ದುಬಾರಿಯಾಯ್ತು ಚಿಕ್ಕಬಳ್ಳಾಪುರದ ಸ್ಕಂದಗಿರಿ ಬೆಟ್ಟ ಪ್ರವೇಶ: ಚಾರಣಿಗರ ಆಕ್ರೋಶ

By Kannadaprabha NewsFirst Published May 21, 2023, 9:25 PM IST
Highlights

ಚಾರಣಿಗರ ಸ್ವರ್ಗಲೋಕ ಎಂದೆ ಖ್ಯಾತಿಯಾಗಿರುವ ಸ್ಕಂದಗಿರಿ ಬೆಟ್ಟ ತಾಲೂಕಿನ ಕಳವಾರ ಗ್ರಾಮದ ಬಳಿ ಇದ್ದು, ಸ್ಕಂದಗಿರಿ ಬೆಟ್ಟ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಸಮುದ್ರ ಮಟ್ಟದಿಂದ 1350 ಮೀಟರ್‌ ಗಳ ಎತ್ತರದಲ್ಲಿದೆ. 
 

ದಯಾಸಾಗರ್‌ ಆರ್‌.

ಚಿಕ್ಕಬಳ್ಳಾಪುರ (ಮೇ.21): ಚಾರಣಿಗರ ಸ್ವರ್ಗಲೋಕ ಎಂದೆ ಖ್ಯಾತಿಯಾಗಿರುವ ಸ್ಕಂದಗಿರಿ ಬೆಟ್ಟ ತಾಲೂಕಿನ ಕಳವಾರ ಗ್ರಾಮದ ಬಳಿ ಇದ್ದು, ಸ್ಕಂದಗಿರಿ ಬೆಟ್ಟ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು, ಸಮುದ್ರ ಮಟ್ಟದಿಂದ 1350 ಮೀಟರ್‌ ಗಳ ಎತ್ತರದಲ್ಲಿದೆ. ಬೆಂಗಳೂರಿನಿಂದ ಕೇವಲ 65 ಕಿಲೋ ಮೀಟರ್‌ ದೂರ ಇರುವ ಕಾರಣ ರಾಜ್ಯದ ಸಾಕಷ್ಟು ಚಾರಣಿಗರು ಸೇರಿದಂತೆ ಐಟಿ ಬಿಟಿಯ ಟೆಕ್ಕಿಗಳು ವಾರಾಂತ್ಯ ಬಂದ್ರೆ ಸಾಕು ಸ್ಕಂದಗಿರಿಯತ್ತ ಮುಖ ಮಾಡುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕರ್ನಾಟಕ ಇಕೊ ಟೂರಿಸಂ ಬೋರ್ಡ್‌ನವರು ಪ್ರವೇಶ ಶುಲ್ಕ ಏರಿಕೆ ಮಾಡಿ ಚಾರಣಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಕಂದಗಿರಿಯ ಪ್ರಕೃತಿ ಸೌಂದರ್ಯ ಸವಿಯಲು ಪ್ರತಿನಿತ್ಯ ನೂರಾರು ಚಾರಣಿಗರು, ವಾರಾಂತ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಚಾರಣ ಮಾಡಲು ತಲಾ ಇನ್ನೂರೈವತ್ತು ರೂಪಾಯಿಗಳನ್ನು ಇಷ್ಟು ದಿನ ನೀಡುತ್ತಿದ್ದರು. ಆದರೆ ಈಗ ಅದೆ ಚಾರಣಕ್ಕೆ ತಲಾ 607 ರುಪಾಯಿ ಶುಲ್ಕ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್‌ಡಿಕೆ ಮುಂದಿದೆ ಸಾಕಷ್ಟು ಅಭಿವೃದ್ಧಿ ಸವಾಲುಗಳು

ಚಾರಣಕ್ಕೆ ಯಾವುದೇ ಸೌಲಭ್ಯ ಇಲ್ಲ: ಸ್ಕಂದಗಿರಿ ಬೆಟ್ಟಕ್ಕೆ ಚಾರಣಕ್ಕೆ ಯಾವುದೇ ಮೆಟ್ಟಿಲಾಗಲಿ, ಟಾರ್‌ ರಸ್ತೆಯಾಗಲಿ, ಕೇಬಲ್‌ ಕಾರ್‌ಗಳಾಗಲಿ ಮತ್ತು ಇಕೊ ವಾಹನಗಳಾಗಲಿ ಇಲ್ಲ. ಪ್ರಕೃತಿ ದತ್ತವಾದ ಕಾಡಿನ ಮಾರ್ಗವೇ ಇಲ್ಲಿಯ ವೈಶಿಷ್ಟ್ಯ. ವಿಶ್ರಾಂತಿಗೆ ಕೊಠಡಿಗಳು, ಹಾದಿ ತಪ್ಪಿದರೆ ಅಥವಾ ಕಾಡು ಪ್ರಾಣಿಗಳಿಂದ ರಕ್ಷಿಸಲು ಭದ್ರತಾ ಸಿಬ್ಬಂದಿ ಮತ್ತು ಕನಿಷ್ಠ ಕುಡಿಯುವ ನೀರು ಸೇರಿದಂತೆ ಯಾವುದೆ ಮೂಲಭೂತ ಸೌಕರ್ಯಗಳು ಇಲ್ಲವೆ ಇಲ್ಲ. ಆದರೂ ಕರ್ನಾಟಕ ಇಕೊ ಟೂರಿಸಂ ಬೋರ್ಡ್‌ ಶನಿವಾರ, ಭಾನುವಾರ ಎರಡು ದಿನಗಳ ಕಾಲ ಬರುವ ಚಾರಣಿಗರಿಗೆ ಪ್ರವೇಶ ಶುಲ್ಕ ಹೆಚ್ಚಿಸಿದೆ.

ದಿಢೀರನೆ ಪ್ರವೇಶ ಶುಲ್ಕ ಹೆಚ್ಚಳ: ಅದರಲ್ಲಿ 500 ರುಪಾಯಿ ಪ್ರವೇಶ ಶುಲ್ಕ, ಟಿಕೇಟ್‌ ಬುಕಿಂಗ್‌ ಗೆ ಆನ್‌ ಲೈನ್‌ ವ್ಯವಸ್ಥೆ ಮಾಡಿದ್ದಕ್ಕೆ 14 ರೂಪಾಯಿ 50 ಪೈಸೆ, ಜಿ.ಎಸ್‌.ಟಿ ಶೇ 18 ಪರ್ಸೆಂಟ್‌ ಅಂತ 607 ರು.ಗಳನ್ನು ನಿಗದಿ ಮಾಡಿದೆ. ಇದರಿಂದಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ದುಬಾರಿ ಹಣ ನೀಡಿ ಚಾರಣ ಮಾಡೋದು ಕನಸಿನ ಮಾತಾಗಿದೆ ಎಂದು ಚಾರಣಕ್ಕೆ ಬಂದಿದ್ದ ಚಿತ್ರದುರ್ಗದ ಮಹೇಶ್‌ ಮತ್ತು ಸಂಗಡಿಗರು, ಬೇಂಗಳೂರಿನ ಸ್ವಾತಿ ಹಾಗೂ ಅವರ ಜೊತೆ ಬಂದಿದ್ದವರು ಮತ್ತು ಇತರ ಚಾರಣಿಗರು ಅಸಮಧಾನ ವ್ಯಕ್ತಪಡಿಸಿ ಕರ್ನಾಟಕ ಇಕೊ ಟೂರಿಸಂ ಬೋರ್ಡ್‌ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಪಿ ಸಹಯೋಗದಲ್ಲಿ ಬಿಬಿಎಂಪಿಯಿಂದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ

ನಂದಿಗಿರಿಧಾಮಕ್ಕೆ ಬರೊ ಪ್ರವಾಸಿಗರು, ಸ್ವಲ್ಪ ತಡವಾಗಿ ಬಂದರೆ ನಂದಿಗಿರಿಧಾಮಕ್ಕೆ ವಾಹನಗಳ ಪ್ರವೇಶಕ್ಕೆ ಅವಕಾಶ ಸಿಗದೆ ಇದ್ದಾಗ ಪರ್ಯಾಯವಾಗಿ ಸ್ಕಂದಗಿರಿಯತ್ತ ಮುಖ ಮಾಡುತ್ತಾರೆ. ಈಶಾ ಕೇಂದ್ರಕ್ಕೆ ಬಂದವರೂ ಸಹಾ ಆಗಮಿಸುತ್ತಾರೆ. ಸ್ಕಂದಗಿರಿಯ ಬೆಳ್ಳಿ ಮೊಡಗಳಲ್ಲಿ ಪಯಣಸಿದ ಅನುಭವ, ಸೂರ್ಯೋದಯದ ವಿಹಂಗಮ ನೋಟ ನೋಡಿ ಅಸ್ವಾದಿಸ ಬಯಸುತ್ತಾರೆ. ಆದರೆ ಇಲ್ಲಿ ಯಾವುದೇ ಮೂಲಬೂತ ಸೌಲಭ್ಯ ಕಲ್ಪಿಸದಿದ್ದಾರೂ ಪ್ರವೇಶ ಶುಲ್ಕ ಮಾತ್ರ ಹೆಚ್ಚು ಮಾಡಲಾಗಿದೆ.

click me!