ಮಹಾರಾಷ್ಟ್ರದ ಲೋನಾರ್ನಲ್ಲಿರುವ ವಿಷದ ಕೆರೆಗೂ ಶ್ರೀರಾಮಚಂದ್ರನಿಗೂ ಅದೆಂಥ ನಂಟು? ಕೌತುಕದ ಮಾಹಿತಿ ವಿವರಿಸಿದ್ದಾರೆ ಡಾ.ಬ್ರೋ.
ನಾಳೆ ಅರ್ಥಾತ್ ಜ.22... ಭಾರತ ಮಾತ್ರವಲ್ಲದೇ ಜಗತ್ತಿನ ಎಲ್ಲರ ಕಣ್ಣೂ ಭಾರತದ ಮೇಲೆ ನೆಟ್ಟಿರುವ ಐತಿಹಾಸಿಕ ದಿನವಿದು. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ... ಇದಾಗಲೇ ವಿಶ್ವಾದ್ಯಂತ ರಾಮಭಕ್ತರು ನಿರಂತರ ಜಪ-ತಪದಲ್ಲಿ ತೊಡಗಿದ್ದಾರೆ. ಎಲ್ಲೆಲ್ಲೂ ಶ್ರೀರಾಮನ ನಾಮಸ್ಮರಣೆ ಮೊಳಗುತ್ತಿದೆ. ಇನ್ನು ಅಯೋಧ್ಯೆಯ ಮಾತಂತೂ ಹೇಳುವುದೇ ಬೇಡ. 550 ವರ್ಷಗಳ ಸುದೀರ್ಘ ಹೋರಾಟ, ನಾಲ್ಕು ಲಕ್ಷಕ್ಕೂ ಅಧಿಕ ರಾಮಭಕ್ತರ ಬಲಿದಾನದ ಬಳಿಕ ಬರುತ್ತಿರುವ ಈ ಐತಿಹಾಸಿಕ ದಿನದ ಸಂಭ್ರಮ ಮುಗಿಲುಮುಟ್ಟಿದೆ. ಇದೇ ಸಂದರ್ಭದಲ್ಲಿ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸುವವರಿಗೆ ಸವಾಲು ಹಾಕುವಂತೆ ಆತನ ಒಂದೊಂದೇ ಕುರುಹುಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಇಂಥ ಕುರುಹುಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ, ತಮ್ಮದೇ ಕುತೂಹಲಕರ ರೀತಿಯಲ್ಲಿ ಹೇಳುತ್ತಿದ್ದಾರೆ ಡಾ.ಬ್ರೋ ಅರ್ಥಾತ್ ಗಗನ್. ಇದಾಗಲೇ ಅಯೋಧ್ಯೆಯ ಸಮೀಪವಿರುವ ಎಲ್ಲಾ ಸ್ಥಳಗಳ ದರ್ಶನ ಮಾಡಿರುವ ಗಗನ್ ಅವರು, ಇದೀಗ ಶ್ರೀರಾಮನ ಹೆಜ್ಜೆಯ ಜಾಡು ಹಿಡಿದು ವಿವಿಧ ಸ್ಥಳಗಳನ್ನೂ ಪರಿಚಯಿಸುತ್ತಿದ್ದಾರೆ. ಅಂಥವುಗಲಲ್ಲಿ ಒಂದು ಮಹಾರಾಷ್ಟ್ರದ ಲೋನಾರ್ನಲ್ಲಿರುವ ಕೆರೆ. ಶತ ಶತಮಾನಗಳ ಹಿಂದೆ ಬಿದ್ದ ಉಲ್ಕೆಯಿಂದ ಉಂಟಾಗಿದೆ ಎನ್ನಲಾದ ಈ ಕೆರೆಯ ಕುರಿತು ಕೌತುಕದ ಮಾಹಿತಿ ತೆರೆದಿಟ್ಟಿದ್ದಾರೆ ಡಾ.ಬ್ರೊ. 50 ವರ್ಷಗಳಿಂದಲೂ ಹೆಚ್ಚು ಕಾಲ ಸಂಶೋಧಕರು ಈ ಕೆರೆಯ ಬಗ್ಗೆ ತಲೆ ಕೆಡಿಸಿಕೊಂಡು ಹುಚ್ಚರಾಗಿದ್ದಾರೆಯೇ ವಿನಾ, ಇದುವರೆಗೂ ಇಲ್ಲಿನ ನಿಗೂಢತೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವೇ ಆಗಿಲ್ಲ ಎನ್ನುವ ಮಾಹಿತಿ ನೀಡಿದ್ದಾರೆ ಗಗನ್.
ಗಂಗಾ, ಯಮುನೆ, ಸರಸ್ವತಿಯ ಒಡಲು ತ್ರಿವೇಣಿ ಸಂಗಮದ ಸಂಪೂರ್ಣ ದರ್ಶನ ಮಾಡಿ ಪುಳಕಿತರಾದ ಭಕ್ತರು
ಅಂದಹಾಗೆ ಇದು ವಿಷಯ ಕೆರೆ! ಹೌದು. ಸುಮಾರು 170ಮೀಟರ್ನಷ್ಟು ಈ ಜಾಗದಲ್ಲಿ ಬಿದ್ದ ಉಲ್ಕೆ ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯ ಕೆರೆ ಸೃಷ್ಟಿಸಿದೆ. ಉಲ್ಕೆಯ ರಾಸಾಯನಿಕಗಳಿಂದಾಗಿ ಇದು ವಿಷದ ಕೆರೆಯಾಗಿ ಮಾರ್ಪಟ್ಟಿದೆ. ಇಲ್ಲಿಯ ನೀರು ಕುಡಿದರೆ ಸಾವೇ. ಅಷ್ಟು ಭಯಾನಕ ವಿಷವಿದು. ಆದರೆ ಇಲ್ಲಿಯ ಪಾಚಿಯನ್ನು ತಿಂದು ಬಾತುಕೋಳಿಗಳು ಮಾತ್ರ ಜೀವಂತ ಇರುವುದು ಸೃಷ್ಟಿಯ ವೈಚಿತ್ರ್ಯಗಳಲ್ಲಿ ಒಂದು ಎನ್ನುವ ಕುತೂಹಲದ ಮಾಹಿತಿಯನ್ನೂ ಡಾ.ಬ್ರೋ ಕೊಟ್ಟಿದ್ದಾರೆ. ಇಲ್ಲಿ ಉಲ್ಕೆ ಬಿದ್ದು ಕೆರೆ ನಿರ್ಮಾಣ ಆಗಿದೆ ಎನ್ನುವುದಕ್ಕೆ ಹಿಂದೂಗಳ ಸ್ಕಂದ ಪುರಾಣ, ಪದ್ಮ ಪುರಾಣ ಮಾತ್ರವಲ್ಲದೇ 1600ರಲ್ಲಿ ಅಬು ಫಜಲ್ ಐನ್-ಇ ಅಕ್ಬರಿಯಲ್ಲಿಯೂ ಉಲ್ಲೇಖ ಇರುವ ಮಾಹಿತಿ ನೀಡಿದ್ದಾರೆ ಡಾ.ಬ್ರೋ.
ಇಲ್ಲಿ ಸಂಶೋಧನೆ ಮಾಡಲು ಬಂದವರಿಗೆ ಇದುವರೆಗೂ ನಿಗೂಢತೆ ಅರ್ಥವಾಗಲೇ ಇಲ್ಲ ಎನ್ನುವುದು ಅವರ ಮಾತು. ಇಲ್ಲಿಯ ನಿಗೂಢತೆಯ ಬಗ್ಗೆ ಸಂಶೋಧಕರು ತಲೆ ಕೆಡಿಸಿಕೊಳ್ಳಲು ಕಾರಣವೂ ಇನ್ನೊಂದಿದೆ. ಅದೇನೆಂದರೆ, ಇಷ್ಟು ಭಯಾನಕ ವಿಷದ ಕೆರೆಯ ಪಕ್ಕದಲ್ಲಿಯೇ ಸಿಹಿ ನೀರಿನ ಕೊಳವಿದೆ. ಅದರ ಸವಿ ಕುಡಿದವರೇ ಬಲ್ಲರು, ಅಷ್ಟು ಸಿಹಿಯಾಗಿದೆ. ಇದೇ ಸಂಶೋಧಕರ ತಲೆ ತಿನ್ನುತ್ತಿದೆ. ಅಸಲಿಗೆ ಈ ಕೆರೆಗೂ ಶ್ರೀರಾಮನಿಗೂ ನಂಟಿದೆ. ಶ್ರೀರಾಮಚಂದ್ರ ವನವಾಸದ ಸಮಯದಲ್ಲಿ ಪಂಚವಟಿಯಿಂದ ಹಾದು ಹೋಗುವಾಗ ಈ ಭಯಾನಕ ಅರಣ್ಯದ ನಡುವೆ ಬಂದಾಗ ಬಾಯಾರಿಕೆ ಆಯಿತು. ಆಗ ಇದೇ ವಿಷದ ಕೆರೆ ಸಮೀಪ ಬಂದರು. ಆಗ ಇದು ಕುಡಿಯಲು ಯೋಗ್ಯವಲ್ಲದ ನೀರು ಎಂದು ಅವರಿಗೆ ತಿಳಿಯಿತು.
ಶ್ರೀರಾಮ 11 ವರ್ಷ ವನವಾಸ ಮಾಡಿದ ಚಿತ್ರಕೂಟ ಹೇಗಿದೆ? ಗುಪ್ತ ಗೋದಾವರಿಯೂ ಇಲ್ಲೇ ಇದ್ದಾಳೆ!
ಕೂಡಲೇ ಶ್ರೀರಾಮ ಅಲ್ಲಿಯೇ ಸಮೀಪ ಭೂಮಿಯ ಮೇಲೆ ಬಾಣ ಬಿಟ್ಟಾಗ ಅಲ್ಲೊಂದು ಸರೋವರ ನಿರ್ಮಾಣವಾಯಿತು. ಅದು ಕೂಡ ಈ ವಿಷದ ಸರೋವರದ ಕೆಲವೇ ದೂರವಿದೆ. ಅದುವೇ ಸಿಹಿ ನೀರಿನ ಕೊಳ. ಅಲ್ಲಿಯ ನೀರು ಕುಡಿದು ಶ್ರೀರಾಮ, ಸೀತಾ ಮತ್ತು ಲಕ್ಷ್ಮಣರು ಹೊರಟು ಹೋದರು ಎನ್ನುವ ಕುತೂಹಲದ ಮಾಹಿತಿಯನ್ನು ಡಾ.ಬ್ರೋ ನೀಡಿದ್ದಾರೆ. ಇದೇ ವೇಳೆ ಅಲ್ಲಿರುವ ಸುರಂಗ ಮಾರ್ಗದ ಪರಿಚಯ ಮಾಡಿರುವ ಡಾ.ಬ್ರೋ. ಶ್ರೀರಾಮನನ್ನು ನೋಡಿ ರಾವಣನ ತಂಗಿ ಶೂರ್ಪನಖಿ ಮೋಹಗೊಂಡಿದ್ದು, ನಂತರ ಲಕ್ಷ್ಮಣ ಆಕೆಯ ಮೂಗನ್ನು ಕತ್ತರಿಸಿದ್ದು, ಇದರಿಂದ ಕುಪಿತನಾದ ರಾವಣ, ಸೀತಾಮಾತೆಯ ಅಪಹರಣಕ್ಕೆ ಸ್ಕೆಚ್ ಹಾಕಿದ್ದು, ಎಲ್ಲ ಸ್ಥಳಗಳ ಪರಿಚಯವನ್ನು ಇದೇ ವಿಡಿಯೋದಲ್ಲಿ ಮಾಡಿಸಿದ್ದಾರೆ.