Brahmaputra River: ಭಾರತದಲ್ಲಿರೋ ಒಂದೇ ಒಂದು ಪುರುಷ ನದಿ ಇದು!

By Suvarna NewsFirst Published Jun 29, 2023, 2:16 PM IST
Highlights

ಭಾರತ ನದಿಗಳ ಸಂಗಮ. ಇಲ್ಲಿ ಅನೇಕ ನದಿಗಳು ಹುಟ್ಟಿ, ಹರಿಯುತ್ತವೆ. ಅವುಗಳಲ್ಲಿ ಪ್ರತಿಯೊಂದು ನದಿಯೂ ತನ್ನದೇ ವಿಶೇಷತೆ ಹೊಂದಿದೆ. ನಾವಿಂದು ಪುರುಷ ನದಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
 

ಭಾರತದ ನದಿಗಳ ಇತಿಹಾಸ ಬಹಳ ಹಳೆಯದು. ನದಿಗಳು ಶತಮಾನಗಳಿಂದಲೂ ತಮ್ಮ ಶುದ್ಧತೆಯನ್ನು ಕಾಯ್ದುಕೊಂಡಿವೆ ಮತ್ತು ನಿರಂತರವಾಗಿ ಆಯಾ ದಿಕ್ಕುಗಳಲ್ಲಿ ಹರಿಯುತ್ತಿವೆ. ಗಂಗೆಯಂತಹ ಪವಿತ್ರ ನದಿ ಉಲ್ಲೇಖ ಧರ್ಮಗ್ರಂಥಗಳಲ್ಲಿ ಇದೆ. ಪುರಾಣಗಳಲ್ಲಿ ಯಮುನೆಯ ಶುದ್ಧತೆಗಾಗಿ ಪೂಜಿಸಲಾಗುತ್ತದೆ. ಗಂಗೆ, ಗೋದಾವರಿ, ನರ್ಮದಾ, ಸಿಂಧು, ತುಂಗಭದ್ರಾ ಹೀಗೆ ಭಾರತದಲ್ಲಿ ಹರಿಯುವ ಎಲ್ಲ ನದಿಗಳ ಹೆಸರು ಮಹಿಳೆಯ ಹೆಸರಾಗಿದೆ. ಇದೇ ಕಾರಣಕ್ಕೆ ಭಾರತದ ನದಿಗಳನ್ನು ಸ್ತ್ರೀಗೆ ಹೋಲಿಕೆ ಮಾಡಲಾಗುತ್ತದೆ. ನದಿಯನ್ನು ತಾಯಿ, ಪವಿತ್ರವಾದವಳೆಂದು ಪೂಜೆ ಮಾಡಲಾಗುತ್ತದೆ. ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲ ಪಾಪಗಳು ಕಳೆದು, ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಭಾರತದಲ್ಲಿ ಒಂದೇ ಒಂದು ನದಿ ಮಾತ್ರ ಪುರುಷ ನದಿಯಾಗಿದೆ. ಅದ್ಯಾವುದು, ಅದ್ರ ವಿಶೇಷವೇನು ಎಂಬುದನ್ನು ನಾವಿಂದು ಹೇಳ್ತೇವೆ.

ಭಾರತ (India) ದಲ್ಲಿದೆ ಏಕೈಕ ಪುರುಷ (Male) ನದಿ : ಭಾರತದಲ್ಲಿ ಪುರುಷ ನದಿ (River) ಎಂದು ಕರೆಸಿಕೊಳ್ಳುವ ನದಿ ಅತ್ಯಂತ ಪ್ರಾಚೀನ ನದಿ. ಅದ್ರ ಹೆಸರು ಬ್ರಹ್ಮಪುತ್ರ. ಬ್ರಹ್ಮನ ಪುತ್ರನನ್ನು ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ವೇದಗಳು ಮತ್ತು ಪುರಾಣಗಳ ಪ್ರಕಾರ, ಬ್ರಹ್ಮಪುತ್ರ ನದಿಯು ಬ್ರಹ್ಮ ದೇವರ ಮಗ ಮತ್ತು ಅಮೋಘ ಋಷಿ ಎಂದು ನಂಬಲಾಗಿದೆ. ಅಮೋಘ ಋಷಿ, ಶಾಂತನುವಿನ ಪತ್ನಿ. ಬ್ರಹ್ಮ ಆಕೆ ಸೌಂದರ್ಯಕ್ಕೆ ಮರುಳಾಗಿದ್ದನು. ಇದು ಗಂಡು ಮಗುವಿನ ಜನನಕ್ಕೆ ಕಾರಣವಾಗಿತ್ತು. ಇದು ಅಮೋಘ ಋಷಿಯನ್ನು ನಿರಾಸೆಗೊಳಿಸಿತ್ತು. ಇದ್ರಿಂದ ಮಗ ನೀರಿನಂತೆ ಕೆಳಗೆ ಇಳಿಯಿತು ಎಂದು ನಂಬಲಾಗಿದೆ.  ಬ್ರಹ್ಮನಿಂದ ಜನಿಸಿದ ಮಗುವಾದ ಕಾರಣ ಅದಕ್ಕೆ ಬ್ರಹ್ಮಪುತ್ರ ಎಂದು ಹೆಸರಿಡಲಾಯಿತು.  ಬ್ರಹ್ಮಪುತ್ರ ಭಾರತದಲ್ಲಿ ಗಂಡು ನದಿಯಾಗಿರುವ ಏಕೈಕ ನದಿಯಾಗಿದೆ. ಭಾರತದಲ್ಲಿ ಈ ನದಿಯ ಉದ್ದ 2900 ಕಿಲೋಮೀಟರ್. ಟಿಬೆಟ್‌ನಲ್ಲಿರುವ ಮಾನಸ ಸರೋವರ ಈ ನದಿಯ ಮೂಲವಾಗಿದೆ. ಇದನ್ನು ಟಿಬೆಟ್‌ನಲ್ಲಿ ತ್ಸಾಂಗ್ಪೋ ಎಂದೂ ಕರೆಯುತ್ತಾರೆ. 

Latest Videos

Extreme Tourism : ಹುಚ್ಚು ಸಾಹಸಕ್ಕೆ ಜನರು ಏನೆಲ್ಲಾ ಟೂರಿಸಂ ಮಾಡ್ತಾರೆ ನೋಡಿ

ಬ್ರಹ್ಮಪುತ್ರ ನದಿಯು ವಿಶ್ವದ ಒಂಬತ್ತನೇ ಅಗಲವಾದ ನದಿಯಾಗಿದೆ. ದೇಶದ ಮೂರನೇ ಅತಿ ದೊಡ್ಡ ನದಿಯಾಗಿದೆ. ಅಸ್ಸಾಂನಲ್ಲಿ ಈ ನದಿಯ ಮಂಜುಲಿ ಎಂಬ ದೊಡ್ಡ ದ್ವೀಪವನ್ನು ಸೃಷ್ಟಿಸಿದೆ. ಬ್ರಹ್ಮಪುತ್ರ ನದಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಬ್ರಹ್ಮಪುತ್ರ ನದಿಯನ್ನು ಟಿಬೆಟ್‌ನಲ್ಲಿ ಸಂಪೋ ಎಂದು ಕರೆಯುತ್ತಾರೆ. ಅರುಣಾಚಲ ಪ್ರದೇಶದಲ್ಲಿ ಈ ನದಿಯನ್ನು ದಿಹ್ ಮತ್ತು ಅಸ್ಸಾಂನಲ್ಲಿ  ಬ್ರಹ್ಮಪುತ್ರ ಎಂದು ಕರೆಯಲಾಗುತ್ತದೆ. ಇನ್ನು ಚೀನಾದಲ್ಲಿ ಈ ನದಿಯನ್ನು  ಯಾ-ಲು-ತ್ಸಾಂಗ್-ಪು, ಚಿಯಾಂಗ್ ಮತ್ತು ಯರ್ಲುಂಗ್ ಜಗಂಬೋ ಜಿಯಾಂಗ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಬ್ರಹ್ಮಪುತ್ರ ನದಿಯನ್ನು ಬಂಗಾಳಿಯಲ್ಲಿ ಜಮೂನ್ ನದಿ ಮತ್ತು ಅಸ್ಸಾಂನಲ್ಲಿ ಶೋಕ್ ನದಿ ಎಂದೂ ಕರೆಯಲಾಗುತ್ತದೆ.

ಈ ನದಿಯನ್ನು ದೇವರಂತೆ ಭಾರತದಲ್ಲಿ ಪೂಜೆ ಮಾಡಲಾಗುತ್ತದೆ. ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ ನಂತರ ಈ ನದಿಯಲ್ಲಿ ಸ್ನಾನ ಮಾಡಬೇಕು ಎಂಬುದು ಈ ನದಿಯ ಬಗ್ಗೆ ಇರುವ ಒಂದು ನಂಬಿಯಾಗಿದೆ. ಬ್ರಹ್ಮಪುತ್ರ ನದಿಯಲ್ಲಿ ಸ್ನಾನ ಮಾಡಿದ್ರೆ ವ್ಯಕ್ತಿಯು ಶಾರೀರಿಕ ಸಂಕಟದಿಂದ ಮುಕ್ತಿ ಪಡೆಯುತ್ತಾನೆ. ಆತನಿಗಿರುವ ಬ್ರಹ್ಮದೋಷ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. 

Unique Temple: ಇಲ್ಲಿರುವ ಸ್ವಯಂಭು ಶಿವ ದಿನಕ್ಕೆ ಐದು ಬಾರಿ ತನ್ನ ಬಣ್ಣ ಬದಲಿಸುತ್ತಾನೆ!

ಬ್ರಹ್ಮಪುತ್ರ ನದಿಯ ವಿಶೇಷವೇನು? : ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಬ್ರಹ್ಮಪುತ್ರ ನದಿಯ ನೀರು ಮೂರು ದಿನಗಳ ಕಾಲ ರಕ್ತದಂತೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಬ್ರಹ್ಮಪುತ್ರ ನದಿಗೂ, ಕಾಮಾಖ್ಯ ದೇವಸ್ಥಾನಕ್ಕೂ ನಂಟಿದೆ. ಈ ಮೂರು ದಿನ ಕಾಮಾಖ್ಯ ದೇವಿ ಮಾಸಿಕ ಚಕ್ರದಲ್ಲಿರುತ್ತಾಳೆ ಎಂದು ನಂಬಲಾಗಿದೆ. ಇದೇ ಕಾರಣಕ್ಕೆ ಬ್ರಹ್ಮಪುತ್ರ ನದಿ ಮೂರು ದಿನಗಳ ಕಾಲ ರಕ್ತದ ಬಣ್ಣಕ್ಕೆ ತಿರುಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ನದಿಯನ್ನು ಹಿಂದೂಗಳು ಮಾತ್ರವಲ್ಲದೆ ಜೈನರು ಮತ್ತು ಬೌದ್ಧರು ಪೂಜಿಸುತ್ತಾರೆ.
 

click me!