
ನಮಗೆಲ್ಲ ಬೆಳಕಿನ ಹಬ್ಬವೆಂದರೆ ದೀಪಾವಳಿ. ಇದು ಬೆಳಕು, ಸಂತೋಷ, ಸಿಹಿಯ ಹಬ್ಬ. ಕತ್ತಲ ವಿರುದ್ಧ ಬೆಳಕಿನ ಗೆಲವಿನ ಆಚರಣೆ. ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ಜನರು ಮನೆಯನ್ನು ಸ್ವಚ್ಛಗೊಳಿಸಿ, ಬಣ್ಣ ಹೊಡೆಸಿ, ಸಿಂಗರಿಸಿ ಮನೆ ತುಂಬ ಹಣತೆಯಿಟ್ಟು, ರಂಗೋಲಿ ಹಾಕಿ ಹೊಸ ಬಟ್ಟೆ ಧರಿಸಿ ಹಬ್ಬದಡಿಗೆಯಲ್ಲಿ ಮಿಂದೇಳುವ ಕಾಲ. ಇಡೀ ದೇಶಾದ್ಯಂತ ಹೆಚ್ಚು ಸಂಭ್ರಮದಿಂದ ಈ ಹಬ್ಬ ಆಚರಿಸಲಾಗುತ್ತದೆ. ಪಾಶ್ಚಾತ್ಯರೂ ದೀಪಗಳಿಂದ ಕಳೆಗಟ್ಟಿದ ಭಾರತದತ್ತ ಸಂತೋಷದಿಂದ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಆದರೆ, ಜಗತ್ತಿನಲ್ಲೆಲ್ಲ ಇದೊಂದೇ ಬೆಳಕಿನ ಹಬ್ಬವಲ್ಲ. ಹಲವು ದೇಶಗಳಲ್ಲಿ ವಿವಿಧ ಬೆಳಕಿನ ಹಬ್ಬಗಳಿವೆ. ಅವನ್ನು ಬೇರೆ ಬೇರೆ ಕಾರಣಗಳಿಗಾಗಿ ಬೇರೆ ಬೇರೆ ರೀತಿಯಾಗಿ ಆಚರಿಸಲಾಗುತ್ತದೆ. ಅಂಥ ಬೆಳಕಿನ ಹಬ್ಬಗಳು ಹಾಗೂ ಅವುಗಳ ಸವಿಯಡುಗೆ ಯಾವುದೆಂದು ನೋಡಿ ಒಂದು ಸುತ್ತು ಹಾಕಿ ಬರೋಣ ಬನ್ನಿ.
ಲಾಯ್ ಕ್ರತಾಂಗ್, ಥೈಲ್ಯಾಂಡ್
ಲಾಯ್ ಕ್ರತಾಂಗ್ ಎಂಬುದನ್ನು ಅಕ್ಷರಶಃ ಕನ್ನಡೀಕರಿಸಿದರೆ ಬುಟ್ಟಿಯನ್ನು ತೇಲಿಬಿಡಿ ಎಂಬ ಅರ್ಥ ಬರುತ್ತದೆ. ನವೆಂಬರ್ ತಿಂಗಳ 12ರಂದು ಈ ಹಬ್ಬವನ್ನು ಥೈಲ್ಯಾಂಡ್‌ನಲ್ಲಿ ಆಚರಿಸಲಾಗುತ್ತದೆ. ಈ ದಿನ ಜನರು ಕಮಲದ ಆಕಾರದ ಬುಟ್ಟಿಯನ್ನು ಹೂವುಗಳಿಂದ ಸಿಂಗರಿಸಿ, ಅವುಗಳಲ್ಲಿ ಹಚ್ಚಿದ ದೀಪಗಳನ್ನಿಟ್ಟು ನದಿಗಳಲ್ಲಿ ತೇಲಿ ಬಿಡುತ್ತಾರೆ. ವಾವ್! ನೆನೆಸಿಕೊಂಡರೆ ಗಂಗೆಯ ಮಡಿಲಲ್ಲಿ ತೇಲಿಬಿಟ್ಟ ಲಕ್ಷಾಂತರ ದೀಪಗಳ ಸೊಬಗು ಕಣ್ಮುಂದೆ ಬರುತ್ತದಲ್ಲವೇ? ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಥಾಯ್ ನೃತ್ಯ ಎಲ್ಲೆಡೆ ಕಂಡುಬರುತ್ತದೆ. ಈ ಹಬ್ಬದ ವಿಶೇಷ ಅಡಿಗೆ ಎಂದರೆ ಸ್ಟಿರ್ ಫ್ರೈಡ್ ರೈಸ್ ನೂಡಲ್.
ಪ್ರಿ ವೆಡ್ಡಿಂಗ್ ಶೂಟ್‌ಗೆ ಬೆಸ್ಟ್ ಪ್ಲೇಸಸ್
ಲ್ಯಾಂಟರ್ನ್ ಫೆಸ್ಟಿವಲ್, ಚೀನಾ
ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಚೀನೀಯರು ಈ ಸುಂದರ ಹಬ್ಬವನ್ನು ಆಚರಿಸುತ್ತಾರೆ. ಇಂದು ದೇಶಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಇದರಲ್ಲಿ ಜನರು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಈ ಹಬ್ಬದಂದು ಲಕ್ಷಾಂತರ ಆಕಾಶಬುಟ್ಟಿಗಳು ಗಾಳಿಯಲ್ಲಿ ತೇಲಿದರೆ, ಮತ್ತಷ್ಟು ದೀಪಗಳು ನೀರಿನಲ್ಲಿ ತೇಲುತ್ತವೆ. ಇವುಗಳನ್ನು ಕಣ್ತುಂಬಿಕೊಳ್ಳುವುದಕ್ಕಿಂತ ಮತ್ತೇನಿದೆ ಹಬ್ಬವೆಂದರೆ. ಈ ಹಬ್ಬದಲ್ಲಿ ಬಹುತೇಕರು ಸ್ವೀಟ್ ಆ್ಯಂಡ್ ಸೋರ್ ಪೋರ್ಕ್ ಸೇವಿಸಿ ಸಂಭ್ರಮಿಸುತ್ತಾರೆ.
ಪಿಂಗ್‌ಕ್ಸಿ ಲ್ಯಾಂಟರ್ನ್ ಫೆಸ್ಟಿವಲ್, ಥೈವಾನ್
ಚೈನೀಸ್ ಲ್ಯಾಂಟರ್ನ್ ಫೆಸ್ಟಿವಲ್ ರೀತಿಯಲ್ಲೇ ಹೊಸ ವರ್ಷದ ಕಡೆಯ ದಿನ ಥೈವಾನ್‌ನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಆಸೆಕನಸುಗಳನ್ನು ಪಿಂಗ್‌ಕ್ಸಿ ಪೇಪರ್ ಲ್ಯಾಂಟರ್ನ್ ಮೇಲೆ ಬರೆದು, ಅವುಗಳನ್ನು ಹೊತ್ತಿಸಿ ಗಗನಕ್ಕೆ ಬಿಡುತ್ತಾರೆ. ಈ ಅಭ್ಯಾಸ ನೂರಾರು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದ್ದು, ಹೀಗೆ ಆಕಾಶಕ್ಕೆ ಸಾಗಿದ ತಮ್ಮ ಆಸೆಕನಸುಗಳನ್ನು ಪೂರ್ವಜರು ನೋಡಿ ಈಡೇರಿಸುತ್ತಾರೆಂಬ ನಂಬಿಕೆ ಇವರದು. ಅಲ್ಲದೆ, ಹೀಗೆ ಲ್ಯಾಂಟರ್ನ್ ಗಗನಕ್ಕೆ ಹಾರಿ ಬಿಡುವ ಪಟ್ಟಣ ಸುರಕ್ಷಿತವಾಗಿರುತ್ತದೆ ಎಂದೂ ಇವರು ನಂಬುತ್ತಾರೆ. ಈ ದಿನ ಥೈವಾನೀಸ್ ಬೀಫ್ ನೂಡಲ್ಸ್ ಮಾಡಿ ಸವಿಯುತ್ತಾರೆ.
ಫೆಸ್ಟಿವಲ್ ಆಫ್ ಲೈಟ್ಸ್, ಜರ್ಮನಿ
ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಬರ್ಲಿನ್‌ನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಸುಮಾರು 10 ದಿನಗಳ ಕಾಲ ನಡೆವ ಈ ಹಬ್ಬದುದ್ದಕ್ಕೂ ನಗರದಾದ್ಯಂತ ಎಲ್ಲ ಪ್ರಮುಖ ಕಟ್ಟಡಗಳು, ರಸ್ತೆಗಳನ್ನು ಬೆಳಕಿನಿಂದ ಸಿಂಗರಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಕಲೆ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದು. ಬೀಫ್ ರೋಸ್ಟ್ ಮಾಡಿದ ಸಾರ್‌ಬ್ರೇಟನ್ ಎಂಬ ಖಾದ್ಯ ಈ ಹಬ್ಬದ ವಿಶೇಷ.
ವೀಕೆಂಡು ಟ್ರಿಪ್‌ಗೆ ಬೆಂಗಳೂರಿನ ಸುತ್ತಲಿರೋ ಪ್ಲೇಸ್‌ಗಳಿವು
ಫೆಸ್ಟಿವಲ್ ಆಫ್ ಲೈಟ್ಸ್ ಲಿಯಾನ್, ಫ್ರ್ಯಾನ್ಸ್
ಇದು ಜಗತ್ತಿನ ಅತಿ ಪುರಾತನ ಬೆಳಕಿನ ಹಬ್ಬಗಳಲ್ಲೊಂದು. 1643ರಷ್ಟು ಹಿಂದಿನಿಂದಲೇ ಈ ಹಬ್ಬಾಚರಣೆ ಚಾಲ್ತಿಯಲ್ಲಿದ್ದು, ಮದರ್ ಮೇರಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದು ಸ್ವಲ್ಪ ದೀಪಾವಳಿಗೆ ಹತ್ತಿರವೆನಿಸುವುದು ಹಚ್ಚಿದ ಮೇಣದ ದೀಪಗಳನ್ನು ಮನೆಯೊಳಗೆ, ಹೊರಗೆಲ್ಲ ಇರಿಸುವುದನ್ನು ನೋಡಿದಾಗ. ಸುಮಾರು ಮೂರ್ನಾಲ್ಕು ದಿನ ನಡೆವ ಹಬ್ಬ ಡಿಸೆಂಬರ್ 8ರಂದು ಕೊನೆಗೊಳ್ಳುತ್ತದೆ. ಈ ದಿನ ಪಾಟ್-ಆ-ಫ್ಯೂ ಎಂಬ ಸಾಂಪ್ರದಾಯಿಕ ಅಡುಗೆ ತಯಾರಿಸಿ ಸವಿಯಯುತ್ತಾರೆ. ಇದೊಂದು ಬೀಫ್‌ನಿಂದ ತಯಾರಿಸಿದ ಖಾದ್ಯ.
ಲಾಸ್ ಫಲ್ಲಾಸ್, ಸ್ಪೇನ್
ಈ ಹಬ್ಬದಲ್ಲಿ ದೊಡ್ಡ ದೊಡ್ಡ ಗೊಂಬೆಗಳನ್ನು ಅರ್ಧರಾತ್ರಿಯಲ್ಲಿ ಮೈದಾನದಲ್ಲಿ ಸುಡಲಾಗುತ್ತದೆ. ನಮ್ಮಲ್ಲಿ ರಾವಣ ದಹನ ನಡೆಸುವುದನ್ನು ಇದು ನೆನಪಿಗೆ ತರುತ್ತದೆ. ವೆಲೆನ್ಸಿಯಾದಲ್ಲಿ ನಡೆವ ಈ ಹಬ್ಬ ಮಾರ್ಚ್ 15ರಿಂದ 19ರವರೆಗೆ ಆಚರಣೆಯಲ್ಲಿರುತ್ತದೆ. ಈ ಸಂದರ್ಭದಲ್ಲಿ ಗಗನವನ್ನು ಮುಚ್ಚುವಷ್ಟು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ. ಈ ಹಬ್ಬ ಕೂಡಾ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಹಾಟೆಸ್ಟ್ ಫೆಸ್ಟಿವಲ್ ಎಂಬ ಹೆಸರು ಗಳಿಸಿದೆ. ಇದರಲ್ಲಿ ಪಯೆಲ್ಲ ವಲೆನ್ಸಿಯಾನಾ ಎಂಬ ಅಡುಗೆ ತಯಾರಿಸಲಾಗುತ್ತದೆ. ವಿಶೇಷವೆಂದರೆ ಇದನ್ನು ಬಿಳಿ ಅಕ್ಕಿ ಹಾಗೂ ಹಳೆಯ ಬೇರುಗಳಿಂದ ತಯಾರಿಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.