* ಒಂದು ವಾರದಿಂದ ನಿರಂತರ ಮಳೆ
* ಉಡುಪಿಯಲ್ಲಿದೆ ಮಳೆಗಾಲದ ಜಲಪಾತಗಳು
* ಮಣಿಪಾಲದ ಅರ್ಬಿ ಜಲಪಾತ ಮನಮೋಹಕ
ಉಡುಪಿ, (ಜುಲೈ.09): ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು ಸಾಮಾನ್ಯವಾಗಿ ಪಶ್ಚಿಮ ಘಟಗಳ ಸಾಲಿನಲ್ಲಿ ಹಲವಾರು ರೀತಿಯ ಜಲಪಾತಗಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತವೆ. ಅಂತೆಯೇ ಕರಾವಳಿಯಲ್ಲಿಯೂ ಪುಟ್ಟ ತೊರೆಗಳು ಮೋಹಕ ಜಲಪಾತಗಳಾಗಿ ಜೀವ ತಳೆಯುವುದು ಸರ್ವೆ ಸಾಮಾನ್ಯ. ಅಂತಹದೇ ಒಂದು ಜಲಪಾತ ಶೈಕ್ಷಣಿಕ ನಗರಿ ಎಂದೇ ಹೆಸರುವಾಸಿಯಾಗಿರುವ ಮಣಿಪಾಲದ ಹೊರಭಾಗದಲ್ಲಿ ಸದ್ದು ಮಾಡುತ್ತಿದ್ದು ಅದುವೇ ಅರ್ಬಿ ಜಲಪಾತ.
ಡಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿರುವ ಅರ್ಬಿ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದು ಬಂದಂತಹ ಅನುಭವ.
undefined
ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ, ದಾಖಲೆ ಮಳೆ ಎಲ್ಲೆಲ್ಲಿ ಎಷ್ಟೆಷ್ಟು..?
ಹಲವಾರು ಕವಲುಗಳಾಗಿ ಶುಭ್ರ ನೀರಿನಿಂದ ಹರಿಯುವ ಅರ್ಬಿ ಜಲಪಾತವನ್ನು ನೋಡಲು ಪ್ರವಾಸಿಗರ ದಂಡೇ ಬರುತ್ತದೆ. ಯಾವುದೇ ಅಪಾಯವಿಲ್ಲದೆ ಸಮಾನಾಂತರವಾಗಿ ಈ ನೀರು ಹರಿಯುವುದರಿಂದ ಎಂಜಾಯ್ ಮಾಡುವವರಿಗೆ ಯಾವುದೇ ಅಡ್ಡಿಯಿಲ್ಲ. ಇದೀಗ ಸತತ ಮಳೆ ಬಂದಿರುವ ಹಿನ್ನಲೆಯಲ್ಲಿ ಜಲಪಾತ ಮೈದುಂಬಿ ಹರಿಯುತ್ತಿದೆ. ಸಣ್ಣ ತೊರೆಗಳಿಂದ ಸೃಷ್ಠಿಯಾಗಿರುವ ಈ ಜಲಪಾತವು ಅಪಾಯಕಾರಿಯಲ್ಲದಿದ್ದರೂ ಜಾರುವ ಕಲ್ಲುಗಳ ಮೇಲೆ ನಡೆದಾಡುವಾಗ ಜಾಗ್ರತೆ ವಹಿಸುವುದು ಒಳಿತು.
ಅರ್ಬಿ ಜಲಪಾತ ಇರುವುದು ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿ ಕೋಡಿ ಎಂಬಲ್ಲಿ ಮಣಿಪಾಲದಿಂದ ಅಲೆವೂರು ಮಾರ್ಗವಾಗಿ 3 ಕಿಮೀ ಸಾಗಿದರೆ ದಶರಥ ಎಂಬ ಊರು ಸಿಗುತ್ತದೆ. ಅಲ್ಲಿಂದ ಪೂರ್ವಾಭಿಮುಖವಾಗಿ ವೈಷ್ಣವಿ ದುರ್ಗಾ ದೇವಸ್ಥಾನದ ಮಾರ್ಗವಾಗಿ ಒಂದು ಕಿಲೋ ಮೀಟರ್ ಸಾಗಿದರೆ ದೇವಸ್ಥಾನದ ಪಕ್ಕದಲ್ಲೇ ಅರ್ಬಿ ಜಲಪಾತ ನಮ್ಮನ್ನು ಕೈಬೀಸಿ ಕರೆಯುತ್ತದೆ. ಮಣಿಪಾಲ ಮಹಾನಗರದಲ್ಲಿ ಜನಸಂಚಾರದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲಕಾಲ ಕಳೆಯುವುದಕ್ಕೆ ಈ ಜಲಪಾತ ಯೋಗ್ಯ ಸ್ಥಳ.ಸದಾ ಕೆಲಸದ ಜಂಜಾಟದಿಂದ ಕೂಡಿರುವ ಮನಸ್ಸುಗಳಿಗೆ ನಿಸರ್ಗದ ನಡುವಿರುವ ಜಲಧಾರೆ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ.