ಕಾಲ ಬದಲಾಗ್ತಿದೆ, ಅನೇಕ ಸಂಪ್ರದಾಯ, ಸಂಸ್ಕೃತಿ ನಶಿಸಿ ಹೋಗ್ತಿದೆ. ಇದಕ್ಕೆ ಬರೀ ತಂತ್ರಜ್ಞಾನ ಕಾರಣವಲ್ಲ. ಜನಸಂಖ್ಯೆ ಕೂಡ ಕಾರಣ. ಯುವಕರ ಸಂಖ್ಯೆ ಕಡಿಮೆ ಆಗ್ತಿರುವ ಕಾರಣ ವಿದೇಶದಲ್ಲಿ ಕೆಲ ಹಬ್ಬಕ್ಕೆ ಅಂತ್ಯ ಹಾಡ್ತಿದ್ದಾರೆ.
ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಚರಣೆಗಳು ಪರಂಪರಾಗತವಾಗಿ ನಡೆದುಕೊಂಡು ಬಂದಿರುತ್ತವೆ. ಅವರವರ ಸಂಸ್ಕೃತಿ, ಸಂಪ್ರದಾಯ ಆಚರಣೆ ಹೇಗೆ ಇರುತ್ತದೆಯೋ ಅದೇ ರೀತಿಯಲ್ಲಿ ಹಬ್ಬ ಹರಿದಿನಗಳು ನಡೆಯುತ್ತವೆ. ಇಂತಹ ಸಂಪ್ರದಾಯಗಳು ನಗರದಿಂದ ನಗರಕ್ಕೆ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ.
ಹಬ್ಬ (Festival) ಗಳನ್ನು ಆಚರಿಸುವುದರ ಹಿಂದಿನ ಕಾರಣಗಳು ಕೂಡ ಭಿನ್ನವಾಗಿಯೇ ಇರುತ್ತದೆ. ಅನೇಕ ಮಂದಿ ಹರಕೆಯ ನೆಪದಲ್ಲಿ ಕೆಲವು ಆಚರಣೆಗಳನ್ನು ಮಾಡಿದರೆ, ಕೆಲವರು ಭಕ್ತಿ, ಶೃದ್ಧೆಯಿಂದ ಕುಟುಂಬದ ಹಾಗೂ ನಾಡಿನ ಏಳ್ಗೆಗಾಗಿ ಕೆಲವು ಆಚರಣೆಗಳನ್ನು ಕೈಗೊಳ್ಳುತ್ತಾರೆ. ಹಬ್ಬ, ತೇರು, ಜಾತ್ರೆ ಮುಂತಾದ ಉತ್ಸವಗಳಲ್ಲಿ ಹರಕೆಯಂತಹ ಹಲವು ಸಂಪ್ರದಾಯ (Tradition) ವನ್ನು ನಾವು ನೋಡಬಹುದು. ಆಧುನಿಕ ಯುಗದಲ್ಲಿ ಅನೇಕ ಹಬ್ಬಗಳು ಮರೆಯಾಗುತ್ತಿವೆ. ಆಶ್ಚರ್ಯ ಹುಟ್ಟಿಸುವಂತಹ ಹಬ್ಬವೊಂದು ಇನ್ನು ಕಾಣಸಿಗೋದಿಲ್ಲ. ಇದಕ್ಕೆ ಅಲ್ಲಿನ ಜನಸಂಖ್ಯೆ ಕಾರಣ.
ಭಾರತದ ಈ ನಗರದಲ್ಲಿ ಪ್ರತಿದಿನವೂ ಮೊಳಗುತ್ತೆ ರಾಷ್ಟ್ರ ಗೀತೆ… ಇಡೀ ನಗರವೇ 52 ಸೆಕೆಂಡು ಸ್ತಬ್ಧ
ಜಪಾನಿನಲ್ಲಿ ಆಚರಿಸಲಾಗುವ ಹಡಕ-ಮತ್ಸೂರಿ ಹಬ್ಬದ ಬಗ್ಗೆ ನಾವು ಹೇಳ್ತಿದ್ದೇವೆ. ಇದು ವಿಶಿಷ್ಠ ರೀತಿಯ ಹಬ್ಬ. ಈ ಹಬ್ಬದಲ್ಲಿ ಸಾವಿರಾರು ಮಂದಿ ಬೆತ್ತಲೆಯಾಗಿ ದೇವಸ್ಥಾನ ತಲುಪುತ್ತಾರೆ.
ಇದು ಜಪಾನಿನ ನೆಕೆಡ್ ಫೆಸ್ಟಿವಲ್: ಹಡಕಾ-ಮತ್ಸೂರಿ (Naked Festival) ಹಬ್ಬ ಓಕಾಯಾಮಾದ ಪ್ರಸಿದ್ಧ ಸೈದೈಜಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. 1250 ವರ್ಷದ ಇತಿಹಾಸವನ್ನು ಹೊಂದಿರುವ ಈ ದೊಡ್ಡ ಹಬ್ಬದಲ್ಲಿ ಭಾಗವಹಿಸುವ ಎಲ್ಲರೂ ಬೆತ್ತಲೆಯಾಗಿ ನೀರಿನ ಮೂಲಕ ಹಾದುಹೋಗುತ್ತಾರೆ. ಹಡಕಾ-ಮತ್ಸೂರಿ ಹಬ್ಬವನ್ನು ಪ್ರತಿವರ್ಷ ಫೆಬ್ರುವರಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ದೇಶದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿರುವುದರಿಂದ ಹಡಕಾ ಮತ್ಸೂರಿ ಹಬ್ಬದ ಎಲ್ಲ ಜವಾಬ್ದಾರಿ ವಯಸ್ಕರ ಮೇಲೆ ಬಿದ್ದಿದೆ. ಎಲ್ಲ ಕೆಲಸ ನಿರ್ವಹಿಸುವುದು ಕಷ್ಟ. ಹಾಗಾಗಿ ಈ ವರ್ಷ ಕೊನೆಯದಾಗಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಜಪಾನಿನ ನಾಗರಿಕರು ಹೇಳಿದ್ದಾರೆ.
ಈ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕೇವಲ ಲಂಗೋಟಿಯನ್ನು ಮಾತ್ರ ಧರಿಸಬೇಕಾಗುತ್ತದೆ. ಆದ್ದರಿಂದ ಈ ಹಬ್ಬವನ್ನು ನೆಕೆಡ್ ಫೆಸ್ಟಿವಲ್ ಎಂದು ಕೂಡ ಕರೆಯುತ್ತಾರೆ. ಜಪಾನಿನ ದಕ್ಷಿಣ ಭಾಗದಲ್ಲಿರುವ ಹೊನ್ಶು ದ್ವೀಪದಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ಸೈದೈಜಿ ಕಾನೋನಿನ್ ದೇವಾಲಯವು ಈ ದ್ವೀಪದಲ್ಲಿದೆ. ಈ ಹಬ್ಬ ಮಹಿಳೆಯರ ನೃತ್ಯದೊಂದಿಗೆ ಪ್ರಾರಂಭವಾಗುತ್ತದೆ. ಸಂಜೆ ಜನರು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ರಾತ್ರಿ ಅರ್ಚಕರು ದೇವಾಲಯದ ಎತ್ತರದ ಕಿಟಕಿಯಿಂದ ಜನರ ಮೇಲೆ ಕೊಂಬೆಗಳ ಮತ್ತು ಕೋಲುಗಳ ಕಟ್ಟುಗಳನ್ನು ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೆಯೋ ಅವರಿಗೆ ಈ ವರ್ಷ ಶುಭವಾಗಲಿದೆ ಎಂಬ ನಂಬಿಕೆಯಿದೆ. ಈ ಹಬ್ಬದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನನ್ನು ಶೀನ್ ಒಟೊಕೊ ಅಂದರೆ ಗಾಡ್ ಮ್ಯಾನ್ (ದೇವಮಾನವ)ಎಂದು ಆಯ್ಕೆ ಮಾಡಲಾಗುತ್ತದೆ.
ವಿಮಾನ ಲ್ಯಾಂಡ್ ಆದ 30 ನಿಮಿಷಗಳ ಒಳಗೆ ಬ್ಯಾಗೇಜ್ ನೀಡಿ: ಏರ್‌ಲೈನ್ಸ್ ಕಂಪನಿಗಳಿಗೆ ಸರ್ಕಾರದ ಸೂಚನೆ!
ದೇವಸ್ಥಾನಕ್ಕೆ ಬರುವ ಎಲ್ಲರೂ ದೇವಮಾನವನನ್ನು ಮುಟ್ಟಬೇಕು. ಹಟಕಾ-ಮತ್ಸೂರಿ ಹಬ್ಬಕ್ಕೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಜನರು ಬರುತ್ತಾರೆ. “ಜಪಾನಿನ ಜನಸಂಖ್ಯೆ (Population of Japan) ವೇಗವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಯುವಕರ (Youths) ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಇಷ್ಟು ದೊಡ್ಡ ಹಬ್ಬವನ್ನು ಆಯೋಜಿಸುವುದು ಬಹಳ ಕಷ್ಟ. ಈ ಹಬ್ಬದಲ್ಲಿ ತೆರೆಯ ಹಿಂದೆ ಅನೇಕ ರೀತಿಯ ಆಚರಣೆಗಳು, ರೀತಿ ರಿವಾಜುಗಳು ಇರುತ್ತವೆ. ಯುವಕರೇ ಇಲ್ಲದೇ ಇಂತಹ ಕೆಲಸಗಳನ್ನು ಮಾಡುವುದು ಕಷ್ಟ. ಎಲ್ಲ ಜವಾಬ್ದಾರಿಗಳನ್ನು ವಯಸ್ಸಾದವರು ನಿರ್ವಹಿಸಲು ಸಾಧ್ಯವಿಲ್ಲ” ಎಂದು ಸೈದೈಜಿ ದೇವಾಲಯದ ಸಂನ್ಯಾಸಿ ಡೈಗೊ ಫುಜಿನಾಮಿ ಹೇಳಿದ್ದಾರೆ. ಜನಸಂಖ್ಯೆಯ ಸಮಸ್ಯೆಯಿಂದಲೋ ಅಥವಾ ಹಬ್ಬ, ಸಂಪ್ರದಾಯಗಳ ಮೇಲೆ ಜನರಿಗಿರುವ ಶೃದ್ಧೆ ನಂಬಿಕೆಗಳು ಕಡಿಮೆಯಾಗಿತ್ತಿರುವುದರಿಂದಲೋ ಇಂತಹ ಅದೆಷ್ಟೋ ಆಚರಣೆಗಳು ಮರೆಯಾಗುತ್ತಿವೆ. ಸಾವಿರಾರು ವರ್ಷಗಳಿಂದ ನಡೆದುಬಂದ ಸಂಪ್ರದಾಯಗಳನ್ನು ಜನರು ಸುಲಭವಾಗಿ ತೊರೆತ್ತಿರುವುದು ಇಂದಿನ ಕಹಿಸತ್ಯ.