
ಈ ವರ್ಷ ದೇಶದೊಳಗಿನ ಪ್ರಸಿದ್ಧ ತಾಣಗಳಿಗೆ ಪ್ರವಾಸ ಕೈಗೊಳ್ಳಬೇಕು ಎಂಬ ನಿರ್ಧಾರ ಕೈಗೊಂಡಿದ್ದೀರಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್ ಇದೆ.ಕೇಂದ್ರ ಪ್ರವಾಸೋದ್ಯಮ ಇಲಾಖೆ ದೇಶದ ಆಯ್ದ 15 ತಾಣಗಳಿಗೆ ಪ್ರವಾಸ ಕೈಗೊಳ್ಳುವವರಿಗೆ ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ.‘ದೇಖೋ ಅಪ್ನ ದೇಶ್’ ಆಂದೋಲನದಡಿಯಲ್ಲಿ ಈ ಅವಕಾಶವನ್ನು ನೀಡಲಾಗುತ್ತಿದ್ದು, 2022ರ ತನಕ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.ಈ ಆಂದೋಲನದಡಿಯಲ್ಲಿ ಆಯ್ದ 15 ತಾಣಗಳಿಗೆ ಭೇಟಿ ನೀಡಿ, ಅಲ್ಲಿನ ಫೋಟೋವನ್ನು ದೇಖೋ ಅಪ್ನ ದೇಶ್ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡುವ ಪ್ರವಾಸಿಗರ ಪ್ರವಾಸ ವೆಚ್ಚವನ್ನು ಸಚಿವಾಲಯ ಭರಿಸಲಿದೆ. ಆದರೆ, ಇಲ್ಲೊಂದು ಕಂಡೀಷನ್ ಇದೆ, ನೀವು ನಿಮ್ಮ ರಾಜ್ಯವನ್ನು ಬಿಟ್ಟು ಹೊರ ರಾಜ್ಯಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ ಮಾತ್ರ ಈ ಸೌಲಭ್ಯ ಪಡೆಯಲು ಅರ್ಹತೆ ಪಡೆಯುತ್ತೀರಿ.
ಪ್ರವಾಸ: ಸೆಕೆಂಡ್ ಸಿಟಿ ಟ್ರಾವೆಲಿಂಗ್‍ಗೆ ರೆಡಿನಾ ನೀವು?
ಯಾವೆಲ್ಲ ತಾಣಗಳಿಗೆ ಪ್ರವಾಸಕ್ಕೆ ಹೋದ್ರೆ ಈ ಸೌಲಭ್ಯ ಸಿಗುತ್ತದೆ?:
ಮಹಾಬೋಧಿ ದೇವಾಲಯ: ಬಿಹಾರದ ಬುದ್ಧ ಗಯಾದಲ್ಲಿರುವ ಈ ದೇವಾಲಯ,12 ಎಕರೆ ಪ್ರದೇಶವನ್ನೊಳಗೊಂಡಿದೆ. ಚಕ್ರವರ್ತಿ ಅಶೋಕನಿಂದ ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗುವ ಈ ಸ್ಥಳದಲ್ಲೇ ಗೌತಮ ಬುದ್ಧನಿಗೆ ಜ್ಞಾನೋದಯವಾಗಿತ್ತು ಎಂದು ಹೇಳಲಾಗುತ್ತದೆ.ಬುದ್ಧ ಗಯಾವು ಪಟ್ನಾದಿಂದ 90 ಕಿ.ಮೀ. ದೂರದಲ್ಲಿದೆ. ಬೆಳಗ್ಗೆ 5ರಿಂದ ರಾತ್ರಿ 9ರ ತನಕ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.
ಕಾಝೀರಂಗ ರಾಷ್ಟ್ರೀಯ ಉದ್ಯಾನ: ಅಸ್ಸಾಂನ ಬ್ರಹ್ಮಪುತ್ರ ನದಿಯ ದಕ್ಷಿಣ ತೀರದಲ್ಲಿರುವ ಕಾಝೀರಂಗ ರಾಷ್ಟ್ರೀಯ ಉದ್ಯಾನವನ್ನು ಯುನೆಸ್ಕೋ 1985ರಲ್ಲಿ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಏಕ ಕೊಂಬಿನ ಘೇಂಡಾಮೃಗಗಳಿಗೆ ಹೆಸರುವಾಸಿಯಾದ ತಾಣ ಇದಾಗಿದೆ.ಕಾಝೀರಂಗಕ್ಕೆ ಅತ್ಯಂತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣ ಫುರ್ಕಟಿಂಗ್. ಗುವಾಹಟಿ ಹಾಗೂ ಜೊರ್ಹಟ್ ಅತ್ಯಂತ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳು.
ಕುಮಾರಕೊಮ್: ಕೇರಳದ ಕೊಟ್ಟಾಯಂಗೆ ಸಮೀಪದಲ್ಲಿರುವ ಕುಮಾರಕೊಮ್ ಹಿನ್ನೀರು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ತಾಣವಾಗಿದೆ.ಇದು ಅನೇಕ ದ್ವೀಪಗಳ ಸಮೂಹವಾಗಿದ್ದು, ಪಕ್ಷಿಧಾಮವೂ ಆಗಿದ್ದು, ಬೋಟಿಂಗ್ ಸೌಲಭ್ಯ ಹೊಂದಿದೆ.
ಗೋವಾಕ್ಕೆ ಹೋದ್ರೆ ಈ ಜಾಗಗಳನ್ನು ನೋಡೋದು ಮರೀಬೇಡಿ
ಮಹಾಬಲೀಪುರಂ: ತಮಿಳುನಾಡಿನಲ್ಲಿರುವ ಮಹಾಬಲೀಪುರಂ ಸ್ಮಾರಕಗಳನ್ನು 7 ಹಾಗೂ 8ನೇ ಶತಮಾನಗಳಲ್ಲಿ ನಿರ್ಮಿಸಲಾಗಿತ್ತು.ಚೆನ್ನೈನಿಂದ 58 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ಪಲ್ಲವ ರಾಜರು ನಿರ್ಮಿಸಿದ್ದರು. 1984ರಲ್ಲಿ ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿತ್ತು. ಮಹಾಬಲೀಪುರಂಗೆ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣ ಛೆನ್ಗಳ್ಪಟ್ಟು ಹಾಗೂ ವಿಮಾನ ನಿಲ್ದಾಣ ಚೆನ್ನೈ.
ಹುಮಾಯುನ್ ಸ್ಮಾರಕ: ಮೊಘಲ್ ದೊರೆ ಅಕ್ಬರ್ 1569 ಹಾಗೂ 1570ರ ನಡುವೆ ನಿರ್ಮಿಸಿದ ಈ ಸ್ಮಾರಕ 139 ಅಡಿ ಎತ್ತರದ ಗೋಪುರ ಹೊಂದಿದೆ. ತಾಜ್ ಮಹಲ್ ನಿರ್ಮಾಣಕ್ಕೆ ಈ ಸ್ಮಾರಕವೇ ಸ್ಫೂರ್ತಿ ಎಂದು ಹೇಳಲಾಗುತ್ತದೆ. ದೆಹಲಿಯ ನಿಜಾಮುದ್ದಿನ್ ದರ್ಗಾದ ಪಕ್ಕದಲ್ಲಿರುವ ಈ ಸ್ಮಾರಕಕ್ಕೆ ಜೆಎಲ್‍ಎನ್ ಸ್ಟೇಡಿಯಂ ಹತ್ತಿರದಲ್ಲಿರುವ ಮೆಟ್ರೋ ನಿಲ್ದಾಣವಾಗಿದೆ. ಹುಮಾಯುನ್ ಸ್ಮಾರಕದಿಂದ ನಿಜಾಮುದ್ದಿನ್ ರೈಲ್ವೆ ಸ್ಟೇಷನ್ 2.2 ಕಿ.ಮೀ. ದೂರದಲ್ಲಿದೆ.
ಸೋಮನಾಥ ದೇವಾಲಯ: ಗುಜರಾತ್‍ನ ಸೌರಾಷ್ಟ್ರದ ಪ್ರಭಾಸ್ ಪಟನ್‍ನಲ್ಲಿರುವ ಈ ದೇವಾಲಯವು ಭಾರತದ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾಗಿದೆ. ಸೋಮನಾಥ್‍ದಿಂದ ಭಾರತದ ಪ್ರಮುಖ ನಗರಗಳಿಗೆ ರೈಲ್ವೆ ಸಂಪರ್ಕವಿದೆ.
ಭಾರತೀಯರು ಶೋ ಆಫ್‌ಗಾಗಿ ಪ್ರವಾಸ ಹೋಗುತ್ತಾರಂತೆ!
ಈ ಮೇಲಿನ ಸ್ಥಳಗಳಷ್ಟೇ ಅಲ್ಲ, ನಮ್ಮ ರಾಜ್ಯದ ಐತಿಹಾಸಿಕ ತಾಣ ಹಂಪಿ, ಆಗ್ರಾದ ತಾಜ್‍ಮಹಲ್, ಫತ್ತೇಪುರ್ ಸಿಕ್ರಿ, ಮಹಾರಾಷ್ಟ್ರದಲ್ಲಿರುವ ಅಜಂತ-ಎಲ್ಲೋರ ಗುಹಾಂತರ ದೇವಾಲಯ, ದೆಹಲಿಯ ಕೆಂಪುಕೋಟೆ ಹಾಗೂ ಕುತುಬ್ ಮಿನಾರ್, ಗೋವಾದ ಕೊಲ್ವ, ರಾಜಸ್ಥಾನದ ಅಮೆರ್ ಕೋಟೆ, ಗುಜರಾತ್‍ನ ಧೋಲವಿರ ಹಾಗೂ ಮಧ್ಯಪ್ರದೇಶದ ಖಜುರಹೋ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕೋನಾರ್ಕ್‍ದ ಸೂರ್ಯ ದೇವಾಲಯವನ್ನು ಕೂಡ ಈ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಕೇಂದ್ರ ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.