Floating city: ಸಿದ್ಧವಾಗುತ್ತಿದೆ ಜಗತ್ತಿನ ಮೊದಲ ತೇಲುವ ನಗರ

By Suvarna News  |  First Published Nov 25, 2021, 11:51 AM IST

ಸಮುದ್ರ ಮಟ್ಟ ಏರಿಕೆ ಸಮಸ್ಯೆ ಮಟ್ಟ ಹಾಕಲು ತಜ್ಞರು ಹೊಸತೊಂದು ಪ್ರಾಯೋಗಿಕ ಪರಿಹಾರ ಕಂಡುಕೊಂಡಿದ್ದಾರೆ. ಅದೇ ತೇಲುವ ನಗರ. ದಕ್ಷಿಣ ಕೊರಿಯಾದ ತೀರ  ಪ್ರದೇಶದಲ್ಲಿ ಜಗತ್ತಿನ ಮೊದಲ ತೇಲುವ ನಗರ ಸಿದ್ಧವಾಗುತ್ತಿದೆ. ಪ್ರವಾಹ ತಡೆ ಮೂಲಸೌಕರ್ಯ (flood-proof infrastructure), ಸುನಾಮಿ, ಚಂಡಮಾರುತಗಳಿಗೂ ಜಗ್ಗದಂತೆ ಈ ನಗರವನ್ನು ನಿರ್ಮಿಸಲಾಗುತ್ತಿದೆ. ಈ ನಗರದ ಉಪಯೋಗವೇನು, ಮೂಲಸೌಕರ್ಯಗಳೇನು, ಹೇಗಿರಲಿದೆ ಎಲ್ಲ ವಿವರ ಬಹಳ ಆಸಕ್ತಿಕರವಾಗಿದೆ.


ಕಾಶ್ಮೀರದ ಶ್ರೀನಗರದ ದಾಲ್ ಲೇಕ್‌ನಲ್ಲಿರುವ ಫ್ಲೋಟಿಂಗ್ ಮಾರ್ಕೆಟ್ ಬಗ್ಗೆ ನೀವು ಕೇಳಿರಬಹುದು. ದೋಣಿಯಲ್ಲಿ ಓಡಾಡಿಕೊಂಡೇ ಸಂತೆ ಮಾರುಕಟ್ಟೆ ನಡೆಸುತ್ತಾರೆ. ಈಗ ಇದಕ್ಕಿಂತ ವಿಭಿನ್ನವಾಗಿ ಒಂದಿಡೀ ತೇಲುವ ನಗರವೇ ದಕ್ಷಿಣ ಕೊರಿಯಾದನ(South Korea) ಬೂಸನ್‌ನಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲಿ ದೋಣಿಯಲ್ಲಿ ಸಂತೆಯಲ್ಲ, ನೀರಿನ ಮೇಲೆ ಬೃಹತ್ ಬಂಗಲೆಗಳು, ಕಚೇರಿ, ಮನೆ ಇತ್ಯಾದಿ ಎಲ್ಲವೂ ನಿರ್ಮಾಣವಾಗುತ್ತಿದೆ. ಇನ್ನು ನಾಲ್ಕೇ ವರ್ಷಗಳಲ್ಲಿ ಜಗತ್ತಿನ ಮೊದಲ ತೇಲುವ ನಗರ ನಾವು ನೀವು ವಾಸಿಸುವ, ನೋಡಿದ ನಗರಗಳಂತೆಯೇ ಸರ್ವೇಸಾಮಾನ್ಯ ನಗರವಾಗಿ ಇಲ್ಲಿ ತೇಲುವ ನಗರ ಸೃಷ್ಟಿಯಾಗಲಿದೆ. ವಿಶ್ವಸಂಸ್ಥೆ ಹಾಗೂ ಓಶನಿಕ್ಸ್  ಜಂಟಿಯಾಗಿ ನಿರ್ಮಿಸುತ್ತಿರುವ ಈ ಫೋಟಿಂಗ್ ಸಿಟಿ (floating city)ಯಲ್ಲಿ ಹಲವಾರು ವಿಶೇಷತೆಗಳಿರಲಿವೆ. 

ಫ್ಲಡ್ ಪ್ರೂಫ್
2025ಕ್ಕೆ 'ಬೂಸನ್' ನವನಗರವಾಗಿ ಕಾರ್ಯಾರಂಭ ಮಾಡಲಿದೆ. ತೀರ ಪ್ರದೇಶಕ್ಕೆ ಹತ್ತಿರದಲ್ಲಿರುವ ಬೂಸನ್‌ನ ಮೂಲಸೌಕರ್ಯ ಎಷ್ಟು ಸ್ಟ್ರಾಂಗ್ ಇರಲಿದೆ ಎಂದರೆ ಪ್ರವಾಹಗಳು, ಸುನಾಮಿ, ಕೆಟಗರಿ 5ನಂಥ ಬೃಹತ್ ಚಂಡಮಾರುತ(hurricane)ಗಳೂ ಈ ನಗರವನ್ನು ಕಂಗಾಲಾಗಿಸುವುದಿಲ್ಲ. ಇದೊಂದು ಸ್ವಾವಲಂಬಿ ನಗರ (self-sufficient city)ವಾಗಲಿದ್ದು, ಸೋಲಾರ್ ಪ್ಯಾನೆಲ್‌ಗಳ ಸಹಾಯದಿಂದ ತನಗೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಲು ಶಕ್ತವಾಗಿರಲಿದೆ. ಜೊತೆಗೆ, ಇಲ್ಲಿನ ನಿವಾಸಿಗಳಿಗೆ ಸಾಕಾಗುವಷ್ಟು ಆಹಾರವನ್ನು ಇಲ್ಲಿಯೇ ಬೆಳೆಯಲಾಗುವುದು. ನೀರಿಗಾಗಿ ಕೂಡಾ ಯಾರನ್ನೂ ಅವಲಂಬಿಸುವ ಅಗತ್ಯ ಇರುವುದಿಲ್ಲ. 

Rain: ಮಳೆ ಎಂಬ ಮನೋಹರಿ ಮನೆಹಾಳಿ ಆಗಿದ್ದಾಳಲ್ಲಾ..
ಏರುತ್ತಿರುವ ಸಮುದ್ರ ಮಟ್ಟ ಸಮಸ್ಯೆಗೆ ಪರಿಹಾರ
ಈ ನಗರವನ್ನು ಸುಮ್ಮನೇ ಪ್ರವಾಸೋದ್ಯಮ ದೃಷ್ಟಿಯಿಂದಲೋ, ಪ್ರಯೋಗಕ್ಕಾಗಿಯೋ ನಿರ್ಮಿಸುತ್ತಿಲ್ಲ. ಬದಲಿಗೆ ಏರುತ್ತಿರುವ ಸಮುದ್ರ ಮಟ್ಟ ಸಮಸ್ಯೆಯನ್ನು ಮಟ್ಟ ಹಾಕಲು ಇಂಥ ಫ್ಲೋಟಿಂಗ್ ಸಿಟಿಗಳು ಸಹಾಯವಾಗಲಿವೆ ಎಂಬ ಕಾರಣಕ್ಕೆ ಈ ಯೋಜನೆ ಕೈಗೊಳ್ಳಲಾಗಿದೆ. ಹಲವಾರು ಮಾನವನಿರ್ಮಿತ ದ್ವೀಪಗಳನ್ನು (man-made islands) ಬಳಸಿಕೊಂಡು ಫ್ಲಡ್ ಪ್ರೂಫ್ ಮಾಡಲಾಗುತ್ತಿದೆ. 
ವಿಸ್ತೀರ್ಣ ಎಷ್ಟಿರಲಿದೆ?
ಸುಮಾರು 75 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗುವ ಈ ತೇಲುವ ನಗರದಲ್ಲಿ ಬರೋಬ್ಬರಿ 10,000 ನಿವಾಸಿಗಳು ಆರಾಮಾಗಿ ಇರಬಹುದು. ಅಕ್ಕಪಕ್ಕದ ಹಳ್ಳಿಗಳನ್ನು 6 ಕ್ಲಸ್ಟರ್‌ಗಳಾಗಿ ವಿಬಾಗಿಸಲಾಗುತ್ತಿದ್ದು, ಪ್ರತಿ ಹಳ್ಳಿಯಲ್ಲೂ 1650 ನಿವಾಸಿಗಳು ಇರಬಹುದಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಹಾಗೂ ಇಲ್ಲಿನ ನಿವಾಸಿಗಳ ಓಡಾಟಕ್ಕಾಗಿಯೇ ಬೋಟ್‌ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. 

Tap to resize

Latest Videos

ISRO Technology: ಬರಲಿದೆ ತನ್ನನ್ನು ತಾನೇ ಭಕ್ಷಿಸೋ ರಾಕೆಟ್!
ನಿವಾಸಿಗಳಾಗಲೂ ಅರ್ಹತೆ ಬೇಕು!
ಈ ತೇಲುವ ನಗರದಲ್ಲಿ ಯಾರೆಂದರೆ ಅವರು ಹೋಗಿ ಬದುಕಲಾಗುವುದಿಲ್ಲ. ಇಲ್ಲಿನ ಕಾಸ್ಟ್ ಆಫ್ ಲಿವಿಂಗ್ (cost of living) ಇನ್ನೂ ಲೆಕ್ಕಾಚಾರ ಹಂತದಲ್ಲಿದೆ. ಅಲ್ಲದೆ, ಸಸ್ಯಾಹಾರಿಗಳಾದರೆ ಸ್ಥಳ, ನೀರು, ಎನರ್ಜಿ ಖರ್ಚು ಕಡಿಮೆಯಾಗಿರಲಿದೆ. ಏರೋಪೋನಿಕ್ ಹಾಗೂ ಅಕ್ವಾಪೋನಿಕ್ ವ್ಯವಸ್ಥೆ ಮೂಲಕ ಜೈವಿಕ ಬೆಳೆ ಬೆಳೆಯಲಾಗುವುದು. ಇದಕ್ಕೆ ಗೊಬ್ಬರವಾಗಿ ಮೀನುಗಳ ಹೊರಬಿಡುವ ತ್ಯಾಜ್ಯ ಬಳಕೆ ಮಾಡುವ ಉದ್ದೇಶವಿದೆ. ಏರೋಪೋನಿಕ್(aeroponic) ವಿಧಾನದಲ್ಲಿ ಮಣ್ಣಿನ ಬಳಕೆಯಿಲ್ಲದೆ ಬೆಳೆ ಬೆಳೆದರೆ, ಅಕ್ವಾಪೋನಿಕ್‌(aquaponic)ನಲ್ಲಿ ಬ್ಯಾಕ್ಟೀರಿಯಾಗಳ ಬಳಕೆಯಿಂದ ಸಸ್ಯಗಳು ಹಾಗೂ ಮೀನನ್ನು ಬೆಳೆಸಲಾಗುವುದು. ಹಾಗಾಗಿ, ಇವೆಲ್ಲಕ್ಕೂ ಹೊಂದಿಕೊಳ್ಳುವ ನಿವಾಸಿಗಳನ್ನು ಆಯ್ದು ರೆಸಿಡೆಂಟ್ ಆಗಲು ಅವಕಾಶ ನೀಡಲು ಯೋಜನೆ ರೂಪಿಸಲಾಗುತ್ತಿದೆ. 
ನಿರ್ಮಾಣ ವೆಚ್ಚ
ಈ ನಗರ ನಿರ್ಮಾಣ ವೆಚ್ಚ ಸುಮಾರು 200 ದಶಲಕ್ಷ ಡಾಲರ್ ಆಗಬಹುದೆಂದು ಅಂದಾಜಿಸಲಾಗಿದೆ. ಓಶನಿಕ್ಸ್(Oceanix) ಸಂಸ್ಥೆಯ ಸಹಸಂಸ್ಥಾಪಕ ಇಟಾಯ್ ಮಡಮೊಂಬೆ ಹೇಳುವಂತೆ, ''ಈ ಯೋಜನೆಗೆ ಬೂಸನ್ ಸರಿಯಾದ ಸ್ಥಳ ಎನಿಸಿದ್ದರಿಂದ ಇಲ್ಲಿ ನಿರ್ಮಿಸುತ್ತಿದ್ದೇವೆ. ಆದರೆ, ಭವಿಷ್ಯದಲ್ಲಿ ಜಗತ್ತಿನ ಎಲ್ಲ ತೀರ ಪ್ರದೇಶದಲ್ಲೂ ಇಂಥ ತೇಲುವ ನಗರಗಳನ್ನು ನಿರ್ಮಿಸಬಹುದು. ಇದರಿಂದ ಸಮುದ್ರ ಮಟ್ಟ ಏರಿಕೆಯ ಭಯದಲ್ಲಿ ಬದುಕುವ ಸಮುದಾಯಗಳಿಗೆ ಸಹಾಯವಾಗಲಿದೆ.''
''ನೀರಿನೊಂದಿಗೆ ಯುದ್ಧ ಮಾಡುವ ಬದಲು ಅದರ ಜೊತೆ ಶಾಂತಿ, ಪ್ರೀತಿಯಿಂದ ಬದುಕುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕಿದೆ. ಪ್ರಕೃತಿಯ ಜೊತೆ ಮುನಿಸಿನಿಂದ ಗೆಲ್ಲಲು ಸಾಧ್ಯವಿಲ್ಲ, ಅದರೊಂದಿಗೆ ಸ್ನೇಹ  ಸಂಪಾದನೆಯಿಂದಷ್ಟೇ ನಾವು ಬದುಕಲು ಸಾಧ್ಯ. ಅದಕ್ಕೆ ಪೂರಕವಾಗಿ ಈ ನಗರ ನಿರ್ಮಾಣ ಮಾಡಲಿದ್ದೇವೆ,'' ಎನ್ನುತ್ತಾರೆ ಯುಎನ್ ಹ್ಯಬಿಟ್ಯಾಟ್‌ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಮೈಮುನಾ ಮೊಹಮ್ಮದ್ ಶರೀಫ್.
ತೇಲುವ ನಗರಗಳು ಏರುವ ಸಮುದ್ರ ಮಟ್ಟದಂತ ದೊಡ್ಡ ಸಮಸ್ಯೆಗೆ ಪರಿಹಾರವಾಗುವುದಾದರೆ, ಅಂಥ ಯೋಜನೆಗಳು ಖಂಡಿತವಾಗಿಯೂ ಸ್ವಾಗತಾರ್ಹ ಅಲ್ಲವೇ?

click me!