ನೂರಾರು ಜನ ಬಂದರೂ ಎಲ್ಲರಿಗೂ ಉಳಿಯಲು ಲಕ್ಷುರಿ ಕೋಣೆಗಳು, ಕ್ಯೂ ನಿಲ್ಲಲು ಕಾರಣವೇ ಇಲ್ಲದ ಸಂಖ್ಯೆಯ ಬಾತ್ರೂಂಗಳು, ಎಷ್ಟೇ ವಾಹನಗಳು ಬಂದರೂ ನಿಲ್ಲಿಸಲು ಕೊರತೆಯಾಗದಷ್ಟು ಪಾರ್ಕಿಂಗ್ ಏರಿಯಾ,ಟೆನಿಸ್(Tennis), ಸ್ವಿಮ್ಮಿಂಗ್ (Swimming), ಸ್ಕ್ವಾಶ್ (Squash) ಏನೇ ಆಡಬೇಕೆಂದರೂ ಅಗತ್ಯ ಸೌಲಭ್ಯ, ಥಿಯೇಟರ್, ಜಿಮ್, ಡ್ಯಾನ್ಸ್ ರೂಂ- ಯಾವುದೊಂದಕ್ಕೂ ಹೊರಗೆ ಹೋಗುವುದೇ ಅಗತ್ಯವಿಲ್ಲದಷ್ಟು ಸೌಲಭ್ಯಗಳು, ಹೆಲಿಪ್ಯಾಡ್, ಪಾರ್ಕ್- ಇಲ್ಲಿ ಏನುಂಟು ಏನಿಲ್ಲ? ಈ ವೈಭವೋಪೇತ ವಿಲ್ಲಾಗಳು ಜಗತ್ತಲ್ಲೇ ಅತಿ ದುಬಾರಿಯವು..
ಎಲ್ಲರ್ಗೂ ಸ್ವಂತದ್ದೊಂದ್ ಮನೆ ಬೇಕು ಅನ್ನೋ ಕನಸಿರತ್ತೆ. ಅದು ಹೀಗೇ ಇರ್ಬೇಕು, ಇಷ್ಟೇ ದೊಡ್ಡ ಇರ್ಬೇಕು, ಇದೇ ಸ್ಟೈಲಲ್ ಇರ್ಬೇಕು ಅಂತೆಲ್ಲ ಯೋಚ್ಸಿ, ಸಾಧ್ಯವಾದ ಮಟ್ಟಿಗೆ ಅದಕ್ಕೆ ತಕ್ಕ ಹಾಗೆ ಕಟ್ಟಿಸಿರ್ತಾರೆ. ಆಗರ್ಭ ಶ್ರೀಮಂತರಂತೂ ನೋಡಿದವರು ಬಿಟ್ಟ ಬಾಯಿ ಬಿಟ್ಟೇ ಇರಬೇಕು ಎನ್ನುವಂತ ಲಕ್ಷುರಿಯಿಂದ ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಇಂಥ ಶ್ರೀಮಂತರ ಸಂಖ್ಯೆಯೇನು ಕಡಿಮೆಯದಲ್ಲ. ಈ ಭೂಮಿ ಮೇಲೆ ಹತ್ತಿರತ್ತಿರ 160 ಕೋಟಿ ಮನೆಗಳಿವೆ. ಆ ಮನೆಗಳಲ್ಲಿ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ ಮನೆ, ಬಂಗಲೆ, ವಿಲ್ಲಾಗಳೇ ಕೋಟ್ಯಂತರ ಸಂಖ್ಯೆಯಲ್ಲಿವೆ. ಅಂಥ ಕೋಟಿಯಲ್ಲೂ ಬೆರಳೆಣಿಕೆಯಷ್ಟು ಅತಿ ದುಬಾರಿ ಮನೆಗಳನ್ನು ಹುಡುಕಿ ತೆಗೆದಾಗ ಸಿಕ್ಕ ಮನೆಗಳು ಯಾವೆಲ್ಲ ಗೊತ್ತಾ? ಅದರಲ್ಲಿ ನಮ್ಮ ಭಾರತೀಯರ ಮನೆಗಳಿವೆಯಾ? ಇವುಗಳ ಬೆಲೆಯೇನು? ಈ ಮನೆಗಳೊಳಗೆ ಏನೆಲ್ಲ ಇವೆ ತಿಳ್ಕೋಬೇಕಾ?
1. ಬಕಿಂಗ್‌ಹ್ಯಾಂ ಪ್ಯಾಲೇಸ್ ()- 155 ಕೋಟಿ ಡಾಲರ್ (ಸುಮಾರು 11,558 ಕೋಟಿ ರುಪಾಯಿ)
ಲಂಡನ್ನಿನಲ್ಲಿರುವ ಈ ಪ್ಯಾಲೇಸ್ ಈಗಲೂ ಬ್ರಿಟಿಷ್ ರಾಜಮನೆತನದ ವಾಸದರಮನೆ. 1703ರಲ್ಲಿ ಟೌನ್‌ಹೌಸ್ ಆಗಿ ನಿರ್ಮಾಣವಾದ ಈ ಬೃಹತ್ ಮನೆಯಲ್ಲಿ 775 ಕೋಣೆಗಳಿವೆ. ಅದರಲ್ಲಿ 188 ಸ್ಟಾಫ್ ರೂಂಗಳು. ಇದಲ್ಲದೆ 52 ಬೆಡ್‌ರೂಂ, 92 ಆಫೀಸ್ ರೂಂ, 78 ಬಾತ್‌ರೂಂ ಹಾಗೂ 19 ಸ್ಟೇಟ್ ರೂಂಗಳಿವೆ. ಖಂಡಿತವಾಗೂ ಈ ಮನೆಯಲ್ಲಿ ಕಾಲ ಕಳೆದವರು ಎಂದಿಗೂ ಬಾತ್‌ರೂಂಗಾಗಿ ಸ್ಪರ್ಧೆಗೆ ಬಿದ್ದಿರಲು ಸಾಧ್ಯವಿಲ್ಲ ಅನ್ನೋದಂತೂ ನಿಶ್ಚಿತ!
2. ಆ್ಯಂಟಿಲ್ಲಾ (Antilla)- 100 ಕೋಟಿ ಡಾಲರ್ (ಸುಮಾರು 7,456 ಕೋಟಿ ರುಪಾಯಿ)
ಭೂಮಿಯ ಮೇಲಿನ ಮನೆಗಳಲ್ಲೇ ಅತಿ ದುಬಾರಿ ಮನೆಗಳಲ್ಲೊಂದಾಗಿರುವ ಆ್ಯಂಟಿಲ್ಲಾ ಭಾರತದಲ್ಲಿದೆ. ಮುಖೇಶ್ ಅಂಬಾನಿ(Ambani)ಗೆ ಸೇರಿರುವ ಇದು ಹರಡಿರುವ ಸ್ಥಳಾವಕಾಶ ನೋಡಿದರೆ ಹಲವಾರು ಆಫೀಸ್ ಬಿಲ್ಡಿಂಗ್‌ಗಳಿಗೇ ಹೊಟ್ಟೆಕಿಚ್ಚಾದೀತು. ಹೌದು, 400,000 ಚದರ ಅಡಿಗಳಿಗೆ ಹಬ್ಬಿ ನಿಂತಿದೆ 27 ಮಹಡಿಗಳ ಆ್ಯಂಟಿಲ್ಲಾ. ಇದರಲ್ಲಿ 6 ಅಂಡರ್‌ಗ್ರೌಂಡ್ ಪಾರ್ಕಿಂಗ್ ಲಾಟ್‌ಗಳಿದ್ದರೆ, 3 ಹೆಲಿಪ್ಯಾಡ್‌ಗಳಿವೆ. ಈ ಮನೆಯನ್ನು ನೀಟಾಗಿಟ್ಟು, ಎಲ್ಲ ಕೆಲಸ ಕಾರ್ಯಗಳನ್ನು ನಿಭಾಯಿಸಿಕೊಂಡು ಹೋಗಲು 600 ಮಂದಿ ಸ್ಟಾಫ್‌ಗಳಿದ್ದಾರೆ.
3. ವಿಲ್ಲಾ ಲಿಯೋಪೋಲ್ಡಾ(Villa Liofolda)- 750 ಮಿಲಿಯನ್ ಡಾಲರ್ (5590 ಕೋಟಿ ರುಪಾಯಿ)
ಬೆಲ್ಜಿಯಂ ಕಿಂಗ್ ಲಿಯೋಪಲ್ಡ್ ಈ ಮನೆಯನ್ನು ಕಟ್ಟಿಸಿದ್ದು ತನ್ನ ಪ್ರೀತಿಯ ಪತ್ನಿಗಾಗಿ. ಸಧ್ಯ ಬ್ರೆಜಿಲಿಯನ್ ಸಾಮಾಜಿಕ ಹೋರಾಟಗಾರ್ತಿ ಲಿಲಿ ಸಫ್ರಾ ಈ ಮನೆಯೊಡತಿಯಾಗಿದ್ದಾರೆ. ಈ ಮನೆಯ ಸುತ್ತಲೂ ಇರೋ ಉದ್ಯಾನ ನೋಡಿಕೊಳ್ಳಲೆಂದೇ 50 ಜನ ಸ್ಟಾಫ್‌ಗಳಿದ್ದಾರೆ.
ಮಡದಿಗಾಗಿ ತಾಜ್ ಮಹಲ್‌ನಂತೆ ಮನೆ ಕಟ್ಟಿಸಿದ ಪತಿ
4. ಫೋರ್ ಫೇರ್‌ಫೀಲ್ಡ್ ಪಾಂಡ್ (Four Fairfield Pond)- 248.5 ಮಿಲಿಯನ್ ಡಾಲರ್
ಈ ಲಕ್ಷುರಿ ಮನೆಯ ವಿಶೇಷ ಅಂದರೆ, ಇದಕ್ಕೆ ತನ್ನದೇ ಅದ ಪವರ್ ಪ್ಲ್ಯಾಂಟ್ ಇದೆ. 29 ಬೆಡ್‌ರೂಂಗಳು, 39 ಬಾತ್‌ರೂಂಗಳು, ಬೌಲಿಂಗ್ ಏರಿಯಾ, ಟೆನ್ನಿಸ್ ಕೋರ್ಟ್, ಸ್ಕ್ವಾಶ್ ಕೋರ್ಟ್, ಬಾಸ್ಕೆಟ್‌ಬಾಲ್ ಕೋರ್ಟ್, ಡೈನಿಂಗ್ ರೂಂ, 3 ಸ್ವಿಮ್ಮಿಂಗ್ ಪೂಲ್‌ಗಳು, ಜೊತೆಗೆ 1 ಲಕ್ಷ ಚದರ ಅಡಿಗಳಿಗೂ ಹೆಚ್ಚಿನ ಇಂಟೀರಿಯರ್ ಸ್ಪೇಸ್ ಇದರಲ್ಲಿವೆ. ನ್ಯೂಯಾರ್ಕ್‌ನ ಸಾಗಾಪೊನಾಕ್ನಲ್ಲಿ 63 ಎಕರೆಗೆ ಹಬ್ಬಿ ನಿಂತಿರುವ ಈ ಬಂಗಲೆ ಉದ್ಯಮಿ ಇರಾ ರೆನ್ನೆರ್ಟ್‌ಗೆ ಸೇರಿದೆ.
5. ಕೆನ್ಸಿಂಗ್ಟನ್ ಪ್ಯಾಲೇಸ್ ಗಾರ್ಡನ್ಸ್ (Kensington Palace Gardens)- 222 ದಶಲಕ್ಷ ಡಾಲರ್
'ಬಿಲಿಯನೇರ್ಸ್ ರೋ' ಎಂದೇ ಹೆಸರಾಗಿರುವ ಲಂಡನ್ನಿನ ಪ್ರಮುಖ ಏರಿಯಾದಲ್ಲಿ ಈ ಕಟ್ಟಡ ಇದೆ. ಇದರ ಅಕ್ಕಪಕ್ಕದ ಮನೆಯವರಾಗಿ ಪ್ರಿನ್ಸ್ ವಿಲಿಯಮ್ ಹಾಗೂ ಕೇಟ್ ಮಿಡಲ್ಟನ್ ಮುಂತಾದ ಶ್ರೀಮಂತ ದಿಗ್ಗಜರಿದ್ದಾರೆ. ಈ ಬಂಗಲೆಯಲ್ಲಿ 12 ಬೆಡ್‌ರೂಂಗಳು, ಒಂದು ಒಳಾಂಗಣ ಸ್ವಿಮ್ಮಿಂಗ್ ಪೂಲ್, ಟರ್ಕಿಶ್ ಬಾತ್‌ರೂಮ್ಸ್ ಹಾಗೂ 20 ಕಾರುಗಳನ್ನು ನಿಲ್ಲಿಸಲು ಸಾಕಾಗುವಂತೆ ಪಾರ್ಕಿಂಗ್ ಲಾಟ್ ಇದೆ.
ಮನೆಯ ಹಲ್ಲಿ ಕಾಟಕ್ಕೆ ಇಲ್ಲಿವೆ ಪರಿಹಾರ
6. ಎಲ್ಲಿಸನ್ ಎಸ್ಟೇಟ್ (Ellison Estate)- 200 ದಶಲಕ್ಷ ಡಾಲರ್
ಟೆಕ್ನಾಲಜಿ (Technology) ಇಂಡಸ್ಟ್ರಿ ಫಾಲೋ ಮಾಡುವವರಿಗೆ ಎಲ್ಲಿಸನ್ ಹೆಸರು ಗೊತ್ತೇ ಇರುತ್ತದೆ. ಒರಾಕಲ್ (Oracle)ಕಂಪನಿಯ ಸಹ ಸಂಸ್ಥಾಪಕ (co-founder) ಹಾಗೂ ಛೇರ್ಮನ್ ಆಗಿರುವ ಲ್ಯಾರಿ ಎಲ್ಲಿಸನ್‌ಗೆ ಸೇರಿದ ಈ ಎಸ್ಟೇಟ್ ಕ್ಯಾಲಿಫೋರ್ನಿಯಾದ ವುಡ್‌ಸೈಡ್ನಲ್ಲಿ 23 ಎಕರೆಗಳಲ್ಲಿ ಹಬ್ಬಿ ನಿಂತಿದೆ. ಸುಮಾರು 10 ಕಟ್ಟಡಗಳ ಸಮುಚ್ಚಯವಾಗಿರುವ ಈ ವಿಲ್ಲಾದಲ್ಲಿ ಟೀ ಹೌಸ್, ಬಾತ್ ಹೌಸ್, ಕೊಯ್ ಪಾಂಡ್ ಹಾಗೂ ಮನುಷ್ಯ ನಿರ್ಮಿತ ಕೆರೆ ಇದೆ. ಇದಷ್ಟೇ ಅಲ್ಲದೆ ಅಮೆರಿಕಾದಲ್ಲಿ ಎಲ್ಲಿಸನ್ ಇನ್ನೂ ಹಲವು ಮನೆಗಳನ್ನು ಹೊಂದಿದ್ದಾರೆ.