ಪತ್ನಿ ಹಾಕಿದ ಸವಾಲನ್ನು ಗಂಭೀರವಾಗಿ ಪರಿಗಣಿಸಿದ ಪತಿಯೊಬ್ಬರು ತನ್ನ ಪತ್ನಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ತಿರುಪತಿ ದೇಗುಲಕ್ಕೆ ಮೆಟ್ಟಿಲೇರಿದ ಘಟನೆ ತಿರುಪತಿಯಲ್ಲಿ ನಡೆದಿದೆ.
ತಿರುಪತಿ: ಏಳು ಕೊಂಡಲವಾಡನ ದರ್ಶನಕ್ಕೆ ತೆರಳುವಾಗ ಭಕ್ತರು ಕೆಲವರು ಬಸ್ ಮೂಲಕ ತೆರಳಿದರೆ ಮತ್ತೆ ಕೆಲವರು 3,550 ಮೆಟ್ಟಿಲುಗಳನ್ನು ಬರಿಗಾಲಲ್ಲಿ ನಡೆಯುತ್ತಾ ಸಾಗುತ್ತಾರೆ. ಮತ್ತೆ ಕೆಲವರು ಮೊಣಕಾಲನ್ನು ಊರುತ್ತಾ ನಡೆದು ಏಳು ಬೆಟ್ಟದೊಡೆಯನ ದರ್ಶನ ಪಡೆಯುತ್ತಾರೆ. ಆದರೆ ಹೀಗೆ ಮೆಟ್ಟಿಲುಗಳನ್ನೇರಿ ದರ್ಶನ ಪಡೆಯಲು ಮುನ್ನುಗ್ಗುತ್ತಿದ್ದ ವೆಂಕಟೇಶನ ಭಕ್ತರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಪತಿಯೊಬ್ಬ ತನ್ನ ಪತ್ನಿಯನ್ನು ಹೆಗಲ ಮೇಲೆ ಎತ್ತಿಕೊಂಡು ಮೆಟ್ಟಿಲುಗಳನ್ನೇರುತ್ತಿರುವುದು ಕಾಣಿಸಿತ್ತು. ಇದು ಆ ದಾರಿಯಲ್ಲಿ ಮೆಟ್ಟಿಲೇರಿ ಮುಂದೆ ಸಾಗುತ್ತಿದ್ದ ಭಕ್ತರಿಗೆ ಅಚ್ಚರಿ ಮೂಡಿಸಿತ್ತು. ಅನೇಕರು ಈ ದಂಪತಿಯ ಫೋಟೋ ವಿಡಿಯೋಗಳನ್ನು ತೆಗೆದು ಕೊಂಡರು. ಅಂದ ಹಾಗೆ ಹೀಗೆ ಪತ್ನಿಯನ್ನು ಹೆಗಲ ಮೇಲೆ ಇರಿಸಿಕೊಂಡು ಬೆಟ್ಟ ಏರಿದ ವ್ಯಕ್ತಿಯ ಹೆಸರು ವರದ ವೀರ ವೆಂಕಟ ಸತ್ಯನಾರಾಯಣ (ಸತ್ಯಬಾಬು)
ಆಂಧ್ರಪ್ರದೇಶದ ಪೂರ್ವ ಗೋದಾವರಿ (East Godavari)ಜಿಲ್ಲೆಯ ಕದಿಯಂ ಮಂಡಲದ ಕದಿಯಪುಲಂಕ(Kadiyapulanka) ನಿವಾಸಿಯಾಗಿರುವ ಈ ಸತ್ಯಬಾಬು ಲಾರಿ ಮಾಲೀಕರಾಗಿದ್ದು, ತಮ್ಮ ಪತ್ನಿ ಲಾವಣ್ಯರನ್ನು ಹೆಗಲ ಮೇಲೆ ಎತ್ತಿಕೊಂಡು ಸುಮಾರು 70 ಮೆಟ್ಟಿಲುಗಳನ್ನು ಒಂದೇ ಸಮನೇ ಏರಿದ್ದಾರೆ. ಹೀಗೆ ಇವರು ಪತ್ನಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಸಾಗುತ್ತಿರುವುದನ್ನು ನೋಡಿದ ಅಲ್ಲಿ ಸಾಗುತ್ತಿದ್ದ ಜನ ಏನೋ ಹರಕೆ ಇರಬೇಕು ಎಂದು ಭಾವಿಸಿದ್ದರು. ಆದರೆ ಇವರೇನು ಅಂತಹ ಹರಕೆ ಏನು ಹೇಳಿಕೊಂಡಿರಲಿಲ್ಲ. ಆದರೆ ಹೆಂಡತಿ ಹಾಕಿದ ಒಂದು ಚಾಲೆಂಜ್ ಸ್ವೀಕರಿಸಿದ ಸತ್ಯಬಾಬು ಹೆಂಡತಿಯ ಹೆಗಲ ಮೇಲೆ ಕೂರಿಸಿ ಭೀಮನಂತೆ ಬೆಟ್ಟವೇರಿದ್ದರೆ ಹಾಗಿದ್ದರೆ ಚಾಲೆಂಜ್ ಏನು ಮುಂದೆ ಓದಿ.
ತಿರುಪತಿ ದೇವಸ್ಥಾನಕ್ಕೆ ಒಂದೇ ದಿನ 75,000 ಭಕ್ತರ ಭೇಟಿ: ದಾಖಲೆ
ಪತಿ ವೇಗವಾಗಿ ಬೆಟ್ಟವೇರುತ್ತಿರುವುದನ್ನು ನೋಡಿದ ಪತ್ನಿ ಲಾವಣ್ಯ(Lavanya), ನಿಮಗೆ ತಾಕತ್ತಿದ್ದರೆ ನನ್ನನ್ನು ಎತ್ತಿಕೊಂಡು ಬೆಟ್ಟವೇರಿ ಎಂದು ಸತ್ಯಬಾಬುಗೆ ಚಾಲೆಂಜ್ ಹಾಕಿದ್ದಾರೆ. ಪತ್ನಿಯ ಈ ತಮಾಷೆಯ ಚಾಲೆಂಜ್‌ನ್ನು ಗಂಭೀರವಾಗಿ ಸ್ವೀಕರಿಸಿದ ಪತಿ ಆಕೆಯನ್ನು ಎತ್ತಿಕೊಂಡು ಎರೆಡೆರಡು ಮೆಟ್ಟಿಲುಗಳನ್ನು ಒಂದೊಂದು ಹೆಜ್ಜೆಯಲ್ಲಿ ಏರಿ ಒಟ್ಟು 70 ಮೆಟ್ಟಿಲುಗಳನ್ನು ಪತ್ನಿಯನ್ನು ಎತ್ತಿಕೊಂಡು ಏರಿದ್ದಾರೆ. ಇವರನ್ನು ನೋಡಿ ಅದೇ ವೇಳೆ ಬೆಟ್ಟವೇರುತ್ತಿದ್ದ ಅನೇಕರು ಇವರ ಫೋಟೋ ವಿಡಿಯೋಗಳನ್ನು ತೆಗೆದಿದ್ದಾರೆ.
ಯುವ ದಂಪತಿಗಳಲ್ಲ!
ಹೀಗೆ ಹೆಂಡತಿಯನ್ನೆತ್ತಿಕೊಂಡು ಸಾಗುತ್ತಿದ್ದಾನೆ ಎಂದು ಕೇಳಿದ ಕೂಡಲೇ ಬಹುಶಃ ಹೊಸದಾಗಿ ಮದುವೆಯಾದವರಿರಬೇಕು ಅಥವಾ ಯುವ ದಂಪತಿಗಳಿರಬೇಕು ಎಂದು ನಾವು ನೀವು ಭಾವಿಸುವುದು ಸಾಮಾನ್ಯ. ಆದರೆ ಈ ಊಹೆ ಖಂಡಿತ ನಿಜವಲ್ಲ. ಈ ದಂಪತಿ 1998ರಲ್ಲಿ ಮದುವೆಯಾಗಿದ್ದು, ಬರೋಬ್ಬರಿ 24 ವರ್ಷಗಳೇ ಕಳೆದಿವೆ. ಇನ್ನು ಅಚ್ಚರಿಯ ವಿಷಯವೆಂದರೆ ಇವರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಆಗಿದ್ದು, ಅವರಿಗೆ ಮಕ್ಕಳಾಗಿ ಇವರಿಬ್ಬರು ಅಜ್ಜ ಅಜ್ಜಿಯೂ ಎನಿಸಿಕೊಂಡಿದ್ದಾರೆ.
ಅಬ್ಬಬ್ಬಾ.. ತಿರುಪತಿ ತಿಮ್ಮಪ್ಪನ ಸ್ಥಿರಾಸ್ತಿಯೇ ಬರೋಬ್ಬರಿ 85705 ಕೋಟಿ!
ಮಕ್ಕಳಿಗೂ ಆಗಿದೆ ಮದ್ವೆ
ಸತ್ಯಬಾಬು ಹಾಗೂ ಲಾವಣ್ಯ ದಂಪತಿಯ ಹಿರಿಯ ಅಳಿಯ ಗುರುದತ್(Gurudatta) ಸಾಫ್ಟ್‌ವೇರ್ ವಲಯದಲ್ಲಿ(software job) ಉತ್ತಮ ಕೆಲಸ ಸಿಕ್ಕಿದರೆ, ತಾನು ಇಡೀ ಕುಟುಂಬವನ್ನು ತಿರುಮಲಕ್ಕೆ ಕರೆದುಕೊಂಡು ಬಂದು ವೆಂಕಟೇಶ್ವರನ ದರ್ಶನ ಮಾಡಿಸುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದರಂತೆ, ಅದರಂತೆ ಅವರಿಗೆ ಕೆಲಸ ಸಿಕ್ಕಿದ್ದು, ಕುಟುಂಬದ 40 ಜನರೊಂದಿಗೆ ಇವರು ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸತ್ಯಬಾಬು ತನ್ನ ಪತ್ನಿ ಲಾವಣ್ಯರನ್ನು ಎತ್ತಿಕೊಂಡು ಮೆಟ್ಟಿಲೇರಿ ಕುಟುಂಬದವರಿಗೆ ಒಳ್ಳೆ ಮನೋರಂಜನೆ ನೀಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿದೆ.