋಸ್ ಕೊಟ್ಟಿದ್ದಾರೆ. ಮಕ್ಕಳ ಅಚ್ಚುಮೆಚ್ಚಿನ ಡ್ರೈವರ್ ಧನಪಾಲ್ ಹಾಗೂ ಅವರ ಬಗ್ಗೆ ಇಂದಿಗೂ ಅಭಿಮಾನ ಇಟ್ಟುಕೊಂಡಿರುವ ಚೆಂಗಪ್ಪ ಅವರ ಬಗ್ಗೆ ಇದೀಗ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸಿನಿಮಾ ಹೀರೋಗಳನ್ನು, ರೀಲ್ಸ್ ಮಾಡೋರನ್ನೇ ಹೀರೋ ಅಂದುಕೊಂಡು ಮಾಡೆಲ್ ಆಗಿ ಇಟ್ಟುಕೊಳ್ಳುತ್ತೀವಿ. ಆದರೆ ನಮ್ಮ ನಡುವೆ ಧನಪಾಲ್ ಅವರಂಥಾ ನೂರಾರು ಮಂದಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಮಕ್ಕಳ ಮನಸ್ಸಲ್ಲಿ ಎಂದೂ ಅಳಿದಂತೆ ಅಚ್ಚೊತ್ತಿರುವವರು ಇದ್ದಾರೆ. ಅವರೇ ನಿಜವಾದ ಹೀರೋಗಳು ಅನ್ನೋ ಮಾತುಗಳು ಬಂದಿವೆ.
9 ವರ್ಷದ ಹಿಂದೆ ನಾಪತ್ತೆಯಾಗಿದ್ದ ಮಗಳ ಮರಳಿ ಮನೆ ಸೇರಿಸಿದ 'ಸೀಲ್ '