ಮಡಗಾಸ್ಕರ ದ್ವೀಪಕ್ಕೂ ಉಡುಪಿಯ ಸೈಂಟ್‌ ಮೇರಿಸ್‌ಗೂ ಏನು ಸಂಬಂಧ!

By Kannadaprabha NewsFirst Published Dec 10, 2019, 3:03 PM IST
Highlights

ಕೆಲವು ದಿನಗಳ ಹಿಂದೆ ಕೇರಳದ ನಾಲ್ವರು ಪ್ರವಾಸಿಗರು ಉಡುಪಿ ಮಲ್ಪೆ ಸಮೀಪದ ಸೈಂಟ್‌ ಮೆರೀಸ್‌ ದ್ವೀಪದಲ್ಲಿ ಸಿಕ್ಕಾಕಿಕೊಂಡಿದ್ದರು. ಅದಕ್ಕೂ ಹಿಂದೆ ಈ ದ್ವೀಪ ದೇಶಾದ್ಯಂತ ಸುದ್ದಿಯಾದದ್ದು ರೇವ್‌ ಪಾರ್ಟಿಗೆ. ಮಡಗಾಸ್ಕರ್‌ ದ್ವೀಪಕ್ಕೂ ಸೈಂಟ್‌ ಮೆರೀಸ್‌ಗೂ ಇರುವ ಸಾಮ್ಯತೆಗಳು ಈ ದ್ವೀಪದ ಭೌಗೋಳಿಕ ವಿಸ್ಮಯವನ್ನು ಮಿಲಿಯಾಂತರ ವರ್ಷಗಳ ಹಿಂದಕ್ಕೆ ತಂದು ನಿಲ್ಲಿಸುತ್ತದೆ. ಪ್ರಾಕೃತಿಕ ವಿಸ್ಮಯವೇ ಮೂರ್ತಿವೆತ್ತಂತಿರುವ ಸುಂದರ ಐಲ್ಯಾಂಡ್‌ ಕುರಿತ ಪಕ್ಷಿನೋಟ ಇಲ್ಲಿದೆ.

- ಸುಭಾ​ಶ್ಚಂದ್ರ ಎಸ್‌.​ವಾಗ್ಳೆ, ಉಡು​ಪಿ

ಸುಮಾರು 88 ಮಿಲಿಯನ್‌ ವರ್ಷಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಜ್ವಾಲಮುಖಿಯೊಂದು ಸ್ಫೋಟಗೊಂಡು, ಕುದಿಯುವ ಲಾವಾರಸ ಉಕ್ಕಿ, ಅದು ತಣಿದು ಆಳೆತ್ತರದ ಸಾವಿರಾರು ಸಂಖ್ಯೆಯ ಒಂದಕ್ಕೊಂದು ಅಂಟಿಕೊಂಡಿರುವ ಕಂಬಾಕೃತಿಗಳಿರುವ ಬೃಹತ್‌ ದ್ವೀಪ ಸೃಷ್ಟಿಯಾಯಿತು. ನಂತರ ಈ ದ್ವೀಪ ಒಡೆದು ಇಬ್ಭಾಗವಾಯಿತು. ಕ್ರಮೇಣ ಒಂದು ಭಾಗ ದೂರ ಆಫ್ರಿಕಾ ಖಂಡದ ತೀರದತ್ತ ಸರಿಯಿತು. ಅದನ್ನು ‘ಮಡಗಾಸ್ಕರ್‌’ ಎಂದು ಕರೆಯುತ್ತಾರೆ. ಇನ್ನೊಂದು ಭಾಗ ಇಲ್ಲೇ ಉಳಿದು ಸ್ಥಳೀಯ ಜನರು ‘ತೋನ್ಸೆ ಪಾರ್‌’ ಎಂದು ಕರೆಯುತ್ತಾರೆ.

ಚೆನ್ನೈ ಸಾಗರದಲ್ಲಿ ಕಂಡ ನೀಲಿ ಅಲೆಗಳ ರಹಸ್ಯ!

1498ರಲ್ಲಿ ಭಾರತವನ್ನು ಹುಡುತ್ತಾ ಬಂದ ಪೋರ್ಚುಗೀಸ್‌ ನಾವಿಕ ‘ವಾಸ್ಕೋ ಡ ಗಾಮ’ ಈ ‘ತೋನ್ಸೆ ಪಾರ್‌’ ದ್ವೀಪದ ಮೇಲೆ ಮೊದಲು ಕಾಲಿಡುತ್ತಾನೆ. ಅಲ್ಲಿ ಶಿಲುಬೆಯೊಂದನ್ನು ನೆಟ್ಟು ಅದಕ್ಕೆ ‘ಎಲ್‌ ಪಾದ್ರನೋ ಡೇ ಸಾಂತ ಮರಿಯಾ’ ಎಂದು ಪೂಜಿಸುವ ತಾಯಿ ಮೇರಿಯ ಹೆಸರನ್ನಿಟುತ್ತಾನೆ, ಕ್ರಮೇಣ ಇದು ‘ಸಾಂತ ಮರಿಯಾ’ ಎಂದು ಇಂದು ‘ಸೈಂಟ್‌ ಮೇರಿಸ್‌ ದ್ವೀಪ’ ಎಂದು ಕರೆಯಲ್ಪಡುತ್ತಿದೆ.

ಇವತ್ತು ಮಡಗಾಸ್ಕರ್‌ ಪ್ರತಿವರ್ಷ ದೇಶ-ವಿದೇಶದಿಂದ ಕೋಟ್ಯಾಂತರ ಪ್ರವಾಸಿಗರು ಭೇಟಿ ನೀಡುವ ವಿಶ್ವದ ಅತ್ಯಂತ ಪ್ರಸಿದ್ಧ ಪ್ರಾಕೃತಿಕ ಪ್ರವಾಸಿ ತಾಣ. ಆದರೆ, ಸೈಂಟ್‌ ಮೇರಿಸ್‌ ದ್ವೀಪ ಮಾತ್ರ ಇನ್ನೂ ಹೊರಜಗತ್ತಿಗೆ ಸರಿಯಾಗಿ ಪರಿಚಯವೇ ಆಗಿಲ್ಲ.

ಉಡು​ಪಿಯ ಮಲ್ಪೆ ಬಂದರಿನಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಈ ದ್ವೀಪ ಎಂತಹ ಪ್ರಾಕೃತಿಕ ಅದ್ಭುತವಾಗಿದೆ ಎಂದರೆ, ಇಲ್ಲಿರುವ 5-8 ಭುಜಗಳಿರುವ ಬಾಸಲ್ಟ… ಶಿಲೆಯ ಸಾವಿರಾರು ಕಂಬಾಕೃತಿಗಳು ಮಡಗಾಸ್ಕರ್‌ ದ್ವೀಪ ಬಿಟ್ಟರೆ ವಿಶ್ವದ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ.

ಆದ್ದರಿಂದಲೇ 2001ರಲ್ಲಿ ಭಾರತೀಯ ಭೂವಿಜ್ಞಾನ ಸಮೀಕ್ಷೆ ಇಲಾಖೆಯು ಈ ಸೈಂಟ್‌ ಮೇರಿಸ್‌ ದ್ವೀಪವನ್ನು ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಿದೆ. ಅದರಂತೆ ಇಲ್ಲಿ ಯಾವುದೇ ಶಾಶ್ವತ ನಿರ್ಮಾಣಗಳನ್ನು ಮಾಡುವಂತಿಲ್ಲ, ಗಣಿಗಾರಿಕೆ ಮಾಡುವಂತಿಲ್ಲ, ಇಲ್ಲಿರುವ ಪ್ರಾಕೃತಿಕ ಸಂಪತ್ತಿಗೆ ಹಾನಿಮಾಡುವಂತಿಲ್ಲ, ಅದನ್ನೆಲ್ಲಾ ಯಥಾವತ್ತಾಗಿ ರಕ್ಷಿಸಬೇಕು.

ಸೈಂಟ್‌ ಮೇರಿಸ್‌ ದ್ವೀಪ ಹೀಗಿದೆ

ಮಲ್ಪೆ ಬಂದರಿನಿಂದ ಪಶ್ಚಿಮಕ್ಕೆ ಕೇವಲ 8 ಕಿ.ಮೀ. ದೂರದಲ್ಲಿರುವ ಈ ದ್ವೀಪ ಸುಮಾರು 1640 ಅಡಿ ಉದ್ದ ಮತ್ತು 328 ಅಡಿ ಅಗಲ ಇದ್ದು, ಒಟ್ಟು ಸುಮಾರು 5 ಚದರ ಕಿ.ಮಿ.ನಷ್ಟುವಿಸ್ತೀರ್ಣವಿದೆ. ಇಲ್ಲಿನ ಕಲ್ಲಿನ ಸ್ತಂಭಾಕೃತಿಗಳ ಜೊತೆಗೆ, ದ್ವೀಪದ ಸುತ್ತಲು ಬೀಚ್‌ ಇದೆ. ನೂರಾರು ತೆಂಗಿನಮರಗಳಿವೆ. ಜೊತೆಗೆ ಔಷಧೀಯ ಗುಣವಿರುವ ‘ಈಶ್ವರ ಬಳ್ಳಿ’ ಇಲ್ಲಿ ಬೆಳೆಯುತ್ತದೆ. ಪ್ರಾಕೃತಿಕವಾಗಿ ಸಮುದ್ರ ಕೊರೆತವನ್ನು ತಡೆಯುವ ‘ರಾವಣನ ಮೀಸೆ’ ಅಥವಾ ‘ಚುಳ್ಳಿ’ ಎಂದು ಕರೆಯುವ ಬಳ್ಳಿಗಳು ಕೂಡ ಇಲ್ಲಿ ಕಾಣಸಿಗುತ್ತದೆ.

ಇಲ್ಲಿ ಕಪ್ಪೆಚಿಪ್ಪುಗಳದ್ದೇ ಬೀಚಿದೆ

ಈ ದ್ವೀಪವನ್ನು ಪೂರ್ವದಿಕ್ಕಿನಿಂದ ಪ್ರವೇಶಿಸಬೇಕು. ಇಲ್ಲಿ ಬಿಳಿ ಬಣ್ಣದ ಸ್ವಚ್ಛವಾದ ಚಿಕ್ಕ ಬೀಚಿದೆ. ಇದನ್ನು ದಾಟಿ ದ್ವೀಪವನ್ನು ಹೊಕ್ಕರೆ ತೆಂಗಿನ ಮರಗಳು ಕೈಬೀಸಿ ಸ್ವಾಗತಿಸುತ್ತವೆ. ದ್ವೀಪದ ಪಶ್ಚಿಮ ಭಾಗದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣ ಬೀಚಿದೆ. ಈ ಬೀಚಲ್ಲಿ ಮರಳಿಲ್ಲ, ಬದಲಿಗೆ ಕೋಟಿಕೋಟಗಟ್ಟಲೆ ಚಿಕ್ಕದೊಡ್ಡ ಬಣ್ಣಬಣ್ಣದ ಶಂಖ, ಸಿಂಪಿ, ಕಪ್ಪೆಚಿಪ್ಪುಗಳ ರಾಶಿಯೇ ಇದೆ. ಸ್ವಲ್ಪ ತಾಳ್ಮೆಯಿಂದ ಹುಡುಕಿದರೆ, ಅದರಲ್ಲಿ ಕವಡೆಗಳು ಸಿಗುತ್ತದೆ. ಅದೃಷ್ಟವಿದ್ದರೆ ಮುಷ್ಟಿಗಾತ್ರದಷ್ಟುದೊಡ್ಡ ಕವಡೆಗಳೂ ಸಿಗುತ್ತವೆ.

ಇಲ್ಲಿ ಪ್ಲಾಸ್ಟಿಕ್‌ ಬಳಕೆ ಬ್ಯಾನ್‌...

ಮಲ್ಪೆ ಬೀಚು ಅಭಿವೃದ್ಧಿ ಸಮಿತಿಯಿಂದ ಮಲ್ಪೆಯಿಂದ ಸೈಂಟ್‌ ಮೇರಿಸ್‌ ದ್ವೀಪಕ್ಕೆ ಹೋಗುವುದಕ್ಕೆ ಬೋಟುಗಳ ವ್ಯವಸ್ಥೆ ಇದೆ. ದ್ವೀಪದಲ್ಲಿ ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಮಾಡಲಾಗಿದೆ. ತಾತ್ಕಾಲಿಕ ಹೊಟೇಲ್‌, ಶೌಚಾಲಯ, ಬಟ್ಟೆಬದಲಾಯಿಸುವ ಕೊಠಡಿ, ವಿಶ್ರಾಂತಿಗೆ ಆಸನಗಳು, ಸಾಹಸಪ್ರಿಯರಿಗೆ ದ್ವೀಪದೊಳಗೆ ತಿರುಗಾಡುವುದಕ್ಕೆ ಸೈಕಲುಗಳೂ ಇವೆ. ದ್ವೀಪದಲ್ಲಿ ಜನರ ಮೇಲೆ ನಿಗಾ ಇಡುವುದಕ್ಕೆ ಗಾರ್ಡ್‌ಗಳಿದ್ದಾರೆ. ಸಿಸಿ ಕ್ಯಾಮರಾದ ಕಣ್ಗಾವಲು ಇದೆ. ಪ್ಲಾಸ್ಟಿಕ್‌ ಎಸೆದರೆ 10 ರು. ದಂಡವೂ ಇದೆ.

ನೋಡಿದಷ್ಟು ಚೆಂದ ಅಂದ ಈ ಕೆಂಪು ಸಮುದ್ರ... ಎಲ್ಲಿದೆ ಗೊತ್ತಾ?

ರೇವ್‌ ಪಾರ್ಟಿ ಕೂಡ ಆಗಿತ್ತು...

ಸೈಂಟ್‌ ಮೇರಿಸ್‌ ದ್ವೀಪದಲ್ಲಿ 2012ರಲ್ಲಿ ರೇವ್‌ ಪಾರ್ಟಿ ಕೂಡ ನಡೆದು, ಆ ಕಾರಣಕ್ಕಾಗಿ ದ್ವೀಪ ದೇಶದ ಗಮನ ಸಳೆಯುವಂತಾಯಿತು. ಖಾಸಗಿ ಸಂಸ್ಥೆಯೊಂದು ಸಂಗೀತೋತ್ಸವ ನಡೆಸುವುದಾಗಿ ಜಿಲ್ಲಾಡಳಿತದ ಪರವಾನಗಿ ಪಡೆದು, ದೇಶ ವಿದೇಶಗಳ ಸುಮಾರು 300ಕ್ಕೂ ಅಧಿಕ ಜೋಡಿಗಳು ಇಲ್ಲಿಗೆ ಬಂದು 3 ದಿನಗಳ ಕಾಲ ಮದ್ಯ, ಡ್ರW್ಸ…, ಸಂಗೀತ, ನೃತ್ಯ ಮತ್ತು ಕಾಮಕೇಳಿ ನಡೆಸಿದರು. ಇದು ಭಾರಿ ವಿವಾದಕ್ಕೆ ಕಾರಣವಾಗಿ, ರಾಜ್ಯ ಸರ್ಕಾರ ತನಿಖೆಯನ್ನೂ ನಡೆಸಿತು. ಮುಂದೆ ಇಂತಹ ರೇವ್‌ ಪಾರ್ಟಿಗಳಿಗೆ ಅವಕಾಶ ಇಲ್ಲ ಎಂದು ನಿರ್ಧರಿಸಲಾಗಿದೆ

ಕೇರಳದ 4 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದರು..

ಈ ದ್ವೀಪ ಅಂತಹ ಅಪಾಯಕಾರಿಯೇನಲ್ಲ. ಆದರೆ, ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ ತೆಗೆಯುವುದು, ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. 2004ರಲ್ಲಿ ತ್ಸುನಾಮಿ ಸಂಭವಿಸಿದಾಗ, ಕೆಲವು ಪ್ರವಾಸಿಗರು ಪರವಾನಗಿ ಇಲ್ಲದೆ ರಾತ್ರಿ ಈ ಬೀಚಲ್ಲಿ ಉಳಿದುಕೊಂಡಿದ್ದರು. ಅಂದು ಮಲ್ಪೆ ಸಮುದ್ರದಲ್ಲಿ ನೀರು ಭಾರಿ ಪ್ರಮಾಣದಲ್ಲಿ ಉಕ್ಕೇರಿದ್ದರೂ ಸೈಂಟ್‌ ಮೇರಿಸ್‌ ದ್ವೀಪ ಮುಳುಗಿರಲಿಲ್ಲ. ಆದುದರಿಂದ ಈ ಪ್ರವಾಸಿಗರು ಬದುಕುಳಿದಿದ್ದರು.

ಕಳೆದ ತಿಂಗಳು ಕೇರಳದ 4 ಮಂದಿ ಪ್ರವಾಸಿಗರು ಇಲ್ಲಿಗೆ ಬಂದವರು ಹಿಂದಕ್ಕೆ ಬರಲಾಗದೆ ರಾತ್ರಿ ಅಲ್ಲಿಯೇ ಸಿಕ್ಕಿಹಾಕಿಕೊಳ್ಳಬೇಕಾಯಿತು. ಈ ದ್ವೀಪದ ಒಂದು ಭಾಗ ಬಾಲದಂತೆ ಹೊರಗೆ ಚಾಚಿಕೊಂಡಿದೆ. ಉಬ್ಬರ ಸಂದರ್ಭ ಈ ಬಾಲ ಮತ್ತು ದ್ವೀಪದ ನಡುವೆ ನೀರು ತುಂಬಿ ಸಂಪರ್ಕ ಕಡಿತಗೊಳ್ಳುತ್ತದೆ. ಆಗ ಬಾಲದ ಭಾಗದಲ್ಲಿದ್ದವರು ಈಚೆ ಬರುವುದಕ್ಕೆ ನೀರು ಇಳಿಯುವರೆಗೆ ಕಾಯಬೇಕಾಗುತ್ತದೆ. ಹಾಗೆ ಈ 4 ಮಂದಿ ಕೇರಳಿಗರು ನೀರಿಳಿದು ಈಚೆ ಬರುವಷ್ಟರಲ್ಲಿ ಸಂಜೆಯಾಗಿ, ಪ್ರವಾಸಿಗರನ್ನು ಹಿಂದಕ್ಕೆ ಕರೆ ತರುವ ಬೋಟುಗಳು ಮಲ್ಪೆಗೆ ಬಂದಾಗಿತ್ತು. ಪ್ರವಾಸಿಗರು ರಾತ್ರಿ ಇಡೀ ಜೀವವನ್ನು ಕೈಯಲ್ಲಿ ಹಿಡಿದು ಕಳೆಯಬೇಕಾಯಿತು. ಇದರಿಂದ ಈಗ ದ್ವೀಪದಲ್ಲಿ ರಾತ್ರಿ ಯಾರೂ ಉಳಿದುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಭೂಮಿ ಮೇಲಿನ ಸ್ವರ್ಗ 'ಮಾಯಾ ಬೇ': ಆದರೆ ಪ್ರವಾಸಿಗರಿಗಿಲ್ಲ ಪ್ರವೇಶ!

ಬಾದ್ರಗಡದಲ್ಲಿ ಬಸಪ್ಪ ನಾಯಕನ ಕೋಟೆ ಇದೆ

ಸೈಂಟ್‌ ಮೇರಿಸ್‌ ದ್ವೀಪದ ಪಕ್ಕದಲ್ಲಿ ಬಾದ್ರಗಡ, ಕರಿಯಕಲ್ಲು ಮತ್ತು ಮಾಲ್ತಿ ದ್ವೀಪ ಅನ್ನುವ 3 ಸಣ್ಣ ದ್ವೀಪಗಳಿವೆ. ಆದರೆ, ಅವು ಭಾರತೀಯ ನೌಕಾ ಪಡೆಯ ಆಸ್ತಿಗಳಾಗಿರುವುದರಿಂದ ಅಲ್ಲಿ ಪ್ರವಾಸಿಗರಿಗೆ ಪ್ರವೇಶ ಇಲ್ಲ. ಬಾದ್ರಗಡ ಎಂದು ಕರೆಯಲಾಗುವ ದರಿಯಾ ಬಹದ್ದೂರ್‌ ಗಡ ದ್ವೀಪದಲ್ಲಿ ಐತಿಹಾಸಿಕ ಪಳೆಯುಳಿಕೆಗಳಿವೆ. ಈ ಬಗ್ಗೆ ಇನ್ನೂ ಸರಿಯಾದ ಅಧ್ಯಯನವಾಗಿಲ್ಲ. ಇದು ಜಿಲ್ಲಾಡಳಿತಕ್ಕೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ನಿರಾಸಕ್ತಿಯನ್ನು ತೋರಿಸುತ್ತದೆ.

ಬಹದ್ದೂರ್‌ ಗಡದಲ್ಲಿ ಬಿದನೂರಿನ ರಾಜ ಬಸಪ್ಪ ನಾಯಕ ಕಟ್ಟಿಸಿದ ಎನ್ನಲಾದ ಕೋಟೆ ಇದೆ. ಸಮುದ್ರಕ್ಕೆ ಅಭಿಮುಖವಾಗಿ ಬುರುಜು ಇದೆ, ಅದರ ಮೇಲೆ ಹಿಂದೆ ಭಾರಿ ಗಾತ್ರದ ಫಿರಂಗಿಯೊಂದಿತ್ತು. ಅದನ್ನು ಅಪಹರಿಸಲು ಯತ್ನಿಸಿದ ಯಾರೋ ಅದನ್ನು ಬುರುಜಿನಿಂದ ಕೆಳಗೆ ಎಳೆದು ಹಾಕಿದ್ದು, ದ್ವೀಪದಲ್ಲಿರುವ ಕಾಡಿನಲ್ಲಿ ಅನಾಥವಾಗಿ ಬಿದ್ದುಕೊಂಡಿದೆ.

click me!