2023 ನೇ ವರ್ಷದ ಕೊನೆಯ ಮತ್ತು 2024 ರ ಹೊಸ ವರ್ಷಾಚರಣೆಯ ವೇಳೆ ಕೊಡಗು ಜಿಲ್ಲೆಗೆ ನಾಲ್ಕೈದು ದಿನಗಳಲ್ಲಿ ಬರೋಬ್ಬರಿ 6 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ. ಇಡೀ ವರ್ಷ 47 ಲಕ್ಷ ಪ್ರವಾಸಿಗರ ಭೇಟಿ, ಕಳೆದ ನಾಲ್ಕು ವರ್ಷಗಳಿಗಿಂತ ಈ ವರ್ಷ ಡಬಲ್ ಪ್ರವಾಸಿಗರ ಎಂಟ್ರಿ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.18): ಎರಡು ವರ್ಷಗಳ ಕಾಲ ಪ್ರವಾಹ, ಭೂಕುಸಿತಕ್ಕೆ ಒಳಗಾಗಿದ್ದ ಕೊಡಗು ಜಿಲ್ಲೆ ನಂತರದ ಎರಡು ವರ್ಷಗಳ ಕಾಲ ಕೋವಿಡ್ ಒಡೆತಕ್ಕೆ ಸಿಲುಕಿ ಇಲ್ಲಿನ ಪ್ರವಾಸೋದ್ಯಮ ನಲುಗಿ ಹೋಗಿತ್ತು. ಆದರೆ 2024 ರ ಹೊಸ ವರ್ಷಾಚರಣೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತಂದುಕೊಟ್ಟಿದೆ. ಹೌದು 2023 ನೇ ವರ್ಷದ ಕೊನೆಯ ಮತ್ತು 2024 ರ ಹೊಸ ವರ್ಷಾಚರಣೆಯ ವೇಳೆ ಜಿಲ್ಲೆಗೆ ನಾಲ್ಕೈದು ದಿನಗಳಲ್ಲಿ ಬರೋಬ್ಬರಿ 6 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ.
ಹೀಗಾಗಿ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಇಯರ್ ಎಂಡಿಂಗ್ ಮತ್ತು ನ್ಯೂಇಯರ್ ವಿಶೇಷ ಕೊಡುಗೆ ನೀಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 2018 ರಿಂದ 2022 ರವರೆಗೆ ಪ್ರತೀ ವರ್ಷ ವರ್ಷಪೂರ್ತಿ ಕೇವಲ 20 ರಿಂದ 23 ಲಕ್ಷ ಪ್ರವಾಸಿಗರು ಜಿಲ್ಲೆಗೆ ಬಂದಿದ್ದರೆ 2023 ರಲ್ಲಿ 47 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ. ಇದು ಪ್ರವಾಸೋದ್ಯಮ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳಲ್ಲಿ ಟಿಕೆಟ್ ವಿತರಿಸಿದ ಸಂಖ್ಯೆಗಳ ಆಧಾರದಲ್ಲಿ ದೊರೆತ್ತಿರುವ ಮಾಹಿತಿ. ಆದರೆ ನೈಜವಾಗಿ ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ನಾಲ್ಕೈದು ವರ್ಷಗಳಲ್ಲಿ ಬರುತ್ತಿದ್ದ ಪ್ರವಾಸಿಗರ ಸಂಖ್ಯೆಗಿಂತ 2023 ರಲ್ಲಿ ಎರಡುಪಟ್ಟುಗಿಂತಲೂ ಹೆಚ್ಚು ಪ್ರವಾಸಿಗರು ಬಂದು ಹೋಗಿದ್ದಾರೆ ಎನ್ನುವುದು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯ ಹಾದಿಯಲ್ಲಿ ಇದೆ ಎನ್ನುವುದರ ದ್ಯೋತಕವೇ ಸರಿ.
ಜಿಲ್ಲೆಯಲ್ಲಿ ಸದ್ಯ 4 ಸಾವಿರ ಹೋಂಸ್ಟೇಗಳಿದ್ದರೆ, 1 ಸಾವಿರಕ್ಕೂ ಹೆಚ್ಚು ರೆಸಾರ್ಟ್ಗಳಿವೆ. ಸಾವಿರಾರು ಹೋಟೆಲ್ ಗಳಿವೆ. ಹೊಸ ವರ್ಷಾಚರಣೆಗಾಗಿ ಕೊಡಗಿಗೆ ಬಂದಿದ್ದ ಪ್ರವಾಸಿಗರಲ್ಲಿ ಬಹುತೇಕರಿಗೆ ತಂಗಲು ಕೊಠಡಿಗಳೇ ದೊರೆತ್ತಿಲ್ಲ. ಅಂದರೆ ನೀವೇ ಊಹೆ ಮಾಡಿ ಕೊಡಗು ಜಿಲ್ಲೆಗೆ ಎಷ್ಟು ದೊಡ್ಡ ಸಂಖ್ಯೆಯ ಪ್ರವಾಸಿಗರು ಬಂದು ಹೋಗಿದ್ದಾರೆ ಎಂದು. ಹೀಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಬಂದಿದ್ದರಿಂದ ಪ್ರವಾಸೋದ್ಯಮ ಮತ್ತು ಅದರ ಅವಲಂಬಿತ ಹತ್ತಾರು ಕ್ಷೇತ್ರದ ವ್ಯಾಪಾರ ವಹಿವಾಟುಗಳು ಭರ್ಜರಿಯಾಗಿ ನಡೆದಿವೆ. ಅದರಲ್ಲೂ ಖಾಸಗಿ ಸಾರಿಗೆ, ವೈನ್, ಮಸಾಲ ಮತ್ತು ಸಾಂಬಾರ ಪದಾರ್ಥಗಳಂತಹವುಗಳ ವ್ಯಾಪಾರ ವಹಿವಾಟಂತು ಸಕ್ಕತ್ತಾಗಿಯೇ ನಡೆದಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಇದನ್ನು ನಾವು ಹೇಳುತ್ತಿರುವುದಲ್ಲ ಒಮ್ಮೆ ವ್ಯಾಪಾರಸ್ಥರ ಮಾತುಗಳನ್ನು ನೀವು ಕೇಳಬೇಕು.
ಕಳೆದ ಮೂರು ನಾಲ್ಕು ವರ್ಷಗಳಿಗೆ ಹೋಲಿಸಿಕೊಂಡರೆ ಈ ವರ್ಷ ಒಳ್ಳೆಯ ವ್ಯಾಪಾರ ವಹಿವಾಟು ನಡೆದಿದೆ. ನಾಲ್ಕೈದು ವರ್ಷಗಳಿಂದ ವ್ಯಾಪಾರಗಳಲ್ಲಿ ಆಗಿದ್ದ ನಷ್ಟವನ್ನು ಈ ವರ್ಷ ತುಂಬಿಕೊಂಡಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಮಧು. ಕಳೆದ ನಾಲ್ಕು ವರ್ಷಗಳಲ್ಲಿ ಆದ ನಷ್ಟದಿಂದ ಹೋಂಸ್ಟೇ, ರೆಸಾರ್ಟ್ಗಳನ್ನು ಬಿಟ್ಟು ಬೇರೆ ಕೆಲಸ ಮಾಡಲು ಆರಂಭಿಸಿದ್ದವರು ಈ ವರ್ಷ ಮತ್ತೆ ಹೋಂಸ್ಟೇ, ರೆಸಾರ್ಟ್ ಆರಂಭಿಸುತ್ತಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ 2023 ರ ವರ್ಷದ ಪ್ರವಾಸೋದ್ಯಮ ಹೊಸ ಹುರುಪು, ಚೈತನ್ಯಗಳನ್ನು ತಂದಿದ್ದು, ಇನ್ನಷ್ಟು ಬೆಳವಣಿಗೆ ಹೊಂದಬಹುದು ಎನ್ನುವ ಆಶಯವನ್ನು ಮೂಡಿಸಿದೆ ಎನ್ನುವುದಂತು ಸತ್ಯ.