ಪ್ರವಾಸ: ಸೆಕೆಂಡ್ ಸಿಟಿ ಟ್ರಾವೆಲಿಂಗ್‍ಗೆ ರೆಡಿನಾ ನೀವು?

By Suvarna NewsFirst Published Jan 28, 2020, 11:34 AM IST
Highlights

ಈ ವರ್ಷ ವಿದೇಶಕ್ಕೆ ಟೂರ್ ಹೋಗುವ ಪ್ಲ್ಯಾನ್ ಇದೆಯಾ? ಹಾಗಿದ್ರೆ ಜನಪ್ರಿಯ ತಾಣಗಳ ಜೊತೆಗೆ ಪ್ರಸಿದ್ಧಿ ಹೊಂದಿರದ ಒಂದಿಷ್ಟು ನಗರಗಳಿಗೆ ಹೋಗುವ ಯೋಜನೆ ಸಿದ್ಧಪಡಿಸುವತ್ತ ಗಮನ ಹರಿಸಿ. ಏಕೆಂದ್ರೆ ಈ ವರ್ಷ ಸೆಕೆಂಡ್ ಸಿಟಿ ಟ್ರಾವೆಲಿಂಗ್ ಸದ್ದು ಮಾಡುವ ನಿರೀಕ್ಷೆಯಿದೆ.

ನಿಮಗೆ ಟ್ರಾವೆಲಿಂಗ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗಿದ್ರೆ 2020ರಲ್ಲಿ ಈ ಕ್ಷೇತ್ರದ ಹೊಸ ಟ್ರೆಂಡ್‍ಗಳ ಬಗ್ಗೆ ತಿಳಿದುಕೊಳ್ಳದಿದ್ರೆ ಹೇಗೆ ಅಲ್ವಾ? ಕಳೆದ ದಶಕವಂತೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅನೇಕ ಟ್ರೆಂಡ್‍ಗಳನ್ನು ಸೃಷ್ಟಿಸುವ ಮೂಲಕ ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗಿತ್ತು.ಇನ್ನು ಈ ದಶಕದ ಪ್ರಾರಂಭದಲ್ಲೇ ಹೊಸ ಟ್ರೆಂಡ್‍ವೊಂದು ಎಲ್ಲರ ಗಮನ ಸೆಳೆಯುವ ಲಕ್ಷಣಗಳು ಕಾಣಿಸುತ್ತಿದೆ. ಅದೇ ‘ಸೆಕೆಂಡ್ ಸಿಟಿ ಟ್ರಾವೆಲಿಂಗ್’. ಅರೇ, ಇದೇನಿದು ಅಂತೀರಾ? ಹೆಚ್ಚು ಜನಪ್ರಿಯವಲ್ಲದ ತಾಣಗಳಿಗೆ ಪ್ರವಾಸಕ್ಕೆ ಹೋಗೋದು.ಪ್ರವಾಸಿಗರಿಗೆ ಅಷ್ಟಾಗಿ ತಿಳಿಯದ ರಮಣೀಯ ಸ್ಥಳಗಳು ಈ ಜಗತ್ತಿನಲ್ಲಿ ಸಾಕಷ್ಟಿವೆ.ಅಂಥ ಸ್ಥಳಗಳನ್ನು ಈ ವರ್ಷದ ಟ್ರಾವೆಲಿಂಗ್ ಲಿಸ್ಟ್ನಲ್ಲಿ ಸೇರಿಸಿಕೊಳ್ಳುವ ಟ್ರೆಂಡ್ ಹುಟ್ಟಿಕೊಂಡಿದೆ.ಅದರಲ್ಲೂ ಅಂತಾರಾಷ್ಟ್ರೀಯ ಟೂರಿಸ್‍ಂನಲ್ಲಿ ಇದು ಸಿಕ್ಕಾಪಟ್ಟೆ ಸದ್ದು ಮಾಡುವ ಸೂಚನೆಗಳು ಕಾಣುತ್ತಿವೆ. 

ಭಾರತೀಯರು ಶೋ ಆಫ್‌ಗಾಗಿ ಪ್ರವಾಸ ಹೋಗುತ್ತಾರಂತೆ!

ಈ ಟ್ರೆಂಡ್‍ಗೆ ಕಾರಣವೇನು?: ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಹೋಗೋದು ಕೂಡ ಟ್ರೆಂಡ್ ಆಗಿದೆ.ಹಿಂದೆಲ್ಲ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ವರ್ಷಕ್ಕೋ ಅಥವಾ ಎರಡೂ ವರ್ಷಕ್ಕೊಮ್ಮೆಯೂ ತೀರ್ಥಕ್ಷೇತ್ರಗಳು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ನಾಲ್ಕಾರು ದಿನ ಪ್ರವಾಸಕ್ಕೆ ಹೋಗುವ ರೂಢಿಯಿತ್ತು.ಆದರೆ,ಇಂದು ಈ ಟ್ರೆಂಡ್ ಸಂಪೂರ್ಣ ಬದಲಾಗಿದೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ಪ್ರವಾಸಕ್ಕೆ ಹೋಗುವುದು ಕಾಮನ್ ಆಗಿಬಿಟ್ಟಿದೆ. ಇಂದು ಪತಿ-ಪತ್ನಿ ಇಬ್ಬರೂ ಉದ್ಯೋಗಸ್ಥರಾಗಿರುವ ಕಾರಣ ಪರಸ್ಪರ ಜೊತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಮಕ್ಕಳ ಕಡೆಗೂ ಗಮನ ನೀಡಲಾಗುವುದಿಲ್ಲ. ಹೀಗಾಗಿ ಆಗಾಗ ರಜೆ ಹಾಕಿ ಎಲ್ಲದರೂ ದೂರದ ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿ ನಾಲ್ಕೈದು ದಿನ ಕಳೆದು ಬರುವ ಪರಿಪಾಠ ಇಂದು ಹೆಚ್ಚುತ್ತಿದೆ. ಪರಿಣಾಮವಾಗಿ ಕೆಲವೊಂದು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರ ಹರಿವು ಸಿಕ್ಕಾಪಟ್ಟೆ ಹೆಚ್ಚಿದ್ದು, ನಿರ್ವಹಣೆ ಮಾಡುವುದೇ ಕಷ್ಟಕರವಾಗಿ ಪರಿಣಮಿಸಿದೆ.ಉದಾಹರಣೆಗೆ ಕಳೆದ ದಶಕದ ಅಂತ್ಯದಲ್ಲಿ ಆಮ್‍ಸ್ಟ್ರಡಮ್ ಹಾಗೂ ವೆನಿಸ್‍ಗೆ ಪ್ರವಾಸಿಗರ ಹರಿವು ಹೆಚ್ಚಿದ ಹಿನ್ನಲೆಯಲ್ಲಿ ಭೇಟಿ ನೀಡದಂತೆ ನಿರ್ಬಂಧ ವಿಧಿಸಲಾಗಿತ್ತು. ಪೆರುವಿನ ಮಚ್ಚು-ಪಿಚ್ಚುಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿದ ಕಾರಣಕ್ಕೆ ಕೆಲವೊಂದು ಐತಿಹಾಸಿಕ ಸ್ಥಳಗಳಿಗೆ ಹಾನಿಯಾಗಿರುವುದು ವರದಿಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಜನಪ್ರಿಯ ಪ್ರವಾಸಿ ತಾಣಗಳ ಮೇಲಿನ ಪ್ರವಾಸಿಗರ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ನಿಟ್ಟಿನಲ್ಲಿ ಕೆಲವೊಂದು ರಾಷ್ಟ್ರಗಳು ಈಗಾಗಲೇ ‘ಸೆಕೆಂಡ್ ಸಿಟಿ ಟ್ರಾವೆಲಿಂಗ್‍' ಗೆ ಮಹತ್ವ ನೀಡಲಾರಂಭಿಸಿವೆ. 

ಆಯಾಸವಿಲ್ಲದ ಪ್ರವಾಸಕ್ಕಿವೆ ಹತ್ತಾರು ದಾರಿಗಳು

ಸೆಕೆಂಡ್ ಸಿಟಿ ಟ್ರಾವೆಲಿಂಗ್ ಹೇಗೆ?: ಸೆಕೆಂಟ್ ಸಿಟಿ ಟ್ರಾವೆಲರ್ ತಾನು ಭೇಟಿ ನೀಡುವ ದೇಶದಲ್ಲಿನ ಜನಪ್ರಿಯತೆ ಗಳಿಸಿರದ ತಾಣಗಳಿಗೆ ಭೇಟಿ ನೀಡುತ್ತಾನೆ.ಇದರಿಂದ ಜನಪ್ರಿಯ ತಾಣಗಳ ಮೇಲಿನ ಪ್ರವಾಸಿಗರ ಹೊರೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ.ಅಲ್ಲದೆ, ಜನಜಂಗುಳಿ ಹೆಚ್ಚಿರುವ ಸ್ಥಳಗಳು ಕೆಲವು ಪ್ರವಾಸಿಗರಿಗೆ ಇಷ್ಟವಾಗುವುದಿಲ್ಲ. ಆ ದೇಶದ ಸಂಸ್ಕøತಿ, ಜನಜೀವನ, ಆಚಾರ-ವಿಚಾರಗಳನ್ನು ತಿಳಿಯುವ ಕುತೂಹಲದಿಂದ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚು ಜನಪ್ರಿಯವಲ್ಲದ ತಾಣಗಳೇ ಜಾಸ್ತಿ ಇಷ್ಟವಾಗುತ್ತವೆ.ಅಲ್ಲದೆ,ಅಲ್ಲಿನ ಸ್ಥಳೀಯರೊಂದಿಗೆ ಸುಲಭವಾಗಿ ಬೆರೆತು ಆ ನೆಲದ ಆಚಾರ-ವಿಚಾರ, ಕಲೆ-ಸಂಸ್ಕøತಿಯನ್ನು ಅರಿಯಲು ಸಾಧ್ಯವಾಗುತ್ತದೆ. ಬುಕ್ಕಿಂಗ್ ಡಾಟ್ ಕಾಮ್ ವರದಿ ಪ್ರಕಾರ ಶೇ.51ರಷ್ಟು ಟ್ರಾವೆಲರ್ಸ್ ಹೆಚ್ಚು ಜನಪ್ರಿಯವಲ್ಲದ ಶುದ್ಧ ಪರಿಸರವನ್ನು ಹೊಂದಿರುವ ನಗರಗಳನ್ನು ಹುಡುಕುತ್ತಾರಂತೆ. ಅಂದರೆ ಜನಪ್ರಿಯ ನಗರಗಳಿಗೆ ಪರ್ಯಾಯವಾದ ನಗರಗಳನ್ನು ಇಂದಿನ ಟ್ರಾವೆಲರ್ಸ್ ಇಷ್ಟಪಡುತ್ತಿದ್ದಾರೆ. 2018ರಲ್ಲಿ ಅಮೆರಿಕನ್ ಎಕ್ಸ್ಪ್ರೆಸ್ ಟ್ರಾವೆಲ್ಸ್ ಟ್ರೆಂಡ್ ಫೋರ್‍ಕಾಸ್ಟ್ ನೀಡಿರುವ ವರದಿ ಪ್ರಕಾರ ಬಹುತೇಕ ಪ್ರವಾಸಿಗರು ಹೆಚ್ಚು ಜನಪ್ರಿಯವಲ್ಲದ ತಾಣಗಳನ್ನು ನೋಡಲು ಇಷ್ಟಪಡುತ್ತಾರಂತೆ. ಅಷ್ಟೇ ಅಲ್ಲ, ಅಲ್ಲಿನ ಹೋಟೆಲ್‍ಗಳು, ಶಾಪ್‍ಗಳು ಹಾಗೂ ಬೇಕರಿಗಳಿಗೆ ಭೇಟಿ ನೀಡಿ ಹೊಸ ರುಚಿಗಳನ್ನು ಟೆಸ್ಟ್ ಮಾಡಲು ಬಯಸುತ್ತಾರಂತೆ. ಸೋ ಈ ವರ್ಷ ನೀವು ಟ್ರಾವೆಲ್ ಪ್ಲ್ಯಾನ್ ಮಾಡುವಾಗ ಸೆಕೆಂಡ್ ಸಿಟಿಗಳನ್ನು ಸೇರಿಸಲು ಮರೆಯಬೇಡಿ.ಹಾಗಂತ ಜನಪ್ರಿಯ ತಾಣಗಳಿಗೆ ಹೋಗಲೇಬಾರದು ಎಂದು ಹೇಳುತ್ತಿಲ್ಲ. ಆ ತಾಣಗಳೊಂದಿಗೆ ಈ ನಗರಗಳನ್ನು ಕೂಡ ಸೇರಿಸಿ.ಆದರೆ,ಅಂಥ ನಗರಗಳನ್ನು ಆಯ್ಕೆ ಮಾಡುವ ಮುನ್ನ ಸಾಕಷ್ಟು ರಿಸರ್ಚ್ ವರ್ಕ್ ಮಾಡಲು ಮಾತ್ರ ಮರೆಯಬೇಡಿ. 

click me!